ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri 2025: ನವರಾತ್ರಿಯ ನಾಲ್ಕನೇ ದಿನ: ಕೂಷ್ಮಾಂಡ ದೇವಿಯ ಆರಾಧನೆ ಏಕೆ?

ನವರಾತ್ರಿಯ ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸಿದರೆ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಆರಾಧಿಸಲಾಗುತ್ತದೆ. ಈಕೆ ಜಗತ್ತನ್ನು ಸೃಷ್ಟಿ ಮಾಡಿದ ದೇವಿ ಎನ್ನಲಾಗುತ್ತದೆ. ಆರೋಗ್ಯ, ಸಂಪತ್ತು ಮತ್ತು ಶಕ್ತಿಯ ಮೂಲ ದೇವಿಯಾದ ಈಕೆಯನ್ನು ನವರಾತ್ರಿಯಲ್ಲಿ ಯಾಕೆ ಪೂಜಿಸಲಾಗುತ್ತದೆ ಎನ್ನುವ ವಿವರ ಇಲ್ಲಿದೆ.

ಕೂಷ್ಮಾಂಡ ದೇವಿಯನ್ನು ಪೂಜಿಸುವುದು ಏಕೆ?

-

ಬೆಂಗಳೂರು: ನವರಾತ್ರಿಯ (Navaratri 2025) ನಾಲ್ಕನೇ ದಿನ ದುರ್ಗಾ ದೇವಿಯ (Durga devi) ಒಂಬತ್ತು ಅವತಾರಗಳಲ್ಲಿ ಕೂಷ್ಮಾಂಡ ದೇವಿಯನ್ನು (Kushmanda devi) ಪೂಜಿಸಲಾಗುತ್ತದೆ. ಆರೋಗ್ಯ, ಸಂಪತ್ತು ಮತ್ತು ಶಕ್ತಿಯ ಮೂಲ ದೇವಿಯಾದ ಈಕೆ ತನ್ನ ದೈವಿಕ ನಗುವಿನಿಂದ ಜಗತ್ತನ್ನು ಸೃಷ್ಟಿ ಮಾಡಿದಳು ಎನ್ನಲಾಗುತ್ತದೆ. ಅಷ್ಟಭುಜಾ ದೇವಿ, ಆದಿ ಶಕ್ತಿ ಎಂದೂ ಕರೆಯಲ್ಪಡುವ ಈಕೆಯ ಎಂಟು ಕೈಗಳು ವಿವಿಧ ಆಯುಧಗಳನ್ನು ಹೊಂದಿವೆ. ಸಿಂಹವನ್ನು ವಾಹನವಾಗಿರಿಸಿಕೊಂಡಿದ್ದಾಳೆ. ನವರಾತ್ರಿಯಲ್ಲಿ ಆರಂಭದಿಂದ ಕ್ರಮವಾಗಿ ಶೈಲಪುತ್ರಿ, ಬ್ರಹ್ಮಚಾರಿಣಿ ಮತ್ತು ಚಂದ್ರಘಂಟಾ ದೇವಿಯನ್ನು ಪೂಜಿಸಿದ ಬಳಿಕ ನಾಲ್ಕನೇ ದಿನ ಕೂಷ್ಮಾಂಡ ದೇವಿಯ ಆರಾಧನೆ ಮಾಡಲಾಗುತ್ತದೆ.

ಹಿನ್ನೆಲೆ

ಕು ಎಂದರೆ ಚಿಕ್ಕದು, ಉಷ್ಮಾ ಎಂದರೆ ಉಷ್ಣತೆ ಅಥವಾ ಶಕ್ತಿ ಮತ್ತು ಅಂಡಾ ಎಂದರೆ ಮೊಟ್ಟೆ ಎಂದರ್ಥ. ಅಂದರೆ ಸೃಷ್ಟಿಯ ಚಿಕ್ಕದಾಗಿರುವ ಕಾಸ್ಮಿಕ್ ಮೊಟ್ಟೆಯನ್ನು ಹೊತ್ತ ತಾಯಿ. ಎಲ್ಲ ಶಕ್ತಿ, ಬೆಳಕು, ಜೀವಗಳ ಮೂಲ ಅವಳೇ ಆಗಿದ್ದಾಳೆ. ಕೂಷ್ಮಾಂಡ ದೇವಿಯನ್ನು ನಗುತ್ತಿರುವ ತಾಯಿ ಎಂದು ಕೂಡ ಕರೆಯಲಾಗುತ್ತದೆ.

ಬ್ರಹ್ಮಾಂಡವು ತೀವ್ರವಾದ ಕತ್ತಲೆಯಿಂದ ಕೂಡಿತ್ತು. ಆಗ ಒಂದು ಪ್ರಖರ ಬೆಳಕು ಕಾಣಿಸಿಕೊಂಡಿತು. ಈ ಬೆಳಕಿನ ಮೂಲವಾದ ಕೂಷ್ಮಾಂಡ ದೇವಿ ಮುಗುಳ್ನಕ್ಕಿದ್ದರಿಂದ ಉಂಟಾದ ಬೆಳಕಿನಲ್ಲಿ ಗ್ಯಾಲಕ್ಸಿ, ಗ್ರಹಗಳು, ಸಸ್ಯ, ಪ್ರಾಣಿ, ಪಕ್ಷಿ, ಮಾನವ...ಹೀಗೆ ಎಲ್ಲವೂ ಜೀವ ಪಡೆದುಕೊಂಡವು. ಸಂಪೂರ್ಣ ಸೃಷ್ಟಿಯನ್ನು ಸೃಷ್ಟಿಸಿದ ಮೇಲೆ ಈಕೆ ಸೂರ್ಯನಿಗೆ ಶಕ್ತಿ ತುಂಬಿ ವಿಶ್ವಕ್ಕೆ ಬೆಳಕು, ಉಷ್ಣತೆಯನ್ನು ನೀಡಿದಳು. ಮಹಾಕಾಳಿ, ಮಹಾಲಕ್ಷ್ಮೀ, ಸರಸ್ವತಿ ಕೂಡ ಇವಳದೇ ಸೃಷ್ಟಿ. ಈ ಮೂರು ಶಕ್ತಿಗಳು ಸೇರಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಜನ್ಮ ನೀಡಿದರು ಎನ್ನುತ್ತದೆ ಪುರಾಣ.

ಆರಾಧನೆಯಿಂದ ಎಂದು ಫಲ?

ಶುದ್ದೀಕರಣ ಮತ್ತು ತಪಸ್ಸಿನ ದೇವತೆಯಾದ ಇವಳನ್ನು ಆರಾಧಿಸುವುದರಿಂದ ಆರೋಗ್ಯ, ಸಂಪತ್ತು ಮತ್ತು ಶಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಅನೇಕ ರೀತಿಯ ರೋಗಗಳು ನಿವಾರಣೆಯಾಗುತ್ತದೆ, ದುಃಖ, ದಾರಿದ್ರ್ಯಗಳು ನಾಶವಾಗುತ್ತವೆ. ಆಧ್ಯಾತ್ಮಿಕ ಜ್ಞಾನ ಪಡೆಯಲು ಬಯಸುವವರು ಈಕೆಯನ್ನು ಪೂಜಿಸಿದರೆ ಸಂಸಾರ ಬಂಧನದಿಂದ ಮುಕ್ತಿರಾಗಿ ಆಧ್ಯಾತ್ಮಿಕ ಹಾದಿಯಲ್ಲಿ ಸಾಗಲು ಶಕ್ತಿ, ಜ್ಞಾನ ನೀಡುತ್ತಾಳೆ ಎನ್ನುವ ನಂಬಿಕೆ ಇದೆ.

ಭಾರತದಲ್ಲಿರುವ ಕೂಷ್ಮಾಂಡ ದೇವಿಯ ದೇವಾಲಯ

ದೇಶದ ಎರಡು ಪ್ರಮುಖ ಕೂಷ್ಮಾಂಡ ದೇವಿಯ ದೇವಾಲಯಗಳು ಉತ್ತರ ಪ್ರದೇಶದಲ್ಲಿವೆ. ಕಾನ್ಪುರ ಜಿಲ್ಲೆಯ ಘಟಂಪುರ ಮತ್ತು ವಾರಣಾಸಿಯ ದುರ್ಗಾಕುಂಡ್.

ಇದನ್ನೂ ಓದಿ: ತ್ಯಾಗದಿಂದ ಮಾತ್ರವೇ ಶ್ರೇಷ್ಠತೆ ಪಡೆಯುವುದಕ್ಕೆ ಸಾಧ್ಯ: ರಾಘವೇಶ್ವರ ಶ್ರೀ

ಕಾನ್ಪುರ್ ಜಿಲ್ಲೆಯ ಘಟಂಪುರದಲ್ಲಿರುವ ಈ ದೇವಾಲಯವು ಕೂಷ್ಮಾಂಡ ದೇವಿಗೆ ಸಮರ್ಪಿತವಾದ ಅತ್ಯಂತ ಪ್ರಸಿದ್ಧ ದೇಗುಲಗಳ ಪೈಕಿ ಒಂದು. ವಾರಣಾಸಿಯ ದುರ್ಗಾಕುಂಡ್ ಬಳಿ ಶ್ರೀ ದುರ್ಗಾ ದೇವಸ್ಥಾನ, ಕೂಷ್ಮಾಂಡ ದೇವಿ ದುರ್ಗಾ ಎಂಬ ದೇವಾಲಯವಿದ್ದು, ಇದು ಕೂಡ ದುರ್ಗಾ ದೇವಿಯ ಕೂಷ್ಮಾಂಡ ರೂಪಕ್ಕೆ ಸಮರ್ಪಿತವಾಗಿದೆ. ಈ ದೇವಾಲಯವನ್ನು 18ನೇ ಶತಮಾನದಲ್ಲಿ ನಟೋರ್‌ನ ಬಂಗಾಳಿ ಮಹಾರಾಣಿ ರಾಣಿ ಭಬಾನಿ ನಿರ್ಮಿಸಿದಳು ಎನ್ನುತ್ತದೆ ಇತಿಹಾಸ. ಇಲ್ಲಿರುವ ದೇವಿಯ ವಿಗ್ರಹವನ್ನು ಯಾರು ಮಾಡಿದ್ದಲ್ಲ. ಸ್ವತಃ ಉದ್ಭವವಾಗಿದ್ದು ಎನ್ನಲಾಗುತ್ತದೆ.