ರಾಜಕಾರಣಿಗಳಲ್ಲದವರೂ ರಾಜ್ಯಪಾಲರಾಗಲಿ
ರಾಜಕಾರಣಿಗಳಲ್ಲದವರೂ ರಾಜ್ಯಪಾಲರಾಗಲಿ
-
Vishwavani News
Nov 10, 2022 8:46 AM
ಬಿಜೆಪಿಯೇತರ ಸರಕಾರ ಇರುವ ದಕ್ಷಿಣದ ರಾಜ್ಯಗಳಾದ ಕೇರಳ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಸರಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ನಡೆಯುತ್ತಿದೆ. ಈ ಮೂರೂ ರಾಜ್ಯಗಳಲ್ಲಿ ಆಡಳಿತರೂಢ ಪಕ್ಷಗಳು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.
ತಮಿಳುನಾಡಿನ ಡಿಎಂಕೆ ಸರಕಾರವು ಒಂದು ಹಂತಕ್ಕೆ ಮುಂದಕ್ಕೆ ಹೋಗಿ ಅಲ್ಲಿನ ರಾಜ್ಯಪಾಲ ಆರ್.ಎನ್.ರವಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಆಗ್ರಹವನ್ನು ಗಟ್ಟಿಗೊಳಿಸಿದೆ. ರವಿ ಅವರು, ಸಾಂವಿಧಾನಿಕವಾಗಿ ತಮಗೆ ಇರುವ ನಿಬಂಧನೆಗಳನ್ನು ಮೀರಿ ವರ್ತಿಸುತ್ತಿದ್ದಾರೆ ಎಂಬುದು ಡಿಎಂಕೆ ಸರಕಾರದ ಆರೋಪ. ರಾಜ್ಯಪಾಲರ ವಿರುದ್ಧ ಈ ತರದ
ಆರೋಪವು ಈ ಹಿಂದೆಯೂ ಅನೇಕ ಬಾರಿ ಬೇರೆ ಬೇರೆ ರಾಜ್ಯಗಳಲ್ಲಿ ಕೇಳಿಬಂದಿದೆ.
ಪುದುಚೇರಿಯಲ್ಲಿ ಕಿರಣ್ ಬೇಡಿ, ಮಹಾರಾಷ್ಟ್ರದಲ್ಲಿ ಬಿ.ಎಸ್. ಕೋಶಿಯಾರಿ, ದೆಹಲಿಯಲ್ಲಿ ಅನಿಲ್ ಬೈಜಲ್ ಮತ್ತು ವಿ.ಕೆ.ಸಕ್ಸೇನಾ, ಪಶ್ಚಿಮ ಬಂಗಾಳದ ಹಿಂದಿನ ರಾಜ್ಯಪಾಲ ಜಗದೀಪ್ ಧನಕರ್ ತೆಲಂಗಾಣದಲ್ಲಿ ತಮಿಳಿಸಾಯಿ ಸೌಂದರರಾಜನ್ ವಿರುದ್ಧವೂ ಚುನಾಯಿತ ಸರಕಾರಕ್ಕೆ ಕಿರಿಕಿರಿ ಉಂಟುಮಾಡುವ ರಾಜ್ಯಪಾಲರು ಎಂಬ ಆರೋಪ ಕೇಳಿ ಬಂದಿತ್ತು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚುನಾಯಿತ ಸರಕಾರದ ಆಗು ಹೋಗುಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಕಡಿಮೆ ಯಾಗಿತ್ತು. ಇದೀಗ ಮತ್ತೆ ದಕ್ಷಿಣದ ರಾಜ್ಯಗಳಲ್ಲಿ ಈ ಅಪಸ್ವರ ಕೇಳಿಬರುತ್ತಿದೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳು ಗುರುತಿಸಬಹುದು. ಒಂದು, ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಹಲವರು ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದ ಪಕ್ಷದ ಮೆಚ್ಚುಗೆ ಗಳಿಸಲು, ರಾಜ್ಯ ಸರಕಾರದ ಜತೆ ಸಂಘರ್ಷಕ್ಕಿಳಿಯುವುದು, ಇನ್ನೊಂದು, ಸಂವಿಧಾನವು ರಾಜ್ಯಪಾಲರ ಅಧಿಕಾರ ವ್ಯಾಪ್ತಿಯನ್ನು ನಿಖರವಾಗಿ ಗುರುತಿಸಿಲ್ಲದಿರುವುದು.
ಸಕ್ರಿಯ ರಾಜಕಾರಣಿಗಳೇ ರಾಜ್ಯಪಾಲರಾಗಿ ನೇಮಕ ಆಗುತ್ತಿರುವುದರಿಂದ ಇಂತಹ ಸಂಘರ್ಷಗಳು ಮುಂದುವರಿಯುತ್ತಿವೆ ಎನ್ನಬಹುದು. ರಾಜಕಾರಣಿಗಳು ರಾಜ್ಯ ಪಾಲರಾಗಿ ನೇಮಕವಾದರೆ ತಮ್ಮ ರಾಜಕೀಯ ನಾಯಕರನ್ನು ಖುಷಿ ಪಡಿಸಲು ಹೆಚ್ಚು ಗಮನ ನೀಡುತ್ತಾರೆ. ಆದ್ದರಿಂದ ರಾಜ್ಯಪಾಲರ ಅಧಿಕಾರ ಏನು ಹಾಗೂ ಅವರ ಹೊಣೆಗಾರಿಕೆಗಳು ಯಾವವರು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕಾದ ಅಗತ್ಯ ಇದೆ. ಆಗ ಅವರ ಅಧಿಕಾರವು ದುರ್ಬಳಕೆ ಆಗುವುದಿಲ್ಲ.
ರಾಜಕಾರಣಿಗಳಲ್ಲದವರನ್ನು ರಾಜ್ಯಪಾಲರಾಗಿ ನೇಮಕ ಮಾಡಿದರೆ ನಿಷ್ಪಕ್ಷಪಾತಿ ಆಗಿರಲು ಸಾಧ್ಯವಿದೆ.