ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka CM Row: ದೆಹಲಿ ಅಂಗಳ ತಲುಪಿದ ಸಿಎಂ ಕುರ್ಚಿ ಕಾಳಗ; ಹೈಕಮಾಂಡ್‌ ನಾಯಕರ ಭೇಟಿಗೆ ತೆರಳಿದ ಡಿ.ಕೆ.ಶಿವಕುಮಾರ್‌ ಬಣದ ಶಾಸಕರು!

Karnataka Politics: ದೆಹಲಿಗೆ ಆಪ್ತ ಶಾಸಕರು ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ರಾಜ್ಯ ರಾಜಕೀಯದಲ್ಲಿ ʼನವೆಂಬರ್‌ ಕ್ರಾಂತಿʼ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಸಿಎಂ ಕುರ್ಚಿ ಕಾಳಗ; ದೆಹಲಿ ತಲುಪಿದ ಡಿ.ಕೆ.ಶಿವಕುಮಾರ್‌ ಬಣದ ಶಾಸಕರು

ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ) -

Prabhakara R
Prabhakara R Nov 20, 2025 10:07 PM

ಬೆಂಗಳೂರು, ನ.20: ರಾಜ್ಯ ರಾಜಕೀಯದಲ್ಲಿ ʼನವೆಂಬರ್‌ ಕ್ರಾಂತಿʼ ಶುರುವಾಗಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ಸಿಎಂ ಕುರ್ಚಿ ಕಾಳಗ (Karnataka CM Row) ಇದೀಗ ದೆಹಲಿ ಅಂಗಳ ತಲುಪಿದೆ. ಒಂದೆಡೆ ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉಳಿದ ಅವಧಿ ನಾನೇ ಸಿಎಂ ಆಗಿರಲಿದ್ದೇನೆ ಎಂದು ಗುರುವಾರ ಹೇಳಿಕೆ ನೀಡಿದ್ದರು. ಮತ್ತೊಂದೆಡೆ ಡಿ.ಕೆ.ಶಿವಕುಮಾರ್‌ ಅವರ ಬಣ ದೆಹಲಿಗೆ ತೆರಳಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ನಾಯಕರ ಭೇಟಿಗೆ ಮುಂದಾಗಿದ್ದಾರೆ.

ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಟೀಂ ಸಮುದಾಯದ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಈ ತಂಡದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಅನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಕುಣಿಗಲ್ ಶಾಸಕ ಎಚ್‌.ಡಿ. ರಂಗನಾಥ್‌, ಗುಬ್ಬಿ ಶಾಸಕ ಎಸ್‌.ಆರ್. ಶ್ರೀನಿವಾಸ್‌, ದಾವಣಗೆರೆ ಜಿಲ್ಲೆಯ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಇದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಡಿಕೆಶಿ ಆಪ್ತ ಶಾಸಕರು ಸಂಜೆ ಭೇಟಿ ನೀಡಿದಾಗ ಖರ್ಗೆ ಅವರು ಸೋನಿಯಾ ಗಾಂಧಿ ಅವರ ಭೇಟಿಗೆ ತೆರಳಿದ್ದರು. ಶಾಸಕರೊಂದಿಗೆ ಸಮಯ ನಿಗದಿಯಾಗಿದೆ ಎಂದು ತಿಳಿದುಬಂದಿದೆ.

ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್‌ಗೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ಹಾಕಲು ಸಚಿವರು, ಶಾಸಕರ ದಂಡು ದೆಹಲಿಗೆ ಹೊರಟಿದೆ. ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡಬೇಕು. ಈ ಮೂಲಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ನೀಡುವಂತೆ ಕಾಂಗ್ರೆಸ್ ಹೈಕಮ್ಯಾಂಡ್ ಮೇಲೆ ಚಲುವರಾಯಸ್ವಾಮಿ ನೇತೃತ್ವದಲ್ಲಿ ತೀವ್ರ ಒತ್ತಡ ಹೇರಲಾಗುತ್ತಿದೆ.

ದೆಹಲಿಯಲ್ಲಿ ಕಾಂಗ್ರೆಸ್‌ನ ಸಚಿವರು ಮತ್ತು ಶಾಸಕರ ತಂಡ, ಕಾಂಗ್ರೆಸ್‌ನ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗಲು ಸಮಯ ನಿಗದಿಯಾಗಿದೆ ಎನ್ನಲಾಗಿದೆ. ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಉಳಿದ ರಾಷ್ಟ್ರೀಯ ನಾಯಕರನ್ನು ಶಾಸಕರ ತಂಡ ಭೇಟಿಯಾಗಿ, ಡಿ.ಕೆ.ಶಿವಕುಮಾರ್ ಪರ ಧ್ವನಿ ಎತ್ತಲಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ನನ್ನ ಅಧಿಕಾರ ಭದ್ರವಾಗಿದೆ; ಸಿಎಂ ಬದಲಾವಣೆ ಎಂದವರಿಗೆ ಸಿದ್ದರಾಮಯ್ಯ ಟಕ್ಕರ್‌

ಈ ಬಗ್ಗೆ ನನಗೆ‌ ಏನೂ ಗೊತ್ತಿಲ್ಲ ಎಂದ ಡಿ.ಕೆ.ಶಿವಕುಮಾರ್

ದೆಹಲಿಗೆ ಆಪ್ತ ಶಾಸಕರು ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಅಧಿಕಾರ ಹಂಚಿಕೆ ಬಗ್ಗೆ ನನಗೆ ತಿಳಿಯದು ಎಂದು ತಿಳಿಸಿದ್ದಾರೆ.