Lokayukta Raid: ಆದಾಯಕ್ಕಿಂತ ಹೆಚ್ಚು ಆಸ್ತಿ ಆರೋಪ: ಡಿಸಿ ಕಚೇರಿ ಎಫ್‌ಡಿಎ ಮೇಲೆ ಲೋಕಾಯುಕ್ತ ದಾಳಿ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದರ್ಶನ್ ಗೌಡ ಅವರ ಚೇಂಬರ್ ಸೇರಿದಂತೆ ಒಟ್ಟು ಎಂಟು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದ್ದಾರೆ. ದಾಳಿ ವೇಳೆ ಕಚೇರಿಯಲ್ಲಿನ ವಿವಿಧ ದಾಖಲೆಗಳು ಹಾಗೂ ಆಸ್ತಿ-ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
-
ಚಿಕ್ಕಬಳ್ಳಾಪುರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಜೆ.ದರ್ಶನ್ ಗೌಡ ಅವರಿಗೆ ಸೇರಿದ ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದರ್ಶನ್ ಗೌಡ ಅವರ ಚೇಂಬರ್ ಸೇರಿದಂತೆ ಒಟ್ಟು ಎಂಟು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದ್ದಾರೆ. ದಾಳಿ ವೇಳೆ ಕಚೇರಿಯಲ್ಲಿನ ವಿವಿಧ ದಾಖಲೆಗಳು ಹಾಗೂ ಆಸ್ತಿ-ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನ ಬಾಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿರುವ ಎರಡು ಮನೆಗಳು, ಮಲ್ಲಸಂದ್ರದಲ್ಲಿರುವ ಎರಡು ಮನೆಗಳು ಹಾಗೂ ಹೆಸರಘಟ್ಟದ ಸೋಲದೇವನಹಳ್ಳಿಯಲ್ಲಿರುವ ಒಂದು ಮನೆ ಸೇರಿದಂತೆ ಬೆಂಗಳೂರಿನ ಆರು ಕಡೆ ಶೋಧ ನಡೆದಿದೆ. ಇದೇ ವೇಳೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ವಡನಘಟ್ಟದಲ್ಲಿರುವ ದರ್ಶನ್ ಗೌಡ ಅವರ ಮಾವನ ಮನೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಾಳಿ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದರ್ಶನ್ ಗೌಡ ಅವರ ಚೇಂಬರ್ ಬಳಿ ದಾಖಲೆಗಳನ್ನು ಪರಿಶೀಲಿಸುತ್ತಿರುವ ಲೋಕಾಯುಕ್ತ ಪೊಲೀಸರ ತಂಡ, ಆಸ್ತಿ ಹಾಗೂ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ.
ಆದಾಯಕ್ಕೆ ಹೋಲಿಸಿದರೆ ಅಕ್ರಮವಾಗಿ ಅಥವಾ ಅಸಮರ್ಪಕವಾಗಿ ಆಸ್ತಿ ಗಳಿಸಿರುವ ಆರೋಪದ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದಾಳಿಯ ಸಂಪೂರ್ಣ ಪರಿಶೀಲನೆ ಬಳಿಕ ಆಸ್ತಿ ಮತ್ತು ದಾಖಲೆಗಳ ಕುರಿತು ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.