ಕೊಟ್ಟ ಮಾತು ಉಳಿಸಿಕೊಳ್ಳದೆ ಇರುವುದು ಮಹಾ ದ್ರೋಹ: ಡಿ.ಕೆ. ಶಿವಕುಮಾರ್ ಹೆಸರು ಉಲ್ಲೇಖಿಸಿ ಜೆಡಿಎಸ್ ಹೀಗೆ ಹೇಳಿದ್ದೇಕೆ?
JDS: ಡಿ.ಕೆ. ಶಿವಕುಮಾರ್ ಅವರನ್ನು ಅಣಕಿಸಿ ಜೆಡಿಎಸ್ ಎಕ್ಸ್‌ನಲ್ಲಿ ಪೋಸ್ಟ್ ಶೇರ್ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎನ್ನುವ ಅವರ ಮಾತನ್ನೇ ಉಲ್ಲೇಖಿಸಿ ಅವರನ್ನು ವ್ಯಂಗ್ಯವಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳದೆ ಇರುವುದು ಮಾಹಾ ದ್ರೋಹ! ಅಲ್ಲವೇ ಡಿ.ಕೆ. ಶಿವಕುಮಾರ್? ಎಂದು ಪ್ರಶ್ನಿಸಿದೆ.
ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಂಗಳೂರು, ನ. 27: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿಯೇ ನಡೆಯುತ್ತಿದ್ದು, ಕಾಂಗ್ರೆಸ್‌ನ ಒಳಗೊಳಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ. ಒಂದು ಬಣ ಸಿದ್ದರಾಮಯ್ಯ (Siddaramaiah) ಅವರನ್ನು ಸಮರ್ಥಿಸಿದರೆ ಇನ್ನೊಂದು ಬಣ ಡಿ.ಕೆ. ಶಿವಕುಮಾರ್ (DK Shivakumar) ಅವರಿಗಾಗಿ ವಾದ ಮಂಡಿಸುತ್ತಿದೆ. ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ. ಈ ಮಧ್ಯೆ ಜೆಡಿಎಸ್ ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸಿ ಎಕ್ಸ್‌ನಲ್ಲಿ ಪೋಸ್ಟ್ ಶೇರ್ ಮಾಡಿದೆ. ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎನ್ನುವ ಅವರ ಮಾತನ್ನೇ ಉಲ್ಲೇಖಿಸಿ ಅವರನ್ನು ಅಣಕಿಸಿದೆ.
ಕೊಟ್ಟ ಮಾತು ಉಳಿಸಿಕೊಳ್ಳದೆ ಇರುವುದು ಮಾಹಾ ದ್ರೋಹ! ಅಲ್ಲವೇ ಡಿ.ಕೆ. ಶಿವಕುಮಾರ್? ಎಂದು ಬರೆದುಕೊಂಡಿರುವ ಜೆಡಿಎಸ್ ಅವರ ಕಾರ್ಯ ವೈಖರಿಯನ್ನು ಪಟ್ಟಿ ಮಾಡಿ ನಡೆಯನ್ನು ತೀವ್ರವಾಗಿ ಟೀಕಿಸಿದೆ.
ಜೆಡಿಎಸ್ ಹೇಳಿದ್ದೇನು?
- ಗುಂಡಿ ಮುಚ್ಚುವುದಾಗಿ ಡೆಡ್ ಲೈನ್ ಕೊಟ್ಟು ಮಾತು ತಪ್ಪಿದ ಶೂರ.
- ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ರಾಜಧಾನಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸದ ಸುಳ್ಳುಗಾರ.
- ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಿರುವ ವಚನಭ್ರಷ್ಟ.
- ನಮ್ಮ ನೀರು, ನಮ್ಮ ಹಕ್ಕು ಘೋಷಿಸಿ 2.5 ವರ್ಷವಾಯ್ತು; ಕನ್ನಡಿಗರಿಗೆ ಮೇಕೆದಾಟು ನೀರು ಕೊಟ್ಟಿರಾ?
- ಪ್ರತಿ ತಿಂಗಳು ಗ್ಯಾರಂಟಿ ಕೊಡುತ್ತೇವೆ ಎಂದು ವಾಗ್ದಾನ ಕೊಟ್ಟಿದ್ದಷ್ಟೇ, ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಬರುತ್ತಿಲ್ಲ, ಯುವ ನಿಧಿ ಸದ್ದೇ ಇಲ್ಲ.
ಮಾತು ತಪ್ಪಿರುವ, ತಪ್ಪುತ್ತಲೇ ಇರುವ ನಿಮ್ಮನ್ನು ಏನೆನ್ನಬೇಕು ? ಮಾತೆ ಪಾಲಿಸದ ಮಹಾ ಶೂರ! ಎಂದು ವ್ಯಂಗ್ಯವಾಡಿದೆ.
ಡಿಕೆಶಿ ಬಗ್ಗೆ ಜೆಡಿಎಸ್ ಹಂಚಿಕೊಂಡ ಎಕ್ಸ್ ಪೋಸ್ಟ್ ಇಲ್ಲಿದೆ:
ಕೊಟ್ಟ ಮಾತು ಉಳಿಸಿಕೊಳ್ಳದೆ ಇರುವುದು ಮಹಾ ದ್ರೋಹ ! ಅಲ್ಲವೇ @DKShivakumar ?
— Janata Dal Secular (@JanataDal_S) November 27, 2025
👉 ಗುಂಡಿ ಮುಚ್ಚುವುದಾಗಿ ಡೆಡ್ ಲೈನ್ ಕೊಟ್ಟು ಮಾತು ತಪ್ಪಿದ ಶೂರ.
👉 ಬ್ರಾಂಡ್ ಬೆಂಗಳೂರು ಮಾಡುತ್ತೇವೆ ಎಂದು ರಾಜಧಾನಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸದ ಸುಳ್ಳುಗಾರ.
👉 ಗಾರ್ಡನ್ ಸಿಟಿಯನ್ನು “ಗಾರ್ಬೇಜ್ ಸಿಟಿ” ಮಾಡಿರುವ ವಚನಭ್ರಷ್ಟ.
👉 “ನಮ್ಮ… https://t.co/tgsOmF2g4K
ಡಿಸಿಎಂ ಡಿ.ಕೆ. ಶಿವಕುಮಾರ್ ಮಾರ್ಮಿಕ ಸಂದೇಶ
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ (ನ. 26) ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದರು. ಡಿಕೆಶಿ ಎಕ್ಸ್‌ನಲಲಿ ʼʼಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼʼ ಎಂದು ಬರೆದುಕೊಂಡಿದ್ದರು. ʼʼವರ್ಡ್ ಪವರ್ ಇಸ್ ವರ್ಲ್ಡ್ ಪವರ್. ಅದು ನ್ಯಾಯಾಧೀಶರಾಗಿರಲಿ, ಅಧ್ಯಕ್ಷರಾಗಿರಲಿ ಅಥವಾ ನಾನೂ ಸೇರಿದಂತೆ ಯಾರೇ ಆಗಿರಲಿ, ಆಡಿದ ಮಾತಿನಂತೆ ನಡೆದುಕೊಳ್ಳಬೇಕುʼʼ ಎಂದು ಉಲ್ಲೇಖಿಸಿದ್ದರು.
ಕೊನೆಗೂ ಅಧಿಕಾರ ಹಂಚಿಕೆ ಬಗ್ಗೆ ಅಪ್‌ಡೇಟ್ ನೀಡಿದ ಮಲ್ಲಿಕಾರ್ಜುನ ಖರ್ಗೆ
ಬುಧವಾರವಷ್ಟೇ ಡಿ.ಕೆ. ಶಿವಕುಮಾರ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ʼಪ್ಲೀಸ್ ವೈಟ್ʼ’ ಎಂಬ ಸಂದೇಶ ಕಳುಹಿಸಿದ್ದರು. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ನಂತರ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆದಿದ್ದವು. ಅದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಈ ಮಾರ್ಮಿಕ ಸಂದೇಶ ಪ್ರಕಟಿಸಿದ್ದರು. 2 ದಿನ ಹಿಂದಷ್ಟೇ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರ ಜತೆ ಮಾತುಕತೆ ನಡೆಸಿ ದೆಹಲಿಗೆ ತೆರಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮತ್ತೆ ಬೆಂಗಳೂರಿಗೆ ಮರಳಿದ್ದರು.