ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿದ್ದರಾಮಯ್ಯ ಅವರದ್ದು ಬಡವರಿಗಾಗಿ ಮಾಡಿದ ಹೋರಾಟದ ರಾಜಕಾರಣ: ಡಿಸಿಎಂ ಜಿ.ಪರಮೇಶ್ವರ್‌

ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಆಯೋಜಿಸಿದ್ದ "ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶ" ಮತ್ತು ನಿಕಟಪೂರ್ವ ಮುಖ್ಯಮಂತ್ರಿಗ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರದ್ದು ಬಡವರಿಗಾಗಿ ಮಾಡಿದ ರಾಜಕಾರಣ: ಡಿಸಿಎಂ

-

Prabhakara R
Prabhakara R Sep 6, 2026 4:54 PM

ಬೆಂಗಳೂರು, ಸೆಪ್ಟೆಂಬರ್ 6: ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಚಿಂತನೆಯನ್ನು ಹುಟ್ಟು ಹಾಕಿದ ನಾಯಕ. ಅಹಿಂದ ಹೋರಾಟದ ಮೂಲಕ ನಿಲರ್ಕ್ಷ್ಯಕ್ಕೆ ಒಳಗಾಗಿದ್ದ ಜಾತಿಗಳಿಗೆ, ಧ್ವನಿ ಇಲ್ಲದ ಸಮುದಾಯಗಳಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಇಂದು ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಆಯೋಜಿಸಿದ್ದ "ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶ" ಮತ್ತು ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಒಕ್ಕೂಟವೂ ಕಳೆದ 25 ವರ್ಷಗಳಿಂದ ಹಿಂದುಳಿದ ಸಮುದಾಯಗಳಿಗೆ ಧ್ವನಿ ನೀಡುವಂತ, ಹೋರಾಟಕ್ಕೆ ಶಕ್ತಿ, ಸರ್ಕಾರದಲ್ಲಿ ಸಿಗಬೇಕಾದ ಸವಲತ್ತುಗಳು ಮತ್ತು ಅಧಿಕಾರಕ್ಕಾಗಿ ಒಕ್ಕೂಟವು ಕೆಲಸ ಮಾಡಿಕೊಂಡು ಬಂದಿದೆ ಎಂದರು.

DCM G. Parameshwara

ಸಿದ್ದರಾಮಯ್ಯನವರಿಗೆ ಮಾತ್ರವಲ್ಲದೆ, ನಮ್ಮೆಲ್ಲರ ರಾಜಕಾರಣಕ್ಕೆ ಅಹಿಂದ ಹೋರಾಟ ಬಹಳ ಯಶಸ್ವಿಯಾಗಿ ಕೆಲಸ ಮಾಡಿದೆ. ಸಿದ್ದರಾಮಯ್ಯ ಅವರು ರಾಜ್ಯ ಕಂಡ ಅಪರೂಪದ ರಾಜಕಾರಣಿ. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅನುಕರಿಸಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಮೈಗೂಡಿಸಿಕೊಂಡು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರದ್ದು ಹೋರಾಟದ ರಾಜಕಾರಣ. ಬಡವರಿಗಾಗಿ, ಧ್ವನಿ ಇಲ್ಲದವರಿಗಾಗಿ ಮಾಡಿದ ಹೋರಾಟದ ರಾಜಕಾರಣ. ಅವರನ್ನು ಯಾರು ಬೇಕಾದರೂ ಟೀಕೆ ಮಾಡಬಹುದು. ಆದರೆ, ಒಂದು ಸಿದ್ಧಾಂತಕ್ಕೆ ಅಂಟಿಕೊಂಡು ಹಕ್ಕುಗಳನ್ನು ಜನಸಮುದಾಯಕ್ಕೆ ತಲುಪಿಸುವ ಕೆಲಸ ಅವರ ಬದ್ಧತೆಯಾಗಿದೆ ಎಂದರು.

DCM G. Parameshwara (1)

ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಶ್ರೇಣಿಕೃತ ವ್ಯವಸ್ಥೆ ಮಾಡಿ, ವಿವಿಧ ಜಾತಿ ಪದರಗಳನ್ನು ಸಮಾಜದಲ್ಲಿ ಸೃಷ್ಟಿ ಮಾಡಿದ್ದಾರೆ. ಜಾತಿವ್ಯವಸ್ಥೆ ವಿರುದ್ಧ ಅನೇಕ ನಾಯಕರು ನಿಂತಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು, ಹಾವನೂರು ಸೇರಿದಂತೆ ಅನೇಕರು ಹೋರಾಡಿದ್ದಾರೆ. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಅವಕಾಶ ಮತ್ತು ಹಕ್ಕುಗಳನ್ನು ಕಲ್ಪಿಸಿಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಕಷ್ಟದಲ್ಲಿರುವ ಸಮುದಾಯಗಳಿಗೆ ಆರ್ಥಿಕ ಶಕ್ತಿ, ಸಾಮಾಜಿಕ ಶಕ್ತಿ ನೀಡುವ ಉದ್ದೇಶದಿಂದ ದೇಶದಲ್ಲೇ‌ ಮೊಟ್ಟ ಮೊದಲ ಬಾರಿಗೆ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿ, ಸಮರ್ಪಕವಾಗಿ ಜಾರಿಗೊಳಿಸಿದರು. ಈ ಗ್ಯಾರಂಟಿ ಯೋಜನೆಗಳನ್ನು ಆರಂಭದಲ್ಲಿ ಅನೇಕರು ಟೀಕೆ ಮಾಡಿದರು. ಅಂದು ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದ ಜನರೇ ಇಂದು ನಕಲು ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿಯೂ ಅಳವಡಿಸಿಕೊಂಡು ಜಾರಿಗೊಳಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗ್ಯಾರಂಟಿ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ ಎಂದರು.

ದೇಶದಲ್ಲಿನ ಅನಿಷ್ಟ ಜಾತಿ ಪದ್ಧತಿ ಹೋಗದಿದ್ದರೆ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಶ್ರೇಣಿಕೃತ ವ್ಯವಸ್ಥೆಯಿಂದ ಭಾರತ ಎರಡು ಭಾಗವಾಗಿದೆ. ಉಳ್ಳವರು, ಅನುಕೂಲಸ್ಥರು ಮತ್ತು ಜಮೀನ್ದಾರರಿಗೆ ಭಾರತ ಒಂದು ಭಾಗವಾಗಿದೆ. ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಬಡವರಿಗೆ ಮತ್ತೊಂದು ಭಾರತ ಭಾಗವಾಗಿದೆ. ಇದು ಆಗಬಾರದು. ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟ ಮಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ಎರಡು ಭಾಗವಾಗಲೂ ಒಪ್ಪಲಿಲ್ಲ. ಪ್ರತಿಯೊಬ್ಬರಿಗೂ ಸಮಾನತೆ, ನ್ಯಾಯ ಸಿಗಬೇಕು ಎಂದು ಪ್ರತಿಪಾದಿಸಿದ್ದರು. ಆ ನಿಟ್ಟಿನಲ್ಲಿ ದೇಶದಲ್ಲಿನ ಅಸಮಾನತೆ ನಿರ್ಮೂಲನೆಯಾಗಬೇಕಿದೆ. 21ನೇ ಶತಮಾನದ ಭಾರತ ಅಸಮಾನತೆಯಿಂದ ಕೂಡಿರಬಾರದು. ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಡಿಸಿಎಂ ಪರಮೇಶ್ವರ ಅವರು ಹೇಳಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೆಸರಿನಲ್ಲಿ ಕೆಲಸ ಮಾಡುವ ಸಂಘ ಸಂಸ್ಥೆಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು.‌ ಸಂವಿಧಾನಾತ್ಮಕವಾಗಿ ನಮಗೆ ಸಿಗಬೇಕಾದ ಹಕ್ಕುಗಳನ್ನು ನಾವು ದಕ್ಕಿಸಿಕೊಳ್ಳುವ ಪ್ರಯತ್ನ ಮುಂದುವರಿಯಬೇಕು ಎಂದು ಹೇಳಿದರು.

ಎಲ್ಲ ಜಾತಿ ಸಮುದಾಯಗಳು ಒಟ್ಟಾಗಿ ಕೆಲಸ ಮಾಡಿದರೆ ರಾಜ್ಯದ ಆಡಳಿತ ಶಾಶ್ವತವಾಗಿ ಹಿಂದುಳಿದವರ ಕೈಯಲ್ಲಿ ಉಳಿಯುತ್ತದೆ. ಈ ಪ್ರಯತ್ನ ಉತ್ತರ ಪ್ರದೇಶ, ಬಿಹಾರದಲ್ಲಿ ನಡೆದಿದೆ. ಮುಲಾಯಂ ಸಿಂಗ್ ಯಾದವ್, ಲಾಲು ಪ್ರಸಾದ್ ಯಾದವ್ ಅವರು ಹೋರಾಟದ ಬದುಕನ್ನು ಅಳವಡಿಸಿಕೊಂಡು ಅಧಿಕಾರ ಪಡೆದುಕೊಂಡಿದ್ದಾರೆ. ಆ ಸಂಘಟನೆಗಳು ಹೆಚ್ಚಿನ ರೀತಿಯಲ್ಲಿ ಕರ್ನಾಟಕದಲ್ಲಿ ಕೆಲಸ‌ ಮಾಡಬೇಕು. ಸಿದ್ದರಾಮಯ್ಯ ಅವರು ಅಧಿಕಾರದಿಂದ‌ ಕೆಳಗೆ ಇಳಿದಿದ್ದರೆ ಎಂದು ಯಾರು ಸಹ ಭಾವಿಸಬಾರದು. ಒಂದು ವೇಳೆ ಯಾರಾದ್ರು ಭಾವಿಸಿದರೆ, ಈ ಸಮುದಾಯಗಳ ಸಂಘಟನೆಗಳು ಮುಂಚೂಣಿಯಲ್ಲಿ ನಿಂತು ಹೋರಾಟ‌ ಮಾಡಬೇಕು ಎಂದರು.

ಹಿಂದುಳಿದ ವರ್ಗದ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು. ಹಿಂದುಳಿದ ಸಮುದಾಯಗಳ ಮಕ್ಕಳು ಇಂಜಿನಿಯರ್, ಡಾಕ್ಟರ್ಸ್, ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬೇಕು. ಆ ನಿಟ್ಟಿನಲ್ಲಿ ಸಂಘಟನೆಯ ಹೋರಾಟದ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಎಂದರು.

ಸಿದ್ದರಾಮಯ್ಯ ಅವರಿಗಿಂತ ವಿಭಿನ್ನವಾದ ನಾಯಕ ನಮಗೆ ಸಿಗಲು ಸಾಧ್ಯವಿಲ್ಲ. ಅವರ ನೇತೃತ್ವದಲ್ಲಿ ನಾವೆಲ್ಲ ಹೋರಾಟ ಮಾಡೋಣ. ಸಮಾನತೆಯ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಶೀಘ್ರದಲ್ಲೇ ಆದೇಶ: ಡಿಸಿಎಂ ಪರಮೇಶ್ವರ್‌ ಭರವಸೆ

ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ್ ಲಾಡ್, ಪುಟ್ಟರಂಗ ಶೆಟ್ಟಿ, ಬೈರತಿ ಸುರೇಶ್, ಮಧು ಬಂಗಾರಪ್ಪ, ಡಾ. ಅಜಯ್ ಸಿಂಗ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಶಾಸಕರಾದ ಬಸವರಾಜ ಶಿವಣ್ಣನವರ್, ಭೀಮಸೇನ ಚಿಮ್ಮನಕಟ್ಟಿ, ಉಮೇಶ್ ಮೇಟಿ, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್‌.ಸೀತಾರಾಮ್, ಮಳವಳ್ಳಿ ಶಿವಣ್ಣ ಮುಂತಾದವರು ಇದ್ದರು.