ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Karnataka SIR: ಎಸ್‌ಐಆರ್‌ ಅಕ್ರಮ ತಡೆಯದ ರಾಜ್ಯ ಸರ್ಕಾರ ಕತ್ತೆ ಕಾಯಲೂ ಲಾಯಕ್ಕಿಲ್ಲ: ಜೋಶಿ ಕಿಡಿ

ರಾಜ್ಯದಲ್ಲಿ ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮಸೀದಿ, ಸಮುದಾಯ ಭವನ, ಸ್ಥಳೀಯ ಕಾಂಗ್ರೆಸ್ ನಾಯಕರ ಮನೆಯಲ್ಲಿ ಕುಳಿತು SIR ಫಾರಂ ಹಂಚುತ್ತಿದ್ದಾರೆ. ಈ ಅಕ್ರಮಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗದ CEO ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಎಸ್‌ಐಆರ್‌ ಅಕ್ರಮ ತಡೆಯದ ರಾಜ್ಯ ಸರ್ಕಾರ ಕತ್ತೆ ಕಾಯಲೂ ಲಾಯಕ್ಕಿಲ್ಲ

ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ. -

Prabhakara R
Prabhakara R Jul 5, 2026 10:35 PM

ಬೆಂಗಳೂರು: "ರಾಜ್ಯದಲ್ಲಿ SIR ಅಕ್ರಮ ತಡೆಯಲಾಗದ ರಾಜ್ಯ ಸರ್ಕಾರವೇ ಕತ್ತೆ ಕಾಯಲೂ ಲಾಯಕ್ಕಿಲ್ಲ" ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಭಾನುವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ, SIR ಅಕ್ರಮ ತಡೆಯದೆ ಚುನಾವಣಾ ಆಯೋಗ ಏನು ಕತ್ತೆ ಕಾಯುತ್ತಿದೆಯೇ? ಎಂದು ರಾಜ್ಯ ಸರ್ಕಾರದ ಮಂತ್ರಿ ಆಗಿರುವ ಮಹಾನ್ ಪುರುಷರೊಬ್ಬರು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗ ತನ್ನ ಕರ್ತವ್ಯ ಮಾಡುತ್ತಿದೆ. ಆದರೆ, ಇವರ ಸರ್ಕಾರವೇ "ಕತ್ತೆ ಕಾಯಲೂ ಲಾಯಕ್ಕಿಲ್ಲ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಫೆಡ್ಲರ್, ತಯಾರಕರನ್ನು ಮತ್ತೊಂದು ರಾಜ್ಯದ ಪೊಲೀಸರು ಬಂದು ಬಂಧಿಸುತ್ತಾರೆ. ಕಾರ ಹುಣ್ಣಿಮೆ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ರೈತರ ಕೈ ಕತ್ತರಿಸುತ್ತಾರೆ. ಇದ್ಯಾವುದೂ ಇವರಿಗೆ ಗೊತ್ತೇ ಆಗುವುದಿಲ್ಲ. ಆದರೆ ಜಗತ್ತಿನ ಬೇರೆಲ್ಲಾ ವಿಷಯವನ್ನೂ ಇವರು ಮಾತನಾಡುತ್ತಾರೆ ಎಂದು ಟೀಕಿಸಿದರು.

ಚುನಾವಣಾ ಆಯೋಗಕ್ಕೆ ದೂರು:

ರಾಜ್ಯದಲ್ಲಿ ಇವರು ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮಸೀದಿ, ಸಮುದಾಯ ಭವನ, ಸ್ಥಳೀಯ ಕಾಂಗ್ರೆಸ್ ನಾಯಕರ ಮನೆಯಲ್ಲಿ ಕುಳಿತು SIR ಫಾರಂ ಹಂಚುತ್ತಿದ್ದಾರೆ. ಈ ಅಕ್ರಮಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗದ CEO ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಎಚ್ಚರಿಸಿದರು.

ಇಂದು ರಾಜ್ಯ ಸಿಇಒಗೆ ದೂರು:

ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ವಿ.ಸೋಮಣ್ಣ, ಶೋಭಾ ಅವರು ಮತ್ತು ಎಚ್.ಡಿ.ಕುಮಾರಸ್ವಾಮಿ ಎಲ್ಲರೂ ಸೇರಿ ಸೋಮವಾರ ರಾಜ್ಯ ಚುನಾವಣಾ ಆಯೋಗದ ಸಿಇಒಗೆ ದೂರು ನೀಡುತ್ತೇವೆ. ಅವರು ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ. ಒಂದು ವೇಳೆ ಅಕ್ರಮ SIR ತಡೆಯದೇ ಇದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೂ ಬಿಜೆಪಿ ದೂರು ನೀಡಲಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರದ್ದು ಈ ಮೊದಲೇ ಬೇರೆ ಕಾರ್ಯಕ್ರಮ ನಿಗದಿಯಾಗಿದೆ. ಹಾಗಾಗಿ ಅವರ ಹೊರತಾಗಿ ಬಿಜೆಪಿಯ ಕೇಂದ್ರ ಸಚಿವರು ಹಾಗೂ ವಿಪಕ್ಷ ನಾಯಕರು ಸೇರಿ ಚುನಾವಣಾ ಆಯೋಗದ ಗಮನ ಸೆಳೆಯಲಿದ್ದೇವೆ. ವಿಜಯೇಂದ್ರ ಅವರ ಅನುಪಸ್ಥಿತಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.

ವಿಜಯೇಂದ್ರ ಅವರೂ ನಿನ್ನೆ ಮನವಿ ಕೊಟ್ಟಿದ್ದಾರೆ. ಈಗ ಮತ್ತೆ ಅಕ್ರಮ SIR ಬಗ್ಗೆ ರಾಜ್ಯದೆಲ್ಲೆಡೆಯಿಂದ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ, ದಾಖಲೆಗಳ ಸಮೇತ ಮತ್ತೊಮ್ಮೆ ರಾಜ್ಯ ಸಿಇಒ ದೂರು ಸಲ್ಲಿಸೋಣವೆಂದು ಅವರೇ ಹೇಳಿದ್ದಾರೆ. ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ಷಡ್ಯಂತ್ರ:

SIR ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಷಡ್ಯಂತ್ರ ನಡೆಸುತ್ತಿದೆ. SIR ತಡೆಯಲು ಯತ್ನಿಸಿತು. ಅದು ನಡೆಯಲಿಲ್ಲ. ಹಾಗಾಗಿ ಈಗ ಅಕ್ರಮಕ್ಕೆ ಕುಮ್ಮಕ್ಕು ಕೊಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದರು.

ರಾಜ್ಯದಲ್ಲಿ ಎಲ್ಲಾ ಚಿರಂಜೀವಿಗಳೇ?:

SIR ಮೊದಲೇ ಆಗಿದೆ. ಹತ್ತು ಹದಿನೈದು ವರ್ಷದ ಹಿಂದೆಯೇ ಇದೆ. ಆದರೆ, ಈಗ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಕೆಲವೆಡೆ ಶೇ.100ರಷ್ಟು, ಮತ್ತೆ ಕೆಲವೆಡೆ ಶೇ.80ರಷ್ಟು ಮ್ಯಾಚಿಂಗ್ ಆಗುತ್ತಿದೆ. ಅದ್ಹೇಗೆ? ಹಾಗಾದರೆ ರಾಜ್ಯದಲ್ಲಿ ಯಾರೂ ಮರಣ ಹೊಂದಿಲ್ಲವೇ? ಅಶ್ವತ್ಥಾಮನಂತೆ ಎಲ್ಲರೂ ಚಿರಂಜೀವಿ ಆಗಿದ್ದಾರೆಯೇ? ಎಂದು ಪ್ರಶ್ನಿಸಿದ ಜೋಶಿ, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.