13 ವರ್ಷಗಳ ಹಿಂದಿನ ಹಳೆ ಭಾಷಣ ಮೆಲುಕು ಹಾಕಿದ ನರೇಂದ್ರ ಮೋದಿ; ಅರ್ಧ ತುಂಬಿದ ಗಾಜಿನ ಲೋಟದ ಬಗ್ಗೆ ಪ್ರಧಾನಿ ಹೇಳಿದ್ದೇನು?
Modi Revisits His Old Speech: ʼʼನಾನು 13 ವರ್ಷಗಳ ಹಿಂದೆ ನೀರಿನ ಲೋಟದ ಉದಾಹರಣೆಯನ್ನು ನೀಡಿದ್ದೆ. ಅದರ ಬಗ್ಗೆ ಇರುವ ಮೂರು ದೃಷ್ಟಿಕೋನಗಳ ಕುರಿತು ಮಾತನಾಡಿದ್ದೆ” ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಸ್ಮರಿಸಿದರು. ʼʼಅದರಲ್ಲಿ ಅರ್ಧ ನೀರಿದ್ದರೆ, ಇನ್ನರ್ಧ ಗಾಳಿ ತುಂಬಿದೆ” ಎಂದು ಹೇಳಿದ್ದೆ ಎಂದು ಹಳೆ ಭಾಷಣ ಮೆಲುಕು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 6: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಶನಿವಾರ (ಸೆಪ್ಟೆಂಬರ್ 5) ಸಂಜೆ ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಬರೋಬ್ಬರಿ 13 ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ ಅವರು ಮಾಡಿದ್ದ ಭಾಷಣವು, ಅವರನ್ನು ಬಿಜೆಪಿಯ (BJP) ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ದೊಡ್ಡ ರಹದಾರಿಯಾಗಿ ಮಾರ್ಪಟ್ಟಿತ್ತು. ಆ ಐತಿಹಾಸಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ, ಅಂದು ತಾವು ಹೇಳಿದ್ದ ಅರ್ಧ ತುಂಬಿದ ಗಾಜಿನ ಲೋಟದ ಉದಾಹರಣೆಯನ್ನು ಮತ್ತೊಮ್ಮೆ ಉಲ್ಲೇಖಿಸಿದರು.
“ನಾನು ಅಂದು ನೀರಿನ ಲೋಟದ ಉದಾಹರಣೆಯನ್ನು ನೀಡಿದ್ದೆ. ಅದರ ಬಗ್ಗೆ ಇರುವ ಮೂರು ದೃಷ್ಟಿಕೋನಗಳ ಕುರಿತು ಮಾತನಾಡಿದ್ದೆ” ಎಂದು ಸಭೆಯಲ್ಲಿ ಪ್ರಧಾನಿ ಮೋದಿ ಸ್ಮರಿಸಿದರು. “ಅದು ದೇಶವು ಭಾರಿ ನಕಾರಾತ್ಮಕತೆಯನ್ನು ಎದುರಿಸುತ್ತಿದ್ದ ಸಮಯವಾಗಿತ್ತು. ಆ ಸಂದರ್ಭದಲ್ಲಿ ನಾನು, ನನಗೆ ಆ ಲೋಟವು ಸಂಪೂರ್ಣವಾಗಿ ತುಂಬಿರುವುದು ಕಾಣಿಸುತ್ತಿದೆ. ಅದರಲ್ಲಿ ಅರ್ಧ ನೀರಿದ್ದರೆ, ಇನ್ನರ್ಧ ಗಾಳಿ ತುಂಬಿದೆ ಎಂದು ಹೇಳಿದ್ದೆʼʼ ಎಂಬುದಾಗಿ ಹಳೆ ಭಾಷಣವನ್ನು ಮೆಲುಕು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ:
Delighted to join the centenary celebrations of Shri Ram College of Commerce. Over the years, this institution has given generations of students the opportunity to learn, grow and make a difference.@SRCCOfficial
— Narendra Modi (@narendramodi) September 5, 2026
https://t.co/2YyZBJuFAy
2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವರು ನೀರಿನ ಲೋಟವೊಂದನ್ನು ಕೈಯಲ್ಲಿ ಹಿಡಿದು ಮಾತನಾಡಿದ್ದರು. “ಆಶಾವಾದಿಗಳು ಇದನ್ನು ಅರ್ಧ ತುಂಬಿದೆ ಎನ್ನುತ್ತಾರೆ. ನಿರಾಶಾವಾದಿಗಳು ಅರ್ಧ ಖಾಲಿಯಿದೆ ಎನ್ನುತ್ತಾರೆ. ಆದರೆ ನಾನು ಆ ಎರಡೂ ದಾರಿಗಳಿಗಿಂತ ಭಿನ್ನವಾದ ಹಾದಿಯನ್ನು ನೋಡುವವನು. ನನ್ನ ಯೋಚನಾ ಶೈಲಿ ಮೂರನೆಯದ್ದಾಗಿದೆ. ಈ ಲೋಟವು ಸಂಪೂರ್ಣವಾಗಿ ತುಂಬಿದೆ. ಅದರಲ್ಲಿ ಅರ್ಧ ನೀರಿದ್ದರೆ, ಇನ್ನರ್ಧ ಗಾಳಿ ತುಂಬಿದೆ” ಎಂದು ಹೇಳಿದ್ದರು.
ಪ್ರಧಾನಿ ಮೋದಿ ಮತ್ತೆ ಸ್ವದೇಶಿ ಮಂತ್ರ : ವಿದೇಶದಲ್ಲಿ ಮದುವೆ, ಬಂಗಾರ ಖರೀದಿ ಬೇಡ
“ಅಂದು ಮಾಡಿದ್ದ ಆ ಭಾಷಣದ ಪ್ರಭಾವವನ್ನು ಈಗಲೂ ಸಹ ಅನುಭವಿಸಬಹುದಾಗಿದೆ. ಅಂದು ಬಿಜೆಪಿಯು ವಿರೋಧ ಪಕ್ಷದಲ್ಲಿದ್ದರೂ (ಆಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು) ನಾನು ಆ ವೇದಿಕೆಯನ್ನು ಯಾರನ್ನೂ ಟೀಕಿಸಲು ಬಳಸಿಕೊಳ್ಳಲಿಲ್ಲ. ನಾನು ಅಂದು ಏನೇ ಹೇಳಿದ್ದರೂ ಅದನ್ನು ಪೂರ್ಣ ನಂಬಿಕೆಯಿಂದ ಹೇಳಿದ್ದೆ. ಅದೇ ಹಾದಿಯಲ್ಲಿ ನಾನು ನಡೆದಿದ್ದೇನೆ” ಎಂದು ಅವರು ತಿಳಿಸಿದರು.
2013ರ ಭಾರತದ ಸ್ಥಿತಿಗೂ ಇಂದಿನ ಜಾಗತಿಕ ಸ್ಥಾನಮಾನಕ್ಕೂ ಇರುವ ಭಾರಿ ವ್ಯತ್ಯಾಸವನ್ನು ಅವರು ವಿವರಿಸಿದರು. 2047ರ ವೇಳೆಗೆ ಭಾರತವನ್ನು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ವಿಕಸಿತ ಭಾರತದ ದೂರದೃಷ್ಟಿಯನ್ನು ಅವರು ಹಂಚಿಕೊಂಡರು.
ಜೆನ್ ಝೀಯತ್ತ ಗಮನ ಹರಿಸಿದ ಮೋದಿ
ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಯು ಭಾರತೀಯ ರಾಜಕಾರಣದಲ್ಲಿ ಜೆನ್-ಝೀ ಯುವ ಪೀಳಿಗೆಯ ಸಮಸ್ಯೆಗಳನ್ನು ಮುನ್ನೆಲೆಗೆ ತಂದ ಬೆನ್ನಲ್ಲೇ ಪ್ರಧಾನಿ ಮೋದಿ ಯುವ ಜನತೆಯ ಮೇಲೆ ಗಮನ ಹರಿಸುತ್ತಿದ್ದಾರೆ. ಯುವ ಪೀಳಿಗೆಯೊಂದಿಗೆ ಸಂವಹನ ನಡೆಸಲು ಅವರು ಇನ್‌ಸ್ಟಾಗ್ರಾಮ್ ಎಂದಿಗಿಂತಲೂ ಹೆಚ್ಚಾಗಿ ಬಳಸಲಾರಂಭಿಸಿದ್ದಾರೆ.
ಇನ್ನು ಪ್ರಧಾನಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಮತ್ತು ವಕ್ತಾರ ಪವನ್ ಖೇರಾ, ಈರುಳ್ಳಿ ಕೂಡ ಕಣ್ಣೀರು ಹಾಕುವಷ್ಟು ನೀರಸ ಭಾಷಣ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ಮೋದಿ 2013 ಮತ್ತು 2047ರ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಅವರು ವಿದ್ಯಾರ್ಥಿಗಳು ಅಥವಾ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಟೀಕಿಸಿದ್ದಾರೆ.