''ಇದು ರಾಜಾಪ್ರಭುತ್ವವಲ್ಲ'': ಸರ್ಕಾರಿ ಬಂಗಲೆ ಖಾಲಿ ಮಾಡದ ರಾಬ್ಡಿ ದೇವಿ ವಿರುದ್ಧ ಬಿಹಾರ ಸಿಎಂ ಸಾಮ್ರಾಟ್ ಚೌಧರಿ ವಾಗ್ದಾಳಿ
ಎನ್‌ಡಿಎ ಸರ್ಕಾರದಲ್ಲಿ ಸಚಿವರಿಗೆ ನೀಡಲಾಗಿರುವ ಅಧಿಕೃತ ಬಂಗಲೆಯನ್ನು ಖಾಲಿ ಮಾಡಲು ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕಿ ರಾಬ್ಡಿ ದೇವಿ ವಿರುದ್ಧ ಮಂಗಳವಾರ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಾಗ್ದಾಳಿ ನಡೆಸಿದರು. ನಿವಾಸ ಬಿಡುವುದಿಲ್ಲ ಎಂದು ಹೇಳಿರುವ ರಾಬ್ಡಿ ದೇವಿಗೆ ಇದು ರಾಜಪ್ರಭುತ್ವವಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.
ಸಂಗ್ರಹ ಚಿತ್ರ -
ಪಾಟ್ನಾ: ಕೆಲವರು ಸರ್ಕಾರಿ ಬಂಗಲೆಯನ್ನು ಆನುವಂಶಿಕವಾಗಿ ಬಂದಿರುವುದು ಎಂದೇ ಭಾವಿಸುತ್ತಾರೆ. ತಾಯಿಗೆ ಒಂದು ಮನೆ ಮತ್ತು ಮಗನಿಗೆ ಇನ್ನೊಂದು ಮನೆ ಬೇಕು ಎಂದು ಕೇಳುತ್ತಾರೆ. ಇದು ರಾಜಪ್ರಭುತ್ವವಲ್ಲ ಎಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ (Bihar CM Samrat Chaudhary) ಹೇಳಿದರು. ಎನ್‌ಡಿಎ (NDA) ಸರ್ಕಾರದಲ್ಲಿ ಸಚಿವರಿಗೆ ನೀಡಲಾಗಿರುವ ಅಧಿಕೃತ ಬಂಗಲೆಯನ್ನು ಖಾಲಿ ಮಾಡಲು ನಿರಾಕರಿಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕಿ (RJD leader) ರಾಬ್ಡಿ ದೇವಿ (Rabri Devi) ವಿರುದ್ಧ ಮಂಗಳವಾರ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರಾಬ್ಡಿ ದೇವಿ ಅವರ ಬಂಗಲೆಯನ್ನು ಕಟ್ಟಡ ನಿರ್ಮಾಣ ಇಲಾಖೆಯು ಡೈರಿ ಮತ್ತು ಮೀನುಗಾರಿಕೆ ಸಚಿವ ನಂದ ಕಿಶೋರ್ ರಾಮ್ ಅವರಿಗೆ ನೀಡಿ ಆದೇಶ ಹೊರಡಿಸಿದ ಬಳಿಕ ಬಿಹಾರದಲ್ಲಿ ಬಂಗಲೆ ಹಂಚಿಕೆ ವಿಚಾರ ಭುಗಿಲೆದ್ದಿದೆ. ಈ ಆದೇಶ ಹೊರಡಿಸಿದಾಗ ತಾನು ರಜೆಯಲ್ಲಿದ್ದೆ. ಇದೀಗ ಪಾಟ್ನಾಗೆ ಹಿಂದಿರುಗಿ ಬಂದಿದ್ದು, ನಿವಾಸವನ್ನು ಬಿಡುವುದಿಲ್ಲ ಎಂದು ಹೇಳಿದರು.
ಬಂಗಲೆ ಬಿಡಲು ನೊಟೀಸ್ ನೀಡಿರುವ ಕುರಿತು ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಾಮ್ರಾಟ್ ಚೌಧರಿ, ಯಾರಾದರೂ ಸರ್ಕಾರಿ ನಿವಾಸವನ್ನು ಖಾಲಿ ಮಾಡಲು ನಿರಾಕರಿಸಬಹುದಾದ ರಾಜಪ್ರಭುತ್ವ ಇಲ್ಲ ಇಲ್ಲಿ ಎಂದು ಹೇಳಿದರು.
ಬಿಹಾರದ ಶೇಖ್‌ಪುರದಲ್ಲಿರುವ ಸಹಯೋಗ್ ಶಿಬಿರದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಾರ್ವಜನಿಕ ದೂರುಗಳನ್ನು ತ್ವರಿತವಾಗಿ ಪರಿಹರಿಸುವ ಗುರಿಯನ್ನು ಹೊಂದಿದೆ. ರಾಬ್ಡಿ ದೇವಿ ಅವರ ಸಂಪುಟದಲ್ಲಿ ಸಚಿವರಾಗಿ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭವಾಯಿತು ಎಂದು ಹೇಳಿದ ಅವರು, ಸರ್ಕಾರಿ ಬಂಗಲೆ ಆನುವಂಶಿಕವಾಗಿ ಬಂದಿರೋದಲ್ಲ ಎಂದರು.
ರಾಬ್ಡಿ ದೇವಿ 10, ಸರ್ಕ್ಯುಲರ್ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ರಾಜ್ಯ ಶಾಸಕಾಂಗ ಮಂಡಳಿಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಅವರಿಗೆ ನೀಡಲಾದ 39, ಹಾರ್ಡಿಂಜ್ ರಸ್ತೆಗೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅವರ ಮಗ ತೇಜಶ್ವಿ ಯಾದವ್ 1, ಪೋಲೊ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಬಿಹಾರದ ಮುಖ್ಯಮಂತ್ರಿಯಾಗುವ ಮೊದಲು ಎರಡು ವರ್ಷಗಳ ಕಾಲ ಉಪಮುಖ್ಯಮಂತ್ರಿಯಾಗಿದ್ದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಬಂಗಲೆಯಲ್ಲಿ ಎಂದಿಗೂ ವಾಸಿಸಿಲ್ಲ. ನಾನು ನನ್ನ ಖಾಸಗಿ ಮನೆಯಲ್ಲೇ ವಾಸಿಸುತ್ತಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಯಾದ ಮೇಲೆ ಮುಖ್ಯಮಂತ್ರಿಯ ಅಧಿಕೃತ ನಿವಾಸವಾದ 1, ಆನ್ ಮಾರ್ಗ್‌ನಿಂದ ಕಾರ್ಯನಿರ್ವಹಿಸಲು ಒಪ್ಪಿಕೊಂಡಿರುವುದಾಗಿ ಹೇಳಿದ ಅವರು, ಪ್ರಸ್ತುತ ಇದಕ್ಕೆ ಸರ್ಕಾರವು ಲೋಕಸೇವಕ ಭವನ ಎಂದು ಮರುನಾಮಕರಣ ಮಾಡಿದೆ. ನಿತೀಶ್ ಕುಮಾರ್ ಅವರ ಒತ್ತಾಯದ ಕಾರಣದಿಂದ ತಾವು ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಭಾರತದ ವಿರುದ್ಧ ನಮ್ಮ ನೆಲವನ್ನು ಬಳಸಲು ಬಿಡುವುದಿಲ್ಲ”: ಪ್ರಧಾನಿ ಮೋದಿಗೆ ಮ್ಯಾನ್ಮಾರ್ ಅಧ್ಯಕ್ಷ ಭರವಸೆ
1997ರಿಂದ ತಮ್ಮ ಪತಿ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ವಾಸಿಸುತ್ತಿರುವ ರಾಬ್ಡಿ ದೇವಿ ಅವರು ಅತಿಕ್ರಮಿಸಿಕೊಂಡಿರುವ ಬಂಗಲೆಯನ್ನು ಎನ್‌ಡಿಎ ಸರ್ಕಾರದ ಸಚಿವರಿಗೆ ಮರುಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ರಾಬ್ರಿ ದೇವಿ ಅವರು ಬೇರೆ ನಿವಾಸಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಸರ್ಕಾರ ನನ್ನನ್ನು ಬಲವಂತವಾಗಿ ಹೊರಹಾಕಲಿ. ನಾನು ಮನೆಯನ್ನು ಎಂದಿಗೂ ಖಾಲಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.