ನಂದಿನಿ ಹಾಲನ್ನು ಆದಾಯಕ್ಕೆ ದಾರಿ ಮಾಡಿಕೊಂಡ ಕಾಂಗ್ರೆಸ್: ಪ್ರಲ್ಹಾದ್ ಜೋಶಿ ಟೀಕೆ
Pralhad Joshi: ರಾಜ್ಯ ಸರ್ಕಾರ ಗ್ಯಾರಂಟಿಗಳ ಹೆಸರಿನಲ್ಲಿ ಒಂದು ಕೈಗೆ ಕೊಟ್ಟು, ಮತ್ತೊಂದು ಕೈಯಲ್ಲಿ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕಿತ್ತುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಜನ ಇದಕ್ಕೆಲ್ಲಾ ತಕ್ಕ ಉತ್ತರ ಕೊಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ಸಂಗ್ರಹ ಚಿತ್ರ) -
ನವದೆಹಲಿ, ಅ.30: ರಾಜ್ಯ ಕಾಂಗ್ರೆಸ್ ಸರ್ಕಾರ ಮೂರೇ ವರ್ಷದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆಗೆ ಮತ್ತೆ ಮತ್ತೆ ಹಾಲಿನ ಬೆಲೆಯನ್ನು ಶೇ.39ರಷ್ಟು ಹೆಚ್ಚಿಸಿ ಶ್ರೀಸಾಮಾನ್ಯರಿಗೆ ಹೊರೆಯಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತೀವ್ರವಾಗಿ ಖಂಡಿಸಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಕೇವಲ ಮೂರೂವರೆ ವರ್ಷಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ₹37 ರಿಂದ ₹54ಕ್ಕೆ ಏರಿಸಿ ಜನಸಾಮಾನ್ಯರಿಗೆ ತೀವ್ರ ಆರ್ಥಿಕ ಹೊರೆ ತಂದೊಡ್ಡಿದೆ ಎಂದು ಆರೋಪಿಸಿದ್ದಾರೆ.
ಪೌಷ್ಟಿಕತೆಗೆ ಪೆಟ್ಟು
ಹಾಲು ದಿನಂಪ್ರತಿಯೂ ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ಸರ್ವರಿಗೂ ಅತ್ಯಂತ ಪೌಷ್ಟಿಕ ಆಹಾರಗಳಲ್ಲೊಂದು. ಆದರೆ, ಈ ಕಾಂಗ್ರೆಸ್ ಸರ್ಕಾರ ಪೌಷ್ಟಿಕತೆಗೆ ಪೆಟ್ಟು ನೀಡುತ್ತಿದೆ. ಹಾಲಿನ ಬೆಲೆಯನ್ನು ಹೆಚ್ಚಿಸುವುದರ ಮೂಲಕ ಹಾಲು ಬಳಕೆಗೆ ಮಿತಿ ಹೇರಿದಂತಾಗಿದ್ದು, ಪರಿಣಾಮ ಅಪೌಷ್ಟಿಕತೆಗೆ ದಾರಿ ಮಾಡಿಕೊಟ್ಟಿದೆ ಎಂದು ವಿಷಾದಿಸಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರ ಟೋನ್ಡ್ ಹಾಲಿನ ದರವನ್ನು ಇದೀಗ ಲೀಟರ್ಗೆ ₹8 ಹೆಚ್ಚಿಸುವ ಮೂಲಕ ಶ್ರೀಸಾಮಾನ್ಯನಿಗೆ ದೀಪಾವಳಿ ಹಬ್ಬಕೆ ಮತ್ತೊಮ್ಮೆ 'ಬೆಲೆ ಏರಿಕೆ'ಯ ವಿಶೇಷ ಕೊಡುಗೆ ಕೊಡಮಾಡಿದೆ ಎಂದು ಅವರು ಟೀಕಿಸಿದ್ದಾರೆ.
ನಂದಿನಿ ಹಾಲಿನ ದರ ಯಾವಾಗೆಷ್ಟು ಏರಿಕೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಂದಿನಿ ಹಾಲಿನ ದರವನ್ನು 2023ರ ಜುಲೈ ತಿಂಗಳಲ್ಲಿ ₹3 ಹೆಚ್ಚಿಸಿತ್ತು. ವರ್ಷ ಕಳೆಯುವಷ್ಟರಲ್ಲೇ ಅಂದರೆ 2024ರ ಜೂನ್ ವೇಳೆಗೆ ಮತ್ತೆರೆಡು ರೂಪಾಯಿ ಅಧಿಕಗೊಳಿಸಿತು. ಬಳಿಕ ಒಂಬತ್ತು ತಿಂಗಳಲ್ಲೇ 2025ರ ಮಾರ್ಚ್ನಲ್ಲಿ ₹4 ಹೆಚ್ಚಿಸಿ, ಇದೀಗ ಮತ್ತೆ 2026ರ ನವೆಂಬರ್ನಿಂದ ಅದರ ದುಪ್ಪಟ್ಟು ಅಂದರೆ ಬರೋಬ್ಬರಿ ₹8 ಹೆಚ್ಚಿಸಿ ಕರುನಾಡಿನ ಜನಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿಸಿದೆ ಎಂದು ಸಚಿವ ಜೋಶಿ ಖಂಡಿಸಿದ್ದಾರೆ.
ಹಾಲಿನ ಬೆಲೆ ಬರೋಬ್ಬರಿ ಶೇ.39ರಷ್ಟು ಭಾರಿ ಏರಿಕೆ ಕಳವಳಕಾರಿ
ರಾಜ್ಯ ಸರ್ಕಾರ "ನಂದಿನಿ ಮಿಲ್ಕ್" ಅನ್ನು ಆದಾಯಕ್ಕೆ ಒಂದು ಸರಕನ್ನಾಗಿ ಮಾಡಿಕೊಂಡಿದ್ದು, ಪ್ರತಿಯೊಬ್ಬರೂ ದಿನಂಪ್ರತಿ ಬಳಸುವ ಹಾಲಿನ ಬೆಲೆಯನ್ನೂ ಬರೋಬ್ಬರಿ ಶೇ.39ರಷ್ಟು ಭಾರಿ ಏರಿಕೆ ಮಾಡಿರುವುದು ಕಳವಳಕಾರಿ ಎಂದು ಸಚಿವರು ಆಕ್ಷೇಪಿಸಿದ್ದಾರೆ.
2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ KMF ನ ನಂದಿನಿ ತುಪ್ಪದ ಬೆಲೆಯನ್ನೂ ಲೀಟರ್ಗೆ ₹610 ರಿಂದ ₹715 ಕ್ಕೆ ಏರಿಕೆ ಮಾಡಿದೆ. ಹೀಗೆ ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರ ದೈನಂದಿನ ಜೀವನ ದುಬಾರಿಯಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಬೆಲೆ ಏರಿಕೆ ಬಡಬಗ್ಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಸಹವಾಸದಿಂದ ಮಲ್ಲಿಕಾರ್ಜುನ ಖರ್ಗೆಯೂ ಅಪ್ರಬುದ್ಧರಾಗಿದ್ದಾರೆ: ಪ್ರಲ್ಹಾದ್ ಜೋಶಿ ಕಿಡಿ
ಬೆಲೆ ಏರಿಕೆಗೆ ತಕ್ಕ ಉತ್ತರ ಕೊಡುತ್ತಾರೆ ಜನ
ರಾಜ್ಯ ಸರ್ಕಾರ ಗ್ಯಾರೆಂಟಿಗಳ ಹೆಸರಿನಲ್ಲಿ ಒಂದು ಕೈಗೆ ಕೊಟ್ಟು, ಮತ್ತೊಂದು ಕೈಯಲ್ಲಿ ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕಿತ್ತುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಜನ ಇದಕ್ಕೆಲ್ಲಾ ತಕ್ಕ ಉತ್ತರ ಕೊಡುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಸಿದ್ದಾರೆ.