ರಜನಿಕಾಂತ್ - ಕಮಲ್ ಹಾಸನ್ ಜೋಡಿಯ ಸಿನಿಮಾಗೆ ತ್ರಿಶಾ ನಾಯಕಿ? ಉದಯನಿಧಿ ಸ್ಟಾಲಿನ್ ನಿರ್ಮಾಣದ ಚಿತ್ರಕ್ಕೆ ಬರ್ತಾರಾ ವಿಜಯ್ ಫ್ರೆಂಡ್?
ʻಸೂಪರ್ ಸ್ಟಾರ್ʼ ರಜನಿಕಾಂತ್ ಮತ್ತು ಕಮಲ್ ಹಾಸನ್ ಹಲವು ದಶಕಗಳ ನಂತರ ನೆಲ್ಸನ್ ನಿರ್ದೇಶನದ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ನಿರ್ಮಾಣದ ಈ ಮೆಗಾ ಪ್ರಾಜೆಕ್ಟ್‌ಗೆ ನಾಯಕಿ ತ್ರಿಷಾ ಕೃಷ್ಣನ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.
-
ʻಸೂಪರ್ ಸ್ಟಾರ್ʼ ರಜನಿಕಾಂತ್ ಮತ್ತು ಕಮಲ್ ಹಾಸನ್ ಹಲವು ದಶಕಗಳ ನಂತರ ಮತ್ತೆ ಒಂದೇ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಲಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ಅನೌನ್ಸ್‌ಮೆಂಟ್ ವಿಡಿಯೋ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ವಿಡಿಯೋದಲ್ಲಿ ರಜನಿಕಾಂತ್ ಮತ್ತು ಕಮಲ್ ಸ್ಟೈಲಿಶ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, "ಯಾರು ಹೀರೊ" ಎಂಬ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು. ಸದ್ಯ ಈ ಚಿತ್ರದ ಕುರಿತ ಒಂದು ಅಪ್ಡೇಟ್ ಹೊರಬಿದ್ದಿದೆ.
ಈ ಚಿತ್ರಕ್ಕೆ ತ್ರಿಷಾ ನಾಯಕಿ?
ಇತ್ತೀಚಿನ ಮಾಧ್ಯಮಗಳ ವರದಿಯ ಪ್ರಕಾರ, ಈ ಚಿತ್ರದ ಪ್ರಮುಖ ಪಾತ್ರಕ್ಕಾಗಿ ನಟಿ ತ್ರಿಶಾ ಕೃಷ್ಣನ್ ಅವರನ್ನು ಅಪ್ರೋಚ್ ಮಾಡಲಾಗಿದ್ದು, ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ತ್ರಿಶಾ ಈ ಪ್ರಾಜೆಕ್ಟ್‌ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಚಿತ್ರತಂಡದಿಂದ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಕಳೆದ 22 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಟಾಪ್ ನಟಿಯಾಗಿರುವ ತ್ರಿಶಾ ತಮ್ಮ ಯಶಸ್ಸಿನ ಓಟವನ್ನು ಮುಂದುವರಿಸಿದ್ದಾರೆ. ಸೂರ್ಯ ಅವರ ಜೊತೆಗಿನ 'ಕರುಪ್ಪು' ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದು, ಮೇ 14ರಂದು ಆ ಸಿನಿಮಾ ರಿಲೀಸ್ ಆಗಲಿದೆ.
ಮುಖ್ಯಮಂತ್ರಿಯಾಗಿ ಇಂದು ದಳಪತಿ ವಿಜಯ್ ಪ್ರಮಾಣ ವಚನ ಸ್ವೀಕಾರ; ತ್ರಿಶಾ, ರಾಹುಲ್ ಗಾಂಧಿ ಸೇರಿ ಹಲವರು ಭಾಗಿ
ರಜನಿ - ಕಮಲ್ ಜೊತೆ ತ್ರಿಶಾ ಒಡನಾಟ
ಒಂದು ವೇಳೆ ಈ ವರದಿಗಳು ನಿಜವಾದರೆ, ಇದು ತ್ರಿಶಾ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ. ಈ ಹಿಂದೆ ಕಮಲ್ ಹಾಸನ್ ಜೊತೆ 'ಮನ್ಮದನ್ ಅಂಬು', 'ತೂಂಗಾ ವನಮ್' ಮತ್ತು 'ಥಗ್ ಲೈಫ್' ಚಿತ್ರಗಳಲ್ಲಿ ತ್ರಿಶಾ ನಟಿಸಿದ್ದಾರೆ. ಹಾಗೆಯೇ, ರಜನಿಕಾಂತ್ ಜೊತೆ 'ಪೇಟ್ಟಾ' ಚಿತ್ರದಲ್ಲೂ ತ್ರಿಶಾ ತೆರೆ ಹಂಚಿಕೊಂಡಿದ್ದರು. ಇದೀಗ ರಜನಿ - ಕಮಲ್ ಒಟ್ಟಿಗೆ ನಟಿಸುವ ಸಿನಿಮಾಕ್ಕೂ ತ್ರಿಶಾ ಹೆಸರು ಕೇಳಿಬಂದಿದೆ. ಈ ಚಿತ್ರಕ್ಕಾಗಿ ತ್ರಿಶಾ ಅವರಿಗೆ ಭಾರಿ ಸಂಭಾವನೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದರ ನಿರ್ಮಾಪಕರು ಯಾರು ಗೊತ್ತಾ?
ರಜನಿಕಾಂತ್ ಮತ್ತು ಕಮಲ್ ಹಾಸನ್ ಒಟ್ಟಿಗೆ ನಟಿಸುತ್ತಿರುವ ಈ ದುಬಾರಿ ಬಜೆಟ್‌ನ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವುದು ಡಿಎಂಕೆ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿಧಿ ಸ್ಟಾಲಿನ್ . ಉದಯನಿಧಿ ಆರಂಭಿಸಿದ್ದ ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿಯೇ ಈ ಚಿತ್ರ ನಿರ್ಮಾಣವಾಗಲಿದೆ. ಸದ್ಯ ಉದಯನಿಧಿ ಸ್ಟಾಲಿನ್ ಅವರು ಸಿಎಂ ʻದಳಪತಿʼ ವಿಜಯ್ ಅವರ ರಾಜಕೀಯ ಎದುರಾಳಿ ಆಗಿದ್ದಾರೆ. ಇನ್ನು, ವಿಜಯ್ ಮತ್ತು ತ್ರಿಷಾ ನಡುವೆ ಎಂಥ ಬಾಂಧವ್ಯ ಇದೆ ಎಂಬುದು ಈಗ ಜಗಜ್ಜಾಹೀರಾಗಿದೆ. ಇಂತಹ ಸಂದರ್ಭದಲ್ಲಿ ವಿಜಯ್ ರಾಜಕೀಯ ಎದುರಾಳಿಗಳ ಸಿನಿಮಾದಲ್ಲಿ ತ್ರಿಷಾ ಬಣ್ಣ ಹಚ್ಚುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಚಿತ್ರತಂಡದಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.