ಲಾಲ್‌ಬಾಗ್‌ನಲ್ಲಿ ಅತ್ಯಾಧುನಿಕ AI ಆಧಾರಿತ ಸ್ವಾಗತ ಕಮಾನ್‌ಗಳ ಲೋಕಾರ್ಪಣೆಗೊಳಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
Lalbagh AI Powered Welcome Gates: ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಅತ್ಯಾಧುನಿಕ ಎಐ ಆಧಾರಿತ ಸ್ವಾಗತ ಕಮಾನ್‌ಗಳನ್ನು ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಲೋಕಾರ್ಪಣೆಗೊಳಿಸಿದರು. ಬಳಿಕ ಅವರು ಮಾತನಾಡಿದ್ದಾರೆ.
-
ಬೆಂಗಳೂರು, ಅ.08: ಸಿಲಿಕಾನ್ ಸಿಟಿಯ ಐತಿಹಾಸಿಕ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ಗೆ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ಸಿಕ್ಕಿದೆ. ತೋಟಗಾರಿಕೆ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ (SS Mallikarjun), ಗುರುವಾರ ಲಾಲ್‌ಬಾಗ್‌ನಲ್ಲಿ ಅತ್ಯಾಧುನಿಕ ಎಐ (Artificial Intelligence - ಕೃತಕ ಬುದ್ಧಿಮತ್ತೆ) ಆಧಾರಿತ ಸ್ವಾಗತ ಕಮಾನ್‌ಗಳನ್ನು (AI-Powered Welcome Gates) ಅಧಿಕೃತವಾಗಿ ಲೋಕಾರ್ಪಣೆಗೊಳಿಸಿ, ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ಈ ನೂತನ ತಾಂತ್ರಿಕ ವ್ಯವಸ್ಥೆಯು ತೋಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮತ್ತು ತೋಟಗಾರಿಕಾ ಬೆಳೆಗಾರರಿಗೆ ಅಂತಾರಾಷ್ಟ್ರೀಯ ಮಟ್ಟದ ಡಿಜಿಟಲ್ ಅನುಭವವನ್ನು ನೀಡಲಿದ್ದು, ಇದು ತೋಟಗಾರಿಕೆ ಇಲಾಖೆಯ ಐತಿಹಾಸಿಕ ಹೆಜ್ಜೆಯಾಗಿದೆ.
ಬಳಿಕ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ಇಂದಿನ ಆಧುನಿಕ ಯುಗದಲ್ಲಿ ತೋಟಗಾರಿಕಾ ಬೆಳೆಗಾರರು ಸಾಂಪ್ರದಾಯಿಕ ಪದ್ಧತಿಯೊಂದಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.
ಸರ್ಕಾರವು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಇಂತಹ ಹೈಟೆಕ್ ಸೌಲಭ್ಯಗಳನ್ನು ಸೃಷ್ಟಿಸುತ್ತಿದ್ದು, ಇದರ ಸಂಪೂರ್ಣ ಲಾಭವನ್ನು ರಾಜ್ಯದ ಪ್ರತಿಯೊಬ್ಬ ತೋಟಗಾರಿಕಾ ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ, ಸರ್ಕಾರದ ಸೌಲಭ್ಯಗಳನ್ನು ತಳಮಟ್ಟದ ಜನರಿಗೂ ತಲುಪಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತೋಟಗಾರಿಕಾ ಬೆಳೆಗಾರರಿಗಾಗಿ ಮಹತ್ವದ ನಿರ್ದೇಶನ
ರಾಜ್ಯಾದ್ಯಂತ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತೋಟಗಾರಿಕಾ ಬೆಳೆಗಾರರಿಗೆ ಅನುಕೂಲವಾಗುವಂತೆ ಟ್ರಾಕ್ಟರ್ ವಿತರಣೆ, ಕೃಷಿ ಹೊಂಡಗಳ ನಿರ್ಮಾಣ ಹಾಗೂ ತರಕಾರಿ-ಹಣ್ಣುಗಳ ಸಂರಕ್ಷಣೆಗಾಗಿ ಶೀತಲೀಕರಣ ಘಟಕಗಳನ್ನು (Cold Storage) ಸ್ಥಾಪಿಸಲು ಅಗತ್ಯವಿರುವ ಎಲ್ಲಾ ನೆರವು ಮತ್ತು ಸಹಾಯಧನವನ್ನು ತಕ್ಷಣವೇ ಒದಗಿಸಲು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ತಾಳೆ ಎಣ್ಣೆ (Palm Oil) ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಹಾಗೂ ಒಟ್ಟಾರೆ ತೋಟಗಾರಿಕಾ ಬೆಳೆಗಳಿಗೆ ಅತ್ಯಧಿಕ ಸಹಾಯಧನವನ್ನು ಬೆಳೆಗಾರರಿಗೆ ಮಂಜೂರು ಮಾಡಬೇಕು ಎಂದು ಸೂಚಿಸಿದರು.
ಇದೇ ವೇಳೆ ರಾಜ್ಯದ ಯಾವುದಾದರೂ ಒಂದು ಪ್ರಮುಖ ಭಾಗದಲ್ಲಿ ಬೃಹತ್ ಮಟ್ಟದ ‘ರಾಷ್ಟ್ರೀಯ ಸಾವಯವ ಮೇಳʼವನ್ನು (National Organic Expo) ಆಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ತೋಟಗಾರಿಕಾ ಬೆಳೆಗಾರರ ದೀರ್ಘಕಾಲೀನ ಆರ್ಥಿಕ ಭದ್ರತೆಗಾಗಿ, ದೀರ್ಘಕಾಲ ಬಾಳುವ ಹಾಗೂ ಅತ್ಯಧಿಕ ಫಸಲು ನೀಡುವ ನೂತನ ತೋಟಗಾರಿಕಾ ತಳಿಗಳನ್ನು ಸಂಶೋಧಿಸುವಂತೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶೇಷವಾಗಿ ತೆಂಗು ಬೆಳೆಗಾರರನ್ನು ಕಾಡುತ್ತಿರುವ ನುಸಿ ರೋಗಕ್ಕೆ (Mite Disease) ಶಾಶ್ವತ ಪರಿಹಾರ ಮತ್ತು ಸೂಕ್ತ ಔಷಧಿಯನ್ನು ಶೀಘ್ರವಾಗಿ ಕಂಡುಹಿಡಿಯುವಂತೆ ಸೂಚಿಸಿದ ಸಚಿವರು, ನೀರಿನ ಸದ್ಬಳಕೆಗಾಗಿ ಸ್ಮಾಲ್ ಇರಿಗೇಶನ್ (ಹನಿ ನೀರಾವರಿ) ಪದ್ಧತಿಗೆ ಹೆಚ್ಚುವರಿ ಸಹಾಯಧನವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್‌ಗೆ ಅರ್ಜಿ ಆಹ್ವಾನ; ಅಕ್ಟೋಬರ್ 31 ಕೊನೆಯ ದಿನ
ರೈತ ಉತ್ಪಾದಕ ಸಂಸ್ಥೆಗಳ (FPO) ಮುಖಾಂತರ ರಾಜ್ಯದ ಎಲ್ಲಾ ತೋಟಗಾರಿಕಾ ಬೆಳೆಗಾರರಿಗೂ ಆಧುನಿಕ ತೋಟಗಾರಿಕಾ ಪದ್ಧತಿಗಳ ಕುರಿತು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿರ್ದೇಶಿಸಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ತೋಟಗಾರಿಕಾ ಬೆಳೆಗಾರರು ಉಪಸ್ಥಿತರಿದ್ದರು.