MK Pranesh: ಉಪಸಭಾಪತಿ ಎಂ.ಕೆ. ಪ್ರಾಣೇಶ್ ವಿಧಾನ ಪರಿಷತ್ ಸದಸ್ಯತ್ವ ರದ್ದು ಮಾಡಿದ ಸುಪ್ರೀಂ ಕೋರ್ಟ್
ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಎಂ.ಕೆ. ಪ್ರಾಣೇಶ್ ಅವರ ಆಯ್ಕೆಯನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ಕುರಿತ ಕಾನೂನು ಹೋರಾಟದಲ್ಲಿ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರಿಗೆ ಅಂತಿಮ ಜಯ ದೊರೆತಿದೆ.
-
ನವದೆಹಲಿ: ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ (MK Pranesh) ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಪರಿಷತ್ ಸದಸ್ಯತ್ವವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರಿಗೆ ಕಾನೂನು ಹೋರಾಟದಲ್ಲಿ ಜಯ ಸಿಕ್ಕಂತಾಗಿದೆ.
ಕೇವಲ 6 ಮತಗಳ ಅಂತರದ ಗೆಲುವು
2021ರ ಡಿಸೆಂಬರ್‌ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 2,410 ಮತಗಳು ಚಲಾವಣೆಯಾಗಿದ್ದವು. ಅವುಗಳಲ್ಲಿ 39 ಮತಗಳು ಅಸಿಂಧುವಾಗಿದ್ದವು. ಅಂತಿಮ ಎಣಿಕೆಯಲ್ಲಿ ಎಂ.ಕೆ. ಪ್ರಾಣೇಶ್ 1,188 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಗಳಿಸಿದ್ದರು. ಕೇವಲ 6 ಮತಗಳ ಅಂತರದಲ್ಲಿ ಪ್ರಾಣೇಶ್ ಗೆಲುವು ಸಾಧಿಸಿದ್ದರು.
ಕಾನೂನುಬಾಹಿರ ಮತದಾನ ಆರೋಪ
ಚುನಾವಣೆಯಲ್ಲಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ (ಎನ್.ಆರ್. ಪುರ) ಮತ್ತು ಮೂಡಿಗೆರೆ ಪಟ್ಟಣ ಪಂಚಾಯಿತಿಗಳ 12 ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿದ್ದರು. ಆದರೆ, ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ ಎಂದು ವಾದಿಸಿದ ಗಾಯತ್ರಿ ಶಾಂತೇಗೌಡ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಾಮನಿರ್ದೇಶಿತ ಸದಸ್ಯರ ಮತದಾನ ಕಾನೂನುಬಾಹಿರ ಎಂದು ತೀರ್ಪು ನೀಡುವ ಮೂಲಕ ಗಾಯತ್ರಿ ಶಾಂತೇಗೌಡ ಅವರ ವಾದವನ್ನು ಪುರಸ್ಕರಿಸಿತ್ತು.
ಡಿಕೆ, ಸಿದ್ದು, ಹರಿ ದಿಲ್ಲಿಗೆ: ಸಂಪುಟ ವಿಸ್ತರಣೆ ಫಿಕ್ಸ್
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪನ್ನೇ ಎತ್ತಿಹಿಡಿದು ಪ್ರಾಣೇಶ್ ಅವರ ಮೇಲ್ಮನವಿಯನ್ನು ವಜಾಗೊಳಿಸಿದೆ. ಇದರಿಂದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯತ್ವದಿಂದ ಎಂ.ಕೆ. ಪ್ರಾಣೇಶ್ ಅನರ್ಹರಾಗಿದ್ದು, ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಕಾನೂನು ಹೋರಾಟಕ್ಕೆ ಅಂತಿಮ ಗೆಲುವು ದೊರೆತಂತಾಗಿದೆ.