Rahul Gandhi: ಚೀನಾ ಅತಿಕ್ರಮಣಕ್ಕೆ ಮೇಕ್ ಇನ್ ಇಂಡಿಯಾ ಕಾರಣ; ಸಂಸತ್ ಭಾಷಣದಲ್ಲಿ ಮೋದಿಯನ್ನು ಕುಟುಕಿದ ರಾಹುಲ್ ಗಾಂಧಿ!
ಸಂಸತ್ ಬಜೆಟ್ ಅಧಿವೇಶನ ಆರಂಭದ ದಿನ ಉಭಯ ಸದನಗಳನ್ನುದ್ದೇಶಿಸಿದ್ದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ಭಾರತದ ಗಡಿಯಲ್ಲಿ ಚೀನಾ ಅತಿಕ್ರಮಣಕ್ಕೆ ಮೇಕ್ ಇನ್ ಇಂಡಿಯಾ ವೈಫಲ್ಯವೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ನವದೆಹಲಿ: ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ-ಚೀನಾ ಗಡಿ ವಿವಾದ, ಭಾರತದ ಗಡಿಯಲ್ಲಿ ಚೀನೀ ಸೇನೆಯ ಅತಿಕ್ರಮಣ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಯುದ್ಧ, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಭಾರತದ ವೈಫಲ್ಯದ ಕುರಿತು ರಾಹುಲ್ ಮಾತನಾಡುತ್ತಲೇ ಮೋದಿಯನ್ನು ಕುಟುಕಿದ್ದಾರೆ.
ಭಾರತದಲ್ಲಿ 'ಮೇಕ್ ಇನ್ ಇಂಡಿಯಾ' ಸಂಪೂರ್ಣವಾಗಿ ವಿಫಲವಾಗಿದೆ. ಎಲ್ಲೆಡೆ ಚೀನೀ ಉತ್ಪನ್ನಗಳು ರಾರಾಜಿಸುತ್ತಿವೆ. ಚೀನಾ ಅತಿಕ್ರಮಣಕ್ಕೆ ಮೇಕ್ ಇನ್ ಇಂಡಿಯಾ ವೈಫಲ್ಯವೇ ಕಾರಣ. ಇನ್ನು ಭಾರತವು ಉತ್ಪಾದನೆಗೆ ನಿರಾಕರಿಸುತ್ತಿದೆ. ನಾವು ಕೇವಲ ಗಡಿಯಲ್ಲಷ್ಟೇ ಅಲ್ಲದೆ ಮಾರುಕಟ್ಟೆಯಲ್ಲೂ ಚೈನೀಸ್ ಎಲೆಕ್ಟ್ರಿಕ್ ಮೋಟಾರ್‌ಗಳು, ಚೈನೀಸ್ ಬ್ಯಾಟರಿಗಳು ಮತ್ತು ಚೈನೀಸ್ ಆಪ್ಟಿಕ್ಸ್‌ನೊಂದಿಗೂ ಹೋರಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ" ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
#BudgetSession2025 | Lok Sabha LoP and Congress MP Rahul Gandhi says "The Prime Minister has denied it and the Army has contradicted the Prime Minsiter that China is sitting on 4000 sq km of our territory..."
— ANI (@ANI) February 3, 2025
Lok Sabha Speaker Om Birla says "You will have to present the evidence… pic.twitter.com/u4XswMd2VO
ಚೀನೀಯರು ನಮ್ಮ ಭೂಪ್ರದೇಶದೊಳಗೆ ನುಗ್ಗಿದ್ದಾರೆ ಎಂದು ನಮ್ಮ ಭಾರತೀಯ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಇದು ಸತ್ಯ ಕೂಡ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಚೀನಾದ ಅತಿಕ್ರಮಣವನ್ನು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಮೋದಿ ಅವರು ಚೀನಾ ಅತಿಕ್ರಮಣದ ಕುರಿತು ಈಗಲಾದರೂ ದೇಶಕ್ಕೆ ಸತ್ಯ ಹೇಳಬೇಕು.." ಎಂದು ರಾಹುಲ್ ಗಾಂಧಿ ತಮ್ಮ ಸಂಸತ್ ಭಾಷಣದ ಮೂಲಕ ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ:Ramanand Sharma Column: ಅಮೆರಿಕ ವಲಸೆ ನೀತಿ: ಡೊನಾಲ್ಡ್ ಟ್ರಂಪ್ ಈಗ ಖಳನಾಯಕರೇ ?
ನಾವು ನೆಪ ಮಾತ್ರಕ್ಕೆ ಅಮೆರಿಕದೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದ್ದೇವೆ. ಆದರೆ ಉತ್ಪಾದನಾ ವಲಯದಲ್ಲಿ ಆಗುತ್ತಿರುವ ಕ್ರಾಂತಿಯ ಲಾಭವನ್ನು ಪಡೆಯಲು ಸಂಪೂರ್ಣವಾಗಿ ವಿಫಲವಾಗಿದ್ದೇವೆ. ಜಾಗತಿಕ ವಿಷಯಗಳಲ್ಲಿ ಭಾರತ ಮತ್ತು ಅಮೆರಿಕ ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದರ ಮೇಲೆ ಪಾಲುದಾರಿಕೆ ಗಮನಹರಿಸಬೇಕು. ಆದರೆ ಭಾರತ ಮಾತ್ರ ಎಲ್ಲ ಜವಾಬ್ದಾರಿಯನ್ನೂ ಅಮೆರಿಕ ದೇಶದ ಮೇಲೆ ಹಾಕಿ ಸುಮ್ಮನೆ ಕುಳಿತಿದೆ" ಎಂದು ರಾಹುಲ್ ಗಾಂಧಿ ಹರಿಹಾಯ್ದರು.
ರಾಹುಲ್ ಗಾಂಧಿ ಅವರು ತಮ್ಮ ಭಾಷಣದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆದರೆ ಸಭಾಪತಿಗಳಾದ ಓಂ ಬಿರ್ಲಾ ಮಧ್ಯಪ್ರವೇಶಿಸಿ ಸದನದ ಸದಸ್ಯರಲ್ಲದವರ ಬಗ್ಗೆ ಮಾತನಾಡುವಂತಿಲ್ಲ ಎಂದು ಸಲಹೆ ನೀಡಿದರು.