ನನ್ನ ಹಾಗೂ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಡಿ.ಕೆ. ಶಿವಕುಮಾರ್
DK Shivakumar: ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಯತೀಂದ್ರ ಅವರ ಹೇಳಿಕೆ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ʼನನ್ನ ಹಾಗೂ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮಲ್ಲಿ ಈ ಹಿಂದೆಯೂ ಗೊಂದಲವಿಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ. ಅವರು ಯಾವ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಾನು ಅವರ ಜತೆ ಮಾತನಾಡುವೆʼ ಎಂದು ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -
ಬೆಳಗಾವಿ, ಡಿ.9: ರಾಜ್ಯಕ್ಕೆ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಹೀಗಾಗಿ ಬಿಜೆಪಿಯು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿರುಗೇಟು ನೀಡಿದರು. ಬೆಳಗಾವಿ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಮಂಗಳವಾರ ಅವರು ಪ್ರತಿಕ್ರಿಯೆ ನೀಡಿದರು. ರಾಜ್ಯ ಸರ್ಕಾರ ವಿರುದ್ಧ ಬಿಜೆಪಿಯ ಪ್ರತಿಭಟನೆ ಬಗ್ಗೆ ಕೇಳಿದಾಗ, ʼಕಬ್ಬು, ಮೆಕ್ಕೆಜೋಳ, ಸಕ್ಕರೆ, ಎಥನಾಲ್ ಸೇರಿದಂತೆ ಪ್ರತಿ ವಿಚಾರದಲ್ಲಿ ಅನ್ಯಾಯ ಆಗಿರುವುದು ಕೇಂದ್ರ ಸರ್ಕಾರದಿಂದ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಬೇಕಾದ ಅನುದಾನ ಸರಿಯಾಗಿ ಸಿಗುತ್ತಿಲ್ಲ. ರೈತರಿಗೆ ಸಹಾಯ ಮಾಡಲು ಮಹದಾಯಿ ಯೋಜನೆ ಬಗ್ಗೆ ತೀರ್ಮಾನ ಮಾಡಲು ಇವರೆಗೂ ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮೇಕೆದಾಟು ವಿಚಾರದಲ್ಲಿ ನಮ್ಮ ಹೋರಾಟದಿಂದ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕಿದ್ದು, ಒಂದೇ ದಿನದಲ್ಲಿ ಅನುಮತಿ ಕೊಡಿಸುತ್ತೇವೆ ಎಂದು ಹೇಳಿದ್ದವರು ಇನ್ನೂ ಕೊಡಿಸಿಲ್ಲ. ಭದ್ರ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ ₹5,400 ಹಣವನ್ನು ಇದುವರೆಗೂ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಭೂ ಸಂತ್ರಸ್ತ ರೈತರಿಗೆ 76 ಸಾವಿರ ಕೋಟಿ ಪರಿಹಾರ ನೀಡಲು ನಮ್ಮ ಸರ್ಕಾರ ತೀರ್ಮಾನಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕುʼ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ
ಬಿಜೆಪಿಯ ಯಾವೊಬ್ಬ ಸಂಸದರು ಕೇಂದ್ರ ಸರ್ಕಾರದ ಜತೆ ಈ ವಿಚಾರವಾಗಿ ಮಾತನಾಡಿಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ವಪಕ್ಷ ನಿಯೋಗ ಭೇಟಿ ಬಗ್ಗೆ ಕೇಳಿದಾಗ, ʼಈ ವಿಚಾರವಾಗಿ ಡಿ.8ರಂದು ಸಭೆ ಮಾಡಲು ನಾವು ನಿರ್ಧರಿಸಿದ್ದೆವು. ಆದರೆ ಅವರು ಸಮಯದ ಇಕ್ಕಟ್ಟಿದೆ ಎಂದು ನಮಗೆ ಪತ್ರ ಬರೆದರು. ಹೀಗಾಗಿ ಅವರು ನಾವು ಅವರಿಗೆ ಸಮಯ ನಿಗದಿ ಮಾಡಲು ಹೇಳಿದ್ದು, ಅವರು ಹೇಳಿದ ದಿನ ಸಭೆ ಮಾಡಲು ಸಿದ್ಧವಿದ್ದೇವೆʼ ಎಂದು ಸ್ಪಷ್ಟಪಡಿಸಿದರು.
ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂಬ ಯತೀಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼನನ್ನ ಹಾಗೂ ಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮಲ್ಲಿ ಈ ಹಿಂದೆಯೂ ಗೊಂದಲವಿಲ್ಲ, ಈಗಲೂ ಇಲ್ಲ, ಮುಂದೆಯೂ ಇಲ್ಲ. ಅವರು ಯಾವ ರೀತಿ ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಾನು ಅವರ ಜತೆ ಮಾತನಾಡುವೆʼ ಎಂದು ತಿಳಿಸಿದರು.
ಉ. ಕರ್ನಾಟಕದ ಸಮಸ್ಯೆಗಳಿಗೆ ಉತ್ತರ ಕೊಡಬೇಕಿರೋದು ಕೇಂದ್ರ ಸರ್ಕಾರ: ಡಿ.ಕೆ. ಶಿವಕುಮಾರ್
ಹೈಕಮಾಂಡ್ ನಿಮ್ಮನ್ನು ಯಾವಾಗ ಕರೆಯಬಹುದು ಎಂದು ಕೇಳಿದಾಗ, ʼನನಗೆ ಗೊತ್ತಿಲ್ಲ. ಅವರು ನನ್ನ ಜತೆ ಚರ್ಚೆ ಮಾಡಿರುವ ವಿಚಾರವನ್ನು ನಿಮ್ಮ (ಮಾಧ್ಯಮಗಳ) ಮುಂದೆ ಬಹಿರಂಗಪಡಿಸುವುದಿಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.