ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿ
Dress code in schools and colleges: ರಾಜ್ಯ ಸರ್ಕಾರವು ಹಿಜಾಬ್ ನಿಷೇಧ ಹಿಂಪಡೆದು ಕೇಸರಿ ಶಾಲು ನಿಷೇಧಿಸಿದೆ. ಇದಕ್ಕೆ ಪರ್ಮಿಶನ್ ಕೊಟ್ಟವರ್ಯಾರು? ಎಂದು ಸಿಎಂ ಸಿದ್ರಾಮಯ್ಯ ಅವರ ವಿರುದ್ಧ ಕೆಂಡ ಕಾರಿದ ಸಚಿವರು, ರಾಜ್ಯ ಸರ್ಕಾರ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ. -
ನವದೆಹಲಿ: "ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ನಂತೆ ಜನಿವಾರ ಧರಿಸಲೂ ಅನುಮತಿ ನೀಡಲಾಗಿದೆ ಎಂಬ ವಾದ ಕರ್ನಾಟಕ ಸರ್ಕಾರದ್ದು. ಸದ್ಯ 'ಉಡದಾರ' ಧರಿಸಲು ಅನುಮತಿ ನೀಡಿದ್ದೇವೆ ಎಂದಿಲ್ಲ" ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು. ದೆಹಲಿಯಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಜನಿವಾರ ಧರಿಸುವುದಕ್ಕೆ ಅನುಮತಿ ನೀಡಲು ಇವರ್ಯಾರು? ಕೇಸರಿ ಶಾಲು ನಿಷೇಧಿಸಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಕೆಂಡ ಕಾರಿದರು.
ಜನಿವಾರವನ್ನು ಕೇವಲ ಒಂದೇ ಜಾತಿ ಜನಾಂಗದವರು ಧರಿಸುವುದಿಲ್ಲ. ಹಿಂದೂ ಸಮಾಜ, ಧರ್ಮದಲ್ಲಿನ ಅನೇಕ ಸಮುದಾಯದವರು ಜನಿವಾರ ಹಾಕುತ್ತಾರೆ. ಶಾಲಾ-ಕಾಲೇಜುಗಳಲ್ಲಿ ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಎಂದು ಖಾರವಾಗಿ ಪ್ರಶ್ನಿಸಿದರು.
ಇನ್ನು, ಹಿಜಾಬ್ ನಿಷೇಧ ಹಿಂಪಡೆದು ಕೇಸರಿ ಶಾಲು ನಿಷೇಧಿಸಿದೆ. ಇದಕ್ಕೆ ಪರ್ಮಿಶನ್ ಕೊಟ್ಟವರ್ಯಾರು? ಎಂದು ಸಿಎಂ ಸಿದ್ರಾಮಯ್ಯ ಅವರ ವಿರುದ್ಧ ಕೆಂಡ ಕಾರಿದ ಸಚಿವರು, ರಾಜ್ಯ ಸರ್ಕಾರ ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ಶೇ.80ರಷ್ಟು ಹಿಂದೂಗಳಿದ್ದಾರೆ. ಹಾಗಿದ್ದರೂ ಸದಾ ಹಿಂದೂ ವಿರೋಧಿ ನಿಲುವು ತಳೆಯುತ್ತಾ ಕಾಂಗ್ರೆಸ್ ಸಂಪೂರ್ಣ ಮೂಲೆಗುಂಪಾಗುತ್ತಿದೆ. ಆದರೂ ಬುದ್ಧಿ ಬಂದಿಲ್ಲ. ಪಂಜಾಬ್, ತಮಿಳುನಾಡಿನಲ್ಲಿ ಜನ ಮನೆಗೆ ಕಳಿಸಿದ್ದಾರೆ. ಕೇರಳದಲ್ಲಿ ಮತಾಂಧ ಮತ್ತು ದೇಶ ವಿಭಜನೆ ಕೂಗೆತ್ತಿದ ಮುಸ್ಲಿಂ ಲೀಗ್ ಜತೆ ಒಪ್ಪಂದ ಮಾಡಿಕೊಂಡು ಅದರಂತೆ ಹೋಗುತ್ತಿದೆ. ಕಾರಣ ಇಡೀ ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದಾರೆ. ಇಷ್ಟಾದರೂ ಓಲೈಕೆ ಹಾಗೂ ಓಟ್ ಬ್ಯಾಂಕ್ ರಾಜಕಾರಣವನ್ನು ಬಿಟ್ಟಿಲ್ಲ ಎಂದು ಜೋಶಿ ಕಿಡಿ ಕಾರಿದರು.
NEET-UG 2026 Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಿಎಂ ಆಗ್ರಹ
ಕೇಸರಿ ಶಾಲು ಧರಿಸಿ ಆಂದೋಲನ
ರಾಜ್ಯದಲ್ಲಿ ಕೇಸರಿ ಶಾಲು ನಿಷೇಧಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದ್ಯದಲ್ಲೇ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಕೇಸರಿ ಶಾಲು ಧರಿಸಿಯೇ ಆಂದೋಲನ ನಡೆಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದರು.