ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ASTRO TIPS: ಮಾಣಿಕ್ಯ ಧಾರಣೆ ಯಾರಿಗೆ ಶುಭ ? ಯಾರಿಗೆ ಅಶುಭ? ; ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದು ಏನು?

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಣಿಕ್ಯ ರತ್ನವನ್ನು ಸೂರ್ಯನ ಪ್ರತಿನಿಧಿಯಾಗಿ ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಸೂರ್ಯ ದುರ್ಬಲವಾಗಿದ್ದರೆ ಮಾಣಿಕ್ಯ ಧರಿಸುವುದು ಶುಭಕರವೆಂದು ಹೇಳಲಾಗುತ್ತದೆ. ಮೇಷ, ಸಿಂಹ, ಧನು ಸೇರಿದಂತೆ ಕೆಲವು ರಾಶಿಯವರಿಗೆ ಇದು ಲಾಭಕರವಾಗಿದ್ದು, ಕನ್ಯಾ, ಮಕರ, ಮಿಥುನ, ತುಲಾ ಮತ್ತು ಕುಂಭ ರಾಶಿಯವರು ಎಚ್ಚರಿಕೆಯಿಂದಿರಬೇಕು ಎಂದು ಜ್ಯೋತಿಷ್ಯ ಸೂಚಿಸುತ್ತದೆ.

ಮಾಣಿಕ್ಯ ಧರಣೆ: ಯಾರಿಗೆ ಶುಭ? ಯಾರಿಗೆ ಅಶುಭ?

ಮಾಣಿಕ್ಯ -

Profile
Sushmitha Jain Feb 18, 2026 7:39 AM

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳು ಮತ್ತು ಆಭರಣಗಳ ಸಂಖ್ಯೆ ಎಂಭತ್ತನಾಲ್ಕು ಎಂದು ಹೇಳಲಾಗುತ್ತದೆ. ಆದರೆ ಅವುಗಳಲ್ಲಿ ವಿಶೇಷ ಮಹತ್ವ ಪಡೆದಿರುವುದು ನವರತ್ನಗಳು. ಹವಳ, ಮುತ್ತು, ವಜ್ರ, ವೈಢೂರ್ಯ, ಗೋಮೇಧಿಕ, ಮರಕತ, ಮಾಣಿಕ್ಯ, ಪಚ್ಚೆ ಮತ್ತು ನೀಲಮಣಿ ಸೇರಿ ಒಂಬತ್ತು ರತ್ನಗಳನ್ನು ನವರತ್ನಗಳೆಂದು ಕರೆಯಲಾಗುತ್ತದೆ. ಇವುಗಳಲ್ಲಿ ಮಾಣಿಕ್ಯ ರತ್ನವನ್ನು ಸೂರ್ಯನ ಪ್ರತಿನಿಧಿಯಾಗಿ ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ಅಧಿಪತಿ ಎಂದು ಗುರುತಿಸಲಾಗಿದ್ದು, ಜಾತಕದಲ್ಲಿ ಸೂರ್ಯ ದುರ್ಬಲನಾಗಿದ್ದರೆ ಇತರ ಗ್ರಹಗಳ ಶುಭಫಲವೂ ಸಂಪೂರ್ಣವಾಗಿ ಲಭಿಸುವುದಿಲ್ಲ ಎಂಬ ನಂಬಿಕೆ ಇದೆ.

ಜ್ಯೋತಿಷಿಗಳ ಅಭಿಪ್ರಾಯದ ಪ್ರಕಾರ(Astro Tips), ಸೂರ್ಯನ ಬಲ ಕಡಿಮೆಯಾಗಿದ್ದರೆ ಮಾಣಿಕ್ಯ ಧರಿಸುವುದು ಒಳಿತು. ಸಂಸ್ಕೃತದಲ್ಲಿ ಮಾಣಿಕ್ಯವನ್ನು ಪದ್ಮರಾಗ ಅಥವಾ ರವಿರತ್ನ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಮಾಣಿಕ್ ಎಂದು, ಇಂಗ್ಲಿಷಿನಲ್ಲಿ ರೂಬಿ ಎಂದು ಪರಿಚಿತವಾಗಿದೆ. ಜಾತಕ ಪರಿಶೀಲನೆಯ ನಂತರ ಸೂರ್ಯನ ಸ್ಥಿತಿ ಅನುಕೂಲಕರವಾಗಿದ್ದರೆ ಈ ರತ್ನವನ್ನು ಧರಿಸಬಹುದು ಎಂದು ಹೇಳಲಾಗುತ್ತದೆ.

ಈ ರಾಶಿಗಳಿಗೆ ಶುಭ ತರುವ ಮಾಣಿಕ್ಯ

ಮೇಷ, ಸಿಂಹ ಮತ್ತು ಧನು ರಾಶಿಯವರಿಗೆ ಮಾಣಿಕ್ಯ ಸಾಮಾನ್ಯವಾಗಿ ಅನುಕೂಲಕರವೆಂದು ಪರಿಗಣಿಸಲಾಗಿದೆ. ಕಟಕ, ವೃಶ್ಚಿಕ ಮತ್ತು ಮೀನ ರಾಶಿಯವರಿಗೂ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ನಂಬಿಕೆ ಇದೆ. ಜಾತಕದ ಐದನೇ, ಒಂಬತ್ತನೇ, ಹತ್ತನೇ ಅಥವಾ ಹನ್ನೊಂದನೇ ಮನೆಯಲ್ಲಿ ಸೂರ್ಯ ಪ್ರಭಾವಿಯಾಗಿದ್ದರೆ ಮಾಣಿಕ್ಯ ಧರಿಸುವುದು ಲಾಭಕರವಾಗಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ.

ತಪ್ಪಿಯೂ ಈ ರಾಶಿಯವರು ಮಾಣಿಕ್ಯವನ್ನು ಧರಿಸಬಾರದು

ಇನ್ನೊಂದೆಡೆ, ಕನ್ಯಾ, ಮಕರ, ಮಿಥುನ, ತುಲಾ ಮತ್ತು ಕುಂಭ ರಾಶಿಯವರು ತಜ್ಞರ ಸಲಹೆಯಿಲ್ಲದೆ ಮಾಣಿಕ್ಯ ಧರಿಸುವುದನ್ನು ತಪ್ಪಿಸಬೇಕು ಎನ್ನಲಾಗುತ್ತದೆ. ಶನಿಗ್ರಹ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿರುವವರು ಅಥವಾ ಸೂರ್ಯನ ಪ್ರಭಾವ ಅತೀ ಕಡಿಮೆ ಇರುವವರು ಕೂಡ ಎಚ್ಚರಿಕೆಯಿಂದಿರಬೇಕು.

Astro Tips: ಜಾತಕ ದೋಷ ನಿವಾರಣೆಗೆ ಹವಳ ರತ್ನ: ಆದರೆ ಯಾವ ರಾಶಿಯವರು ಧರಿಸಿದರೆ ಒಳಿತು?

ಧರಿಸುವ ವಿಧಾನ

ಮಾಣಿಕ್ಯ ಸಾಮಾನ್ಯವಾಗಿ ಗುಲಾಬಿ ಅಥವಾ ಗಾಢ ಕೆಂಪು ಬಣ್ಣದಲ್ಲಿರುತ್ತದೆ. ಕನಿಷ್ಠ ಆರು ರಿಂದ ಏಳು ರಾಟಿ ತೂಕ ಹೊಂದಿರುವ ರತ್ನವನ್ನು ಆಯ್ಕೆ ಮಾಡುವುದು ಉತ್ತಮವೆಂದು ಹೇಳಲಾಗುತ್ತದೆ. ತಾಮ್ರ ಅಥವಾ ಚಿನ್ನದ ಉಂಗುರದಲ್ಲಿ ಅಳವಡಿಸಿ ಸೂರ್ಯೋದಯದ ನಂತರ ಸ್ನಾನ ಮಾಡಿ ಧರಿಸಬೇಕು. ಧರಿಸುವ ಮೊದಲು ಹಸುವಿನ ಹಾಲು ಮತ್ತು ಗಂಗಾಜಲದಿಂದ ಶುದ್ಧೀಕರಿಸಿ, ಸೂರ್ಯ ದೇವರ ಮಂತ್ರವನ್ನು ಜಪಿಸಿ ನಂತರ ಉಂಗುರವನ್ನು ಧರಿಸುವುದು ಶಾಸ್ತ್ರೋಕ್ತ ವಿಧಾನವೆಂದು ತಿಳಿಯಲಾಗಿದೆ.

ಇನ್ನು ಜ್ಯೋತಿಷ್ಯ ನಂಬಿಕೆ ಪ್ರಕಾರ ಮಾಣಿಕ್ಯ ಧರಿಸುವುದರಿಂದ ಹೃದಯ ಮತ್ತು ಕಣ್ಣಿನ ಸಮಸ್ಯೆಗಳಲ್ಲಿ ಉಪಶಮನ ದೊರೆಯಬಹುದು. ಪಿತ್ತ ಸಂಬಂಧಿತ ತೊಂದರೆಗಳು ಕಡಿಮೆಯಾಗಬಹುದು ಎನ್ನಲಾಗುತ್ತದೆ. ಸರ್ಕಾರಿ ಸಂಬಂಧಿತ ಕಾರ್ಯಗಳಲ್ಲಿ ಯಶಸ್ಸು ಮತ್ತು ಪ್ರಗತಿ ಸಾಧ್ಯವಾಗುತ್ತದೆ ಎಂಬ ನಂಬಿಕೆಯೂ ಇದೆ. ಆತ್ಮವಿಶ್ವಾಸ, ನಾಯಕತ್ವ ಗುಣ ಮತ್ತು ಕಾರ್ಯಕ್ಷಮತೆ ಹೆಚ್ಚಲು ಇದು ಸಹಕಾರಿ ಎನ್ನಲಾಗಿದೆ.

ಆದಾಗ್ಯೂ, ರತ್ನಧರಣೆ ಜ್ಯೋತಿಷ್ಯ ನಂಬಿಕೆಯ ಭಾಗವಾಗಿರುವುದರಿಂದ ತಜ್ಞರ ಸಲಹೆ ಪಡೆದು ಜಾತಕ ಪರಿಶೀಲನೆ ಮಾಡಿದ ನಂತರವೇ ಮಾಣಿಕ್ಯ ಧರಿಸುವುದು ಒಳಿತು. ಸರಿಯಾದ ವಿಧಾನದಲ್ಲಿ ಧರಿಸಿದರೆ ಸೂರ್ಯನ ಅನುಗ್ರಹ ದೊರೆಯಬಹುದು ಮತ್ತು ಜೀವನದಲ್ಲಿ ಪ್ರಗತಿ ಸಾಧ್ಯವಾಗುತ್ತದೆ ಎಂಬುದು ಜ್ಯೋತಿಷ್ಯ ವಾದ.