Bengaluru traffic restrictions: ನೂತನ ಸಿಎಂ ಪ್ರಮಾಣ ವಚನ; ನಾಳೆ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.
-
ಬೆಂಗಳೂರು: ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ನಗರದ ಲೋಕ ಭವನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ನಾಳೆ (ಜೂನ್ 3) ಸಂಚಾರ ಬದಲಾವಣೆಯನ್ನು (Bengaluru traffic restrictions) ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬುಧವಾರ ಸಂಜೆ 4 ಗಂಟೆಗೆ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಲೋಕಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ನಿಗದಿಪಡಿಸಲಾಗಿದೆ. ಈ ಸಮಾರಂಭದಲ್ಲಿ ದೇಶದ ಹಾಗೂ ರಾಜ್ಯದ ಅತಿಗಣ್ಯವ್ಯಕ್ತಿಗಳು ಭಾಗವಹಿಸುವ ಸಾಧ್ಯತೆ ಇರುತ್ತದೆ. ಲೋಕಭವನಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶವಿದ್ದು, ಸಾರ್ವಜನಿಕರು ಪ್ರವೇಶಿಸಲು ಅವಕಾಶವಿರುವುದಿಲ್ಲ.
ಸಿ.ಬಿ.ಡಿ. ವ್ಯಾಪ್ತಿಯಲ್ಲಿರುವ ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಹಾಗೂ ರೇಸ್‌ಕೋರ್ಸ್ ರಸ್ತೆಯ ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಹೆಚ್ಚಿನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಬುಧವಾರ ಸಂಜೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.
ಈ ಕೆಳಗಿನ ರಸ್ತೆಗಳಲ್ಲಿ ಲೋಕಭವನದಲ್ಲಿ ಸಿಎಂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ವಾಹನಗಳನ್ನು ಹೊರತುಪಡಿಸಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಯಾವೆಲ್ಲಾ ರಸ್ತೆಗಳಲ್ಲಿ ಸಂಚಾರ ನಿರ್ಬಂಧ :
- ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ಹಾಗೂ ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ
- ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ
- ಡಾ. ಅಂಬೇಡ್ಕರ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್‌ವರೆಗೆ
- ರೇಸ್‌ಕೋರ್ಸ್ ರಸ್ತೆಯ ಟ್ರೈಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ ಹಾಗೂ ಓಲ್ಡ್ ಜೆ.ಡಿ.ಎಸ್ ಕ್ರಾಸ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ
- ಕ್ವೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓ ಕಡೆಗೆ, ಕ್ವೀನ್ಸ್ ಜಂಕ್ಷನ್‌ನಲ್ಲಿ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಓ. ಜಂಕ್ಷನ್ ಕಡೆಗೆ
ಪರ್ಯಾಯ ಮಾರ್ಗ:
- ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್‌ವರೆಗೆ ಹಾಗೂ ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ ಸಂಚರಿಸುವ ವಾಹನಗಳು ಬಿ.ಆರ್.ವಿ. ಜಂಕ್ಷನ್ ಬಳಿ ಶಿವಾಜಿನಗರ ಕಡೆಗೆ ಬಲತಿರುವು ಹಾಗೂ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಎಡತಿರುವು ಪಡೆದು ಸಂಚರಿಸಬಹುದಾಗಿದೆ.
- ಕ್ವೀನ್ಸ್ ರಸ್ತೆ ಹಾಗೂ ಶಿವಾಜಿನಗರ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‌ಹ್ಯಾಮ್ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
- ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ನೃಪತುಂಗ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
- ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್‌ವರೆಗೆ ಸಂಚರಿಸುವ ವಾಹನಗಳು ಟ್ರೈಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಮೂಲಕ ಎಸ್.ಸಿ. ರಸ್ತೆ ಜಂಕ್ಷನ್ ತಲುಪಿ ಎಡ ತಿರುವು ಪಡೆದು ಸಂಚರಿಸಬಹುದಾಗಿದೆ.
- ಕ್ವೀನ್ಸ್ ಜಂಕ್ಷನ್ ಕಡೆಯಿಂದ ಲೋಕ ಭವನದ ಕಡೆಗೆ ಸಂಚರಿಸುವ ವಾಹನಗಳು ಅನಿಲ್‌ಕುಂಬ್ಳೆ ಹಾಗೂ ಬಿ.ಆರ್.ವಿ. ಜಂಕ್ಷನ್ ಮುಖಾಂತರ ಸಂಚರಿಸಬಹುದಾಗಿದೆ.
- ಹಲಸೂರು ಮತ್ತು ಹಳೆ ಏರ್‌ಪೊರ್ಟ್ ಕಡೆಯಿಂದ ಕೆಂಪೇಗೌಡ ಏರ್‌ಪೋರ್ಟ್ ಮತ್ತು ಬಸವೇಶ್ವರ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳ ಸವಾರರು ಬಿ.ಆರ್.ವಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಶಿವಾಜಿನಗರ ಬಸ್‌ನಿಲ್ದಾಣ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸುವುದು.
- ಹಲಸೂರು ಮತ್ತು ಹಳೇ ಮದ್ರಾಸ್ ರಸ್ತೆ ಕಡೆಯಿಂದ ಹೆಬ್ಬಾಳ ಕಡೆಗೆ ಸಂಚರಿಸುವ ವಾಹನಗಳ ಸವಾರರು ಹಲಸೂರು ಲೇಕ್ ಮೂಲಕ ಟಿನ್ ಫ್ಯಾಕ್ಟರಿ ಜಂಕ್ಷನ್ ಬಳಿಯಿಂದ ರಿಂಗ್ ರಸ್ತೆಯ ಮೂಲಕ ಹೆಬ್ಬಾಳ ಕಡೆಗೆ ಸಂಚರಿಸುವುದು.
- ಆಶೀರ್ವಾದಂ ವೃತ್ತ ಹಾಗೂ ಎಂ.ಜಿ. ರಸ್ತೆ ಕಡೆಯಿಂದ ಬರುವಂತಹ ವಾಹನಗಳು ಬಿ.ಆರ್.ವಿ ಜಂಕ್ಷನ್ ಶಿವಾಜಿನಗರ ಬಸ್ ನಿಲ್ದಾಣ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸುವುದು
ವಾಹನಗಳ ನಿಲುಗಡೆ ನಿಷೇಧ:
- ಡಾ. ಬಿ.ಆರ್.ಅಂಬೇಡ್ಕರ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ
- ಲೋಕಭವನ ರಸ್ತೆ ಬಿ.ಆರ್.ವಿ. ವೃತ್ತದಿಂದ - ಲೋಕಭವನ ಜಂಕ್ಷನ್ ವರೆಗೆ
- ಎಲ್.ಹೆಚ್.ರಸ್ತೆ, ಲೋಕಭವನ ಜಂಕ್ಷನ್ ನಿಂದ - ಚಾಲುಕ್ಯ ವೃತ್ತದ ವರೆಗೆ
- ಕ್ವೀನ್ಸ್ ರಸ್ತೆ, ಬಾಳೇಕುಂದ್ರಿ ಜಂಕ್ಷನ್‌ನಿಂದ - ಕ್ಲೀನ್ಸ್ ವೃತ್ತದ ವರೆಗೆ
- ಪ್ಯಾಲೇಸ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ - ವಸಂತನಗರ ಕೆಳಸೇತುವೆ ವರೆಗೆ
- ದೇವರಾಜ ಅರಸ್ ರಸ್ತೆ, ಚಾಲುಕ್ಯ ವೃತ್ತದಿಂದ - ಎಂ.ಎಸ್.ಬಿಲ್ಡಿಂಗ್ ವರೆಗೆ (ಒಳಭಾಗದ ರಸ್ತೆ ಸೇರಿ)
- ರೇಸ್ ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್ ನಿಂದ ಚಾಲುಕ್ಯ ವೃತ್ತದ ವರೆಗೆ
- ಪಾರ್ಕ್‌ಹೌಸ್ ರಸ್ತೆ, ಎ.ಜಿ.ಎಸ್. ಜಂಕ್ಷನ್ ನಿಂದ ಸಿ.ಐ.ಡಿ. ವೃತ್ತದ ವರೆಗೆ
- ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು
- ಮಿಲ್ಲರ್ ರಸ್ತೆ, ಎಲ್.ಆರ್.ಡಿ.ಇ. ಜಂಕ್ಷನ್ ನಿಂದ ಬಸವೇಶ್ವರ ವೃತ್ತದ ವರೆಗೆ
- ಇನ್‌ಫೆಂಟ್ರಿ ರಸ್ತೆ, ಅಲಿ ಆಸ್ಕರ್ ರಸ್ತೆ ಜಂಕ್ಷನ್‌ನಿಂದ ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್‌ವರೆಗೆ
- ಅಲಿ ಆಸ್ಕರ್ ರಸ್ತೆ, ರಾಜಭವನ ಜಂಕ್ಷನ್‌ನಿಂದ ಅಲಿ ಆಸ್ಕರ್ ಕ್ರಾಸ್‌ವರೆಗೆ
- ಕೆ.ಜಿ.ರಸ್ತೆ, ಪೊಲೀಸ್ ಕಾರ್ನರ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ
- ಹಳೇ ಅಂಚೆ ಕಚೇರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ
- ನೃಪತುಂಗ ರಸ್ತೆ, ಕೆ.ಆರ್.ವೃತ್ತದಿಂದ ಪೊಲೀಸ್ ಕಾರ್ನರ್‌ವರೆಗೆ
- ಕಸ್ತೂರಿಬಾ ರಸ್ತೆ, ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ
- ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್ ವರೆಗೆ
- ಆರ್.ಆರ್.ಎಂ.ಆರ್. ರಸ್ತೆ, ಆರ್.ಆರ್.ಎಂ.ಆರ್. ಜಂಕ್ಷನ್‌ನಿಂದ ಹಡ್ಸನ್ ವೃತ್ತದ ವರೆಗೆ
- ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಮಣಿಪಾಲ್ ಸೆಂಟರ್ ವರೆಗೆ
- ಟಿ.ಚೌಡಯ್ಯ ರಸ್ತೆ, ಹಳೇ ಹೊಗೌಂಡ್ಸ್ ಜಂಕ್ಷನ್ ನಿಂದ ಕಾವೇರಿ ಜಂಕ್ಷನ್ ವರೆಗೆ
- ರಮಣ ಮಹರ್ಷಿ ರಸ್ತೆ, ಕಾವೇರಿ ಜಂಕ್ಷನ್ ನಿಂದ ಮೇಖಿ ವೃತ್ತದ ವರೆಗೆ
ವಾಹನಗಳ ನಿಲುಗಡೆ ಎಲ್ಲಿ ಮಾಡಬಹುದು
ಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿರುವ ವಾಹನಗಳು :
ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್ ಸ್ಥಳ ಹಾಗೂ ವಿಕಾಸಸೌಧದ ಸುತ್ತಮುತ್ತ
ರಾಜಭವನ ಹಿಂಭಾಗದ ಎಲ್.ಹೆಚ್. ವಾಹನ ನಿಲುಗಡೆ ಸ್ಥಳ.
ನೆಹರೂ ತಾರಾಲಯದ ಆವರಣ
ಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿಲ್ಲದ ವಾಹನಗಳು :
ಕೊಂಡಜ್ಜಿ ಭವನ ಅವರಣ, ಶಿವಾಜಿನಗರ ಬಸ್ ನಿಲ್ದಾಣದ ಮೇಲ್ಭಾಗದ ಮಲ್ಟಿಲೆವೆಲ್ ಪಾರ್ಕಿಂಗ್ ಸ್ಥಳ, ಕಂಠೀರವ ಕ್ರೀಡಾಂಗಣ, ಯು.ಬಿ. ಸಿಟಿ ಪಾರ್ಕಿಂಗ್ ಸ್ಥಳ, ಸರ್ಕಾರಿ ಕಲಾ ಕಾಲೇಜು ಆವರಣ, ಕಾರ್ಪೋರೇಷನ್ ಕಚೇರಿ ಸ್ಥಳ, ಪ್ಯಾಲೇಸ್ ಮೈದಾನದ ಗೇಟ್ ನಂ. 2, 3 ಮತ್ತು 4 ರಲ್ಲಿ.
ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ
ನಾಳೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿ ಪ್ರದೇಶದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು, ನಿರ್ಬಂಧಿತ ಮಾರ್ಗಗಳಲ್ಲಿ ತಮ್ಮ ಪ್ರಯಾಣವನ್ನು ತಪ್ಪಿಸಿ, ಸೂಚಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸ್ ವಿಭಾಗ ಕೋರಿದೆ.