ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ರೆ ಅಧಿಕಾರದಲ್ಲಿ ಇರೋದೇಕೆ?; ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರ್‌. ಅಶೋಕ್‌ ಕಿಡಿ

R Ashok: ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಸರ್ಕಾರ, ಕೊನೆಗೆ ಪ್ರತಿ ಕುಟುಂಬಕ್ಕೆ ಕೇವಲ ₹2,500 ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ ಈಗ ಹಣ ಬಿಡುಗಡೆ ಮಾಡಲು 17 ಸೂತ್ರಗಳನ್ನು ರೂಪಿಸಿದೆ. ರೈತರಿಗೆ ಪರಿಹಾರ ನೀಡುವುದಕ್ಕಿಂತ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ರೆ ಅಧಿಕಾರದಲ್ಲಿ ಇರೋದೇಕೆ?

ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (ಸಂಗ್ರಹ ಚಿತ್ರ). -

Profile
Siddalinga Swamy Oct 30, 2026 9:07 PM

ಬೆಂಗಳೂರು, ಅ.30: ರೈತರಿಗೆ ನೆರವು ನೀಡುವ ವಿಷಯದಲ್ಲಿ ಹೊಣೆಗೇಡಿತನ ಪ್ರದರ್ಶಿಸಿರುವ ಕಾಂಗ್ರೆಸ್‌ಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ (R Ashok) ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರ ರೈತರ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಹರಿಹಾಯ್ದರು.

ಐದಾರು ತಿಂಗಳಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿರುವ ಸರ್ಕಾರ, ವಿಶೇಷ ಅಧಿವೇಶನ ನಡೆಸಿ ಪ್ರತಿ ರೈತ ಕುಟುಂಬಕ್ಕೆ ₹2,500 ಪರಿಹಾರ ಘೋಷಿಸಿತ್ತು. ಘೋಷಣೆ ಮಾಡಿ ಒಂದು ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಇದೀಗ ಪರಿಹಾರ ನೀಡಲು ಬರೋಬ್ಬರಿ 17 ಕಠಿಣ ಷರತ್ತುಗಳನ್ನು ವಿಧಿಸುವ ಮೂಲಕ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಅಧಿಕಾರದಲ್ಲಿರುವುದರ ಔಚಿತ್ಯವೇನು ಎಂದು ಅವರು ಪ್ರಶ್ನಿಸಿದರು.

ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಸರ್ಕಾರ, ಕೊನೆಗೆ ಪ್ರತಿ ಕುಟುಂಬಕ್ಕೆ ಕೇವಲ ₹2,500 ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ ಈಗ ಹಣ ಬಿಡುಗಡೆ ಮಾಡಲು 17 ಸೂತ್ರಗಳನ್ನು ರೂಪಿಸಿದೆ. ರೈತರಿಗೆ ಪರಿಹಾರ ನೀಡುವುದಕ್ಕಿಂತ ಅವರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದೇ ಸರ್ಕಾರದ ಉದ್ದೇಶವಾಗಿದೆ. ಒಂದು ಕುಟುಂಬಕ್ಕೆ ನೀಡುವ ಅಲ್ಪ ಪರಿಹಾರಕ್ಕೂ ಇಷ್ಟೊಂದು ಷರತ್ತು ವಿಧಿಸುವುದು ರೈತರನ್ನು ಅವಮಾನಿಸಿದಂತೆ ಎಂದರು.

9.34 ಕೋಟಿ ರೈತರಿಗೆ ದೀಪಾವಳಿ ಗಿಫ್ಟ್: ಪಿಎಂ ಕಿಸಾನ್ 24ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ರೈತರಿಗೆ 17 ಷರತ್ತುಗಳ ಸಂಕಷ್ಟ

ಕಂದಾಯ ಇಲಾಖೆಯಲ್ಲಿರುವ ರೈತರ ಬ್ಯಾಂಕ್‌ ಖಾತೆ ವಿವರಗಳು, ಭೂ ದಾಖಲೆಗಳು ಹಾಗೂ ಇತರ ಮಾಹಿತಿಗಳು ಈಗಾಗಲೇ ಡಿಜಿಟಲ್‌ ವ್ಯವಸ್ಥೆಯಲ್ಲಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಫ್ರೂಟ್ಸ್‌ ತಂತ್ರಾಂಶದಲ್ಲೂ ರೈತರ ವಿವರಗಳಿವೆ. ಹೀಗಿರುವಾಗ ಮತ್ತೆ 17 ಷರತ್ತುಗಳನ್ನು ವಿಧಿಸುವ ಅಗತ್ಯವೇನಿದೆ? ರೈತರ ದಾಖಲೆಗಳನ್ನು ಪರಿಶೀಲಿಸುವುದು ಸರ್ಕಾರದ ಜವಾಬ್ದಾರಿಯೇ ಹೊರತು ರೈತರನ್ನು ಅಲೆದಾಡಿಸುವುದಲ್ಲ ಎಂದರು.

ಒಣಭೂಮಿ, ನೀರಾವರಿ ಭೂಮಿ, ಬಹು ವಾರ್ಷಿಕ ಬೆಳೆ ಸೇರಿದಂತೆ ವಿವಿಧ ವರ್ಗಗಳಾಗಿ ರೈತರನ್ನು ವಿಂಗಡಿಸಲಾಗಿದೆ. ಜಂಟಿ ಖಾತೆ, ಪೌತಿ ಖಾತೆ, ಭೂ ದಾಖಲೆಗಳಲ್ಲಿನ ವ್ಯತ್ಯಾಸ, ಬಗರ್‌ಹುಕುಂ ಸಾಗುವಳಿ ಜಮೀನು, ಕೃಷಿಯಿಂದ ಕೃಷಿಯೇತರ ಭೂಮಿಗೆ ಪರಿವರ್ತನೆಯಾದ ಜಮೀನು ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಪರಿಹಾರ ನಿರಾಕರಿಸುವ ವ್ಯವಸ್ಥೆ ರೂಪಿಸಲಾಗಿದೆ. ಎರಡು ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವ ಕುಟುಂಬಗಳಿಗೆ ಪರಿಹಾರ ನೀಡುವುದಿಲ್ಲ ಎಂಬ ಮಿತಿಯನ್ನೂ ವಿಧಿಸಲಾಗಿದೆ. ಇಂತಹ ಅವೈಜ್ಞಾನಿಕ ನಿರ್ಧಾರಗಳಿಂದ ರೈತ ಸಮುದಾಯವನ್ನು ವಿಭಜಿಸುವ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕದ ಅನೇಕ ರೈತರು 10ರಿಂದ 15 ಎಕರೆ ಒಣಭೂಮಿ ಹೊಂದಿದ್ದರೂ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿದ್ದಾರೆ. ಅಂತಹ ರೈತರನ್ನು ಪರಿಹಾರದಿಂದ ಹೊರಗಿಡುವುದು ಯಾವ ನ್ಯಾಯ? ಬಯೋಮೆಟ್ರಿಕ್‌ ದೃಢೀಕರಣ ಸೇರಿದಂತೆ ಮತ್ತಷ್ಟು ಷರತ್ತುಗಳನ್ನು ವಿಧಿಸಿರುವುದರಿಂದ ಪರಿಹಾರ ಪಡೆಯಲು ರೈತರು ಇನ್ನೆಷ್ಟು ತಿಂಗಳು ಕಾಯಬೇಕು? ಸುಮಾರು ₹1,250 ಕೋಟಿ ಪರಿಹಾರವನ್ನು ಒಂದೇ ಬಾರಿಗೆ ಡಿಬಿಟಿ ಮೂಲಕ ವರ್ಗಾಯಿಸಲು ಸಾಧ್ಯವಿದ್ದರೂ, ಕಂತುಗಳಲ್ಲಿ ಹಣ ಬಿಡುಗಡೆ ಮಾಡುವ ಮೂಲಕ ಸರ್ಕಾರ ತನ್ನ ಆರ್ಥಿಕ ಅಸಮರ್ಥತೆಯನ್ನು ಪ್ರದರ್ಶಿಸುತ್ತಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ವರ್ಷ ₹6,000 ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಅದಕ್ಕೆ 17 ಷರತ್ತುಗಳ ಅಗತ್ಯವಿಲ್ಲ. ರಾಜ್ಯ ಸರ್ಕಾರವೂ ಅದೇ ಮಾದರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿ, ಅರ್ಹ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ವರ್ಗಾವಣೆ ಮಾಡಬೇಕು. ರೈತರಿಗೆ ಭರವಸೆಗಳೂ ಬೇಡ, ಅಲೆದಾಟವೂ ಬೇಡ. ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 3,800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ದೇಶದಲ್ಲಿ ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ಇದೆ, ಈ ಧೋರಣೆ ಮುಂದುವರೆದರೆ ರಾಜ್ಯವು ರೈತರ ಆತ್ಮಹತ್ಯೆಯಲ್ಲಿ ದೇಶದಲ್ಲಿ ಮೊದಲ ಸ್ಥಾನಕ್ಕೆ ಹೋಗಲಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ಧೋರಣೆ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ. ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರವೇ ಅವರ ಸಂಕಷ್ಟಕ್ಕೆ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಹಾಲಿನ ದರ ₹8 ಏರಿಕೆ, ಜನಸಾಮಾನ್ಯರಿಗೆ ಹೊರೆ

ರಾಜ್ಯ ಸರ್ಕಾರ ಏಕಾಏಕಿ ಪ್ರತಿ ಲೀಟರ್‌ ಹಾಲಿನ ದರವನ್ನು ₹8 ಹೆಚ್ಚಿಸಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಹಿಂದೆ ಮೂರ ಸಲ ಹಾಲಿನ ದರ ಏರಿಕೆ ಮಾಡಲಾಗಿದೆ. ಆದರೆ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹಾಲಿನ ಸಬ್ಸಿಡಿಯನ್ನು ₹5ರಿಂದ ₹7ಕ್ಕೆ ಹೆಚ್ಚಿಸುವುದಾಗಿ, ಪಶುಭಾಗ್ಯ ಯೋಜನೆಯಡಿ ಹಸು ಮತ್ತು ಎಮ್ಮೆ ಖರೀದಿಗೆ ₹3 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವುದಾಗಿ, ಕ್ಷೀರ ಕ್ರಾಂತಿ ಹಾಗೂ ಕ್ಷೀರ ಕ್ರೆಡಿಟ್‌ ಕಾರ್ಡ್‌ ಯೋಜನೆ, ಪುಣ್ಯ ಕೋಟಿ ನಂದಿನಿ ನಮ್ಮದು, ಎಲ್ಲ ಕಂದಾಯ ಭಾಗದಲ್ಲಿ ಪಾಲಿಟೆಕ್ನಿಕ್ ಸ್ಥಾಪನೆ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಇವುಗಳಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಲಾಗಿದೆ? ಒಂದು ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.

ರೈತರಿಗೆ ನೀಡಬೇಕಾದ ಪ್ರೋತ್ಸಾಹಧನವನ್ನು ನೀಡದೆ, ಅದರ ಹೊರೆಯನ್ನು ನೇರವಾಗಿ ಗ್ರಾಹಕರ ಮೇಲೆ ಹಾಕಲಾಗುತ್ತಿದೆ. ಹಾಲಿನ ದರ ಏರಿಕೆಯಿಂದ ಮೊಸರು, ತುಪ್ಪ, ಕಾಫಿ, ಟೀ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ತೀವ್ರ ಹೊರೆ ಬೀಳಲಿದೆ. ತಮಿಳುನಾಡಿನಲ್ಲಿ ಹಾಲಿನ ದರ ಪ್ರತಿ ಲೀಟರ್‌ಗೆ ₹41 ಇದ್ದರೂ, ಅಲ್ಲಿನ ಸರ್ಕಾರ ರೈತರಿಗೆ 4 ರೂ. ಪ್ರೋತ್ಸಾಹಧನ ನೀಡುತ್ತಿದೆ. ಜನಸಾಮಾನ್ಯರ ಮೇಲೆ ಹೊರೆ ಹಾಕದೆ ರೈತರ ಹಿತ ಕಾಯುವ ಕ್ರಮ ಕೈಗೊಂಡಿದೆ. ಕರ್ನಾಟಕ ಸರ್ಕಾರವೂ ರೈತರಿಗೆ ನೀಡಬೇಕಾದ ಸಬ್ಸಿಡಿಯನ್ನು ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ಕಾಂಗ್ರೆಸ್‌ ಸರ್ಕಾರ ಒಂದೆಡೆ ಗ್ಯಾರಂಟಿಗಳ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದು, ಮತ್ತೊಂದೆಡೆ ತೆರಿಗೆ ಮತ್ತು ಬೆಲೆ ಏರಿಕೆಯ ಮೂಲಕ ಜನರನ್ನು ಶೋಷಿಸುತ್ತಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಒಂದು ಸುತ್ತಿನ ಬೆಲೆ ಏರಿಕೆಯಾಗಿದ್ದರೆ, ಈಗ ಡಿ.ಕೆ.ಶಿವಕುಮಾರ್‌ ಅವರ ಅವಧಿಯಲ್ಲಿ ಮತ್ತೊಂದು ಸುತ್ತಿನ ಬೆಲೆ ಏರಿಕೆ ನಡೆಯುತ್ತಿದೆ. ಹಾಲಿನ ದರವನ್ನು ₹8 ಹೆಚ್ಚಿಸಿರುವುದು ಜನವಿರೋಧಿ ನಿರ್ಧಾರ. ಇಂತಹ ಜನವಿರೋಧಿ ನೀತಿಗಳ ಪರಿಣಾಮವಾಗಿಯೇ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಲ್ಕೂ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ. ಇದೇ ಧೋರಣೆ ಮುಂದುವರಿದರೆ 2028ರ ಚುನಾವಣೆಯಲ್ಲೂ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಎಸ್‌ಐಆರ್‌ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಗೊಂದಲ

ನವೆಂಬರ್‌ 1ರಂದು ದೆಹಲಿಯಲ್ಲಿ ಎಸ್‌ಐಆರ್‌ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಲು ಮುಂದಾಗಿರುವುದನ್ನು ಪ್ರತಿಪಕ್ಷ ನಾಯಕ ಆರ್‌. ಅಶೋಕ ಟೀಕಿಸಿದರು. ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಉತ್ತಮವಾಗಿ ನಡೆದಿದೆ ಎಂದು ಸ್ವತಃ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ರಾಜ್ಯದ ಕಾಂಗ್ರೆಸ್‌ ನಾಯಕರು ಎಸ್‌ಐಆರ್‌ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವೇನಿದೆ? ಕರ್ನಾಟಕ ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಮತ್ತು ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ ಎಂದು ಎರಡು ಬಣಗಳಿವೆಯೇ ಎಂದು ಪ್ರಶ್ನಿಸಿದರು.

ಎಸ್‌ಐಆರ್‌ ಪ್ರಕ್ರಿಯೆ ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ. ದೇಶದಲ್ಲಿ ಈ ಹಿಂದೆ ಹಲವು ಬಾರಿ ನಡೆದಿದೆ. ಚುನಾವಣಾ ಆಯೋಗ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ವಿಳಾಸ, ವಯಸ್ಸಿನಲ್ಲಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇತ್ತು, ಈಗ ಸೋಲಿನ ಭೀತಿಯಿಂದ ಚುನಾವಣಾ ಪ್ರಕ್ರಿಯೆಯನ್ನೇ ಪ್ರಶ್ನಿಸುತ್ತಿದೆ ಎಂದು ಟೀಕಿಸಿದರು.

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿʼ ಅಭಿಯಾನ: ಸುನೀಲ್‍ ಕುಮಾರ್

ಕಬ್ಬು ಬೆಳೆಗಾರರ ಮೇಲಿನ ಪ್ರಕರಣ ಹಿಂಪಡೆಯಲಿ

ಕಬ್ಬು ಬೆಳೆಗಾರರ ಹೋರಾಟದ ವಿಚಾರದಲ್ಲೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಬ್ಬಿನ ತೂಕದಲ್ಲಿ ನಡೆಯುತ್ತಿರುವ ಮೋಸ, ವೇಸ್ಟೇಜ್‌ ಹೆಸರಿನಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ಸಕಾಲದಲ್ಲಿ ಹಣ ಪಾವತಿಸದಿರುವ ಸಮಸ್ಯೆಗಳಿಗೆ ಸರ್ಕಾರ ಈವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಈ ಸಂಬಂಧ ಸಮಿತಿ ರಚಿಸಿ ಕ್ರಮಕ್ಕೆ ಮುಂದಾಗಿದ್ದರೂ, ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಹಿತಾಸಕ್ತಿಗೆ ಮಣಿದಿದೆ ಎಂದು ಆರೋಪಿಸಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು. ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ರೈತರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಬದಲು ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು.