ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ 2.50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ ಎಚ್‌ಡಿಕೆ

HD Kumaraswamy: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ನವ್ಯಶ್ರೀ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, 2.50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ್ದಾರೆ. ದುಬಾರಿಯಾದ ಈ ಉಪಕರಣವನ್ನು ಖರೀದಿಸಲು ಸಾಧ್ಯವಾಗದೆ ಬಾಲಕಿಯ ಪೋಷಕರು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ನೆರವನ್ನು ಕೋರಿದ್ದರು.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಎಚ್‌ಡಿಕೆ ನೆರವು

-

Profile
Siddalinga Swamy Nov 12, 2026 3:02 PM

ಬೆಂಗಳೂರು, ನ.12: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯೊಬ್ಬರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) 2.50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಿದ್ದಾರೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಸುಂಡಘಟ್ಟ ಗ್ರಾಮದ ರಾಜಲಕ್ಷ್ಮಿ ಚಂದ್ರು ಅವರ ಪುತ್ರಿ ನವ್ಯಶ್ರೀ ಅವರನ್ನು ಗುರುವಾರ ಬೆಳಗ್ಗೆ ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಚಿವರು, ಆ ಬಾಲಕಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಹಸ್ತಾಂತರಿಸಿದರು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿಗೆ ಅತ್ಯುತ್ತಮ ಗುಣಮಟ್ಟದ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಬಳಸಬೇಕು ಎಂದು ವೈದ್ಯರು ಸಲಹೆ ಮಾಡಿದರು. ದುಬಾರಿಯಾದ ಈ ಉಪಕರಣವನ್ನು ಖರೀದಿಸಲು ಸಾಧ್ಯವಾಗದೆ ಬಾಲಕಿಯ ಪೋಷಕರು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ನೆರವನ್ನು ಕೇಳಿದ್ದರು. ಕಳೆದ ಆಗಸ್ಟ್ 30ರಂದು ಜೆಪಿ ನಗರದ ನಿವಾಸದಲ್ಲಿ ಸಚಿವರನ್ನು ಭೇಟಿಯಾಗಿದ್ದ ಬಾಲಕಿಯ ಪೋಷಕರು ಈ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ತಮ್ಮ ಮಗಳು ಈಗ 9ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಪ್ರತಿಭಾವಂತೆಯಾದ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ. ಬಡವರಾದ ನಮಗೆ ಅಷ್ಟು ಹಣವನ್ನು ಖರ್ಚು ಮಾಡಿ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡಿಸಲು ಅಸಾಧ್ಯ. ತಾವು ನಮಗೆ ನೆರವಾಗಿ ಮಗುವಿನ ಜೀವ ರಕ್ಷಣೆ ಮಾಡಬೇಕು ಎಂದು ಕೋರಿದ್ದರು.

ಬಾಲಕಿಯ ಪೋಷಕರ ಮನವಿಗೆ ಓಗೊಟ್ಟ ಕೇಂದ್ರ ಸಚಿವರು; ತಕ್ಷಣವೇ ಬಾಲಕಿಯ ಆರೋಗ್ಯಕ್ಕೆ ಸಂಬಂಧಿಸಿ ವೈದ್ಯರಿಂದ ಮಾಹಿತಿಯನ್ನು ಪಡೆದುಕೊಂಡರು. ತಮ್ಮ ಸ್ವಂತ ಖರ್ಚಿನಲ್ಲಿ ಬಾಲಕಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಇಗೋಜೆನ್ ರೋವ್ 6 ಪೋರ್ಟಬಲ್ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಖರೀದಿಸಿ ಆಕೆಯ ಪೋಷಕರಿಗೆ ಹಸ್ತಾಂತರಿಸಿದರು.

ಈ ವೇಳೆ ಬಾಲಕಿಯ ಜತೆ ಕೆಲಕಾಲ ಮಾತನಾಡಿದ ಸಚಿವರು, ವೈದ್ಯರು ನೀಡುವ ಚಿಕಿತ್ಸೆಯನ್ನು ಚಾಚೂ ತಪ್ಪದಂತೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಹಾಗೆ ಬಾಲಕಿಯ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಲಕ್ಷ ಮಾಡದೆ ಕಾಲಕಾಲಕ್ಕೆ ಸರಿಯಾದ ಚಿಕಿತ್ಸೆ ಕೊಡಿಸಿ, ಆ ಬಗ್ಗೆ ನನಗೆ ಮಾಹಿತಿ ನೀಡುತ್ತೀರಿ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಪೋಷಕರಿಗೆ ತಿಳಿಸಿದರು.

ಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ; ಸಿಎಂ ತನಿಖೆ ಮಾಡಿಸದೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ಎಚ್‌ಡಿಕೆ ಕಿಡಿ

ತನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ ಬಾಲಕಿ ನವ್ಯಶ್ರೀ, ನಿಮ್ಮ ಆಶೀರ್ವಾದದಿಂದ ನನ್ನ ಆರೋಗ್ಯ ಚೆನ್ನಾಗಿ ಆಗುತ್ತದೆ ಎಂದು ಭಾವುಕಳಾಗಿ ಹೇಳಿದರು. ಈ ವೇಳೆ ಸಚಿವರು ಕೂಡ ಭಾವೋದ್ವೇಗಕ್ಕೆ ಒಳಗಾದರು. ಇದೇ ಸಂದರ್ಭದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ತಯಾರಿಸಿರುವ ಇಗೋಜಿನ್ ಕಂಪನಿಯ ತಂತ್ರಜ್ಞರು ಆ ಉಪಕರಣವನ್ನು ಬಳಸುವ ಬಗ್ಗೆ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದರು.