Delhi Election Result: ದಿಲ್ಲಿ ಚುನಾವಣೆಯಲ್ಲಿ ಸಿಂಗಲ್ ನಂಬರ್ ಮತಗಳನ್ನು ಪಡೆದವರ ವಿವರ
ಈ ಬಾರಿಯ ದಿಲ್ಲಿ ವಿಧಾನಸಭಾ ಚುನಾವಣೆ ಹಲವಾರು ಅಚ್ಚರಿಯ ಫಲಿತಾಂಶಳಿಗೆ ಕಾರಣವಾಗಿದೆ. ಆಪ್‌ನ ಘಟಾನುಘಟಿ ನಾಯಕರಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಈ ನಡುವೆ ಒಟ್ಟು ಆರು ಅಭ್ಯರ್ಥಿಗಳು ಕೇವಲ ಸಿಂಗಲ್ ನಂಬರ್ ಮತಗಳನ್ನು ಪಡೆದುಕೊಂಡು ಸುದ್ದಿಯಾಗಿದ್ದಾರೆ.
![ದಿಲ್ಲಿ ಚುನಾವಣೆ: 6 ಅಭ್ಯರ್ಥಿಗಳಿಗೆ ಸಿಂಗಲ್ ನಂಬರ್ ವೋಟ್](https://cdn-vishwavani-prod.hindverse.com/media/original_images/DElhi_Election_Results_2.webp)
![Profile](https://vishwavani.news/static/img/user.png)
ನವದೆಹಲಿ: ದಿಲ್ಲಿ ವಿಧಾನಸಭೆಗೆ (Dehli Assembly Elections) ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ (Delhi Election Results) ಪ್ರಕಟಗೊಂಡಿದ್ದು, ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಮತದಾರರು ಮನೆ ಹಾದಿ ತೋರಿಸಿದ್ದರೆ, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳಿದೆ. ಈ ಚುನಾವಣೆ ಹಲವು ಅಚ್ಚರಿಯ ಫಲಿತಾಂಶಗಳಿಗೂ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದ (AAP) ಸರ್ವೋಚ್ಛ ನಾಯಕ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal), ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಸಹಿತ ಹಲವು ಪ್ರಭಾವಿ ಆಪ್ ನಾಯಕರು ಮತ್ತು ಮಾಜಿ ಸಚಿವರು ಸೋಲಿನ ರುಚಿ ಕಂಡಿದ್ದಾರೆ. ಇನ್ನು ಪ್ರಮುಖ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಈ ಬಾರಿಯೂ ದಿಲ್ಲಿ ವಿಧಾನಸಭೆಯಲ್ಲಿ ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ. 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆಯನ್ನೇರಿರುವ ಬಿಜೆಪಿ ಇಲ್ಲಿ ಹೊಸ ಮುಖವನ್ನೇ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸುವ ಸಾಧ್ಯತೆಗಳಿವೆ.
ಈ ನಡುವೆ ದಿಲ್ಲಿ ಚುನಾವಾಣಾ ಫಲಿತಾಂಶಗಳು ಹಲವು ಕಾರಣಗಳಿಂದ ಅಚ್ಚರಿಯ ವಿಷಯವಾಗಿದ್ದು, ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಸೇರಿದಂತೆ ಹಲವಾರು ನಾಯಕರು ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇನ್ನು ಈ ಚುನಾವಣೆಯಲ್ಲಿ 6 ಅಭ್ಯರ್ಥಿಗಳು ಸಿಂಗಲ್ ನಂಬರ್ ಮತಗಳನ್ನು ಪಡೆದು ಸುದ್ದಿಯಾಗಿದ್ದಾರೆ. ಇವರೆಲ್ಲಾ ಸಣ್ಣಪುಟ್ಟ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿದ್ದಾರೆ.
ಈ ಬಾರಿಯ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಮತ ಪಡೆದ ದಾಖಲೆ ಭಾರತ್ ರಾಷ್ಟ್ರ ಡೆಮಾಕ್ರಾಟಿಕ್ ಪಕ್ಷದ (Bharatrastra Democratic Party) ಈಶ್ವರ್ ಚಂದ್ ಅವರದ್ದಾಗಿದೆ. ಈಶ್ವರ್ ಚಂದ್ ಅವರು ಕೇವಲ 4 ಮತಗಳನ್ನು ಪಡೆದುಕೊಂಡಿದ್ದಾರೆ.
ಭೀಮ ಸೇನೆಯ (Bhim Sena) ಸಂಘ ನಂದ ಬೌದ್ಧ, ರಾಷ್ಟ್ರವಾದಿ ಜನಲೋಕ ಪಕ್ಷದ (Rashtrawadi Janlok Party) ಮುಖೇಶ್ ಜೈನ್, ರಾಷ್ಟ್ರೀಯ ಮಾನವ ಪಕ್ಷದ (Rashtriya Manav Party) ನಿತ್ಯ ನಂದ ಸಿಂಗ್ ತಲಾ 8 ಮತಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Delhi Election Result: ದಿಲ್ಲಿ ಚುನಾವಣೆಯಲ್ಲಿ ಅತೀ ಹೆಚ್ಚು, ಅತೀ ಕಡಿಮೆ ಅಂತರದಿಂದ ಗೆದ್ದವರು
ಇಷ್ಟು ಮಾತ್ರವಲ್ಲದೇ, ಸ್ವತಂತ್ರ ಅಭ್ಯರ್ಥಿಗಳಾದ ಹೈದರ್ ಆಲಿ ಮತ್ತು ಪಂಕಜ್ ಶರ್ಮಾ ತಲಾ 9 ಮತಗಳನ್ನು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಸಿಂಗಲ್ ಡಿಜಿಟ್ ಮತಗಳನ್ನು ಪಡೆದುಕೊಂಡಿರುವ ಎಲ್ಲ 6 ಅಭ್ಯರ್ಥಿಗಳೂ ನವ ದೆಹಲಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.
27 ವರ್ಷಗಳ ಬಳಿಕ ಭಾರತೀಯ ಜನತಾ ಪಕ್ಷ ದೆಹಲಿಯಲ್ಲಿ ಅಧಿಕಾರ ನಡೆಸಲು ಸನ್ನದ್ಧವಾಗಿದೆ. ಒಟ್ಟು 70 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ.
ಬಿಜೆಪಿಯ ಪರ್ವೇಶ್ ವರ್ಮಾ ಅವರು ಆಮ್ ಆದ್ಮಿ ಪಕ್ಷದ ಪರಮೋಚ್ಛ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ಸೋಲಿಸುವ ಮೂಲಕ ಬಿಗ್ ಅಪ್ ಸೆಟ್ ರಿಸಲ್ಟ್ ನೀಡಿದ್ದಾರೆ. ಪರ್ವೇಶ್ ಅವರು ಕೇಜ್ರಿವಾಲ್ ಅವರನ್ನು 4,089 ಮತಗಳಿಂದ ಸೋಲಿಸಿದ್ದಾರೆ.
47 ವರ್ಷದ ಪರ್ವೇಶ್ ವರ್ಮಾ 30,088 ಮತಗಳನ್ನು ಪಡೆದುಕೊಂಡಿದ್ದು, ಕೇಜ್ರಿವಾಲ್ 25,999 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ 4,568 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಕೇವಲ 21 ಸೀಟುಗಳನ್ನು ಗೆಲ್ಲುವ ಮೂಲಕ ಭಾರೀ ಹಿನ್ನಡೆಯನ್ನು ಅನುಭವಿಸಿದೆ.