Navratri Dandiya Dance: ದಾಂಡಿಯಾ ಆಡುವಾಗ ಆಹಾರ ಹೇಗಿರಬೇಕು?
Navratri Dandiya Dance: ನವರಾತ್ರಿ ಉತ್ಸವದ ಆರಂಭದ ದಿನದಿಂದಲೇ ಎಲ್ಲೆಡೆ ದಾಂಡಿಯಾ ನೃತ್ಯದ ಗದ್ದಲ. ಆದರೆ ನೃತ್ಯದ ನಡುವೆಯೇ ಎದೆನೋವು, ಉಸಿರುಗಟ್ಟುವಂಥ ಸಮಸ್ಯೆಗಳನ್ನು ಹೊತ್ತು ವೈದ್ಯ ರಲ್ಲಿಗೆ ಹೋದವರು ನೂರಾರು ಮಂದಿ. ಅನಾರೋಗ್ಯಕರ ಆಹಾರ ಕ್ರಮ ಮತ್ತು ದೈಹಿಕ ಶ್ರಮವಿಲ್ಲದ ಕಾರಣಕ್ಕಾಗಿ ಹೃದಯ ಚೀರುತ್ತಿರುವುದು ಸ್ಪಷ್ಟ. ಅದರಲ್ಲೂ ಮುಖ್ಯವಾಗಿ ದಾಂಡಿಯ ಆಡುವ ಸಮಯದಲ್ಲಿ, ಆಹಾರದ ಶಿಸ್ತು ಹೇಗಿರಬೇಕು?

-

ನವದೆಹಲಿ: ನವರಾತ್ರಿ ಉತ್ಸವದ ಆರಂಭದ ದಿನದಿಂದಲೇ ಎಲ್ಲೆಡೆ ದಾಂಡಿಯಾ (Dandiya) ನೃತ್ಯದ ಗದ್ದಲ. ಆದರೆ ನೃತ್ಯದ ನಡುವೆಯೇ ಎದೆನೋವು, ಉಸಿರುಗಟ್ಟುವಂಥ ಸಮಸ್ಯೆಗಳನ್ನು ಹೊತ್ತು ವೈದ್ಯರಲ್ಲಿಗೆ ಹೋದವರು ನೂರಾರು ಮಂದಿ. ಅನಾರೋಗ್ಯಕರ ಆಹಾರ ಕ್ರಮ ಮತ್ತು ದೈಹಿಕ ಶ್ರಮವಿಲ್ಲದ ಕಾರಣಕ್ಕಾಗಿ ಹೃದಯ ಚೀರುತ್ತಿರುವುದು ಸ್ಪಷ್ಟ. ಅಂದರೆ, ದೇಹಕ್ಕೆ ಶ್ರಮದ ಅಭ್ಯಾಸವಿಲ್ಲ; ಆಹಾರದಲ್ಲಿ ಶಿಸ್ತಿಗೆ ಅವಕಾಶವಿಲ್ಲ! ಹಾಗಾದರೆ ನವರಾತ್ರಿ ಮತ್ತು ಉಳಿದೆಲ್ಲ ದಿನಗಳಲ್ಲಿ, ಅದರಲ್ಲೂ ಮುಖ್ಯವಾಗಿ ದಾಂಡಿಯ ಆಡುವ ಸಮಯದಲ್ಲಿ, ಆಹಾರದ ಶಿಸ್ತು ಹೇಗಿರಬೇಕು?
ಕೊಬ್ಬು ಹೆಚ್ಚಿರುವ ಆಹಾರಗಳು: ಕರಿದ ತಿಂಡಿಗಳು, ಬೆಣ್ಣೆ- ತುಪ್ಪ ಜಿನುಗುತ್ತಿರುವ ಆಹಾರ ಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಿಂದ ದೇಹದಲ್ಲಿ ಕೊಲೆ ಸ್ಟ್ರಾಲ್ ಪ್ರಮಾಣ ಏರಿಕೆಯಾಗಿ, ರಕ್ತನಾಳಗಳು ಮುಚ್ಚಿಕೊಳ್ಳುತ್ತವೆ. ಹೃದಯಾಘಾತಕ್ಕೆ ಮೂಲ ಕಾರಣಗಳಲ್ಲಿ ಇದೂ ಹೌದು. ಹಾಗಾಗಿ ತಿನ್ನುವ ಆಹಾರದಲ್ಲಿನ ಕೊಬ್ಬಿನಂಶದ ಬಗ್ಗೆ ಗಮನಕೊಡಿ. ಹಬ್ಬದ ನೆವ ಮುಂದಿಟ್ಟುಕೊಂಡು ಅತಿಯಾದ ಜಿಡ್ಡಿನ ಆಹಾರ ತಿನ್ನುವ ಬದಲು, ಕಡಿಮೆ ಕೊಬ್ಬಿನ ಆರೋಗ್ಯಕರ ಆಯ್ಕೆಗಳತ್ತ ಕೈ ಚಾಚಿ.
ಸಕ್ಕರೆ-ಬೆಲ್ಲ ಅತಿಯಾಗಿ ಸಲ್ಲ: ಸಕ್ಕರೆಗಿಂತ ಬೆಲ್ಲ ಒಳ್ಳೆಯದು ಎಂಬ ವಾದ ಇರುವುದು ಹೌದಾ ದರೂ, ಬೆಲ್ಲವನ್ನು ಮನಸೋಇಚ್ಛೆ ತಿನ್ನಬಹುದು ಎಂಬುದು ಇದರರ್ಥವಲ್ಲ. ಸಕ್ಕರೆಯನ್ನಾಗಲೀ, ಬೆಲ್ಲವನ್ನಾಗಲೀ ಸಿಕ್ಕಾಪಟ್ಟೆ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಧಿಡೀರ್ ಏರಿಳಿಕೆ ಯಾಗಬಹುದು. ಇದರಿಂದ ತಲೆ ಸುತ್ತಿದಂತಾಗುವುದು, ಸುಸ್ತು, ಆಯಾಸ ಮುಂತಾದವು ಬೆನ್ನು ಹತ್ತುತ್ತವೆ. ಅದರಲ್ಲೂ ದಾಂಡಿಯಾದಂಥ ದೈಹಿಕ ಶ್ರಮದ ಹೊತ್ತಿನಲ್ಲಿ ಆರೋಗ್ಯ ಏರು ಪೇರಾಗುವಂತೆ ಮಾಡುತ್ತವೆ.
ಮಸಾಲೆಯುಕ್ತ ಆಹಾರಗಳು: ಬಾಯಿಗೆ ರುಚಿ ಎಂಬ ಕಾರಣಕ್ಕಾಗಿ ಮಸಾಲೆಯುಕ್ತ ಆಹಾರವನ್ನು ಅತಿಯಾಗಿ ಸೇವಿಸಿದರೆ ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ. ತೀಕ್ಷ್ಣ ಖಾರ, ಜೊತೆಗೆ ಗಡದ್ದಾಗಿ ಗರಂ ಮಸಾಲೆ ಸೇರಿದ ಅಡುಗೆಗಳು ಹೊಟ್ಟೆಯಲ್ಲಿ ಆಸಿಡಿಟಿ ಹೆಚ್ಚಿಸುತ್ತವೆ. ಇದರಿಂದ ರಕ್ತದೊತ್ತಡವೂ ಹೆಚ್ಚುತ್ತದೆ. ದಾಂಡಿಯಾ ಆಡುವುದಕ್ಕೆ ಮುನ್ನ ಇಂಥ ಆಹಾರಗಳನ್ನು ಸೇವಿಸುವುದರಿಂದ ಹೊಟ್ಟೆಯುರಿ, ಎದೆಯುರಿಗಳು ಹೆಚ್ಚಾಗುತ್ತವೆ.
ಭೂರಿ ಭೋಜನ: ಅತಿಯಾಗಿ ತುಂಬಿದ ಹೊಟ್ಟೆಯನ್ನು ಹೊತ್ತು ಕುಣಿಯುವುದಕ್ಕೆ ಸಾಧ್ಯ ವಾಗದು. ಅದರಲ್ಲೂ ಜಿಡ್ಡು ತುಂಬಿದ, ಸಕ್ಕರೆಭರಿತ ಆಹಾರಗಳು ಜೀರ್ಣವಾಗಲು ಹೆಚ್ಚು ಹೊತ್ತು ಬೇಕು. ಅವುಗಳನ್ನು ಮಿತಿಮೀರಿ ತಿಂದರಂತೂ ಹೊಟ್ಟೆಯ ಒತ್ತಡವು ಹೃದಯದ ಮೇಲೂ ಒತ್ತಡ ಹೆಚ್ಚಿಸುತ್ತದೆ. ಇಷ್ಟರ ಮೇಲೆ ಕುಣಿದಾಡುವುದೆಂದರೆ…? ಊಟದ ಪ್ರಮಾಣ ಮಿತಿಯಲ್ಲಿರಲಿ.
ಕೆಫೇನ್ ಮತ್ತು ಎನರ್ಜಿ ಡ್ರಿಂಕ್‌ಗಳು: ಕೆಫೇನ್ ಸೇವನೆ ಹೆಚ್ಚಾದರೆ ಹೃದಯದ ಬಡಿತ ಮತ್ತು ರಕ್ತದೊತ್ತಡಗಳು ಹೆಚ್ಚಾಗುತ್ತವೆ. ದೇಹದ ಶಕ್ತಿಯನ್ನು ಕೆಫೇನ್ ತಾತ್ಕಾಲಿಕವಾಗಿ ಹೆಚ್ಚಿಸಿದರೂ, ಇದರಿಂದ ಅಡ್ಡಪರಿಣಾಮಗಳು ತಪ್ಪಿದ್ದಲ್ಲ. ಹಾಗಾಗಿ ಗಾರ್ಬಾ ಅಥವಾ ದಾಂಡಿಯಾ ಆಡುವುದಕ್ಕೆ ಮುನ್ನ ಕಾಫಿ, ಚಹಾ, ಎನರ್ಜಿ ಡ್ರಿಂಕ್‌ಗಳು, ಸೋಡಾ ಮುಂತಾದವನ್ನು ಸೇವಿಸದಿರಿ. ಬದಲಿಗೆ ಚೆನ್ನಾಗಿ ನೀರು ಕುಡಿಯಿರಿ. ಆಯಾಸವಾದರೆ ಎಳನೀರು, ಹಣ್ಣಿನ ರಸಗಳು ಸೂಕ್ತ.
ಇದನ್ನು ಓದಿ:Bones Health: ನಮ್ಮ ಮೂಳೆಗಳು ಬಲವಾಗಿರಲು ಏನೇನು ಬೇಕು ಗೊತ್ತೇ?
ಆಲ್ಕೋಹಾಲ್: ದೇಹ ಮತ್ತು ಮನಸ್ಸಿನ ಸ್ಥಿಮಿತವನ್ನೇ ತಪ್ಪಿಸುವ ಇದನ್ನು ಕುಡಿದು ನರ್ತಿಸುವ ಕಲ್ಪನೆಯೇ ಹಾಸ್ಯಾಸ್ಪದ. ಮಾತ್ರವಲ್ಲ, ಮದಿರೆಯು ದೇಹವನ್ನು ನಿರ್ಜಲೀಕರಣದತ್ತ ದೂಡುತ್ತದೆ. ಹಾಗಾಗಿ ದಾಂಡಿಯಾ ಆಡುವ ಉದ್ದೇಶವಿದ್ದರೆ ಆಲ್ಕೋಹಾಲ್ ಸೇವನೆ ಖಂಡಿತಕ್ಕೂ ಸೂಕ್ತವಲ್ಲ.
ಉಪ್ಪು: ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಸುಳ್ಳಲ್ಲ. ಹೆಚ್ಚಿನ ಉಪ್ಪಿನಂಶವು ಅಧಿಕ ನೀರು ಕುಡಿಸಿ, ದೇಹದಲ್ಲಿ ನೀರು ಉಳಿಯುವಂತೆ ಮಾಡುತ್ತದೆ. ಇದರಿಂದ ತೊಂದರೆಗಳು ತಪ್ಪಿದ್ದಲ್ಲ. ಜೊತೆಗೆ ರಕ್ತದೊತ್ತಡವನ್ನೂ ಏರಿಸಿ, ಹೃದಯಕ್ಕೆ ಆಪತ್ತು ತರುತ್ತದೆ. ಸಂಸ್ಕರಿತ ಆಹಾರಗಳು, ಚಿಪ್ಸ್, ಕುರ್ಕುರೆ, ಸಮೋಸಾ ಮುಂತಾದವನ್ನು ದೂರ ಇಟ್ಟಷ್ಟೂ ಕ್ಷೇಮವಾಗಿ ದಾಂಡಿಯಾ ಆಡಬಹುದು.
ವ್ಯಾಯಾಮ ತಪ್ಪಿಸಬೇಡಿ: ಇವೆಲ್ಲವುಗಳ ಜೊತೆಗೆ, ಗೋಡೆಯನ್ನೇ ಹಾರದವ ಗುಡ್ಡವನ್ನು ಹಾರಲಾಗದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಿತ್ಯವೂ ವ್ಯಾಯಾಮ ಜಾರಿಯಲ್ಲಿದ್ದರೆ ಇಂಥ ನೃತ್ಯಗಳಲ್ಲಿ ಪಾಲ್ಗೊಳ್ಳುವಾಗ ದೇಹ ಸಿಕ್ಕಾಪಟ್ಟೆ ದಣಿಯುವುದಿಲ್ಲ. ಹೃದಯ ಕ್ಷೇಮವಾಗಿಯೇ ಇರುತ್ತದೆ. ಆದರೆ ದೇಹಶ್ರಮವೇ ಇಲ್ಲದವರು ಒಂದೇಸಮ ಕುಣಿದಾಡಿದರೆ ಆರೋಗ್ಯ ಏರುಪೇರಾಗುವುದರಲ್ಲಿ ಅನುಮಾನವಿಲ್ಲ.