ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುವಕರನ್ನು ತಲುಪಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಿ: ನಿತಿನ್ ನಬಿನ್ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸಲಹೆ

BJP forms special team: ಜೆನ್ ಝೀ ಮನ ಗೆಲ್ಲಲು ರಚನೆಯಾಗಿರುವ ಹೊಸ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿಯಾದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದ 65 ಸದಸ್ಯರ ತಂಡಕ್ಕೆ ಯುವಜನರೊಂದಿಗೆ ಸಂಪರ್ಕ ಸಾಧಿಸಲು ಮಾರ್ಗಗಳನ್ನು ಕಂಡುಕೊಳ್ಳಿ ಎಂಬುದಾಗಿ ಅವರು ಸಲಹೆ ನೀಡಿದ್ದಾರೆ.

ನಿತಿನ್ ನಬಿನ್ ಅವರ ಹೊಸ ತಂಡವನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

ಸಂಗ್ರಹ ಚಿತ್ರ -

ನವದೆಹಲಿ: ಯುವಕರನ್ನು ತಲುಪಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (BJP national president Nitin Nabin) ಅವರ ತಂಡಕ್ಕೆ ಸಲಹೆ ನೀಡಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ (BJP forms special team) ಸಂವಾದ ನಡೆಸಿದ ಅವರು ಬಲವಾದ ತಳಮಟ್ಟದ ಸಂಪರ್ಕ, ಸಾಮೂಹಿಕ ಜವಾಬ್ದಾರಿ ಮತ್ತು ಯುವಜನರನ್ನು ತಲುಪುವ ಹೊಸ ಮಾರ್ಗಗಳ ಅನ್ವೇಷಿಸುವ ಅಗತ್ಯಗಳ ಬಗ್ಗೆ ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದ ಹೊಸ 65 ಸದಸ್ಯರ ತಂಡವನ್ನು ಆಗಸ್ಟ್ 17ರಂದು ಘೋಷಿಸಲಾಗಿದೆ. ಈ ತಂಡದಲ್ಲಿ 51 ಹೊಸಮುಖಗಳು ಇವೆ. ಸುಮಾರು ನಾಲ್ಕೂವರೆ ಗಂಟೆಗಳ ಕಾಲ ನಡೆದ ಶನಿವಾರ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರ ಪರಿಚಯಿದೊಂದಿಗೆ ವೃತ್ತಿ, ಅನುಭವಗಳ ಕುರಿತು ಕೇಳಿದರು ಎನ್ನಲಾಗಿದೆ.

ಜೆನ್ ಝೀ ಮನ ಗೆಲ್ಲಲು ಬಿಜೆಪಿಯಿಂದ ಸರ್ಕಸ್‌; ನಿತಿನ್ ನಬಿನ್, ಸ್ಮೃತಿ ಇರಾನಿ ಒಳಗೊಂಡ ವಿಶೇಷ ತಂಡ ರಚನೆ

ಸಂಘಟನೆಯ ಬಗ್ಗೆ ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಮೋದಿ, ಸಂಘಟನೆಯೊಳಗೆ ಸಾಮೂಹಿಕ ಜವಾಬ್ದಾರಿ ಮತ್ತು ಪಕ್ಷದ ವಿವಿಧ ಹಂತಗಳಲ್ಲಿ ಸುಗಮ ಸಮನ್ವಯವನ್ನು ಕಾಯ್ದುಕೊಳ್ಳುವ ಮಹತ್ವದ ಬಗ್ಗೆ ತಿಳಿಸಿದರು.

ತಂಡವು ಸಾರ್ವಜನಿಕರೊಂದಿಗೆ ಬಿಜೆಪಿಯ ತಳಮಟ್ಟದ ಸಂಪರ್ಕವನ್ನು ಗಾಢಗೊಳಿಸಲು ಗಮನಹರಿಸಬೇಕು ಎಂದ ಅವರು, ಸಾಂಸ್ಥಿಕ ಸಂವಹನ, ಸಭೆ, ಹೊಸ ವಿಚಾರಗಳನ್ನು ತರುವ ವೇದಿಕೆಯಾಗಿ ತಂಡ ಕಾರ್ಯನಿರ್ವಹಿಸಬೇಕು ಎಂದರು. ಬಳಿಕ ಈ ಕುರಿತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇಂತಹ ಸಭೆಗಳು ಪಕ್ಷವನ್ನು ಬಲಪಡಿಸುವ ಮತ್ತು ಜನರೊಂದಿಗೆ ಅದರ ಸಂಪರ್ಕವನ್ನು ಗಾಢವಾಗಿಸುವ ಗುರಿಯನ್ನು ಹೊಂದಿರುವ "ಹೊಸ ವಿಚಾರಗಳು ಮತ್ತು ದೃಷ್ಟಿಕೋನಗಳ" ಬಗ್ಗೆ ಎಂದು ಹೇಳಿದರು.

ನಿತಿನ್ ನಬಿನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸುವ ಮೊದಲು ಹೊಸ ತಂಡದೊಂದಿಗೆ ಮೊದಲ ಸಭೆ ನಡೆಸಿದ್ದಾರೆ. ಇದರಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಸಿದ್ಧತೆಗಳು, ತಳಮಟ್ಟದ ಸಿದ್ಧತೆ, ಸರ್ಕಾರಿ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ತಂಡದಲ್ಲಿ ಹಲವು ಬದಲಾವಣೆ

65 ಸದಸ್ಯರ ಬಿಜೆಪಿಯ ಹೊಸ ತಂಡದಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರು, ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸೇರಿದ್ದಾರೆ. ಉಪಾಧ್ಯಕ್ಷರಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ಆರ್‌ಎಸ್‌ಎಸ್‌ನ ಮಾಜಿ ಕಾರ್ಯಕರ್ತ ರಾಮ್ ಮಾಧವ್ ಪ್ರಮುಖರಾಗಿದ್ದು, ಪ್ರಧಾನ ಕಾರ್ಯದರ್ಶಿಗಳಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಬ್ಬರಾಗಿದ್ದಾರೆ.

ಇವರೊಂದಿಗೆ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್. ಸಂತೋಷ್, ಪ್ರಧಾನ ಕಾರ್ಯದರ್ಶಿಗಳಾಗಿ ವಿನೋದ್ ತಾವ್ಡೆ ಮತ್ತು ಸುನಿಲ್ ಬನ್ಸಾಲ್ ಕೂಡ ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯಾಗಿ ನೇಮಿಸಲಾಗಿದೆ. ಇವರೊಂದಿಗೆ ಹೊಸ ತಂಡದಲ್ಲಿ 12 ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಆರು ನಾಯಕರು ಇದ್ದಾರೆ.

ಇದರೊಂದಿಗೆ ಬಿಜೆಪಿಯ ಸಾಂಸ್ಥಿಕ ಮತ್ತು ಸಂವಹನ ತಂಡಗಳಲ್ಲಿ ಕೂಡ ಬದಲಾವಣೆ ಮಾಡಲಾಗಿದೆ. ತಂತ್ರಜ್ಞಾನ, ಮಾಧ್ಯಮ ಮತ್ತು ಯುವ ವಿಭಾಗಗಳಲ್ಲಿ ಹಲವಾರು ಬದಲಾವಣೆಯಾಗಿದೆ. ಅಮಿತ್ ಮಾಳವೀಯ ಅವರನ್ನು ತನ್ನ ಐಟಿ ವಿಭಾಗದ ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿ ಅವರ ಸ್ಥಾನದಲ್ಲಿ ದೀಪಕ್ ಮಾಸ್ಕೆ ಅವರನ್ನು ನೇಮಕ ಮಾಡಲಾಗಿದೆ. ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರ ಸ್ಥಾನಕ್ಕೆ ಹೇಮಾಂಗ್ ಜೋಶಿ ಅವರನ್ನು ಬಿಜೆಪಿಯ ಯುವ ಮೋರ್ಚಾದ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ವಿವಿಧ ಮುಂಭಾಗದ ಸಂಘಟನೆಗಳಿಗೆ ಹೊಸ ಮುಖ್ಯಸ್ಥರ ನೇಮಕ ಮಾಡಲಾಗಿದ್ದು, ರೂಪ್ ಕುಮಾರಿ ಚೌಧರಿ ಅವರನ್ನು ಮಹಿಳಾ ಮೋರ್ಚಾ, ಅಮರ್ಪಾಲ್ ಮೌರ್ಯ ಅವರನ್ನು ಒಬಿಸಿ ಮೋರ್ಚಾ, ಬನ್ಸಿಲಾಲ್ ಗುರ್ಜರ್ ಅವರನ್ನು ಕಿಸಾನ್ ಮೋರ್ಚಾ, ಶಿವೇಶ್ ಕುಮಾರ್ ರಾಮ್ ಅವರನ್ನು ಎಸ್ಸಿ ಮೋರ್ಚಾ, ಡಾ. ಮನ್ನಾಲಾಲ್ ರಾವತ್ ಅವರನ್ನು ಎಸ್ಟಿ ಮೋರ್ಚಾ, ಕುನ್ವರ್ ಬಸಿತ್ ಅಲಿ ಅವರನ್ನು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮಾಧ್ಯಮ ಸಂಚಾಲಕರಾಗಿ ಅನಿಲ್ ಬಲುನಿ, ಸಾಮಾಜಿಕ ಮಾಧ್ಯಮ ಸಂಚಾಲಕರನ್ನಾಗಿ ದೀಪಕ್ ಮಾಸ್ಕೆ ಅವರನ್ನು ನೇಮಕ ಮಾಡಲಾಗಿದೆ.

ಸೇವಾ ಸಂಕಲ್ಪ ಅಭಿಯಾನ

ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ಒಂದು ತಿಂಗಳ ಕಾಲ ನಡೆಯುವ ಬಿಜೆಪಿಯ ಯೋಜಿತ ರಾಷ್ಟ್ರವ್ಯಾಪಿ 'ಸೇವಾ ಸಂಕಲ್ಪ ಅಭಿಯಾನ'ವನ್ನು ನಡೆಸುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ನಡೆಸಿರುವ ಕಾರ್ಯಾಗಾರದಲ್ಲಿ ಅವರು ಈ ಅಭಿಯಾನವು ಪ್ರಧಾನಿ ಮೋದಿಯವರ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳನ್ನು ಆಚರಿಸಲಿದೆ ಎಂದು ಹೇಳಿದರು.

'ವಂದೇ ಮಾತರಂ' ಸಂರಕ್ಷಣೆಗೆ ಪಣ ತೊಟ್ಟ ಬಿಜೆಪಿ; 2 ಪ್ಯಾರಾ ಹಾಡುವ ಕಾಂಗ್ರೆಸ್‌ ನಿರ್ಧಾರಕ್ಕೆ ಖಂಡನೆ: ಕೈ ನಾಯಕರ ವಿರುದ್ಧ ಕಮಲ ಪಡೆ ಧಗ ಧಗ

ಈ ಕಾರ್ಯಕ್ರಮದಲ್ಲಿ ವಿವಿಧ ಸೇವಾ ಚಟುವಟಿಕೆಗಳು, ಸರ್ಕಾರಿ ಯೋಜನೆಗಳೊಂದಿಗೆ ಫಲಾನುಭವಿಗಳನ್ನು ಸಂಪರ್ಕಿಸುವ ಕಾರ್ಯ ನಡೆಸಲಾಗುವುದು. ಬಿಜೆಪಿ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರನ್ನು ಸಮ್ಮಾನಿಸಿ 'ಮಾತೃ ಸಂವಾದ' ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ. ಇದರಿಂದ ಪಕ್ಷವು 1.4 ಮಿಲಿಯನ್‌ಗಿಂತಲೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಜನರನ್ನು ಸಂಪರ್ಕಿಸಲು ಸಾಧ್ಯವಾಗುವುದು. ಇದರೊಂದಿಗೆ 'ಸೇವಾ ಮೇ ಮೇರಾ ಯೋಗದಾನ', 'ಸೇವಾ ಸೇತು ಅಭಿಯಾನ' ಬ್ಲಾಕ್ ಮಟ್ಟದ ಶಿಬಿರಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.