ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyank Kharge: ಜ್ಞಾನಪೀಠ, ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಹುಟ್ಟೂರು ಅಭಿವೃದ್ಧಿಗೆ ತಲಾ 1 ಕೋಟಿ ರೂ. ಅನುದಾನ: ಸಚಿವ ಪ್ರಿಯಾಂಕ್ ಖರ್ಗೆ

Jnanpith and Bharat Ratna awardees: 'ಜ್ಞಾನಪೀಠ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ, ಕನ್ನಡದ ಮಹನೀಯರ ಹುಟ್ಟೂರಿನ ಅಭಿವೃದ್ಧಿಗಾಗಿ ತಲಾ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.

ಜ್ಞಾನಪೀಠ, ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಹುಟ್ಟೂರಿಗೆ ಬಂಪರ್‌ ಕೊಡುಗೆ

-

Prabhakara R Prabhakara R Nov 2, 2025 5:10 PM

ಕಲಬುರಗಿ, ನ.2: ರಾಜ್ಯದ 'ಜ್ಞಾನಪೀಠ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಹುಟ್ಟೂರಿಗೆ ಜನತೆಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. 'ಜ್ಞಾನಪೀಠ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ, ಕನ್ನಡದ ಮಹನೀಯರ ಹುಟ್ಟೂರಿನ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ತಲಾ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಶನಿವಾರ ಘೋಷಣೆ ಮಾಡಿದ್ದಾರೆ.

ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಹಾಗೂ ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಸರ್ ಎಂ.ವಿಶ್ವೇಶ್ವರಯ್ಯ, ಭೀಮಸೇನ ಜೋಶಿ ಅವರ ಹುಟ್ಟೂರುಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ. ಸಿ.ಎನ್.ಆರ್. ರಾವ್ ಅವರ ಹುಟ್ಟೂರು ಬೆಂಗಳೂರು ಆಗಿದ್ದು, ನಗರ ಪ್ರದೇಶವಾದ ಹಿನ್ನೆಲೆಐಲ್ಲಿ ಐಟಿ ಬಿಟಿ ಇಲಾಖೆಯಿಂದ ಅನುದಾನ ನೀಡಲಾಗುವುದು. 'ಸ್ಥಳೀಯರ ಬೇಡಿಕೆ ಮೇರೆಗೆ 2-3 ತಿಂಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು' ಎಂದು ಅವರು ತಿಳಿಸಿದ್ದಾರೆ.

ಪ್ರಕಟಿಸಿರುವ 1 ಕೋಟಿ ರೂ. ಅನುದಾನವನ್ನು ಆಯಾ ಗ್ರಾಮಗಳ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ನೀಡಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಸಮುದಾಯ ಭವನಗಳ ನಿರ್ಮಾಣ, ಮತ್ತು ಗ್ರಾಮದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಈ ನಿಧಿಯನ್ನು ಬಳಕೆ ಮಾಡಿಕೊಳ್ಳಬಹುದು.

ಇತ್ತೀಚೆಗೆ ಮಹಾಕವಿ ಕುವೆಂಪು, ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹುಟ್ಟೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನರು ಅನುಭವಿಸುತ್ತಿದ್ದ ಮೂಲ ಸೌಕರ್ಯ ಸಮಸ್ಯೆಯನ್ನು ಸ್ವತಃ ಗಮನಿಸಿದ್ದೆ. ಹೀಗಾಗಿ ಸಾಹಿತಿಗಳ ಹುಟ್ಟೂರಿಗೆ ಇಲಾಖೆಯಿಂದ ಒಂದು ಸಣ್ಣ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಯಿತು ಎಂದು ಸಚಿವ ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Kannada Rajyotsava award 2025: ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಪ್ರಶಸ್ತಿಗೆ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ ಎಂದ ಸಿಎಂ

ಪ್ರಸ್ತುತ ಘೋಷಿಸಲಾದ ಒಂದು ಕೋಟಿ ರೂಪಾಯಿ ಅನುದಾನವು ಆರಂಭಿಕ ಕೊಡುಗೆಯಾಗಿದೆ. ಸಿಎಂ ಜತೆ ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದು, ಭವಿಷ್ಯದ ದಿನಗಳಲ್ಲಿ ಮಹನೀಯರ ಹುಟ್ಟೂರುಗಳ ಅಭಿವೃದ್ಧಿಗಾಗಿ ಅನುದಾನದ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ನಾಡಿನ ಮಹಾನ್‌ ಸಾಧಕರ ಹುಟ್ಟೂರಿನ ಅಭಿವೃದ್ಧಿಗೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅನುದಾನ ಬಿಡುಗಡೆಗೆ ಸಂಬಂಧಿಸಿ ಶೀಘ್ರದಲ್ಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸುತ್ತೋಲೆ ಹೊರಡಿಸುವ ಸಾಧ್ಯತೆ ಇದೆ.