Spoorthivani Column: ಗೋಪಿಯರು ಕೊಡುವ ಬೆಣ್ಣೆಯೇ ರುಚಿ: ತಾಯಿಗೆ ಈ ಮಾತು ಹೇಳಿ ಜಗತ್ತಿಗೆ ಸಂದೇಶ ಕೊಟ್ಟ ಶ್ರೀಕೃಷ್ಣ
ಕೃಷ್ಣನು ಹಾಡಿ ನರ್ತಿಸಿ ಗೋಪಿಕೆಯರ ಮನರಂಜಿಸುತ್ತಿದ್ದ. ಹಾಗೆ ನರ್ತಿಸಿದ ನಂತರವೇ ಅವನಿಗೆ ಬೆಣ್ಣೆ ಸಿಗುತ್ತಿತ್ತು. ಒಂದು ದಿನ ಕೃಷ್ಣನ ತಾಯಿ ಯಶೋದೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾಳೆ. ಆಗ ಕೃಷ್ಣ, ʼʼಹೇ ಮಾತೆಯೇ! ಗೋಪಿಕೆಯರು ಯಾವುದೇ ನಿರೀಕ್ಷೆಗಳಿಲ್ಲದೆ, ಯಾವುದೇ ಬಂಧನಗಳಿಲ್ಲದೇ, ಹೃದಯತುಂಬಿದ ಪ್ರೇಮದಿಂದ ಕೊಡುವ ಆ ಬೆಣ್ಣೆಯನ್ನು ತಿನ್ನುವುದರಲ್ಲಿ ಎಂಥಾ ಆನಂದವಿದೆ!ʼʼ ಎಂದು ಉತ್ತರಿಸಿದ್ದ.

-

- ಸದ್ಗುರು ಶ್ರೀ ಮಧುಸೂದನ ಸಾಯಿ
ಶ್ರೀಕೃಷ್ಣ ಪರಮಾತ್ಮನು ಕೇವಲ ಒಂದು ಬೆಣ್ಣೆಯ ಮುದ್ದೆಗಾಗಿ ಗೋಪ-ಗೋಪಿಯರಿಗೆ ಒಲಿದುಬಿಟ್ಟ. ಆದರೆ ಅವರು ಎಂಥ ಬೆಣ್ಣೆ ಕೊಡುತ್ತಿದ್ದರು? ಬೆಣ್ಣೆಯನ್ನು ಹೇಗೆ ಕೊಡುತ್ತಿದ್ದರು ಎನ್ನುವುದು ಬಹಳ ಮುಖ್ಯ. ಈ ಕುರಿತು ರಸಖಾನ್ ಎನ್ನುವ ಸೂಫಿ ಸಂತ ಕವಿಯು ಈ ರೀತಿ ಬರೆದಿದ್ದಾರೆ.
ಶೇಷ ಗಣೇಶ ಮಹೇಶ ದಿನೇಶ ಸುರೇಶ ಹೀ ಜಾಹೀ ನಿರಂತರ ಗಾವೈನ್ |
ಜಾಹೀ ಅನಾದಿ ಅನಂತ ಅಖಂಡ ಅಛೇದ ಅಭೇದ ಸುವೇದ ಬತಾವೈನ್ ||
ನಾರದ ಸೇ ಶುಕ ವ್ಯಾಸ ರತೈನ್ ಪಾಛಿ ಹಾರೇ
ತವೂ ಪುನಿ ಪಾರ ನಾ ಪಾವೈನ್ |
ತಾಹೀ ಅಹಿರ ಕಿ ಚೋಹರಿಯಾನ್ ಛಛಿಯಾ
ಭರ ಛಾಛ ಪೇ ನಾಚ ನಾಚವೈನ್ |
‘ಸ್ವರ್ಗದ ದೇವತೆಗಳು, ಆದಿಶೇಷ, ಗಣೇಶ, ಮಹೇಶ, ಸುರೇಶ ಮತ್ತು ದಿನೇಶ, ಇವರೆಲ್ಲರೂ ಅವನ ವೈಭವವನ್ನು ಹಾಡಿ ಹೊಗಳುತ್ತಾರೆ. ವೇದಗಳು ಅವನನ್ನು ಆದಿ ಇಲ್ಲದವನು, ಶಾಶ್ವತನು, ನಿರಂತರನು, ಅವಿನಾಶಿ ಮತ್ತು ಅಭೇದ್ಯ ಎಂದು ವರ್ಣಿಸಿವೆ. ನಾರದ, ಶುಕ ಮತ್ತು ವ್ಯಾಸರಂಥ ಋಷಿಗಳು ಅವನ ಕುರಿತು ಹಾಡಿದ್ದಾರೆ. ಆದರೂ ಅವರಿಗೆ ಅವನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಕೃಷ್ಣನು ಕೇವಲ ಒಂದು ಬೆಣ್ಣೆಯ ಮುದ್ದೆಗಾಗಿ, ತನ್ನನ್ನೇ ಕುಣಿಸುವ ಗೋಪ ಗೋಪಿಕೆಯರಿಗೆ ಮಾತ್ರ ಒಲಿದು ಅವರಿಗೆ ಮುದ ನೀಡುತ್ತಿದ್ದಾನೆ’. ಶ್ರೀಕೃಷ್ಣನ ಕರುಣೆಯನ್ನು, ಅವನಿಗೆ ಯಾವುದಕ್ಕೆ ಒಲಿಯುತ್ತಾನೆ ಎನ್ನುವುದನ್ನು ಕವಿ ಕಂಡ ಬಗೆಯಿದು.
ಎಲ್ಲ ಗೋಪಿಕೆಯರೂ ಹಿರಿಯರಾದ ಮಹಿಳೆಯರಾಗಿದ್ದಾರೆ. ಅವರಿಗೆ ಮನೆಗೆಲಸಗಳನ್ನೂ ನೋಡಿಕೊಳ್ಳುವ ಜವಾಬ್ದಾರಿಗಳಿರುತ್ತಿದ್ದವು. ಆದರೂ, ಅವರು ತಾವು ಮಾರಬೇಕಾಗಿರುವ ಬೆಣ್ಣೆಯ ಸ್ವಲ್ಪ ಭಾಗವನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಕೃಷ್ಣನಿಗೆ, ಕೃಷ್ಣಾ ನೀನು ನಮ್ಮ ಮುಂದೆ ನರ್ತಿಸಿದರೆ ಮಾತ್ರ ನಿನಗೆ ಈ ಬೆಣ್ಣೆ ಸಿಗುತ್ತದೆ ಎಂದು ಹೇಳುತ್ತಿದ್ದರು. ಕೃಷ್ಣನು ಹಾಡಿ ನರ್ತಿಸಿ ಗೋಪಿಕೆಯರ ಮನರಂಜಿಸುತ್ತಿದ್ದ. ಹಾಗೆ ನರ್ತಿಸಿದ ನಂತರವೇ ಅವನಿಗೆ ಬೆಣ್ಣೆ ಸಿಗುತ್ತಿತ್ತು. ಒಂದು ದಿನ, ಕೃಷ್ಣನ ತಾಯಿ ಯಶೋದೆಯು ಕೋಪಗೊಂಡು, "ನೀನೇಕೆ ಆ ಗೋಪಿಕೆಯರ ಹಿಂದೆ ಬೆಣ್ಣೆಗಾಗಿ ಬೇಡುತ್ತ ದುಂಬಾಲು ಬೀಳುತ್ತೀಯ? ನಿನ್ನ ತಂದೆ ನಂದರಾಜನು ಈ ಗ್ರಾಮದ ಮುಖ್ಯಸ್ಥನಾಗಿದ್ದಾನೆ. ಮನೆಯಲ್ಲಿ ನನಗೆ ಬೇಕಾದಷ್ಟು ಬೆಣ್ಣೆ, ಹಾಲು ಮತ್ತು ಮೊಸರು ಇದೆ. ಆ ಗೋಪಿಕೆಯರೆಲ್ಲ ಬಡವರು, ಅವರಿಗೆ ಸಾಕಷ್ಟು ಬೆಣ್ಣೆಯೂ ಬರುವುದಿಲ್ಲ ಮತ್ತು ಅವರು ನಿನಗೆ ಕೊಟ್ಟು ಉಳಿದ ಬೆಣ್ಣೆಯನ್ನೇ ಮಾರಿ ಜೀವನ ಸಾಗಿಸಬೇಕು. ಅವರಿಗೇಕೆ ನೀವು ತೊಂದರೆ ಕೊಡುತ್ತೀ? ನಮ್ಮ ಮನೆಯಲ್ಲೇ ಬೇಕಾದಷ್ಟು ಬೆಣ್ಣೆಯಿದೆ. ನಿನಗೆ ಸಾಕಾಗುವಷ್ಟು ನೀನು ತಿನ್ನಬಹುದು. ಯಾವುದೇ ಅಡ್ಡಿಗಳಿಲ್ಲದೇ ನೀನು ಬೆಣ್ಣೆಯನ್ನು ತಿನ್ನಬಹುದು. ನೀನು ಬೆಣ್ಣೆಯನ್ನು ಕದ್ದು, ಬೇಡಿ ತಿನ್ನಬೇಕಾಗಿಲ್ಲ" ಎಂದು ಗದರಿದಳು.
ಈ ಸುದ್ದಿಯನ್ನೂ ಓದಿ: Spoorthivani Column: ನಿಸ್ವಾರ್ಥ ಸೇವೆಯೇ ದೇವರ ಸನಿಹಕ್ಕೆ ನಮ್ಮನ್ನು ಕೊಂಡೊಯ್ಯುವ ಸಾಧನ
ಅದಕ್ಕೆ ಕೃಷ್ಣನು, ಹೇ ಮಾತೆಯೇ! ಗೋಪಿಕೆಯರು ಯಾವುದೇ ನಿರೀಕ್ಷೆಗಳಿಲ್ಲದೆ, ಯಾವುದೇ ಬಂಧನಗಳಿಲ್ಲದೇ, ಹೃದಯತುಂಬಿದ ಪ್ರೇಮದಿಂದ ಕೊಡುವ ಆ ಬೆಣ್ಣೆಯನ್ನು ತಿನ್ನುವುದರಲ್ಲಿ ಎಂಥಾ ಆನಂದವಿದೆ! ನನ್ನೊಂದಿಗೆ ತಮ್ಮ ಬೆಣ್ಣೆಯನ್ನು ಹಂಚಿಕೊಳ್ಳುವುದರಲ್ಲಿ ಅವರಿಗೆ ತುಂಬಾ ಆನಂದವಿದೆ. ಅವರು ನನ್ನನ್ನು ತಮ್ಮಲ್ಲಿ ಒಬ್ಬನೆಂದು ತಿಳಿಯುವುದರಿಂದ ನನಗೆ ಅವರ ಸಾಂಗತ್ಯದಲ್ಲಿ ಇರುವುದು ತುಂಬಾ ಸಂತೋಷ ಕೊಡುತ್ತದೆ. ಆದರೆ, ನೀನು ನನಗೆ ಕೊಡುವ ಬೆಣ್ಣೆಯು ಕೇವಲ ಮಮಕಾರ ಮತ್ತು ಮೋಹದಿಂದ ತುಂಬಿರುತ್ತದೆ. ಏಕೆಂದರೆ, ನೀನು ನನ್ನನ್ನು ಮಗನೆಂಬ ಭಾವನೆಯಿಂದ ನೋಡುತ್ತೀ; ಹಾಗಾಗಿ, ಈ ಮನೆಯ ಬೆಣ್ಣೆಯು ಗೋಪಿಕೆಯರು ನನಗೆ ಕೊಡುವ ಬೆಣ್ಣೆಯಷ್ಟು ರುಚಿಯಾಗಿರುವುದಿಲ್ಲ ಎಂದು ಕೃಷ್ಣ ತನ್ನ ತಾಯಿಗೆ ವಿವರಿಸಿದ.
ಪರಮಾತ್ಮನಿಗೆ ನೈವೇದ್ಯ ಅರ್ಪಣೆಯನ್ನು ಮತ್ತೊಂದು ಆಯಾಮದಲ್ಲಿ ಈ ಪ್ರಸಂಗವು ನೋಡುತ್ತದೆ. ನೈವೇದ್ಯ ಅರ್ಪಿಸುವಾಗ ನಮ್ಮಲ್ಲಿ ಸಮರ್ಪಣೆಯ ಮನೋಭಾವ ಇರಬೇಕು ಎನ್ನುವುದನ್ನೂ ಈ ಪ್ರಸಂಗವು ಮನಗಾಣಿಸುತ್ತದೆ.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ವಿಶ್ವದ ನೂರು ದೇಶಗಳಲ್ಲಿ ಅಧ್ಯಾತ್ಮ ತಳಹದಿಯ ಸೇವಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ ಸದ್ಗುರು ಶ್ರೀ ಮಧುಸೂದನ ಸಾಯಿ. 'ವಸುಧೈವ ಕುಟುಂಬಕಂ' (ಒಂದು ಜಗತ್ತು, ಒಂದು ಕುಟುಂಬ) ಎನ್ನುವುದು ಅವರ ತತ್ತ್ವ. ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಹೆಜ್ಜೆಗಳನ್ನು ಅನುಸರಿಸುತ್ತಿರುವ ಅವರು, 'ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಸೇವಾ ಅಭಿಯಾನ' (Sri Madhusudan Sai Global Humanitarian Mission) ಮೂಲಕ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸಾಮಾಜಿಕ ಅಭ್ಯುದಯ ಕ್ಷೇತ್ರಗಳಲ್ಲಿ ನೂರಾರು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ ಸೇರಿದಂತೆ ಸನಾತನ ಧರ್ಮದ ಬಹುತೇಕ ಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಪಾರಂಪರಿಕ ಜ್ಞಾನವನ್ನು ಆಧುನಿಕ ವಿಚಾರಗಳಿಗೆ ಬೆಸೆಯುವ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಮನಮುಟ್ಟುವಂತೆ ಪ್ರತಿಪಾದಿಸುವುದು ಅವರ ವಿಶಿಷ್ಟ ಶೈಲಿ. ಶ್ರೀಮಧುಸೂದನ ಸಾಯಿ ಅವರ ಬದುಕು, ಬರಹ, ಕಾರ್ಯಚಟುವಟಿಕೆ ಕುರಿತ ಹೆಚ್ಚಿನ ಮಾಹಿತಿಗೆ ಹಾಗೂ ನೀವೂ ಸ್ವತಃ ಈ ಮಾನವೀಯ ಅಭಿಯಾನದಲ್ಲಿ ಭಾಗಿಯಾಗಲು https://srimadhusudansai.com ಜಾಲತಾಣ ನೋಡಿ.