ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರೀತಿಯಿಂದ ರಾಜಕೀಯದವರೆಗೆ... ಸೋನಿಯಾ ಗಾಂಧಿ ಬದುಕಿನ ಭಾವನಾತ್ಮಕ ಪಯಣ ʼಬಿಲಾಗಿಂಗ್‌: ಎ ಜರ್ನಿ ಆಫ್‌ ಲವ್‌ʼ

ಪ್ರೀತಿ, ತ್ಯಾಗ, ನೋವು, ನಿಷ್ಠೆ ಮತ್ತು ಭಾರತವನ್ನು ತನ್ನದಾಗಿಸಿಕೊಂಡ ಮಹಿಳೆಯ ಆತ್ಮಕಥನ ಇದಾಗಿದೆ. ಕೆಲವು ಕೃತಿಗಳು ಕೇವಲ ಬದುಕಿನ ಘಟನೆಗಳನ್ನು ದಾಖಲಿಸುವುದಿಲ್ಲ. ಅವು ಒಂದು ಕಾಲಘಟ್ಟದ ಇತಿಹಾಸವನ್ನು, ವ್ಯಕ್ತಿಯ ಅಂತರಂಗದ ಸಂಘರ್ಷಗಳನ್ನು, ಕುಟುಂಬದ ಏಳು ಬೀಳುಗಳನ್ನು ಮತ್ತು ಸಮಾಜದ ಬದಲಾವಣೆಗಳನ್ನು ತೆರೆದಿಡುತ್ತವೆ. ಅಂತಹ ವಿಶಿಷ್ಟ ಕೃತಿಗಳ ಸಾಲಿಗೆ ʼಬಿಲಾಗಿಂಗ್‌: ಎ ಜರ್ನಿ ಆಫ್‌ ಲವ್‌ʼ ಸೇರುತ್ತದೆ.

ಪ್ರೀತಿಯಿಂದ ರಾಜಕೀಯದವರೆಗೆ... ಸೋನಿಯಾ ಗಾಂಧಿ ಬದುಕಿನ ಭಾವನಾತ್ಮಕ ಪಯಣ

-

Profile
Ashok Nayak Nov 17, 2026 8:06 PM

ಕಾಂಗ್ರೆಸ್‌ ಅಧಿನಾಯಕಿಯಾಗಿ, ಯುಪಿಎ ಮೈತ್ರಿಕೂಟದ ಅಧ್ಯಕ್ಷರಾಗಿ ಭಾರತ ಕಂಡ ಅತ್ಯಂತ ಪ್ರಬಲ ನಾಯಕಿ ಸೋನಿಯಾ ಗಾಂಧಿ ಅವರ ಕುರಿತಾದ ʼಬಿಲಾಗಿಂಗ್‌: ಎ ಜರ್ನಿ ಆಫ್‌ ಲವ್‌ʼ ಕೃತಿಯು ಪ್ರೀತಿಯಿಂದ ರಾಜಕೀಯದವರೆಗೆ ಬದುಕಿನ ಭಾವನಾತ್ಮಕ ಪಯಣ ಕಟ್ಟಿಕೊಡುವ ಅನನ್ಯ ಕೃತಿ.

ಪ್ರೀತಿ, ತ್ಯಾಗ, ನೋವು, ನಿಷ್ಠೆ ಮತ್ತು ಭಾರತವನ್ನು ತನ್ನದಾಗಿಸಿಕೊಂಡ ಮಹಿಳೆಯ ಆತ್ಮಕಥನ ಇದಾಗಿದೆ. ಕೆಲವು ಕೃತಿಗಳು ಕೇವಲ ಬದುಕಿನ ಘಟನೆಗಳನ್ನು ದಾಖಲಿಸುವುದಿಲ್ಲ. ಅವು ಒಂದು ಕಾಲಘಟ್ಟದ ಇತಿಹಾಸವನ್ನು, ವ್ಯಕ್ತಿಯ ಅಂತರಂಗದ ಸಂಘರ್ಷಗಳನ್ನು, ಕುಟುಂಬದ ಏಳು ಬೀಳುಗಳನ್ನು ಮತ್ತು ಸಮಾಜದ ಬದಲಾವಣೆಗಳನ್ನು ತೆರೆದಿಡುತ್ತವೆ. ಅಂತಹ ವಿಶಿಷ್ಟ ಕೃತಿಗಳ ಸಾಲಿಗೆ ʼಬಿಲಾಗಿಂಗ್‌: ಎ ಜರ್ನಿ ಆಫ್‌ ಲವ್‌ʼ ಸೇರುತ್ತದೆ.

ಇಟಲಿಯ ಪುಟ್ಟ ಊರಿನಲ್ಲಿ ಜನಿಸಿದ ಯುವತಿಯೊಬ್ಬಳು ಪ್ರೀತಿಯ ಸೆಳೆತದಿಂದ ಭಾರತಕ್ಕೆ ಬಂದು, ಇಲ್ಲಿನ ಸಂಸ್ಕೃತಿ, ಸಂಪ್ರದಾಯ, ಭಾಷೆ ಮತ್ತು ಜನಜೀವನದೊಂದಿಗೆ ಬೆರೆತು, ಅಂತಿಮ ವಾಗಿ ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಭಾವಿ ವ್ಯಕ್ತಿಯಾಗಿ ರೂಪುಗೊಂಡ ಅಪರೂಪದ ಜೀವನಗಾಥೆಯನ್ನು ಇದು ಒಳಗೊಂಡಿದೆ. ಪ್ರೀತಿ, ಕುಟುಂಬ, ವೈಯಕ್ತಿಕ ನಷ್ಟ, ರಾಜಕೀಯ ಅನಿವಾರ್ಯತೆ ಮತ್ತು ತಾನು ಬದುಕುತ್ತಿರುವ ನೆಲದೊಂದಿಗೆ ಬೆಸೆದುಕೊಳ್ಳುವ ಭಾವನೆಗಳು ಈ ಕೃತಿಯ ಪ್ರಮುಖ ಆಕರ್ಷಣೆಗಳಾಗಿವೆ.

ಇದನ್ನೂ ಓದಿ: AICC: ಸಂಘಟನೆ ಸೃಜನ್ ಅಭಿಯಾನಕ್ಕೆ ವೇಗ; ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಇಂಗ್ಲಿಷ್ ಕಲಿಯಲು ಕೇಂಬ್ರಿಡ್ಜ್‌ಗೆ ತೆರಳಿದಾಗ 1965ರಲ್ಲಿ ಸೋನಿಯಾ ಅವರು ರಾಜೀವ್ ಗಾಂಧಿ ಅವರನ್ನು ಭೇಟಿಯಾದರು. ಮೊದಲ ಭೇಟಿಯಲ್ಲೇ ಆರಂಭವಾದ ಪ್ರೀತಿ ಮುಂದೆ 1968ರಲ್ಲಿ ರಾಜೀವ್ ಗಾಂಧಿ ಅವರನ್ನು ವಿವಾಹವಾಗಿ ಭಾರತಕ್ಕೆ ಬಂದರು. ಸೋನಿಯಾ ಗಾಂಧಿ ಅವರಿಗೆ ಇಲ್ಲಿನ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ-ತೊಡುಗೆ ಎಲ್ಲವೂ ಹೊಸದಾಗಿದ್ದವು.

ವಿದೇಶಿ ನೆಲದಲ್ಲಿ ಹೊಸ ಕುಟುಂಬದ ಸದಸ್ಯೆಯಾಗಿ ಹೊಂದಿಕೊಳ್ಳುವುದು ಸುಲಭದ ಸಂಗತಿ ಯಾಗಿರಲಿಲ್ಲ. ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ ಹಾಗೂ ನೆಹರೂ ಕುಟುಂಬದ ಸೊಸೆಯಾಗಿ ಬದುಕು ಆರಂಭಿಸಿದ ಸೋನಿಯಾ, ಕ್ರಮೇಣ ಭಾರತೀಯ ಜೀವನಶೈಲಿ ಯನ್ನು ತಮ್ಮದಾಗಿಸಿಕೊಂಡರು. ಹಿಂದಿಯನ್ನು ನಿರ್ಗಳವಾಗಿ ಮಾತನಾಡುವುದನ್ನು ಕಲಿತರು. ಇಲ್ಲಿನ ಸಂಗೀತ, ಸಾಹಿತ್ಯ, ಸಂಸ್ಕೃತಿಗೆ ಮಾರುಹೋದರು.

ಕೃತಿಯಲ್ಲಿ ಅವರು ತಮ್ಮ ಅತ್ತೆ ಇಂದಿರಾ ಗಾಂಧಿ ಅವರ ವ್ಯಕ್ತಿತ್ವ, ಅವರೊಂದಿಗಿನ ಸಂಬಂಧ, ರಾಜೀವ್ ಗಾಂಧಿ ಅವರೊಂದಿಗಿನ ಪ್ರೀತಿ ಹಾಗೂ ಕುಟುಂಬದ ಖಾಸಗಿ ಬದುಕಿನ ಹಲವು ಮಗ್ಗುಲು ಗಳನ್ನು ದಾಖಲಿಸಿದ್ದಾರೆ. ಈ ಪುಸ್ತಕದ ಶೀರ್ಷಿಕೆಯೇ ಅತ್ಯಂತ ಅರ್ಥಪೂರ್ಣವಾಗಿದೆ. ‘ಬಿಲಾಂಗಿಂಗ್‌’ ಎಂದರೆ ಸೇರಿದವಳು ಎಂಬ ಭಾವನೆ, ಸ್ವೀಕಾರ, ಆತ್ಮೀಯತೆ ಮತ್ತು ಒಬ್ಬರ ಬದುಕಿನಲ್ಲಿ ಒಂದು ನೆಲ ತನ್ನ ಮನೆಯಾಗಿ ರೂಪುಗೊಳ್ಳುವ ಅನುಭವವನ್ನು ಇದು ಅನಾವರಣ ಗೊಳಿಸುತ್ತದೆ.

ಇಟಲಿಯಿಂದ ಬಂದಿದ್ದ ಸೋನಿಯಾ ಗಾಂಧಿ ಅವರಿಗೆ ಭಾರತದಲ್ಲಿ ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಭಾಷೆ, ಉಚ್ಚಾರಣೆ, ಸೀರೆ ಉಡುವ ವಿಧಾನ ಸೇರಿದಂತೆ ಸಣ್ಣಪುಟ್ಟ ಸಂಗತಿಗಳು ಅವರನ್ನು ಕಾಡುತ್ತಿತ್ತು. ಆದರೆ ಪತಿ ರಾಜೀವ್ ಗಾಂಧಿ ಅವರ ಅಮೇಠಿ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ಅಲ್ಲಿನ ಜನರು ತಮ್ಮನ್ನು ಪರಕೀಯರಂತೆ ಕಾಣದೆ, ತಮ್ಮ ಮನೆಯವರಂತೆ ಸ್ವೀಕರಿಸಿದರು ಎಂಬುದು ಅವರ ಜೀವನದ ಮಹತ್ವದ ಅನುಭವ.

ಅಮೇಠಿಯ ಜನ ತಮ್ಮ ತಪ್ಪುಗಳನ್ನು ತಿದ್ದುತ್ತಿದ್ದರು, ತಮ್ಮೊಂದಿಗೆ ಮುಕ್ತವಾಗಿ ಮಾತನಾಡು ತ್ತಿದ್ದರು. ತಮ್ಮ ಉಡುಗೆ ಅಥವಾ ಉಚ್ಚಾರಣೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಸಹಜವಾಗಿ ಬೆರೆತು ಕೊಂಡಿದ್ದರು. ಆಗಲೇ ತಾವು ಈ ನೆಲದ ಜನರಲ್ಲಿ ಒಬ್ಬರಾಗಿದ್ದೇವೆ ಎಂಬ ಮೊದಲ ಅನುಭವ ಮೂಡಿತು ಎಂದು ಸೋನಿಯಾ ಗಾಂಧಿ ಸ್ಮರಿಸಿದ್ದಾರೆ. 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಚುನಾವಣೆಯಲ್ಲಿ ಗೆದ್ದಾಗ ಭಾರತದಲ್ಲಿ ತಮಗೆ ಸಂಪೂರ್ಣ ಸ್ವೀಕಾರ ದೊರೆತಿದೆ ಎಂಬ ಭಾವನೆ ಮತ್ತಷ್ಟು ಗಟ್ಟಿಯಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಬದುಕಿನಲ್ಲಿ ಕುಟುಂಬದ ಸಂತೋಷದ ಕ್ಷಣಗಳಷ್ಟೇ ಅಲ್ಲ, ಮರೆಯಲಾಗದ ದುರಂತಗಳೂ ಇವೆ. ರಾಜೀವ್ ಗಾಂಧಿ ಅವರ ಸಹೋದರ ಸಂಜಯ್ ಗಾಂಧಿ ವಿಮಾನ ಅಪಘಾತ ದಲ್ಲಿ ಮೃತಪಟ್ಟ ಘಟನೆ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು. ನಂತರ 1984ರ ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಅವರ ಹತ್ಯೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ರಾಜೀವ್ ಗಾಂಧಿ ಪ್ರಧಾನಮಂತ್ರಿಯ ಜವಾಬ್ದಾರಿ ವಹಿಸಿಕೊಂಡರು. ಆದರೆ ಪ್ರಧಾನಮಂತ್ರಿಯ ಪತ್ನಿಯಾಗಿ ಸೋನಿಯಾ ಅವರ ಬದುಕು ಸಹಜವಾಗಿರಲಿಲ್ಲ. ದೇಶದ ಆಡಳಿತದ ಕೇಂದ್ರದಲ್ಲಿದ್ದ ಕುಟುಂಬದ ಸದಸ್ಯೆಯಾಗಿದ್ದರೂ, ತಮ್ಮ ಖಾಸಗಿ ಬದುಕನ್ನು ಸಾರ್ವಜನಿಕ ಜೀವನದಿಂದ ದೂರವಿಡಲು ಅವರು ಬಯಸಿದ್ದರು.

ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂ ರಿನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾದರು. ಪತಿಯ ಹತ್ಯೆ ಸೋನಿಯಾ ಗಾಂಧಿ ಅವರ ಬದುಕಿನ ಅತ್ಯಂತ ನೋವಿನ ಅಧ್ಯಾಯವಾಯಿತು. ಒಂದೆಡೆ ಪತಿಯನ್ನು ಕಳೆದುಕೊಂಡ ದುಃಖ, ಮತ್ತೊಂದೆಡೆ ಮಕ್ಕಳ ಭವಿಷ್ಯದ ಜವಾಬ್ದಾರಿ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಅವರು ರಾಜಕೀಯದಿಂದ ದೂರವಿದ್ದು, ಕುಟುಂಬದ ಬದುಕಿಗೆ ಆದ್ಯತೆ ನೀಡಲು ಪ್ರಯತ್ನಿಸಿದರು. ಆದರೆ ದೇಶದ ರಾಜಕೀಯ ಪರಿಸ್ಥಿತಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕತ್ವದ ಒತ್ತಡ ಅವರನ್ನು ಕ್ರಮೇಣ ರಾಜಕೀಯದತ್ತ ಕರೆ ತಂದಿತು.

ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿದಿದ್ದ ಸೋನಿಯಾ ಗಾಂಧಿ, 1998ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡರು. ಆಗ ಪಕ್ಷ ರಾಜಕೀಯವಾಗಿ ಸಂಕಷ್ಟದಲ್ಲಿತ್ತು. ಮತ್ತೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಸಂಘಟಿಸುವ ಸವಾಲು ಅವರ ಮುಂದಿತ್ತು. ಯಾವುದೇ ರಾಜ್ಯದಲ್ಲಿ ಚುನಾವಣೆ ಎದುರಿಸುವ ಪರಿಸ್ಥಿತಿ ಆಗ ಇರಲಿಲ್ಲ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು, ಚುನಾವಣಾ ಸೋಲುಗಳು, ನಾಯಕತ್ವದ ಬಿಕ್ಕಟ್ಟುಗಳು ಮತ್ತು ಪ್ರಬಲ ವಿರೋಧ ಪಕ್ಷಗಳ ಸವಾಲುಗಳ ನಡುವೆ ಅವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ದರು.

ಅವರ ರಾಜಕೀಯ ಪಯಣ ಸುಗಮವಾಗಿರಲಿಲ್ಲ. ವಿದೇಶಿ ಮೂಲದವರು ಎಂಬ ಆರೋಪ, ರಾಜಕೀಯ ವಿರೋಧಿಗಳ ಟೀಕೆ, ಸಾರ್ವಜನಿಕ ಚರ್ಚೆಗಳು ಹಾಗೂ ವೈಯಕ್ತಿಕ ಜೀವನದ ಮೇಲಿನ ನಿರಂತರ ನಿಗಾ ಇವೆಲ್ಲವನ್ನೂ ಎದುರಿಸಬೇಕಾಯಿತು.‌ ಆದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಅವರು ಸುಮಾರು ಎರಡು ದಶಕಗಳ ಕಾಲ ಪಕ್ಷವನ್ನು ಮುನ್ನಡೆಸಿದರು. ಅವರ ನಾಯಕತ್ವದಲ್ಲಿ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಿತು. 2009ರಲ್ಲಿ ಮತ್ತೊಮ್ಮೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.

ವಿಶೇಷವಾಗಿ ಗಮನ ಸೆಳೆಯುವ ಮತ್ತೊಂದು ವಿಚಾರವೆಂದರೆ 2004ರ ರಾಜಕೀಯ ಬೆಳವಣಿಗೆಗಳು. ಕಾಂಗ್ರೆಸ್ ನೇತೃತ್ವದ ಯುಪಿಎ ಚುನಾವಣೆಯಲ್ಲಿ ಜಯಗಳಿಸಿದ ನಂತರ ಸೋನಿಯಾ ಗಾಂಧಿ ಪ್ರಧಾನಮಂತ್ರಿಯಾಗಬೇಕು ಎಂಬ ಒತ್ತಾಯ ಪಕ್ಷದೊಳಗೆ ಮತ್ತು ಮಿತ್ರಪಕ್ಷಗಳಿಂದ ವ್ಯಕ್ತವಾಗಿತ್ತು. ಆದರೆ ದೇಶದ ಅತ್ಯುನ್ನತ ರಾಜಕೀಯ ಹುದ್ದೆಯನ್ನು ಸ್ವೀಕರಿಸುವ ಅವಕಾಶವಿದ್ದರೂ ಅವರು ಅದನ್ನು ನಿರಾಕರಿಸಿ, ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದರು.

ಈ ನಿರ್ಧಾರ ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಪರೂಪದ ಘಟನೆಯಾಗಿ ಉಳಿದಿದೆ. ಅಧಿಕಾರದ ಅವಕಾಶವನ್ನು ತ್ಯಜಿಸಿ ಪಕ್ಷದ ನಾಯಕತ್ವ ಮತ್ತು ಮೈತ್ರಿಕೂಟದ ರಾಜಕೀಯಕ್ಕೆ ಆದ್ಯತೆ ನೀಡಿದ ಅವರ ನಿರ್ಧಾರವನ್ನು ಬೆಂಬಲಿಗರು ರಾಜಕೀಯ ಪ್ರಬುದ್ಧತೆ ಮತ್ತು ತ್ಯಾಗದ ಉದಾಹರಣೆಯಾಗಿ ಬಣ್ಣಿಸಿದ್ದಾರೆ.

ಆದರೆ ಈ ನಿರ್ಧಾರದ ಹಿಂದಿನ ವೈಯಕ್ತಿಕ ಚಿಂತನೆಗಳು, ರಾಜಕೀಯ ಒತ್ತಡಗಳು ಮತ್ತು ಆ ಕಾಲದ ಸನ್ನಿವೇಶಗಳನ್ನು ಸೋನಿಯಾ ಗಾಂಧಿ ಅವರ ದೃಷ್ಟಿಕೋನದಿಂದ ಅರಿಯಲು ಈ ಆತ್ಮಕಥನ ಅವಕಾಶ ಕಲ್ಪಿಸುತ್ತದೆ. ಕುಟುಂಬದ ನೋವು, ಮಕ್ಕಳ ಪ್ರೀತಿ ಮತ್ತು ತಾಯಿಯ ಅಂತರಂಗ ಸೋನಿಯಾ ಗಾಂಧಿ ಅವರ ಬದುಕನ್ನು ಕೇವಲ ರಾಜಕೀಯದ ಕನ್ನಡಕದಿಂದ ನೋಡಲು ಸಾಧ್ಯವಿಲ್ಲ. ಅವರ ಪಾಲಿಗೆ ತಾಯಿ, ಪತ್ನಿ ಮತ್ತು ಕುಟುಂಬದ ಸದಸ್ಯೆಯಾಗಿ ಕಳೆದ ಬದುಕು ಅತ್ಯಂತ ಮಹತ್ವದ್ದಾಗಿದೆ.

ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬದುಕಿನಲ್ಲೂ ದೊಡ್ಡ ಬದಲಾವಣೆಯಾಯಿತು. ತಂದೆಯನ್ನು ಕಳೆದುಕೊಂಡ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಸೋನಿಯಾ ಅವರ ಮೇಲಿತ್ತು. ಸಾರ್ವಜನಿಕ ಬದುಕಿನಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರೂ, ಕುಟುಂಬದ ಒಳಗೆ ಅವರು ಎದುರಿಸಿದ ನೋವು ಮತ್ತು ಒಂಟಿತನವನ್ನು ಈ ಕೃತಿ ತೆರೆದಿಡುತ್ತದೆ.

ಸೋನಿಯಾ ಗಾಂಧಿ ಅವರ ಬದುಕು ಭಾರತದ ರಾಜಕೀಯ ಇತಿಹಾಸದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದರಿಂದ ರಾಜಕೀಯವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಅವರ ಆಡಳಿತ, ರಾಜೀವ್ ಗಾಂಧಿ ಅವರ ಪ್ರಧಾನಮಂತ್ರಿ ಅವಧಿ, ಕಾಂಗ್ರೆಸ್ ಪಕ್ಷದ ಏಳುಬೀಳುಗಳು, ಸಮಕಾಲೀನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ ಈ ಕೃತಿಯಲ್ಲಿದೆ. ಈ ಕೃತಿ ಸೋನಿಯಾ ಗಾಂಧಿ ಅವರ ಬದುಕಿನ ಕಥೆಯಷ್ಟೇ ಅಲ್ಲ, ಭಾರತದ ರಾಜಕೀಯ ಇತಿಹಾಸದ ಕೆಲವು ನಿರ್ಣಾಯಕ ಘಟ್ಟಗಳನ್ನು ಒಬ್ಬ ಪ್ರಮುಖ ರಾಜಕೀಯ ನಾಯಕಿಯ ವೈಯಕ್ತಿಕ ದೃಷ್ಟಿಕೋನ ದಿಂದ ನೋಡುವ ಪ್ರಯತ್ನವೂ ಹೌದು.

ರಾಜಕೀಯದಲ್ಲಿ ಅಧಿಕಾರ, ವಿರೋಧ, ಟೀಕೆ, ಆರೋಪ ಮತ್ತು ಸಂಘರ್ಷಗಳು ಸಹಜ. ಆದರೆ ಇವೆಲ್ಲವನ್ನೂ ಮೀರಿದ ಮಾನವೀಯ ಸಂಬಂಧಗಳು, ಪ್ರೀತಿ, ನಂಬಿಕೆ ಮತ್ತು ಆತ್ಮೀಯತೆ ಬದುಕಿಗೆ ನಿಜವಾದ ಅರ್ಥ ನೀಡುತ್ತವೆ ಎಂಬುದನ್ನು ಈ ಕೃತಿ ನೆನಪಿಸುತ್ತದೆ. ʼಬಿಲಾಗಿಂಗ್‌: ಎ ಜರ್ನಿ ಆಫ್‌ ಲವ್‌ʼ ಕೇವಲ ಸೋನಿಯಾ ಗಾಂಧಿ ಅವರ ಆತ್ಮಕಥೆಯಲ್ಲ; ಪ್ರೀತಿಗಾಗಿ ದೇಶ ಬದಲಿಸಿದ ಮಹಿಳೆ ಯೊಬ್ಬಳು, ವಿಧಿಯ ಏಟುಗಳಿಗೆ ಕುಗ್ಗದೆ ಬದುಕನ್ನು ಮರುರೂಪಿಸಿಕೊಂಡು, ಹೊಸ ನೆಲದಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡ ಭಾವನಾತ್ಮಕ ಜೀವನಗಾಥೆ. ರಾಜಕೀಯ ನಾಯಕಿಯ ಸಾರ್ವಜನಿಕ ಬದುಕಿನ ಹಿಂದಿರುವ ಖಾಸಗಿ ವ್ಯಕ್ತಿತ್ವವನ್ನು ಅರಿಯಲು ಬಯಸುವ ಪ್ರತಿಯೊಬ್ಬರೂ ಓದಲೇಬೇಕಾದ ಮಹತ್ವದ ಕೃತಿ ಇದು.

ಡಾ.ಆನಂದ ಕುಮಾರ್‌, ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿಗಳು