ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Election Result: ದಿಲ್ಲಿ ಚುನಾವಣೆಯಲ್ಲಿ ಅತೀ ಹೆಚ್ಚು, ಅತೀ ಕಡಿಮೆ ಅಂತರದಿಂದ ಗೆದ್ದವರು

ದೆಹಲಿ ವಿಧಾನಸಭೆಯ ಮತದಾನದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದು ಆಡಳಿತಾ ರೂಢ ಆಮ್ ಆದ್ಮಿ ಪಕ್ಷಕ್ಕೆ ಮತದಾರ ಸೋಲಿನ ರುಚಿ ತೊರಿಸಿದ್ದಾನೆ. ಈ ಫಲಿತಾಂಶದಲ್ಲಿ ಅತೀ ಹೆಚ್ಚು ಮತ್ತು ಅತೀ ಕಡಿಮೆ ಗೆಲುವಿನ ಅಂತರದ ವಿವರ ಇಲ್ಲಿದೆ...

ದಿಲ್ಲಿ ರಿಸಲ್ಟ್:  ಅತೀ ಹೆಚ್ಚು, ಅತೀ ಕಡಿಮೆ ಗೆಲುವಿನ ಅಂತರವೆಷ್ಟು ಗೊತ್ತೇ?

ಸಾಂದರ್ಭಿಕ ಚಿತ್ರ.

Profile Sushmitha Jain Feb 9, 2025 6:28 PM

ನವದೆಹಲಿ: ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು (Aam Aadmi Party) ಅಧಿಕಾರದಿಂದ ಇಳಿಸುವಲ್ಲಿ ಭಾರತೀಯ ಜನತಾ ಪಕ್ಷ (Bharatiya Janata Party) ಯಶಸ್ವಿಯಾಗಿದೆ. ಎಲ್ಲಿಯವರೆಗೆ ಅಂದರೆ ಆಪ್‌ನ (AAP) ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಸಹಿತ ಪಕ್ಷದ ಘಟಾನುಘಟಿ ನಾಯಕರಿಗೇ ದೆಹಲಿ (Delhi) ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್ ಶೂನ್ಯ ಸ್ಥಾನ ಸಾಧನೆಯ ಮುಖಭಂಗಕ್ಕೆ ಒಳಗಾಗಿದೆ. ಭಾರತೀಯ ಜನತಾ ಪಕ್ಷ ಭರ್ಜರಿ ಸ್ಥಾನ ಗಳಿಕೆಯ ಮೂಲಕ ಗೆಲುವಿನ ನಾಗಾಲೋಟದಲ್ಲಿದೆ. ಒಟ್ಟು 70 ಸ್ಥಾನಗಳ ಪೈಕಿ ಬಿಜೆಪಿ 48 ಸ್ಥಾನಗಳನ್ನು ಬಾಚಿಕೊಂಡಿದ್ದರೆ, ಆಡಳಿತಾರೂಢ ಆಮ್ ಆದ್ಮಿ ಪಕ್ಷ 22 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದರೆ, ಕಾಂಗ್ರೆಸ್ (Congress) ಪಕ್ಷದ್ದು ರಾಷ್ಟ್ರ ರಾಜಧಾನಿಯಲ್ಲಿ ಶೂನ್ಯ ಸಾಧನೆ.

ಅಭೂತಪೂರ್ವ ಗೆಲುವಿನೊಂದಿಗೆ ಭಾರತೀಯ ಜನತಾ ಪಕ್ಷ ಬರೋಬ್ಬರಿ 27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರದ ಗದ್ದುಗೆಗೇರಲು ಸಜ್ಜಾಗಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಬಿಜೆಪಿ 48 ಸ್ಥಾನಗಳನ್ನು ಗೆದ್ದಿದ್ದರೆ, ಆಪ್ 22 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ ದೆಹಲಿಯಲ್ಲಿ ಸತತ ಮೂರನೇ ಬಾರಿಗೆ ಶೂನ್ಯ ಸಾಧನೆ ಮಾಡಿದೆ.

ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರೇ ಸೋಲಿನ ರುಚಿ ಕಂಡಿದ್ದಾರೆ. ಇವರಲ್ಲಿ ಆಪ್‌ನ ಸರ್ವೋಚ್ಛ ನಾಯಕ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia), ಸಚಿವ ಸೌರಭ್ ಭಾರಧ್ವಾಜ್ (Saurabh Bhardwaj), ಮಾಜಿ ಸಚಿವ ಸೋಮನಾಥ್ ಬಾರ್ತಿ (Somnath Bharti) ಮತ್ತು ಸತ್ಯೇಂದ್ರ ಜೈನ್ (Satyendra Jain) ಹಾಗೂ ಪಕ್ಷದ ನಾಯಕರಾದ ಅವಧ್ ಓಝಾ (Awadh Ojha) ಹಾಗೂ ದುರ್ಗೇಶ್ ಪಾಠಕ್ (Durgesh Pathak) ಅವರಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಆದರೆ ಈ ಸೋಲಿನಲ್ಲೂ ಆಶಾ ಕಿರಣದಂತೆ ನಿರ್ಗಮಿತ ಮುಖ್ಯಮಂತ್ರಿ ಅತಿಶಿ (Atishi) ಅವರು ಕಲ್ಕಾಜಿ ಕ್ಷೇತ್ರದಿಂದ ಜಯಗಳಿಸಿದ್ದಾರೆ.

ಜಂಗ್ ಪುರ ಕ್ಷೇತ್ರದಲ್ಲಿ ಬಿಜೆಪಿಯ (BJP) ಪರ್ವೇಶ್ ವರ್ಮಾ ಅವರು ಕೇಜ್ರಿವಾಲ್ ಅವರನ್ನು 4,089 ಮತಗಳಿಂದ ಸೊಲಿಸಿದ್ದಾರೆ. ಪರ್ವೇಶ್ ಅವರು 30,088 ಮತಗಳನ್ನು ಪಡೆದುಕೊಂಡಿದ್ದರೆ, ಕೇಜ್ರಿವಾಲ್ 25,999 ಮತಗಳನ್ನು ಪಡೆದುಕೊಂಡಿದ್ದಾರೆ. ಮನೀಶ್ ಸಿಸೊಡಿಯಾ ಅವರನ್ನು ಬಿಜೆಪಿಯ ತರ್ವಿಂದರ್ ಸಿಂಗ್ ಮರ್ವಾ ಅವರು ಕೇವಲ 675 ಮತಗಳಿಂದ ಸೋಲಿಸಿದ್ದಾರೆ. ಆಪ್ ಸಚಿವ ಸೌರಭ ಭಾರಧ್ವಾಜ್ ಅವರನ್ನು ಬಿಜೆಪಿಯ ಶಿಖಾ ರಾಯ್ ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ 3,188 ಮತಗಳಿಂದ ಸೋಲಿಸಿದ್ದಾರೆ.

ಈ ಎಲ್ಲ ಆಪ್ ನಾಯಕರ ಸೋಲಿನ ಅಂತರ ಚಿಕ್ಕದಾಗಿದ್ದರೂ, ಇದು ಕಡಿಮೆ ಅಂತರದ ಗೆಲುವು ಅಲ್ಲ, ಹಾಗೆಯೇ ಎಲ್ಲ ಬಿಜೆಪಿ ಅಭ್ಯರ್ಥಿಗಳೂ ಹೆಚ್ಚಿನ ಅಂತರದ ಗೆಲುವನ್ನು ದಾಖಲಿಸಿಲ್ಲ.

ಆಪ್ ಅಭ್ಯರ್ಥಿ ಆಲೆ ಮಹಮ್ಮದ್ ಇಕ್ಬಾಲ್ ಮಾಟಿಯಾ ಮಹಾಲ್ ದೆಹಲಿ ಚುನಾವಣೆಯಲ್ಲೇ ಅತೀ ಹೆಚ್ಚಿನ ಅಂತರದ ಗೆಲುವನ್ನು ದಾಖಲಿಸಿದ್ದಾರೆ. ಇಕ್ಬಾಲ್ ಅವರು ಬಿಜೆಪಿಯ ದೀಪ್ತಿ ಇಂದೋರಾ ಅವರನ್ನು 42,724 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ಇದನ್ನೂ ಓದಿ: PM Narendra Modi: ಶಾರ್ಟ್ ಕಟ್ ರಾಜಕೀಯಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿದೆ; ಆಪ್‌, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಹೀಗಿತ್ತು

ಸೀಲಾಮ್ ಪುರ ಕ್ಷೇತ್ರದಿಂದ ಆಪ್ ಅಭ್ಯರ್ಥಿ ಚೌಧರಿ ಝುಬೈರ್ ಅಹಮ್ಮದ್ ಅವರು ಬಿಜೆಪಿಯ ಅನಿಲ್ ಕುಮಾರ್ ಅವರನ್ನು 42,477 ಮತಗಳಿಂದ ಸೋಲಿಸಿದ್ದಾರೆ. ಇದು ಈ ಬಾರಿಯ ದೆಹಲಿ ಚುನಾವಣೆಯಲ್ಲೇ ಎರಡನೇ ಅತೀ ಹೆಚ್ಚು ಅಂತರದ ಗೆಲುವಾಗಿದೆ.

ಬಿಜೆಪಿಯ ವಿಜೇಂದರ್ ಗುಪ್ತಾ ಅವರು ರೋಹಿಣಿ ಕ್ಷೇತ್ರದಿಂದ ಅತೀ ದೊಡ್ಡ ಅಂತರದ ಗೆಲುವನ್ನು ದಾಖಲಿಸಿದ್ದಾರೆ. ಅವರು ಆಪ್‌ನ ಪ್ರದೀಪ್ ಮಿತ್ತಲ್ ಅವರನ್ನು 37,816 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಡಿಯೋಲಿ ಕ್ಷೇತ್ರದಿಂದ ಪ್ರೇಮ್ ಚೌಹಾಣ್ ಅವರು 36,680 ಮತಗಳ ಅಂತರದ ಗೆಲುವನ್ನು ದಾಖಲಿಸಿದ್ದಾರೆ. ಅವರು ಲೋಕ್ ಜನಶಕ್ತಿ ಪಕ್ಷದ (ರಾಮ್ ವಿಲಾಸ್ ಪಾಸ್ವಾನ್) ದೀಪಕ್ ತನ್ವಾರ್ ಅವರನ್ನು ಸೋಲಿಸಿದ್ದಾರೆ.

ಬಿಜೆಪಿಯ ರವಿಂದರ್ ಇಂದ್ರಜ್ ಸಿಂಗ್ ಬಾವನಾ ಕ್ಷೇತ್ರವನ್ನು 31,475 ಮತಗಳ ಅಂತರದಿಂದ ಗೆದ್ದುಕೊಂಡಿದ್ದಾರೆ. ಇವರು ಆಪ್‌ನ ಜೈ ಭಗವಾನ್ ಉಪ್ಕಾರ್ ಅವರನ್ನು ಸೋಲಿಸಿದ್ದಾರೆ.

ಇನ್ನು, ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಡಿಮೆ ಅಂತರದ ಗೆಲುವು ದಾಖಲಾಗಿದ್ದು ಇವುಗಳಲ್ಲಿ ಪ್ರಮುಖವಾದುದು, ಬಿಜೆಪಿಯ ಚಂದನ್ ಕುಮಾರ್ ಅವರು ಸಂಗಮ್ ವಿಹಾರ್ ಕ್ಷೇತ್ರದಲ್ಲಿ ಕೇವಲ 344 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಇವರು ಆಪ್‌ನ ದಿನೇಶ್ ಮೊಹಾನಿಯಾ ಅವರನ್ನು ಸೊಲಿಸಿದ್ದು, ಮೊಹಾನಿಯಾ 53,705 ಮತಗಳನ್ನು ಪಡೆದುಕೊಂಡಿದ್ದಾರೆ.

ಎರಡನೇ ಕಡಿಮೆ ಗೆಲುವಿನ ಅಂತರ ದಾಖಲಾಗಿರುವುದು ತ್ರಿಲೋಕ್ ಪುರಿ ಕ್ಷೇತ್ರದಲ್ಲಿ. ಇಲ್ಲಿ ಬಿಜೆಪಿಯ ರವಿಕಾಂತ್ ಅವರು ಆಪ್‌ನ ಅಂಜನ ಪರ್ಚಿ ಅವರನ್ನು ಕೇವಲ 392 ಮತಗಳ ಅಂತರದ ಗೆಲುವನ್ನು ದಾಖಲಿಸಿದ್ದಾರೆ. ರವಿಕಾಂತ್ 58,217 ಮತಗಳನ್ನು ಪಡೆದುಕೊಂಡಿದ್ದಾರೆ.

ಜಂಗ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ತರ್ವಿಂದರ್ ಸಿಂಗ್ ಮಾರ್ವಾ ಕೇವಲ 675 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇವರು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸೋಲಿಸಿದ್ದಾರೆ.

ತಿಮರ್ ಪುರ್ ಕ್ಷೇತ್ರದಲ್ಲಿ ಬಿಜೆಪಿಯ ಸೂರ್ಯ ಪ್ರಕಾಶ್ ಖತ್ರಿ ಅವರು ಆಪ್‌ನ ಸುರಿಂದರ್ ಪಾಲ್ ಸಿಂಗ್ ಅವರನ್ನು 1,168 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಬಿಜೆಪಿಯ ಉಮಂಗ್ ಬಜಾಜ್ ಅವರು ರಾಜಿಂದರ್ ನಗರ್ ಕ್ಷೇತ್ರದಲ್ಲಿ 1,231 ಮತಗಳ ಅಂತರದಲ್ಲಿ ಆಪ್ ಅಭ್ಯರ್ಥಿ ದುರ್ಗೇಶ್ ಪಾಠಕ್ ಅವರನ್ನು ಸೋಲಿಸಿ ಗೆಲುವಿನ ನಗು ಬೀರಿದ್ದಾರೆ.