Basavaraj Bommai: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಸುಧಾಕರ್ ಕೊಡುಗೆ ಅಪಾರ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಡಾ.ಕೆ.ಸುಧಾಕರ್ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಚುನಾವಣೆ ಯಲ್ಲಿ ಸೋಲು ಕಂಡರೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಪ್ರತಿ ವಿದ್ಯಾರ್ಥಿಗೆ 5 ಸಾವಿರ ದವರೆಗೆ ಪ್ರೋತ್ಸಾಹಧನ ನೀಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಅಧಿಕಾರ ಮತ್ತು ರಾಜಕೀಯ ಸ್ಥಾನಮಾನಗಳಿಗಿಂತಲೂ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂಬ ಮನೋಭಾವ ಅವರಲ್ಲಿದೆ.
-
ಚಿಕ್ಕಬಳ್ಳಾಪುರ: ರಾಜಕೀಯಕ್ಕೆ ಪ್ರವೇಶಿಸುವುದಕ್ಕೂ ಮುನ್ನವೇ ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಡಾ.ಕೆ.ಸುಧಾಕರ್(Dr K Sudhakar), ರಾಜಕೀಯ ಸೋಲು-ಗೆಲುವುಗಳನ್ನು ಮೀರಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ನೆರವಾಗುತ್ತಿದ್ದಾರೆ.ಸೋಲಿನ ನಂತರವೂ ಕ್ಷೇತ್ರದಲ್ಲಿನ 10 ಸಾವಿರ ವಿದ್ಯಾರ್ಥಿಗಳಿಗೆ 5 ಸಾವಿರ ನಗದು ಪ್ರೋತ್ಸಾಹಧನ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಿರುವುದು ಅವರ ಮಾನವೀಯ ಅಂತಃಕರಣಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಬಣ್ಣಿಸಿದರು.
ನಗರದ ಹೊರವಲಯದಲ್ಲಿರುವ ಹೂವಿನ ಮಾರುಕಟ್ಟೆ ಬಳಿಯ ಮೈದಾನದಲ್ಲಿ ಆಯೋಜಿಸಿದ್ದ ಜ್ಞಾನಸುಧಾ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಕೆ.ಸುಧಾಕರ್ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಚುನಾವಣೆ ಯಲ್ಲಿ ಸೋಲು ಕಂಡರೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಪ್ರತಿ ವಿದ್ಯಾರ್ಥಿಗೆ 5 ಸಾವಿರ ದವರೆಗೆ ಪ್ರೋತ್ಸಾಹಧನ ನೀಡುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಅಧಿಕಾರ ಮತ್ತು ರಾಜಕೀಯ ಸ್ಥಾನಮಾನಗಳಿಗಿಂತಲೂ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಎಂಬ ಮನೋಭಾವ ಅವರಲ್ಲಿದೆ. ಇಂತಹ ಮಾನವೀಯ ಗುಣವುಳ್ಳ ವ್ಯಕ್ತಿಯನ್ನು ಜನರು ಎಂದಿಗೂ ಕಳೆದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: Basavaraj Bommai: ರಾಜ್ಯದಲ್ಲಿ ಟ್ಯಾಕ್ಸ್ ಟೆರರಿಸಂ ಶುರುವಾಗಿದೆ ಎಂದ ಬಸವರಾಜ ಬೊಮ್ಮಾಯಿ
ಎತ್ತಿನಹೊಳೆ(Ettina hole) ಯೋಜನೆಯನ್ನು ತಮ್ಮ ಆಡಳಿತಾವಧಿಯಲ್ಲಿ ಮುನ್ನಡೆಸಿದ್ದು, ಯೋಜನೆಗೆ 13 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಈ ಭಾಗದ ನೀರಿನ ಸಮಸ್ಯೆ ಪರಿಹಾರ ಕ್ಕೆ ಯೋಜನೆ ಮಹತ್ವದ ಕೊಡುಗೆ ನೀಡಲಿದೆ, 2028ಕ್ಕೆ ಡಾ.ಕೆ.ಸುಧಾಕರ್ ನೇತೃತ್ವ ದಲ್ಲಿಯೇ ಜಿಲ್ಲೆಗೆ ನೀರು ಹರಿಯಲಿದೆ ಎಂದು ಹೇಳಿದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಮತ್ತೆ ವಿಧಾನಸೌಧಕ್ಕೆ ಕಳುಹಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಜನರು ಬೆಂಬಲ ನೀಡಬೇಕು. ಅವರ ದೂರದೃಷ್ಟಿ ಮುಂದಿನ ಪೀಳಿಗೆಯ ಭವಿಷ್ಯದ ಮೇಲೆ ಕೇಂದ್ರೀಕೃತವಾಗಿದೆ. ಅಂತಹ ಧೀಮಂತ ನಾಯಕನ ಅಗತ್ಯ ಚಿಕ್ಕಬಳ್ಳಾಪುರ ಜಿಲ್ಲೆಗಿದೆ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಆರ್ಥಿಕ ಸಂಕಷ್ಟ ದಲ್ಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೂ ಹಣ ಹೊಂದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ರಾಜಕೀಯ ಬದಲಾವಣೆಯೊಂದಿಗೆ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯಿಂದ ಹೊರತಂದು ಸಂಪದ್ಭರಿತ ಜಿಲ್ಲೆಯನ್ನಾಗಿ ರೂಪಿಸುವ ಸಂಕಲ್ಪಕ್ಕೆ ಜನರು ಕೈಜೋಡಿಸಬೇಕು. ದುಷ್ಟ ಆಡಳಿತವನ್ನು ಬದಲಾಯಿಸಲು ಸುಧಾಕರ್ ಅವರಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಸುಧಾಕರ್ ಅಭಿವೃದ್ಧಿಗೆ ಬೆಂಬಲ ನೀಡಿ
ಸಂಸದ ಪಿ.ಸಿ.ಮೋಹನ್(MP P C Mohan) ಮಾತನಾಡಿ, ರಾಜಕೀಯ ಪ್ರವೇಶಕ್ಕೂ ಮೊದಲಿ ನಿಂದಲೂ ಸುಧಾಕರ್ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 10 ಸಾವಿರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್(R Ashok) ಮಾತನಾಡಿ, ತಮ್ಮ ಪಕ್ಷದ ಆಡಳಿತಾವಧಿ ಯಲ್ಲಿ 22 ಸಾವಿರ ನಿವೇಶನಗಳನ್ನು ವಿತರಿಸಲಾಗಿತ್ತು. ಆದರೆ ಅವುಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರ ಜನರ ಅನುಕೂಲಕ್ಕಾಗಿ ಡಿ.ಕೆ.ಶಿವಕುಮಾರ್(D K Shivakumar) ಅವರ ಕ್ಷೇತ್ರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ಇಲ್ಲಿಗೆ ತರಲು ಸುಧಾಕರ್ ಶ್ರಮಿಸಿದ್ದರು. ಆದರೆ ಈಗಿನ ಸರ್ಕಾರಕ್ಕೆ ಆಸ್ಪತ್ರೆಯನ್ನು ಸಮರ್ಪಕವಾಗಿ ನಡೆಸುವ ಬದ್ಧತೆ ಇಲ್ಲ ಎಂದು ಟೀಕಿಸಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸುಧಾಕರ್ ಅವರ ನಾಯಕತ್ವ ಅಗತ್ಯವಿದ್ದು, ಜನರು ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಕೆ.ಸುಧಾಕರ್ ಮಾತನಾಡಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದಕ್ಕಿಂತ ತಮ್ಮ ಪರಿಶ್ರಮ, ಶಿಕ್ಷಣ ಮತ್ತು ಜ್ಞಾನದ ಮೂಲಕ ಮೌಲ್ಯಯುತ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು. ದೊಡ್ಡ ಕನಸುಗಳನ್ನು ಕಂಡು ಸಾಧನೆಯ ಮೂಲಕ ಜಿಲ್ಲೆ ಹಾಗೂ ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕು. ಇದಕ್ಕಾಗಿ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ವೇಳೆ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಮಾತನಾಡಿ ದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ನವೀನ್ ಕಿರಣ್, ಮರಳುಕುಂಟೆ ಕೃಷ್ಣಮೂರ್ತಿ, ಕುಡಾ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಅನು ಆನಂದ್, ನಗರಸಭೆ ಮಾಜಿ ಅಧ್ಯಕ್ಷ ಗಜೇಂದ್ರ ಸೇರಿ ನೂರಾರು ಮುಖಂಡರು ಇದ್ದರು.