Vastu Tips: ಮನೆಯಲ್ಲಿ ಈ ಕೆಲಸಗಳನ್ನು ರಾತ್ರಿ ಮಾಡಲೇಬಾರದು
ಹಿರಿಯರು ಇರುವ ಮನೆಯಲ್ಲಿ ಕೆಲವು ಶಾಸ್ತ್ರ, ಸಂಪ್ರದಾಯಗಳು ಮುಂದುವರಿದುಕೊಂಡು ಬಂದಿರುತ್ತದೆ. ಕಿರಿಯರಿಗೆ ಇದರ ಕಾರಣ ಗೊತ್ತಿಲ್ಲದಿದ್ದರೂ ಹಿರಿಯರ ಮನಸ್ಸಿಗೆ ಬೇಸರ ಮಾಡಬಾರದು ಎನ್ನುವ ಉದ್ದೇಶದಿಂದ ಪಾಲಿಸಿಕೊಂಡು ಬರುತ್ತಾರೆ. ಆದರೆ ಹಿರಿಯರು ಹೇಳುವು ಕೆಲವು ವಿಷಯಗಳಲ್ಲಿ ವೈಜ್ಞಾನಿಕತೆ ಅಡಗಿರುತ್ತದೆ. ಅದರಲ್ಲೂ ಮುಖ್ಯವಾಗಿ ಕೆಲವೊಂದು ಕೆಲಸಗಳನ್ನು ರಾತ್ರಿ ಮಾಡಿದರೆ ಮನೆಯ ಹಿರಿಯರಿಂದ ಬೈಗುಳ ಕೇಳಬೇಕಾಗುತ್ತದೆ. ಇದಕ್ಕೆ ಕಾರಣ ಅವರಿಗೂ ಗೊತ್ತಿದೆಯೋ ಇಲ್ಲವೋ ಆದರೆ ವಾಸ್ತು ಶಾಸ್ತ್ರವು ಕೆಲವೊಂದು ಕೆಲಸಗಳನ್ನು ರಾತ್ರಿ ಮಾಡಬಾರದು ಎನ್ನುತ್ತದೆ. ಅದೇನು ಎನ್ನುವ ವಿವರ ತಿಳಿದುಕೊಳ್ಳಲು ಈ ಲೇಖನ ಓದಿ.


ಬೆಂಗಳೂರು: ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಮನೆಯಲ್ಲಿ (Vastu for home) ಸುಖ, ಶಾಂತಿ, ನೆಮ್ಮದಿ ನೆಲೆಸಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ಲಕ್ಷ್ಮೀ ದೇವಿಯ ಆಶೀರ್ವಾದ ಬೇಕು ಎನ್ನುತ್ತದೆ ನಮ್ಮ ಪುರಾಣ. ವಾಸ್ತು ಶಾಸ್ತ್ರದ (Vastu shastra) ಪ್ರಕಾರ ರಾತ್ರಿಯಲ್ಲಿ ಮಾಡಬಾರದ ಕೆಲವು ಕೆಲಸಗಳಿವೆ. ಇವುಗಳನ್ನು ರಾತ್ರಿ ಮಾಡುವುದರಿಂದ ಸಂಪತ್ತು (Vastu for wealth) ಮತ್ತು ಜ್ಞಾನದ ದೇವತೆ ಲಕ್ಷ್ಮೀಗೆ ಕೋಪ ಬರುತ್ತದೆ ಎನ್ನಲಾಗುತ್ತದೆ. ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಕೆಲವೊಂದು ಅಭ್ಯಾಸಗಳನ್ನು ಮಾಡಬೇಕಾಗುತ್ತದೆ. ಅದರಲ್ಲೂ ತಪ್ಪಿಸಲೇಬೇಕಾದ ಕೆಲವು ಕೆಟ್ಟ ಅಭ್ಯಾಸಗಳಿವೆ. ಯಾಕೆಂದರೆ ಇವು ದೇವಿಗೆ ಕೋಪ ತರಿಸಬಹುದು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳನ್ನು ಉಂಟಾಗಬಹುದು.
ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಗಾಗಿ ರಾತ್ರಿ ಮಾಡಲೇಬಾರದ ಕೆಲವು ಕಾರ್ಯಗಳ ಬಗ್ಗೆ ವಾಸ್ತು ತಜ್ಞರಾದ ಗುರುದೇವ್ ಕಶ್ಯಪ್ ಹೇಳುವುದು ಹೀಗೆ..
ಮಹಿಳೆಯರು ರಾತ್ರಿ ಕೂದಲನ್ನು ಬಿಚ್ಚಿ ಮಲಗಬಾರದು, ಕೂದಲು ತೊಳೆಯಬಾರದು, ಕೂದಲು ಬಾಚಿಕೊಳ್ಳಬಾರದು. ಯಾಕೆಂದರೆ ಸೂರ್ಯಾಸ್ತದ ಅನಂತರ ನಕಾರಾತ್ಮಕ ಶಕ್ತಿಗಳು ನಮ್ಮ ಸುತ್ತಲೂ ಇರುತ್ತವೆ. ಕೂದಲನ್ನು ಬಾಚಿಕೊಳ್ಳುವ ಅಥವಾ ರಾತ್ರಿಯಲ್ಲಿ ಕೂದಲನ್ನು ತೆರೆದಿಡುವುದರಿಂದ ಆ ಶಕ್ತಿಗಳ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ತೆರೆದ ಕೂದಲಿನೊಂದಿಗೆ ಮಲಗುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

ರಾತ್ರಿ ಅಡುಗೆ ಮನೆಯಲ್ಲಿ ತೊಳೆಯದ ಪಾತ್ರೆಗಳನ್ನು ಇಡಬಾರದು. ಕೊಳಕು ಅಡುಗೆ ಪಾತ್ರೆಗಳು ಸಿಂಕ್‌ನಲ್ಲಿ ಇಟ್ಟು ಎಂದಿಗೂ ಮಲಗಲು ಹೋಗಬೇಡಿ. ಒಂದು ವೇಳೆ ತೊಳೆಯಲು ಸಾಧ್ಯವಾಗದಿದ್ದರೆ ಅವುಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ. ರಾತ್ರಿ ಮಲಗುವ ಮೊದಲು ಅಡುಗೆ ಮನೆಯನ್ನು ಸ್ವಚ್ಛವಾಗಿಡಿ. ಅಡುಗೆ ಮನೆ ಕೊಳಕಾಗಿದ್ದರೆ ಬಡತನ ಉಂಟಾಗುತ್ತದೆ. ಎಷ್ಟು ಪಾವತಿ ಮಾಡಿದರೂ ಸಾಲ ಮುಗಿಯುವುದಿಲ್ಲ. ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯನ್ನು ಮನೆಗೆ ಆಹ್ವಾನಿಸಲು ಬಯಸಿದರೆ ಯಾವಾಗಲೂ ನಿಮ್ಮ ಅಡುಗೆ ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡಬೇಕು.
ರಾತ್ರಿ ಬಿಳಿ ವಸ್ತುಗಳಾದ ಹಾಲು, ಮೊಸರು, ಉಪ್ಪು ಮತ್ತು ಸಕ್ಕರೆಯನ್ನು ದಾನ ಮಾಡಬಾರದು. ಅದೇ ರೀತಿ ಅರಿಶಿನ, ಹುಳಿ ಆಹಾರವನ್ನು ಕೂಡ ದಾನ ಮಾಡಬಾರದು. ಇವುಗಳನ್ನು ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ.
ರಾತ್ರಿ ಉಗುರು ಮತ್ತು ಕೂದಲನ್ನು ಕತ್ತರಿಸಬಾರದು. ಉಗುರು ಮತ್ತು ಕೂದಲನ್ನು ಕತ್ತರಿಸುವುದು ದುರದೃಷ್ಟ ಎಂದು ನಂಬಲಾಗಿದೆ. ರಾತ್ರಿ ಈ ಕಾರ್ಯಗಳನ್ನು ಮಾಡುವುದು ಲಕ್ಷ್ಮೀದೇವಿಗೆ ಅಗೌರವ ತೋರಿಸಿದಂತಾಗುತ್ತದೆ. ಇದರಿಂದ ಮನೆಯಲ್ಲಿ ಬಡತನ ಬರುತ್ತದೆ ಎನ್ನಲಾಗುತ್ತದೆ.
ರಾತ್ರಿಯ ಸಮಯದಲ್ಲಿ ಮನೆಯ ಕಸ ಗುಡಿಸುವುದು ಕೂಡ ಸರಿಯಲ್ಲ. ಬೆಳಗ್ಗೆ ಕಸ ಗುಡಿಸುವುದನ್ನು ವಾಸ್ತು ಶಾಸ್ತ್ರದಲ್ಲಿ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಸೂರ್ಯ ಉದಯಿಸುವವರೆಗೆ ಯಾವುದೇ ಸಮಯದಲ್ಲಿ ಪೊರಕೆಯನ್ನು ಬಳಸಬಹುದು. ಆದರೆ ಸೂರ್ಯಾಸ್ತದ ಅನಂತರ ಮನೆಯಲ್ಲಿ ಪೊರಕೆಯನ್ನು ಬಳಸುವುದು ಸರಿಯಲ್ಲ. ತೀರಾ ಅಗತ್ಯವಿದ್ದರೆ ಕಸವನ್ನು ಮನೆಯೊಳಗೆ ಬುಟ್ಟಿಯಲ್ಲಿ ಹಾಕಿಡಿ. ಮರುದಿನ ಅದನ್ನು ಹೊರಗೆ ಹಾಕಿ.
ಇದನ್ನೂ ಓದಿ: Vastu Tips: ಈ ವಸ್ತುಗಳನ್ನು ಪರ್ಸ್‌ನಲ್ಲಿ ಎಂದಿಗೂ ಇಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ ರಾತ್ರಿ ಮನೆ ಗುಡಿಸುವುದರಿಂದ ಲಕ್ಷ್ಮೀ ಮನೆಯಲ್ಲಿನಿಲ್ಲುವುದಿಲ್ಲ. ಕುಟುಂಬ ಸದಸ್ಯರು ಆರೋಗ್ಯ, ಸಂತೋಷ ಮತ್ತು ಶಾಂತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ರಾತ್ರಿ ಬಟ್ಟೆಗಳನ್ನು ಒಗೆಯಬಾರದು. ಸಂಜೆಯ ಸಮಯದಲ್ಲಿ ನಾವು ಬಟ್ಟೆಗಳನ್ನು ಸ್ವಚ್ಛಗೊಳಿಸುವಾಗ ಅದರಲ್ಲಿ ನಕಾರಾತ್ಮಕ ಶಕ್ತಿಯು ಪ್ರವೇಶಿಸುತ್ತದೆ. ಇದು ನಮ್ಮ ದೇಹದ ಮೇಲೆ ಪರಿಣಾಮ ಬೀಳುತ್ತದೆ. ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಿದಾಗ ಬಟ್ಟೆಗಳಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಅವುಗಳಲ್ಲಿ ಸಕಾರಾತ್ಮಕ ಶಕ್ತಿ ತುಂಬಿಕೊಳ್ಳುತ್ತದೆ ಎನ್ನುತ್ತಾರೆ ಕಶ್ಯಪ್.