ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೋಹಿಣಿ ಬಳಿಕ ಮತ್ತೆ ಮೂವರು ಪುತ್ರಿಯರು ಲಾಲೂ ಮನೆಯಿಂದ ಹೊರಗೆ

ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಆರ್ ಜೆಡಿ ಮುಖ್ಯಸ್ಥನ ಕುಟುಂಬದ ಮೇಲೆ ತೀವ್ರ ಪರಿಣಾಮ ಬೀರಿದೆ. ಶನಿವಾರವಷ್ಟೇ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ಮತ್ತು ಕುಟುಂಬವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಇದೀಗ ಅವರ ಮತ್ತೆ ಮೂವರು ಪುತ್ರಿಯರು ಮನೆಯಿಂದ ಹೊರಗೆ ನಡೆದಿದ್ದಾರೆ. ಇದು ಅವರ ಕುಟುಂಬ ಕಲಹದ ಪರಿಣಾಮ ಎನ್ನಲಾಗುತ್ತಿದೆ.

ಲಾಲೂ ಮನೆಯಿಂದ ಮೂವರು ಪುತ್ರಿಯರು ಹೊರಕ್ಕೆ

ಪುತ್ರಿಯರು ಮತ್ತು ಪತ್ನಿಯೊಂದಿಗೆ ಲಾಲೂ ಪ್ರಸಾದ್ ಯಾದವ್ (ಸಂಗ್ರಹ ಚಿತ್ರ) -

ಬಿಹಾರ: ವಿಧಾನ ಸಭಾ ಚುನಾವಣೆಯಲ್ಲಿ (Bihar election) ಸೋಲುಂಡ ಬಳಿಕ ರಾಷ್ಟ್ರೀಯ ಜನತಾ ದಳ (RJD) ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರ ಕುಟುಂಬ ಹೋಳಾಗಿದೆಯೇ ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದರೆ ಶನಿವಾರ ಅವರ ಪುತ್ರಿ ರೋಹಿಣಿ ಆಚಾರ್ಯ (Rohini Acharya) ಅವರು ರಾಜಕೀಯ ಮತ್ತು ಕುಟುಂಬವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಇದೀಗ ಅವರ ಇನ್ನುಳಿದ ಮೂವರು ಪುತ್ರಿಯರು ಮನೆ ಬಿಟ್ಟು ಹೊರ ನಡೆದಿದ್ದಾರೆ. ಇದು ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಪರಿಣಾಮ ಎನ್ನಲಾಗುತ್ತಿದೆ.

ರೋಹಿಣಿ ಆಚಾರ್ಯ ಅವರು ಶನಿವಾರ ಕೆಲವು ಸ್ಪೋಟಕ ಆರೋಪಗಳನ್ನು ಮಾಡಿದ್ದರು. ಇದರ ಬಳಿಕ ಲಾಲು ಪ್ರಸಾದ್ ಯಾದವ್ ಅವರ ಮೂವರು ಹೆಣ್ಣುಮಕ್ಕಳು ಇದೀಗ ತಮ್ಮ ಪಾಟ್ನಾ ನಿವಾಸದಿಂದ ಹೊರಗೆ ಹೋಗುತ್ತಿದ್ದಾರೆ. ಆರ್‌ಜೆಡಿ ಕುಟುಂಬ ಕಲಹ ತೀವ್ರಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Bihar Election 2025: ಆರ್‌ಜೆಡಿ ಸೋಲಿನ ಬಳಿಕ ರಾಜಕೀಯ, ಕುಟುಂಬ ತೊರೆದ ಲಾಲು ಪ್ರಸಾದ್ ಯಾದವ್ ಪುತ್ರಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಪಕ್ಷವು ಹೀನಾಯವಾಗಿ ಸೋತಿತ್ತು. ಈ ಹಿಂದೆ 75 ಸ್ಥಾನಗಳಿಸಿದ್ದ ಆರ್ ಜೆಡಿ ಈ ಬಾರಿ ಕೇವಲ 25 ಸ್ಥಾನಗಳನ್ನು ಗಳಿಸಿದೆ. ಇದು ಆರ್‌ಜೆಡಿಯೊಳಗಿನ ರಾಜಕೀಯ ಮತ್ತು ವೈಯಕ್ತಿಕ ಕಲಹದ ಪರಿಣಾಮ ಎನ್ನಲಾಗುತ್ತಿದೆ. ಶನಿವಾರ ರಾಜಕೀಯ ಹಾಗೂ ಕುಟುಂಬವನ್ನು ತ್ಯಜಿಸಿದ ರೋಹಿಣಿ ಅವರು ಈ ಕುರಿತು ಭಾವನಾತ್ಮಕ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಅವರು, ತಮ್ಮನ್ನು ಕೆಟ್ಟದಾಗಿ ನಿಂದಿಸಲಾಗಿದೆ. ತೇಜಸ್ವಿ ಯಾದವ್ ಅವರ ಇಬ್ಬರು ಆಪ್ತ ಸಹಾಯಕರಾದ ಆರ್‌ಜೆಡಿಯ ರಾಜ್ಯಸಭಾ ಸಂಸದ ಸಂಜಯ್ ಯಾದವ್ ಮತ್ತು ಅವರ ಸಹಚರ ರಮೀಜ್ ನಡುವಿನ ಘರ್ಷಣೆಯ ವೇಳೆ ಯಾರೋ ತಮಗೆ ಚಪ್ಪಲಿಯಿಂದ ಹೊಡೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.

ತನ್ನನ್ನು ಕುಟುಂಬದಿಂದ ದೂರ ಮಾಡಲಾಗಿದೆ. ತನ್ನ ಹೆತ್ತವರನ್ನು ಅಳುವಂತೆ ಮಾಡಿದ್ದಾರೆ. ತಂದೆಗೆ ಮೂತ್ರಪಿಂಡವನ್ನು ದಾನ ಮಾಡಿದ ಬಳಿಕ ತನ್ನಿಂದ ಕೋಟಿಗಟ್ಟಲೆ ಹಣ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದು ಪೋಸ್ಟ್ ನಲ್ಲಿ ಅವರು ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿನ ಸೋಲಿಗೆ ಸಂಪೂರ್ಣ ಹೊಣೆಯನ್ನು ನಾನೇ ಹೊರುವಂತೆ ಸಂಜಯ್ ಯಾದವ್ ಮತ್ತು ರಮೀಜ್ ಒತ್ತಾಯಿಸಿದ್ದು, ಇದರಿಂದ ನಾನು ಎಲ್ಲಾ ಹೊಣೆಯನ್ನು ಹೊರುತ್ತಿದ್ದೇನೆ ಎಂದು ತಿಳಿಸಿದ್ದರು.

ಈ ಕುರಿತು ತೇಜಸ್ವಿ ಯಾದವ್ ಅವರು ಹಾಗೂ ಅವರ ಸಹಾಯಕರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸರನ್ ಲೋಕಸಭಾ ಸ್ಥಾನಕ್ಕೆ ಕಳೆದ ವರ್ಷ ಸ್ಪರ್ಧಿಸಿದ್ದ ರೋಹಿಣಿ ಅಲ್ಲಿ ಸೋತ ಬಳಿಕ ಅವರನ್ನು ಕುಟುಂಬದ ಆಧಾರಸ್ತಂಭ ಎಂದು ಪರಿಗಣಿಸಲಾಗಿತ್ತು. ಆದರೆ ಇದೀಗ ಅವರ ಹಠಾತ್ ನಿರ್ಗಮನ ಆರ್‌ಜೆಡಿಯ ಮುಂದಿನ ಭವಿಷ್ಯದ ಬಗ್ಗೆ ಕಳವಳ ಉಂಟು ಮಾಡಿದೆ.

ರೋಹಿಣಿ ಅವರ ಬಳಿಕ ಸೋಮವಾರ ಮುಂಜಾನೆ ಲಾಲೂ ಪ್ರಸಾದ್ ಯಾದವ್ ಅವರ ಇತರ ಮೂವರು ಪುತ್ರಿಯರಾದ ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ಅವರು ಕೂಡ ಲಾಲು ಮತ್ತು ರಾಬ್ರಿ ದೇವಿ ಅವರ ನಿವಾಸದಿಂದ ಮೌನವಾಗಿ ಹೊರಟು ಹೋಗಿದ್ದಾರೆ. ಕಳೆದ ಎರಡು ದಿನಗಳ ಘಟನೆಗಳಿಂದ ಅವರು ದುಃಖಿತರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಿಹಾರದಲ್ಲಿ ಅಧಿಕಾರಕ್ಕೆ ಬರಲು ಎನ್‌ಡಿಎ ಅಡ್ಡ ದಾರಿ ಹಿಡಿಯಿತಾ? ವಿಶ್ವ ಬ್ಯಾಂಕ್‌ನ 14,000 ಕೋಟಿ ರೂ. ದುರ್ಬಳಕೆ ಆರೋಪ

ಈ ವರ್ಷದ ಆರಂಭದಲ್ಲೇ ಮನೆಯಿಂದ ಹೊರಹಾಕಲಾಗಿರುವ ಲಾಲೂ ಪ್ರಸಾದ್ ಯಾದವ್ ಅವರ ಇನ್ನೋರ್ವ ಮಗ ತೇಜ್ ಪ್ರತಾಪ್ ಯಾದವ್ ಅವರು ರೋಹಿಣಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿ, ಈ ಘಟನೆಯು ನನ್ನ ಹೃದಯವನ್ನು ನಡುಗಿಸಿದೆ. ನನ್ನ ವಿರುದ್ಧದ ಅನೇಕ ದಾಳಿಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ತಮ್ಮ ಸಹೋದರಿಯ ಅವಮಾನ ಅಸಹನೀಯ ಎಂದು ಹೇಳಿದ್ದಾರೆ.

ಈ ಅನ್ಯಾಯದ ಪರಿಣಾಮಗಳು ಕಠಿಣವಾಗಿರುತ್ತವೆ ಎಂದು ಎಚ್ಚರಿಸಿರುವ ಅವರು, ತಂದೆ ನನಗೆ ಒಂದು ಸೂಚನೆ ನೀಡಿ. ಬಿಹಾರದ ಜನರು ಈ ಜೈಚಂದ್‌ಗಳನ್ನು ಸಮಾಧಿ ಮಾಡುತ್ತಾರೆ ಎಂದು ತಿಳಿಸಿದ್ದಾರೆ.