Vastu Tips: ಈ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಹೆಚ್ಚುತ್ತೆ ಸಂಪತ್ತು
ಮನೆ ಮುಂದೆ ದಾಸವಾಳ ಗಿಡವನ್ನು ನೆಡುವುದು ಶುಭ ಸೂಚಕ ಎನಿಸಿಕೊಂಡಿದೆ. ದಾಸವಾಳ ಗಿಡವನ್ನು ಅಂಗಳದಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ದಾಸವಾಳ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ದಾಸವಾಳ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ ಎನ್ನುತ್ತದೆ ವಸ್ತು ಶಾಸ್ತ್ರ. ಈ ಕುರಿತಾದ ವಿವರ ಇಲ್ಲಿದೆ.

ದಾಸವಾಳ ಗಿಡ

ಬೆಂಗಳೂರು: ದೇವರ ಪೂಜೆಯಲ್ಲಿ ಸಾಮಾನ್ಯವಾಗಿ ಬಳಸುವ ಹೂವುಗಳಲ್ಲಿ ದಾಸವಾಳವೂ ಒಂದು. ಯಾರ ಮನೆಯಲ್ಲಿ ದಾಸವಾಳ ಗಿಡ ಇರುತ್ತದೆಯೋ, ಆ ಮನೆಯವರು ಸದಾ ಸಂತೋಷದಿಂದ ಇರುತ್ತಾರೆ ಮತ್ತು ಅಂತಹ ಮನೆಗಳಲ್ಲಿ ಲಕ್ಷ್ಮೀಯೂ ಸದಾ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ದಾಸವಾಳದ ಆಶೀರ್ವಾದವು ನಿಮ್ಮ ಮನೆಯಲ್ಲಿ ಉಳಿಯಲು, ಆ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು, ಬೆಳೆಸುವುದು ಅಗತ್ಯ (Vastu Tips). ದಾಸವಾಳ ಗಿಡದ ದಿಕ್ಕಿನ ವಿಶೇಷ ಮಹತ್ವವನ್ನು ವಾಸ್ತು ಶಾಸ್ತ್ರದಲ್ಲಿಯೂ ಹೇಳಲಾಗಿದೆ. ದಾಸವಾಳ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ನೆಟ್ಟರೆ, ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ.
ಇದೇ ಕಾರಣಕ್ಕೆ ದಾಸವಾಳ ಗಿಡವನ್ನು ನೆಡುವಾಗ ಹೆಚ್ಚು ಕಾಳಜಿ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ. ಯಾವ ದಿಕ್ಕಿನಲ್ಲಿ ದಾಸವಾಳ ನೆಟ್ಟರೆ ಅತ್ಯಂತ ಶುಭ ಎಂಬುದರ ವಿವರ ಇಲ್ಲಿದೆ.
ಈ ದಿಕ್ಕು ಮಂಗಳಕರ
ವಾಸ್ತು ಪ್ರಕಾರ ದಾಸವಾಳ ಗಿಡವನ್ನು ನೆಡಲು ಮನೆಯ ಉತ್ತರ ಅಥವಾ ಪೂರ್ವ ದಿಕ್ಕು ಸೂಕ್ತ ಎಂದು ಪರಿಗಣಿಸಲಾಗುತ್ತದೆ. ಇದು ದೇವರ ಪೂಜೆಗೆ ಮಾತ್ರವಲ್ಲದೆ ವಾಸ್ತು ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯ ಪೂರ್ವ ದಿಕ್ಕಿನಲ್ಲಿ ದಾಸವಾಳದ ಗಿಡವನ್ನು ನೆಡುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುವುದರೊಂದಿಗೆ ನಕಾರಾತ್ಮಕ ಶಕ್ತಿಯ ದೃಷ್ಟಿ ನಿಮ್ಮ ಮನೆಯ ಬೀಳದಂತೆ ನೋಡಿಕೊಳ್ಳುತ್ತದೆ. ಹಾಗೇ ಓದುವ ಮತ್ತು ಬರೆಯುವ ಜಾಗದಲ್ಲಿ ಈ ಹೂವನ್ನು ಇಟ್ಟುಕೊಂಡರೆ ಓದಿನ ಬಗ್ಗೆ ಹೆಚ್ಚು ಏಕಾಗ್ರತೆ ಮೂಡುತ್ತದೆ ಎಂದು ಸಹ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಶುಕ್ರವಾರ ಲಕ್ಷ್ಮೀ ದೇವಿಗೆ ಈ ಹೂವನ್ನು ಅರ್ಪಿಸುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗೂ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುತ್ತದೆ.
ಮಂಗಳ ದೋಷ ನಿವಾರಣೆಗೆ
ದಾಸವಾಳ ಹೂವು ಮಂಗಳ ದೋಷ ನಿವಾರಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಕೆಂಪು ದಾಸವಾಳ ಮಂಗಳ ಗ್ರಹಕ್ಕೆ ಅತ್ಯಂತ ಪ್ರಿಯವಾಗಿದೆ. ಹಾಗಾಗಿ ಮನೆ ಅಂಗಳದಲ್ಲಿ ಕೆಂಪು ದಾಸವಾಳದ ಗಿಡವನ್ನು ಬೆಳೆಸುವುದರಿಂದ ಮಂಗಳ ದೋಷದಿಂದ ಮುಕ್ತಿ ಹೊಂದ ಬಹುದಾಗಿದ್ದು, ಪ್ರತಿನಿತ್ಯ ಮಂಗಳ ಗ್ರಹದ ಮಂತ್ರವನ್ನು ಜಪಿಸಿ ದಾಸವಾಳ ಹೂವನ್ನು ಅರ್ಪಿಸುವುದರಿಂದ ಕುಜ ದೋಷ ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತಿಯಾಗುತ್ತದೆ. ಅಷ್ಟೆ ಅಲ್ಲದೆ ಎದುರಾಗುವ ಸಕಲ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ.
ಈ ಸುದ್ದಿಯನ್ನೂ ಓದಿ: Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಒಲಿಯುತ್ತದೆ ಅದೃಷ್ಟ; ಆದ್ರೆ ವಾಸ್ತು ನಿಯಮ ತಪ್ಪದೇ ಪಾಲಿಸಿ
ವ್ಯವಹಾರಿಕವಾಗಿಯೂ ವೃದ್ಧಿ
ವ್ಯಾಪಾರದಲ್ಲಿ ಆರ್ಥಿಕವಾಗಿ ಸಮೃದ್ಧಿ ಹೊಂದಲು ಬಯಸುವವರು ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಯಸುವವರು ದಾಸವಾಳದ ಹೂವನ್ನು ಬಳಸಬಹುದಾಗಿದ್ದು, ಪ್ರತಿದಿನ ಬೆಳಗ್ಗೆ ಸ್ನಾನದ ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ, ದಾಸವಾಳ ಗಿಡಕ್ಕೂ ನೀರು ಹಾಕುವುದರಿಂದ ವ್ಯಾಪಾರ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.