ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Ramadan Eid 2025: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭ; ಏನಿದರ ಇತಿಹಾಸ? ಆಚರಣೆ ಹೇಗೆ?

ಉಪವಾಸದ ಆಚರಣೆಯೊಂದಿಗೆ ಶುರುವಾಗುವ ರಂಜಾನ್ ಹಬ್ಬವನ್ನು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನೇಕ ವಿಶೇಷತೆಗಳನ್ನು ಹೊಂದಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಪ್ರಾರಂಭವಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದಿನ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

ಪವಿತ್ರ ರಂಜಾನ್ ಹಬ್ಬದ ಮಹತ್ವವೇನು?

ರಂಜಾನ್ ಹಬ್ಬ

Profile Sushmitha Jain Mar 2, 2025 7:00 AM

ಬೆಂಗಳೂರು: ಚಂದ್ರನ ಚಲನೆಯನ್ನಾಧರಿಸಿದ ಮುಸ್ಲಿಂ ಕ್ಯಾಲೆಂಡರ್‌ನಲ್ಲಿ ಒಂಬತ್ತನೆಯ ತಿಂಗಳಾಗಿ ಬರುವ ರಂಜಾನ್ (Ramadan) ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ಮಾಸವಾಗಿದೆ. ವಿಶ್ವದಾದ್ಯಂತ ಮುಸ್ಲಿಮರು ಈ ತಿಂಗಳಿಡೀ ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲಿನಿಂದ ಹಿಡಿದು ಸೂರ್ಯಾಸ್ತಮಾನದ ಕ್ಷಣದವರೆಗೆ ಏನನ್ನೂ ತಿನ್ನದೇ ಅಥವಾ ಕುಡಿಯದೇ ಮತ್ತು ಮಾನಸಿಕವಾಗಿ ಯಾವ ಬಯಕೆಯನ್ನೂ ಬಯಸದೇ ದೇವರ ಧ್ಯಾನ, ಕುರಾನ್ ಪಠಣ, ಪ್ರಾರ್ಥನೆ ಮತ್ತು ಇತರ ವಿಧಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಉಪವಾಸ ಅಥವಾ ರೋಜಾವನ್ನು ಅನುಸರಿಸುತ್ತಾರೆ. ಈದ್-ಉಲ್-ಫಿತರ್ (ರಂಜಾನ್‌) ಹಬ್ಬದ ಮಹತ್ವವೇನು ತಿಳ್ಕೊಳ್ಳೋಣ.

ಭಾರತದಲ್ಲಿ ರಂಜಾನ್‌ ಯಾವಾಗ?

ರಂಜಾನ್ ಆರಂಭಕ್ಕೆ ಚಂದ್ರನ ದರ್ಶನ ಅಗತ್ಯ. ಸೌದಿ ಅರೇಬಿಯಾದಲ್ಲಿ ಈಗಾಗಲೇ ರಂಜಾನ್ ಚಂದ್ರ ಕಾಣಿಸಿಕೊಂಡಿದ್ದು, ಅಲ್ಲಿ ಮಾರ್ಚ್ 1ರಿಂದ ಮೊದಲ ಉಪವಾಸ ಆರಂಭವಾಗಿದೆ. ಇನ್ನು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮೊದಲ ಉಪವಾಸವನ್ನು ಮಾ. 2ರಂದು ನಡೆಸಲಾಗುತ್ತದೆ.

ಈದ್-ಉಲ್-ಫಿತರ್ ಇತಿಹಾಸ

ಈದ್-ಉಲ್-ಫಿತರ್ ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರಿಂದ ಹುಟ್ಟಿಕೊಂಡಿತು ಎನ್ನಲಾಗಿದೆ. ಕೆಲವು ಸಂಪ್ರದಾಯಗಳ ಪ್ರಕಾರ, ಮೆಕ್ಕಾದಿಂದ ಮುಹಮ್ಮದ್ ವಲಸೆ ಬಂದ ನಂತರ ಈ ಹಬ್ಬಗಳನ್ನು ಮದೀನಾದಲ್ಲಿ ಪ್ರಾರಂಭಿಸಲಾಯಿತು. ಇಸ್ಲಾಮಿಕ್ ಪ್ರವಾದಿಯ ಪ್ರಸಿದ್ಧ ಒಡನಾಡಿಯಾದ ಅನಸ್, ಮುಹಮ್ಮದ್ ಮದೀನಾಕ್ಕೆ ಆಗಮಿಸಿದಾಗ, ಜನರು ಎರಡು ನಿರ್ದಿಷ್ಟ ದಿನಗಳನ್ನು ಆಚರಿಸುವುದನ್ನು ಕಂಡುಕೊಂಡರು. ಅದುವೇ ಈದ್-ಉಲ್-ಫಿತರ್ ಮತ್ತು ಈದ್-ಅಲ್-ಅಧಾ. ಇನ್ನು ಈ ಹಬ್ಬಕ್ಕೆ ಅದರದೇ ಆದ ಮಹತ್ವ ಇದೆ. ಈ ತಿಂಗಳಲ್ಲಿ ಆಚರಿಸುವ ಆಚರಣೆಗಳು ಮಹತ್ವದ ವೈಜ್ಞಾನಿಕ ಕಾರಣಗಳನ್ನು ಒಳಗೊಂಡಿವೆ.

ಈದ್-ಉಲ್-ಫಿತರ್ ಮಹತ್ವ

ಮುಸ್ಲಿಮರ ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರವಾದಿ ಮುಹಮ್ಮದ್ ಈ ತಿಂಗಳು ಪವಿತ್ರ ಕುರಾನ್‌ನ ಬಹಿರಂಗ ಪಡಿಸಿದರು ಎಂದು ನಂಬಲಾಗಿದೆ. ಪವಿತ್ರ ರಂಜಾನ್ನಲ್ಲಿ ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜತೆ ಮತ್ತಷ್ಟು ಗಟ್ಟಿಯಾಗುತ್ತೆ. ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ. ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಕಷ್ಟಸಂಕಷ್ಟಗಳು ಕಡಿಮೆಯಾಗುತ್ತವೆ ಎಂದು ಕೆಲವರು ನಂಬುತ್ತಾರೆ. ಈ ತಿಂಗಳಲ್ಲಿ ಮುಸ್ಲಿಮರು ಬಡವರಿಗೆ ದಾನ-ಧರ್ಮ ಮಾಡುವುದು ಹಾಗೂ ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ.

ಈದ್-ಉಲ್-ಫಿತರ್ ಆಚರಣೆ

ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ. ಏಕೆಂದರೆ ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ.

ಈದ್ ಹಬ್ಬವು ಚಂದ್ರನನ್ನು ನೋಡಿದ ನಂತರವೇ ಪ್ರಾರಂಭವಾಗುತ್ತದೆ. ಈದ್ ಉಲ್-ಫಿತರ್ ಉಪವಾಸದ ಅಂತ್ಯವನ್ನು ಸೂಚಿಸುತ್ತದೆ. ಪ್ರವಾದಿ ಮೊಹಮ್ಮದ್ ಅವರ ಬೋಧನೆಗಳ ದಾಖಲೆಯಾದ ಸುನ್ನತ್ ಅನ್ನು ಅನುಸರಿಸಿ, ಹಬ್ಬದಂದು ಮುಸ್ಲಿಮರು ಮುಂಜಾನೆ ಬೇಗನೆ ಎದ್ದು ತಮ್ಮ ಸಲಾತ್ ಉಲ್-ಫಜ್ರ್ (ದೈನಂದಿನ ಪ್ರಾರ್ಥನೆಗಳು) ಸಲ್ಲಿಸಿ, ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಇತ್ತರ್ (ಸುಗಂಧ ದ್ರವ್ಯ) ಧರಿಸುತ್ತಾರೆ. ಬಳಿಕ ಹಬ್ಬದ ಪ್ರಾರ್ಥನೆಗೆ ಹೋಗುವ ಮುನ್ನ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಹುಡುಗರು, ಯುವಕರು ಸೇರಿದಂತೆ ಈದ್ಗ್ ಬಳಿ ಎಲ್ಲ ಮುಸ್ಲಿಮರು ಒಟ್ಟಿಗೆ ಸೇರಿ ಹಬ್ಬದ ವಿಶೇಷ ಸಭೆಯಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಾರೆ. ಹೆಣ್ಣು ಮಕ್ಕಳು, ಮಹಿಳೆಯರು ಮನೆಯಲ್ಲೇ ಹಬ್ಬನ ನಮಾಜ್ ಮಾಡುತ್ತಾರೆ.

ಈ ಸುದ್ದಿಯನ್ನೂ ಓದಿ: Kumbh Mela: ಮುಂದಿನ ಕುಂಭಮೇಳ ಎಲ್ಲಿ, ಯಾವಾಗ ನಡೆಯಲಿದೆ?

ಜನರು ಬೆಳಗ್ಗೆ ಸಿಹಿ ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸಿದರೆ ಅದನ್ನು ನಿಜವಾಗಿಯೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಈದ್ ಅನ್ನು ಮೀಥಿ ಈದ್ ಎಂದು ಕರೆಯಲಾಗುತ್ತದೆ. ಫಿರ್ಣಿ ಮತ್ತು ಖೀರ್, ಶೀರ್ ಕುರ್ಮಾ ಮುಂತಾದ ಖಾದ್ಯಗಳನ್ನು ಎಲ್ಲ ಮನೆಗಳಲ್ಲಿ ತಯಾರಿಸಲಾಗುತ್ತದೆ. ಹೆಂಗಸರೂ ಕೈಗೆ ಗೋರಂಟಿ ಹಚ್ಚಿಕೊಂಡು ಹೊಸ ಬಟ್ಟೆ ಧರಿಸುತ್ತಾರೆ. ಈ ದಿನದಂದು ಮಕ್ಕಳು ತಮ್ಮ ಕುಟುಂಬದ ಹಿರಿಯರಿಂದ ಈದಿ (ಹಣ) ಪಡೆಯುತ್ತಾರೆ, ಇದು ಅವರಿಗೆ ಹಬ್ಬವನ್ನು ಹೆಚ್ಚು ವಿಶೇಷವಾಗಿಸುತ್ತದೆ. ತಿಂಗಳ ಉಪವಾಸದ ಅಂತ್ಯವನ್ನು ಗುರುತಿಸಲು, ಮನೆಗಳಲ್ಲಿ ಅದ್ಧೂರಿ ಹಬ್ಬಗಳನ್ನು ಆಯೋಜಿಸಲಾಗುತ್ತದೆ.