ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಿವರಾತ್ರಿ ವಿಶೇಷ: ಮಹಾದೇವನಿಗೆ ಪ್ರಿಯವಾದ ತಂಬಿಟ್ಟು ಮಾಡುವ ಸುಲಭ ವಿಧಾನ

Maha Shivaratri: ಮಹಾ ಶಿವರಾತ್ರಿಯಂದು ಮಹಾದೇವನಿಗೆ ಪ್ರಿಯವಾದ ತಂಬಿಟ್ಟು ನೈವೇದ್ಯವನ್ನು ಭಕ್ತರು ವಿಶೇಷವಾಗಿ ತಯಾರಿಸುತ್ತಾರೆ. ಅಕ್ಕಿ, ಬೆಲ್ಲ, ಎಳ್ಳು, ಹುರಿಗಡಲೆ, ಕಡಲೆಬೀಜ ಮೊದಲಾದ ಪದಾರ್ಥಗಳಿಂದ ಈ ಸಾಂಪ್ರದಾಯಿಕ ಸಿಹಿಯನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಸರಿಯಾದ ವಿಧಾನದಲ್ಲಿ ತಯಾರಿಸಿದ ತಂಬಿಟ್ಟು ಶಿವನ ಪೂಜೆಯಲ್ಲಿ ಪ್ರಮುಖ ನೈವೇದ್ಯ ಎನಿಸಿಕೊಂಡಿದೆ.

ಶಿವರಾತ್ರಿ ನೈವೇದ್ಯ: ಸಾಂಪ್ರದಾಯಿಕ ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ

ತಂಬಿಟ್ಟು (ಇಂಟರ್‌ನೆಟ್‌ ಚಿತ್ರ) -

Profile
Sushmitha Jain Feb 15, 2026 7:00 AM

ಬೆಂಗಳೂರು, ಫೆ. 15: ಶಿವರಾತ್ರಿ ಎಂದರೆ ಮಹಾದೇವನನ್ನು ಸ್ಮರಿಸುವ, ಉಪವಾಸ ಮತ್ತು ಜಾಗರಣೆಯ ಮೂಲಕ ಭಕ್ತಿಭಾವ ವ್ಯಕ್ತಪಡಿಸುವ ಅತ್ಯಂತ ಪವಿತ್ರ ದಿನ. ಈ ದಿನ ಭಕ್ತರು ಶಿವನ ನಾಮ ಸ್ಮರಣೆ ಮಾಡುತ್ತಾ, ಪೂಜೆ ಸಲ್ಲಿಸುತ್ತಾ, ನೈವೇದ್ಯಗಳನ್ನು ಅರ್ಪಿಸುವುದು ಸಂಪ್ರದಾಯ. ಶಿವನಿಗೆ ತಂಬಿಟ್ಟು ಬಹಳ ಪ್ರಿಯವೆಂದು ನಂಬಲಾಗಿದ್ದು, ಶಿವರಾತ್ರಿ ಸಂದರ್ಭದಲ್ಲಿ ತಂಬಿಟ್ಟು ಮಾಡುವ ಸಂಪ್ರದಾಯ ಹಲವೆಡೆ ಇದೆ.

ತಂಬಿಟ್ಟು ಒಂದು ಸಾಂಪ್ರದಾಯಿಕ ಸಿಹಿ ಪದಾರ್ಥವಾಗಿದ್ದು, ಸರಳ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ತಂಬಿಟ್ಟು ಮಾಡಲು ಬೇಕಾಗುವ ಪದಾರ್ಥಗಳು

  • ಹುರಿಗಡಲೆ – 100 ಗ್ರಾಂ
  • ಅಕ್ಕಿ – ಅರ್ಧ ಕೆ.ಜಿ.
  • ಎಳ್ಳು – 5 ಚಮಚ
  • ಕಡಲೆಬೀಜ – 50 ಗ್ರಾಂ
  • ಬೆಲ್ಲ – 1 ಅಚ್ಚು
  • ಕೊಬ್ಬರಿ ತುರಿ – ಅರ್ಧ ಕಪ್
  • ಏಲಕ್ಕಿ – 3
  • ತುಪ್ಪ – 5 ಚಮಚ
  • ಶುಂಠಿ – ಸ್ವಲ್ಪ
  • ನೀರು – ಅಗತ್ಯವಿದ್ದಷ್ಟು

ಮಹಾದೇವನ ಜನನದ ಹಿಂದೆ ಇರುವ ಪೌರಾಣಿಕ ಹಿನ್ನೆಲೆ ಏನು ಗೊತ್ತಾ?

ತಂಬಿಟ್ಟು ಮಾಡುವ ವಿಧಾನ

  1. ಮೊದಲು ಅಕ್ಕಿಯನ್ನು ಒಂದು ಪ್ಯಾನ್‌ನಲ್ಲಿ ಸ್ವಲ್ಪ ಬಿಸಿ ಮಾಡಿ. ಅಕ್ಕಿ ಸಂಪೂರ್ಣ ತಣ್ಣಗಾದ ನಂತರ ಮಿಕ್ಸರ್‌ನಲ್ಲಿ ಚೆನ್ನಾಗಿ ಹಿಟ್ಟು ಮಾಡಿಕೊಳ್ಳಿ. ಅಕ್ಕಿಯ ಕಾಳು ಸಂಪೂರ್ಣವಾಗಿ ಪುಡಿಯಾಗಿರುವುದು ಮುಖ್ಯ.
  2. ನಂತರ ಪ್ಯಾನ್‌ನಲ್ಲಿ ಕಡಲೆಬೀಜ ಮತ್ತು ಎಳ್ಳನ್ನು ಪ್ರತ್ಯೇಕವಾಗಿ ಹುರಿದು ತಣ್ಣಗಾಗಲು ಬಿಡಿ.
  3. ಹುರಿಗಡಲೆ, ಹುರಿದ ಕಡಲೆಬೀಜ, ಏಲಕ್ಕಿ ಮತ್ತು ಸ್ವಲ್ಪ ಶುಂಠಿಯನ್ನು ಸೇರಿಸಿ ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ.
  4. ಒಂದು ಪಾತ್ರೆಯಲ್ಲಿ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಒಲೆಯ ಮೇಲೆ ಇಟ್ಟು ಸಾಧಾರಣ ಪಾಕ ತಯಾರಿಸಿಕೊಳ್ಳಿ. ಪಾಕ ಹೆಚ್ಚು ಗಟ್ಟಿಯಾಗಬಾರದು, ಮಧ್ಯಮ ಗಟ್ಟಿತನ ಸಾಕು.
  5. ಈಗ ಬೆಲ್ಲದ ಪಾಕಕ್ಕೆ ಅಕ್ಕಿ ಹಿಟ್ಟು, ರುಬ್ಬಿಕೊಂಡ ಮಿಶ್ರಣ, ಹುರಿದ ಎಳ್ಳು ಮತ್ತು ಕೊಬ್ಬರಿ ತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ.
  6. ಮಿಶ್ರಣ ಬಿಸಿ ಇರುವಾಗಲೇ ತುಪ್ಪವನ್ನು ಸ್ವಲ್ಪ ಹಾಕಿ ಕೈಗೆ ಹಿಡಿದು ಉಂಡೆ ಕಟ್ಟಲು ಪ್ರಾರಂಭಿಸಿ.
  7. ಹೀಗೆ ತಂಬಿಟ್ಟು ಉಂಡೆಗಳು ಸಿದ್ಧವಾಗುತ್ತವೆ.

ತಂಬಿಟ್ಟಿನ ಮಹತ್ವ

ತಂಬಿಟ್ಟು ಶಿವನಿಗೆ ಪ್ರಿಯವಾದ ನೈವೇದ್ಯವೆಂದು ಹಲವು ಪ್ರದೇಶಗಳಲ್ಲಿ ನಂಬಿಕೆ ಇದೆ. ಬೆಲ್ಲ, ಎಳ್ಳು ಮತ್ತು ಧಾನ್ಯಗಳಿಂದ ತಯಾರಾಗುವ ಈ ಸಿಹಿ ಪದಾರ್ಥವು ಆರೋಗ್ಯಕರವಾಗಿಯೂ ಇರುತ್ತದೆ. ಶಿವರಾತ್ರಿ ದಿನ ಉಪವಾಸದ ಬಳಿಕ ತಂಬಿಟ್ಟು ಸೇವಿಸುವ ಸಂಪ್ರದಾಯವೂ ಕೆಲವು ಕಡೆ ಇದೆ. ಶಿವನ ಆರಾಧನೆಯೊಂದಿಗೆ ಈ ರೀತಿಯ ಸಾಂಪ್ರದಾಯಿಕ ನೈವೇದ್ಯಗಳನ್ನು ತಯಾರಿಸುವುದು ಭಕ್ತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಒಂದು ಸುಂದರ ಮಾರ್ಗ.