Kumbh Mela: ಮುಂದಿನ ಕುಂಭಮೇಳ ಎಲ್ಲಿ, ಯಾವಾಗ ನಡೆಯಲಿದೆ?
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಸಂಪನ್ನವಾಗಿದ್ದು, ಪ್ರಪಂಚದಾದ್ಯಂತದ ಕೋಟ್ಯಂತರ ಭಕ್ತರು ಹರಿದು ಬಂದಿದ್ದಾರೆ. ಈ ಅದ್ಧೂರಿ ಧಾರ್ಮಿಕ ಕಾರ್ಯಕ್ರಮಕ್ಕೆ ಶಿವರಾತ್ರಿ ದಿನದಂದು ತೆರೆ ಬಿದ್ದಿದೆ. ಇದೀಗ ಮುಂದಿನ ಕುಂಭಮೇಳ ಯಾವಾಗ ನಡೆಯಬಹುದು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

maha kumbh mela

ನವದೆಹಲಿ: 144 ವರ್ಷಗಳಿಗೆ ಒಮ್ಮೆ ಬರುವ ಮಹಾಕುಂಭ ಮೇಳ (Maha Kumbh) ಈ ಬಾರಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಜ. 13ರಂದು ಆರಂಭಗೊಂಡ ಈ ಮೇಳ 45 ದಿನಗಳ ತನಕ ನೆರವೇರಿದ್ದು, 66 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ತೀರ್ಥ ಸ್ನಾನಮಾಡಿದ್ದಾರೆ. ಮಹಾ ಕುಂಭಮೇಳದ ಪುಣ್ಯ ಕ್ಷೇತ್ರ ಭೇಟಿ ನೀಡಲೆಂದು ಪ್ರಪಂಚದಾದ್ಯಂತ ಭಕ್ತರ ಜನಸಾಗರವೇ ಹರಿದು ಬಂದಿದೆ. ಈ ಅದ್ಧೂರಿ ಧಾರ್ಮಿಕ ಕಾರ್ಯಕ್ರಮಕ್ಕೆ ಶಿವರಾತ್ರಿಯಂದು ತೆರೆ ಬಿದ್ದಿದೆ. ಇದೀಗ ಮುಂದಿನ ಕುಂಭಮೇಳ ಯಾವಾಗ ನಡೆಯಬಹುದು ಎಂಬ ಬಗ್ಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
ಪ್ರತೀ 3 ವರ್ಷಕ್ಕೊಮ್ಮೆ 4 ಪವಿತ್ರ ಕ್ಷೇತ್ರವಾದ ಉಜ್ಜೈನಿ, ಹರಿದ್ವಾರ, ನಾಸಿಕ್ ಹಾಗೂ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಸಲಾಗುತ್ತದೆ. 12 ವರ್ಷಗಳಿಗೊಮ್ಮೆ ಒಂದೊಂದು ಕ್ಷೇತ್ರದಲ್ಲಿ ಕುಂಭಮೇಳ ನಡೆಸಲಾಗುತ್ತದೆ. ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ. ಇದು ಹಿಂದೂಗಳ ಪಾಲಿಗಂತೂ ದೇವತಾನುಗ್ರಹ ಪಡೆಯುವ ಸುಸಂದರ್ಭ ಎಂದೇ ಭಾವಿಸಲಾಗುತ್ತದೆ. ಹಾಗಾಗಿ ಕುಂಭಮೇಳಕ್ಕೆ ಅನಾದಿ ಕಾಲದಿಂದಲೂ ಬಹಳ ಪ್ರಾಮುಖ್ಯತೆ ಇದೆ.
ಮುಂದಿನ ಕುಂಭಮೇಳ ಎಲ್ಲಿ?
ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ ಮುಗಿದ ಬಳಿಕ ಮುಂದಿನ ಕುಂಭಮೇಳವು ಪವಿತ್ರ ಕ್ಷೇತ್ರವಾದ ನಾಸಿಕ್‌ನಲ್ಲಿ 2027ರಲ್ಲಿ ನಡೆಯಲಿದೆ. ನಾಸಿಕ್‌ಮಿಂದ 38 ಕಿ.ಮೀ. ದೂರದಲ್ಲಿರುವ ತ್ರಯಂಬಕೇಶ್ವರದ ಗೋದಾವರಿ ನದಿಯ ದಡದಲ್ಲಿ ಮುಂದಿನ ಕುಂಭಮೇಳ ನಡೆಯಲಿದೆ. ಈ ತ್ರಯಂಬಕೇಶ್ವರಕ್ಕೆ ಜ್ಯೋತಿ ರ್ಲಿಂಗ ಇರುವ ಪವಿತ್ರ ಕ್ಷೇತ್ರ ಎಂಬ ಹೆಗ್ಗಳಿಕೆಯೂ ಇದೆ. ಈ ಕ್ಷೇತ್ರದಲ್ಲಿ 2027ರ ಜು. 17ರಿಂದ ಕುಂಭಮೇಳ ಆರಂಭವಾಗಿ ಆ. 17ರ ತನಕವು ನಡೆಯಲಿದೆ ಎನ್ನಲಾಗಿದೆ.
3 ವರ್ಷಗಳಿಗೊಮ್ಮೆ ಕುಂಭಮೇಳ, 6 ವರ್ಷಗಳಿಗೊಮ್ಮೆ ಅರ್ಧ ಕುಂಭ ಮೇಳ, 12 ವರ್ಷಗಳಿಗೊಮ್ಮೆ ಪೂರ್ಣಕುಂಭ ಮೇಳ ನಡೆಯುತ್ತವೆ. ಆ ಬಳಿಕ ಎಲ್ಲ ಕುಂಭಮೇಳಕ್ಕೂ ಮಿಗಿಲಾಗಿ 144 ವರ್ಷಗಳಿಗೊಮ್ಮೆ ಬರುವುದೇ ಮಹಾ ಕುಂಭಮೇಳ. 2027ರಂದು ನಾಸಿಕ್‌ನಲ್ಲಿ ನಡೆಯುವ ಕುಂಭಮೇಳಕ್ಕೂ ಕೂಡ ಈಗಲೇ ಕೆಲ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದ್ದು ಇದಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಸಾಥ್ ನೀಡಿದ್ದಾರೆ. 2027ರ ಕುಂಭಮೇಳಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಸಂಯೋಜಿಸುವ ಕೆಲ ಹೊಸ ಯೋಜನೆ ರೂಪಿಸುವ ಕುರಿತಾಗಿ ಕೂಡ ಚಿಂತಿಸಲಾಗುತ್ತಿದೆ.
ಇದನ್ನು ಓದಿ: Viral News: ರೆಸ್ಯೂಮ್ ಬೇಡ, ವಾರ್ಷಿಕ 40 ಲಕ್ಷ ರೂ ಪ್ಯಾಕೇಜ್; ಉದ್ಯೋಗ ಆಫರ್ ನೀಡಿದ ಬೆಂಗಳೂರಿನ AI ಕಂಪನಿ
ನಾಸಿಕ್ ಕುಂಭಮೇಳವಾದ ಬಳಿಕ 2028ರಲ್ಲಿ ಉಜ್ಜೈನಿ ಮಹಾ ಕಾಳೇಶ್ವರದಲ್ಲಿ ಕುಂಭಮೇಳ ನಡೆಯಲಿದೆ. 2030ಕ್ಕೆ ಮತ್ತೆ ಪುನಃ ಪ್ರಯಾಗ್‌ರಾಜ್‌ನಲ್ಲಿ ಅರ್ಧ ಕುಂಭಮೇಳ ನಡೆಯುತ್ತದೆ. 2027ರ ನಾಸಿಕ್ ಕುಂಭಮೇಳವು ಗೋದಾವರಿ ನದಿಯ ತಟದಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ನಡೆಯಲಿದೆ.