‘ವಂದೇ ಮಾತರಂ’ ಗೀತೆ ಬಗ್ಗೆ ನಿಲುವು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್; ಕೇಂದ್ರದ ನಿರ್ಧಾರಕ್ಕೆ ಹೇಳಿದ್ದೇನು?
DK Shivakumar: ರಾಷ್ಟ್ರಗಾನ 'ವಂದೇ ಮಾತರಂ'ನ ಎಲ್ಲ 6 ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದು ಕೇಂದ್ರ ಸರ್ಕಾರ ಕಾಯ್ದೆ ಮಾಡಿದ್ದರೂ, ರಾಜ್ಯ ಸರ್ಕಾರ ಬರೀ 2 ಚರಣ ಹಾಡುವುದಾಗಿ ನಿರ್ಧರಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದು, ಸರ್ಕಾರದ ನಿಲುವು ಸಮರ್ಥಿಸಿಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ಸೆ. 11: ರಾಷ್ಟ್ರಗಾನ 'ವಂದೇ ಮಾತರಂ'ನ (Vande Mataram Row) ಎಲ್ಲ 6 ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂದು ಕೇಂದ್ರ ಸರ್ಕಾರ ಕಾಯ್ದೆಯನ್ನೇ ಮಾಡಿದ್ದರೂ, ಸಡ್ಡು ಹೊಡೆದ ರಾಜ್ಯ ಸರ್ಕಾರ ಬರೀ 2 ಚರಣ ಹಾಡುವುದಾಗಿ ನಿರ್ಧರಿಸಿದೆ. ಕರ್ನಾಟಕದ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ'ನ ಮೊದಲ 2 ಚರಣಗಳನ್ನು ಮಾತ್ರ ಹಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದಾಗ್ಯೂ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳಲ್ಲಿ 6 ಚರಣಗಳನ್ನು ಹಾಡಲು ಅನುಮತಿ ನೀಡಿದೆ. ಈ ಮಧ್ಯೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
ʼʼವಂದೇ ಮಾತರಂ’ ವಿಚಾರದಲ್ಲಿ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ನಾವೇ ರಾಷ್ಟ್ರಗೀತೆ ತಂದವರು. ʼವಂದೇ ಮಾತರಂʼಗೆ ಬುನಾದಿ ಹಾಕಿದ ಪಕ್ಷ ನಮ್ಮದು. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ಈ ದೇಶದ ಸೇವೆ ಮಾಡಿದ ಪಕ್ಷ ನಮ್ಮದು. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆʼʼ ಎಂದು ತಿಳಿಸಿದ್ದಾರೆ. ಆ ಮೂಲಕ ʼವಂದೇ ಮಾತರಂ’ನ 2 ಪ್ಯಾರಾ ಹಾಡುವ ನಿರ್ಧಾರವನ್ನು ಸಮರ್ಥಸಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯ ಮೊದಲ ಎರಡು ಚರಣ ಮಾತ್ರ ಹಾಡಲು ಆದೇಶ
ಬಿ.ಕೆ. ಹರಿಪ್ರಸಾದ್ ಹೇಳಿದ್ದೇನು?
ಇನ್ನು ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದು, ʼʼನಮ್ಮನ್ನು ಜೈಲಿಗೆ ಕಳುಹಿಸಲಿ. ನಮ್ಮನ್ನು ಗಲ್ಲಿಗೆ ಹಾಕಲಿ, ನಾವು ಹೇಳೋದು ʼವಂದೇ ಮಾತರಂʼ ಎರಡೇ ಪ್ಯಾರಾ. ಅದು ಈ ದೇಶದ ಏಕತೆಗಾಗಿ ಮಾಡಿರುವ ನಿರ್ಧಾರ. ಸ್ವಾತಂತ್ರ್ಯ ಹೋರಾಟದ ಘೋಷಣೆ ಅದು. ಬ್ರಿಟಿಷರ ಬೂಟು ನೆಕ್ಕುವವರಿಂದ ನಾವು ಪಾಠ ಕಲಿಯಬೇಕಿಲ್ಲʼʼ ಎಂದು ಪುನರುಚ್ಚರಿಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
'ವಂದೇ ಮಾತರಂ' ಗೀತೆ ಕಡ್ಡಾಯ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ಆದೇಶ ಹೊರಡಿಸಿದೆ. ಕರ್ನಾಟಕದ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ 'ವಂದೇ ಕಮಾತರಂ'ನ ಮೊದಲ 2 ಚರಣಗಳನ್ನು ಹಾಡಲು ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಕೇಂದ್ರ ʼವಂದೇ ಮಾತರಂʼನ 6 ಚರಣ ಹಾಡುವುದು ಕಡ್ಡಾಯ ಮಾಡಿತ್ತು.
'ವಂದೇ ಮಾತರಂ' ಸಂರಕ್ಷಣೆಗೆ ಪಣ ತೊಟ್ಟ ಬಿಜೆಪಿ; 2 ಪ್ಯಾರಾ ಹಾಡುವ ಕಾಂಗ್ರೆಸ್ ನಿರ್ಧಾರಕ್ಕೆ ಖಂಡನೆ
ʼವಂದೇ ಮಾತರಂʼಗೆ ರಾಷ್ಟ್ರಗೀತೆಯ ಸ್ಥಾನಮಾನ
ಇತ್ತೀಚಿಗೆ ಮುಕ್ತಾಯಗೊಂಡ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸಂಸತ್ತು, ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ 2026 ಅನ್ನು ಅಂಗೀಕರಿಸಿತ್ತು. ಇದು ʼವಂದೇ ಮಾತರಂʼಗೆ ರಾಷ್ಟ್ರಗೀತೆಯಂತೆ ಸಮಾನ ಕಾನೂನು ಸ್ಥಾನಮಾನ ಮತ್ತು ರಕ್ಷಣೆ ನೀಡಿದೆ. ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಗೆ ಅಡ್ಡಿಪಡಿಸುವುದು ಅಥವಾ ಅವಮಾನಿಸಿದರೆ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗುವಂತೆ ಮಾಡುತ್ತದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.