ಶೃಂಗೇರಿ ಅಂಚೆ ಮತ ಮರು ಎಣಿಕೆ; ಬಿಜೆಪಿ ಅಭ್ಯರ್ಥಿ ಗೆಲುವು ಸ್ಪಷ್ಟ ಎಂದ ಸಚಿವ ಪ್ರಲ್ಹಾದ್ ಜೋಶಿ
ಅಂಚೆ ಮತಗಳ ಮರು ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಚುನಾವಣಾಧಿಕಾರಿಯೇ ಘೋಷಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಅದರಂತೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ಚುನಾವಣಾಧಿಕಾರಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.
ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮರು ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿರುವ ಸಾಧ್ಯತೆ ಸ್ಪಷ್ಟವಾಗಿದೆ. ಕೂಡಲೇ ಫಲಿತಾಂಶ ಘೋಷಣೆ ಆಗಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಆಗ್ರಹಿಸಿದ್ದಾರೆ. ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಅಂಚೆ ಮತ ಎಣಿಕೆ ಎಡವಟ್ಟಿನಿಂದ ಈಗಾಗಲೇ ಮೂರು ವರ್ಷದಿಂದ ಶಾಸಕ ಸ್ಥಾನದಿಂದ ವಂಚಿತರಾಗಿದ್ದಾರೆ. ಫಲಿತಾಂಶ ಘೋಷಣೆಗೆ ಇನ್ನೂ ವಿಳಂಬ ಸಲ್ಲದು ಎಂದು ಸಚಿವ ಜೋಶಿ ಹೇಳಿದ್ದಾರೆ.
ಚುನಾವಣಾಧಿಕಾರಿ ಯಾವುದೇ ಒತ್ತಡಕ್ಕೆ ಮಣಿಯದೆ ತತ್ ಕ್ಷಣವೇ ಅಂಚೆ ಮತ ಮರು ಎಣಿಕೆ ಫಲಿತಾಂಶವನ್ನು ಘೋಷಿಸಬೇಕು. ಮಾನ್ಯ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದಿದ್ದಾರೆ. ಅಂಚೆ ಮತಗಳ ಮರು ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಚುನಾವಣಾಧಿಕಾರಿಯೇ (DEO) ಘೋಷಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಅದರಂತೆ ಚುನಾವಣಾಧಿಕಾರಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕೆಂದು ಜೋಶಿ ಆಗ್ರಹಿಸಿದ್ದಾರೆ.
ಚುನಾವಣಾಧಿಕಾರಿ ಹೊಣೆ
ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು ಸಾಧಿಸಿರುವುದು ಸ್ಪಷ್ಟವಾಗಿದೆ. ಆದರೆ, ತಕ್ಷಣ ಫಲಿತಾಂಶ ಘೋಷಿಸದಿದ್ದರೆ ಅವಾಂತರಗಳಿಗೆ ಚುನಾವಣಾಧಿಕಾರಿಯೇ ಹೊಣೆ ಹೊರಬೇಕಾಗುತ್ತದೆ ಎಂದೂ ಸಚಿವರು ಎಚ್ಚರಿಸಿದ್ದಾರೆ.
ಅಂಚೆ ಮತಗಳ ಮರು ಎಣಿಕೆಯಲ್ಲಿ ಶೃಂಗೇರಿ ಕಾಂಗ್ರೆಸ್ ಅಭ್ಯರ್ಥಿಗೆ ಶಾಕ್
ಶೃಂಗೇರಿ: ಹೈಕೋರ್ಟ್ ಆದೇಶದಂತೆ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಭಾನುವಾರ ಬೆಳಗಿನ ಮುಕ್ತಾಯಗೊಂಡಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಇದರ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ರವಾನಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಶಾಕ್ ಎದುರಾಗಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದುಬಂದಿದೆ.
2023ರ ಚುನಾವಣೆಯಲ್ಲಿ ಮಾನ್ಯವಾಗಿದ್ದ ಮತಗಳ ಪೈಕಿ ಹಾಲಿ ಶಾಸಕರಾಗಿರುವ ಕಾಂಗ್ರೆಸ್ ನಾಯಕ ಟಿ.ಡಿ.ರಾಜೇಗೌಡ ಅವರ 255 ಮತಗಳು ಅಮಾನ್ಯವಾಗಿದ್ದು, ಬಿಜೆಪಿ ಅಭ್ಯರ್ಥಿಗೆ ಬಂದಿದ್ದ ಜೀವರಾಜ್ ಗೆ ಬಂದಿದ್ದ ಮತಗಳಲ್ಲಿ 2 ಮತಗಳು ಅಮಾನ್ಯವಾಗಿದೆ. ಈ ಮೂಲಕ ಜೀವರಾಜ್ ಅವರು ಸುಮಾರು 52 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಬಿಜೆಪಿ ಸಂಭ್ರಮಾಚರಣೆ ನಡೆಸಿದೆ. ಆದರೆ, ಇತ್ತ ಮತಪತ್ರಗಳನ್ನು ತಿದ್ದಲಾಗಿದೆ ಎಂದು ಆರೋಪಿಸಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಸೇರಿ 3 ಜನರ ವಿರುದ್ದ ಕಾಂಗ್ರೆಸ್ ದೂರು ದಾಖಲಿಸಿದೆ.
ಮತ ಮರುಎಣಿಕೆ ಬಗ್ಗೆ ಚುನಾವಣಾಧಿಕಾರಿ ಗೌರವ್ ಶೆಟ್ಟಿ ಪ್ರತಿಕ್ರಿಯಿಸಿ, 2023ರ ಚುನಾವಣೆಯಲ್ಲಿ ಎಣಿಕೆಯಲ್ಲಿ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ 692 ಮತಗಳು ಲಭಿಸಿದರೆ, ಶಾಸಕ ಟಿ.ಡಿ.ರಾಜೇಗೌಡಗೆ 569 ಮತ ಬಿದ್ದಿತ್ತು. ಆದರೆ, ಈಗಿನ ಮತ ಮರುಎಣಿಕೆಯಲ್ಲಿ ಜೀವ್ ರಾಜ್ ಅವರಿಗೆ 690 ಮತಗಳು ಲಭಿಸಿದೆ, ಆದರೆ, ಟಿ.ಡಿ.ರಾಜೇಗೌಡ ಅವರ ಮತಗಳು 255 ಅಮಾನ್ಯವಾಗಿದ್ದು, ಈ ಮೂಲಕ 314ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಮರು ಎಣಿಕೆಯಲ್ಲಿ ಕಂಡುಬಂದ ವ್ಯತ್ಯಾಸದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ.