Human-animal conflict: ಮಾನವ-ಪ್ರಾಣಿ ಸಂಘರ್ಷ ತಡೆಗೆ ಹಲವು ಸಲಹೆ ನೀಡಿ ಅರಣ್ಯ ಸಚಿವರಿಗೆ ರೈತ ಸಂಘ ಪತ್ರ
Karnataka Rajya Raitha Sangha: ಕಾಡಿನ ಮತ್ತು ಕಾಡು ಪ್ರಾಣಿಗಳ ನಿರ್ವಹಣೆ, ಕಾಡಂಚಿನ ಗ್ರಾಮಗಳಿಗೆ ಸಂಬಂಧಪಟ್ಟಂತಹ ಬದಲಾವಣೆಗಳು, ಅರಣ್ಯ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳು, ಸರ್ಕಾರ ತೆಗೆದುಕೊಳ್ಳಬೇಕಾಗುವಂತಹ ನಿಲುವುಗಳ ಬಗ್ಗೆ ರೈತ ಸಂಘ ಬರೆದಿರುವ ಪತ್ರದಲ್ಲಿ ಸಚಿವರಿಗೆ ತಿಳಿಸಲಾಗಿದೆ.
ಮಾನವ-ಆನೆ ಸಂಘರ್ಷ (ಸಾಂದರ್ಭಿಕ ಚಿತ್ರ) -
Prabhakara R
Nov 13, 2025 10:44 PM
ಬೆಂಗಳೂರು, ನ.13: ಮಾನವ ಮತ್ತು ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ರೈತ ಸಂಘದಿಂದ ಪತ್ರ ಬರೆಯಲಾಗಿದೆ. ಕಾಡಿನ ಮತ್ತು ಕಾಡು ಪ್ರಾಣಿಗಳ ನಿರ್ವಹಣೆ, ಕಾಡಂಚಿನ ಗ್ರಾಮಗಳಿಗೆ ಸಂಬಂಧಪಟ್ಟಂತಹ ಬದಲಾವಣೆಗಳು, ಅರಣ್ಯ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳು, ಸರ್ಕಾರ ತೆಗೆದುಕೊಳ್ಳಬೇಕಾಗುವಂತಹ ನಿಲುವುಗಳ ಬಗ್ಗೆ ಪತ್ರದಲ್ಲಿ ತಿಳಿಸಲಾಗಿದೆ.
ಕಾಡು ಮತ್ತು ಕಾಡು ಪ್ರಾಣಿಗಳ ನಿರ್ವಹಣೆ:
- ಕಾಡಿನಲ್ಲಿ ವಾಸಿಸುವ ಎಲ್ಲಾ ಪ್ರಾಣಿ ಪಕ್ಷಿ ಜೀವ ಜಂತುಗಳಿಗೆ ಸಮರ್ಪಕವಾಗಿ ಕಾಡಿನಲ್ಲೇ ಆಹಾರವನ್ನು ಒದಗಿಸುವುದರ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು.
- ಕಾಡಿನಲ್ಲಿ ಪ್ರಾಣಿ ಪಕ್ಷಿಗಳ ಆಹಾರ ಮರಗಳಕ್ಕಿಂತ ಹೆಚ್ಚಾಗಿ ಟಿಂಬರ್ ಉಪಯೋಗಕ್ಕೆ ಬರುವಂತಹ ಮರಗಳೇ ಹೆಚ್ಚಾಗಿರುವುದು ಕೂಡ ಸಮಸ್ಯೆಗಳಿಗೆ ಕಾರಣವಾಗಿರುವುದನ್ನು ನಾವು ಒಪ್ಪಿಕೊಳ್ಳಲೇಬೇಕು.
- ಕಾಡಿನ ಭೂಮಿಯನ್ನು ನಾವು ಹೆಚ್ಚಿಸಲು ಆಗುವುದಿಲ್ಲ, ಮತ್ತೊಂದೆಡೆ ಕಾಡುಪ್ರಾಣಿಗಳ ಸಂತಾನ ಅಭಿವೃದ್ಧಿ ಆದಂತೆ ಅವುಗಳಿಗೆ ಬದುಕಲು ಹೆಚ್ಚಿನ ಭೂಮಿ ಬೇಕಾಗುತ್ತದೆ.
- ಇವೆರಡರ ಮಧ್ಯೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಐಷಾರಾಮಿ ಜೀವನಕ್ಕೆ ಮೋಜು ಮಸ್ತಿಗಾಗಿ ರೆಸಾರ್ಟ್‌ಗಳನ್ನು ಕಟ್ಟಿಕೊಂಡು ಕಾಡಿನ ಬಫರ್ ಜೋನ್ ಕಡಿಮೆಯಾಗುತ್ತಿದೆ. ಹಾಗಾಗಿ ಮೊದಲಿಗಿಂತ ಹೆಚ್ಚು ಗಂಭೀರವಾಗಿ ಕೆಲಸ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಮೇಲೆ ಇದೆ. ಅದರಲ್ಲೂ ಎಚ್‌ಡಿ ಕೋಟೆಯ ಕಬಿನಿ ಭಾಗದಲ್ಲಿ ಕಾಡಿನ ಒತ್ತುವರಿಯಲ್ಲದೆ ಅಣೆಕಟ್ಟಿನ ಭೂಮಿಯನ್ನು ಕೂಡ ಒತ್ತುವರಿ ಮಾಡಿಕೊಂಡು ಹೋಗುತ್ತಿರುವುದು ತೀವ್ರ ಆಘಾತಕಾರಿ ವಿಚಾರ. ಸರ್ಕಾರವು ಈ ವಿಚಾರವನ್ನು ಕೂಡಲೇ ಕೈಗೆತ್ತಿಕೊಂಡು ಅರಣ್ಯದ ಭೂಮಿಯನ್ನು ಕಾಡು ಪ್ರಾಣಿಗಳನ್ನು ಮತ್ತು ಕಾಡಂಚಿನ ಜನರನ್ನು ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ.
- ಅಕೇಶಿಯ, ಲಂಟಾನ ಮತ್ತು ನೀಲಗಿರಿ ಮರಗಳು ಹೆಚ್ಚಾಗಿದ್ದು ಇದನ್ನು ತೆಗೆದುಹಾಕಲು ಘನವಾಹನಗಳನ್ನು ಬಳಸದೆ ಬುಡಕಟ್ಟು ಜನರು, ಕಾಡಂಚಿನ ಗ್ರಾಮಗಳಲ್ಲಿರುವಂತಹ ಜನರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಂಡು ಕಾಡುಪ್ರಾಣಿಗಳಿಗೂ ತೊಂದರೆಯಾಗದಂತೆ ಜನರಿಗೂ ಉದ್ಯೋಗ ಸೃಷ್ಟಿ ಮಾಡುವಂತಹ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು.
- ಘನ ವಾಹನಗಳು ಅರಣ್ಯ ಬಿಡುಗಡೆ ಹೋಗುತ್ತಿರುವುದು ಕೂಡ ಸಮಸ್ಯೆಗೆ ಕಾರಣವಾಗಿರುತ್ತದೆ.
ಕಾಡಂಚಿನ ಗ್ರಾಮಗಳಿಗೆ ಸಂಬಂಧಪಟ್ಟಂತಹ ಬದಲಾವಣೆಗಳು:
- ಕಾಡಂಚಿನ ಗ್ರಾಮಸ್ಥರು, ಅರಣ್ಯ ಇಲಾಖೆ ಮತ್ತು ಸರ್ಕಾರ ಎಲ್ಲರೂ ಒಟ್ಟಿಗೆ ಸೇರಿ ಕಾಡಂಚಿನ ಗ್ರಾಮಗಳಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಮತ್ತು ಬೆಳೆಯಬಾರದು ಎಂಬ ವಿಚಾರವಾಗಿ ವೈಜ್ಞಾನಿಕವಾಗಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುವಂತಾಗಬೇಕು.
- ಕಾಡಂಚಿನ ಗ್ರಾಮಗಳಲ್ಲಿ ಚಿಯಾ, ಕುಸುಬೆ, ನವಣೆ ಈ ರೀತಿಯಾದಂತಹ ಬೆಳೆಗಳನ್ನು ಬೆಳೆಯಲು ರೈತರಿಗೆ ಉತ್ತೇಜನ ಕೊಡುವಂತಹ ಕಾರ್ಯಕ್ರಮಗಳನ್ನು ಹಾಕಿ ಕೊಳ್ಳುವುದರ ಮೂಲಕ ಕಾಡುಪ್ರಾಣಿಗಳು ಆಹಾರಕ್ಕಾಗಿ ಹೊರ ಬರುವುದನ್ನು ನಿಲ್ಲಿಸುವುದು ಅಲ್ಲದೆ ಜನರಿಗೆ ಉತ್ತಮ ಆಹಾರವನ್ನು ಮತ್ತು ರೈತರಿಗೆ ಆದಾಯ ಕೊಡುವಂತಹ ಬೆಳೆಯನ್ನು ಬೆಳೆಸಲು ಉದ್ದ ಜನ ಮಾಡಿದಂತಾಗುತ್ತದೆ.
- ಕಾಡಂಚಿನ ಪ್ರದೇಶಗಳಲ್ಲಿ ಸುಸಜ್ಜಿತವಾದ ಭದ್ರತೆಯುಳ್ಳ ಸಮೂಹ ಕೊಟ್ಟಿಗೆಗಳ ನಿರ್ಮಾಣ ಮಾಡುವುದರ ಬಗ್ಗೆ ಸರ್ಕಾರ ಯೋಚಿಸಬೇಕಾಗಿದೆ.
ಅರಣ್ಯ ಇಲಾಖೆಯಲ್ಲಿ ಆಗಬೇಕಾದ ಕೆಲಸಗಳು:
- ಅರಣ್ಯ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಮತ್ತು ಇಂದಿನ ಪರಿಸ್ಥಿತಿಗೆ ಬೇಕಾಗಿರುವ ಸಿಬ್ಬಂದಿಯನ್ನು ತಕ್ಷಣ ನೇಮಕಾತಿ ಮಾಡಿಕೊಳ್ಳಬೇಕು.
- ವೈಜ್ಞಾನಿಕವಾಗಿ ಪ್ರಾಣಿಗಳು ಮತ್ತು ಕಾಡುಗಳರ ಚಲನವಲನ ಮಾಡಲು ಸರ್ವೆಲೆನ್ಸ್ ಕ್ಯಾಮೆರಾಗಳ ಬಳಕೆ, ಅತಿ ಹೆಚ್ಚು ವನ್ಯಮೃಗ ಮತ್ತು ಮನುಷ್ಯರ ಸಂಘರ್ಷ ಇರುವ ಸ್ಥಳಗಳಲ್ಲಿ ಪ್ರಾಣಿಗಳ ಟ್ರ್ಯಾಕಿಂಗ್ ಮೆಕ್ಯಾನಿಸಂ ಇದೆಲ್ಲವನ್ನು 24 ಗಂಟೆಗಳ ಕಾಲ ನಿಗವಹಿಸಲು ಕಂಟ್ರೋಲ್ ರೂಂ ಮತ್ತು ಸಮಸ್ಯೆ ಬಂದು ಕೂಡಲೇ ತ್ವರಿತವಾಗಿ ಕೆಲಸ ಮಾಡಲು ರ‍್ಯಾಪಿಡ್ ಆಕ್ಷನ್ ತಂಡ ರಚನೆ, ಹುಲಿ ಮತ್ತು ಚಿರತೆಯನ್ನು ಹಿಡಿಯಲು ಸಾಕಾಗುವಷ್ಟು ಬೋನ್ ಗಳನ್ನು ಸಿದ್ಧಪಡಿಸಬೇಕು.
- ಅರಣ್ಯ ಇಲಾಖೆ ವತಿಯಿಂದ ಆಂಬ್ಯುಲೆನ್ಸ್‌ಗಳು
- ಲೆಪರ್ಡ್ ಟಾಸ್ಕ್ ಫೋರ್ಸ್ ರಚನೆ, ಸಿಬ್ಬಂದಿಗಳಿಗೆ ಸಮರ್ಪಕವಾದ ವಾಹನ ಮತ್ತು ಶಸ್ತ್ರಾಸ್ತ್ರಗಳ ಹಂಚಿಕೆಯಾಗಬೇಕು.
ಸರ್ಕಾರ ತೆಗೆದುಕೊಳ್ಳಬೇಕಾಗುವಂತಹ ನಿಲುವುಗಳು:
- ಕಾಡಂಚಿನಲ್ಲಿ ಮೂರು ಪಟ್ಟಿಗಳ ರೈಲ್ವೆ ಕಂಬಿಗಳನ್ನು ಅಳವಡಿಸುವುದು ಮತ್ತು ರೈಲ್ವೆ ಪಟ್ಟಿಯಿಂದ ಆರು ಅಡಿಗಳ ಅಂತರದಲ್ಲಿ ಎಂಟು ಅಡಿಗಳ ಟ್ರಂಚ್ ಮಾಡುವುದು
- ಕಾಡು ಪ್ರಾಣಿಗಳ ಕಾರಣದಿಂದ ಆಗುವ ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಬೆಳೆ ನಷ್ಟದ ಅಂದಾಜು ಮಾಡುವ ಕ್ರಮ ಮತ್ತು ಅಂದಿನ ಮಾರುಕಟ್ಟೆ ದರದಲ್ಲಿ ಬೆಳೆ ನಷ್ಟವನ್ನು ಧರಿಸಿಕೊಡಬೇಕು
- ಕೋರ್ ಅರಣ್ಯ ಮತ್ತು ಅರಣ್ಯದ ಬಫರ್ ಜೋನ್ ಹಂಚಿನಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೆಸಾರ್ಟ್‌ಗಳು, ಹೋಂ ಸ್ಟೇಗಳು ಮತ್ತು ವಾಣಿಜ್ಯ ಚಟುವಟಿಕೆಗಳು ನಡೆಯಬಾರದು ಎಂಬ ಕಾನೂನು ಆಗಬೇಕು.
- ಅದೇ ರೀತಿ ಬಫರ್ ಜೋನ್ ನಿಂದ 10 ಕಿಲೋ ಮೀಟರ್ ಅಂತರದಲ್ಲಿ ಗಣಿಗಾರಿಕೆಗೆ ಅವಕಾಶಗಳು ಕೊಡಬಾರದು ಎಂಬ ಕಾನೂನು ಆಗಬೇಕು.
- ಈಗಾಗಲೇ ಅರಣ್ಯ ವಲಯ, ಬಫರ್ ಜೋನ್ ಮತ್ತು ರಾಜ್ಯದ ಎಲ್ಲಾ ಅಣೆಕಟ್ಟುಗಳ ಹಿನ್ನೀರಿನಲ್ಲಿ ಕಟ್ಟಲಾಗಿರುವ ರೆಸಾರ್ಟ್ ಗಳು ಮತ್ತು ಹೋಂ ಸ್ಟೇಗಳನ್ನು ತೆರವುಗೊಳಿಸಬೇಕು.
- ಆಡಳಿತ ಭಾಷೆಯಲ್ಲಿ ತಾಲೂಕು ಕಚೇರಿ ಹಾಗೂ ಜಿಲ್ಲಾಡಳಿತ ಪರವಾನಿಗೆ ಇಲ್ಲದೆ ಇರುವ ವಾಣಿಜ್ಯ ವ್ಯವಹಾರಗಳು ಅನಧಿಕೃತವಾಗುತ್ತದೆ ಪರವಾನಿಗೆ ಇದ್ದರೆ ಅಧಿಕೃತವಾಗುತ್ತದೆ ಎಂದು ತಿಳಿಸುತ್ತಾರೆ.
- ಆದರೆ ಗಮನಿಸಬೇಕಾದ ವಿಚಾರವೇನೆಂದರೆ ಪರವಾನಗಿಯೇ ಅಧಿಕೃತವಾಗಿರುವಾಗ ಅದಕ್ಕೆ ಸಂಬಂಧಪಟ್ಟಂತಹ ಎಲ್ಲಾ ಚಟುವಟಿಕೆಗಳು ಅಧಿಕೃತವಾಗುತ್ತದೆ.
- ದಯವಿಟ್ಟು ವನ್ಯಜೀವಿಗಳಿಗೋಸ್ಕರ, ಅರಣ್ಯವನ್ನು ಕಾಪಾಡಿದಗೋಸ್ಕರ, ಕಾಡಂಚಿನ ರೈತರು ಮತ್ತು ಮುಂದಿನ ಪೀಳಿಗೆಗೋಸ್ಕರ ಇಂದು ನಾವು ಗಂಭೀರವಾದ ನಿಲುವುಗಳನ್ನು ತೆಗೆದುಕೊಳ್ಳುವುದು ಅತಿ ಅವಶ್ಯಕ.
- ತಾವು ಈ ಮೇಲ್ಕಂಡ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳುತ್ತೀರಾ ಎಂಬ ಅಭಿಲಾಷೆಯೊಂದಿಗೆ ಈ ಪತ್ರವನ್ನು ತಮಗೆ ಕಳುಹಿಸಿಕೊಡುತ್ತಿದ್ದೇವೆ ಎಂದು ರೈತ ಸಂಘ ತಿಳಿಸಿದೆ.