ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gautam Adani: ಬೆಂಗಳೂರಿನಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಉದ್ಯಮಿ ಗೌತಮ್‌ ಅದಾನಿ; ಮಹತ್ವದ ಚರ್ಚೆ

Adani Visits CM DK Shivakumar: ರಾಹುಲ್‌ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ಉದ್ಯಮಿ ಗೌತಮ್‌ ಅದಾನಿ ವಿರುದ್ಧ ಸದಾ ಟೀಕೆ ಮಾಡುತ್ತಿರುತ್ತಾರೆ. ಈ ನಡುವೆ ಅವರು ಕಾಂಗ್ರೆಸ್‌ ಸರ್ಕಾರದ ಸಿಎಂ ಅನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಸುಮಾರು 20 ನಿಮಿಷಗಳ ಕಾಲ ಕರ್ನಾಟಕ ಸಿಎಂ ಡಿಕೆಶಿ ಜತೆ ಗೌತಮ್‌ ಅದಾನಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಿಎಂ ಡಿಕೆಶಿ ನಿವಾಸಕ್ಕೆ ಉದ್ಯಮಿ ಗೌತಮ್‌ ಅದಾನಿ ಭೇಟಿ; ಮಹತ್ವದ ಚರ್ಚೆ

-

Prabhakara R
Prabhakara R Aug 23, 2026 4:12 PM

ಬೆಂಗಳೂರು: ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಉದ್ಯಮಿ ಗೌತಮ್ ಅದಾನಿ (Gautam Adani) ಅವರು ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಉದ್ದಿಮೆ ಅವಕಾಶಗಳ ಜತೆಗೆ, ಬಹುನಿರೀಕ್ಷಿತ ಬೆಂಗಳೂರು ಸುರಂಗ ರಸ್ತೆ ಯೋಜನೆ ಟೆಂಡರ್‌ಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ಗೆ ಗೌತಮ್‌ ಅದಾನಿ ಭೇಟಿ ನೀಡಿದ್ದರು. ಅಲ್ಲಿಂದ ಏರ್‌ಪೋರ್ಟ್‌ಗೆ ವಾಪಸ್‌ ತೆರಳುವ ವೇಳೆ ಸಿಎಂ ಡಿಕೆಶಿ ಅವರನ್ನು ಭೇಟಿಯಾಗಿ, ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ನಡುವೆ ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಗಾಗಿ ಸರ್ಕಾರ ಅಂದಾಜು 17,698 ಕೋಟಿ ವೆಚ್ಚ ನಿಗದಿಪಡಿಸಿತ್ತು. ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥೆಯು 22,267 ಕೋಟಿ ರೂ. ಮೊತ್ತವನ್ನು ನಮೂದಿಸಿ ಅತಿ ಕಡಿಮೆ ಬಿಡ್ ಸಲ್ಲಿಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ. ಸರ್ಕಾರದ ಅಂದಾಜು ಮೊತ್ತಕ್ಕಿಂತ ಇದು ಹೆಚ್ಚಾಗಿದ್ದರೂ, ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ಇತರೆ ಸಂಸ್ಥೆಗಳಿಗೆ ಹೋಲಿಸಿದರೆ ಅದಾನಿ ಸಂಸ್ಥೆಯ ಮೊತ್ತವೇ ಕಡಿಮೆಯಾಗಿದೆ.

ಟೆಂಡರ್ ಅಂತಿಮಗೊಳ್ಳುವ ಮುನ್ನವೇ ಸಂಸ್ಥೆಯು ಸುರಂಗ ಮಾರ್ಗ ಹಾದುಹೋಗುವ ಸ್ಥಳಗಳಲ್ಲಿ ಅಗತ್ಯವಿರುವ ಪ್ರಾಥಮಿಕ ಭೂ ಸಮೀಕ್ಷೆ ಹಾಗೂ ಮಣ್ಣಿನ ಗುಣಮಟ್ಟ ಪರೀಕ್ಷೆ ಸೇರಿದಂತೆ ಪ್ರಮುಖ ತಾಂತ್ರಿಕ ಪರೀಕ್ಷೆಗಳನ್ನು ಈಗಾಗಲೇ ಪೂರ್ಣಗೊಳಿಸಿದೆ.

ಅದಾನಿ ಸಂಸ್ಥೆಯು ಗುತ್ತಿಗೆ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದು, ಅಧಿಕೃತವಾಗಿ ಕಾಮಗಾರಿ ವಹಿಸುವ ಸಂಬಂಧ ಮಾತುಕತೆಗಳು ನಡೆಯುತ್ತಿವೆ. ವೆಚ್ಚ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟದ ಅಂತಿಮ ಅನುಮೋದನೆ ಪಡೆಯಬೇಕಿರುವ ಹಿನ್ನೆಲೆಯಲ್ಲಿ, ಗೌತಮ್ ಅದಾನಿ ಅವರ ಈ ಭೇಟಿ ಮತ್ತು ಚರ್ಚೆ ರಾಜಕೀಯ ಹಾಗೂ ಆಡಳಿತಾತ್ಮಕ ವಲಯದಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದೇನು?

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್‌ ಅವರು, ಗೌತಮ್‌ ಅದಾನಿ ಅವರಿಗೆ ಇಲ್ಲಿ ಹಲವು ಉದ್ಯಮಗಳಿವೆ. ನಾನು ಮೊದಲ ಬಾರಿ ಸಿಎಂ ಆಗಿರುವುದರಿಂದ ಸೌಜನ್ಯಯುತ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.