Vishwavani Editorial: ಪೊರೆವ ಪ್ರಕೃತಿಯೇ ಮುನಿದರೆ...
ಕಾಡ್ಗಿಚ್ಚು, ಚಂಡಮಾರುತ/ಸುನಾಮಿ, ಕುಂಭದ್ರೋಣ ಮಳೆ, ಮಹಾಪ್ರವಾಹ, ಗುಡ್ಡಗಳ ಕುಸಿತ ಮುಂತಾದ ಪ್ರಕೃತಿ ವಿಕೋಪಗಳನ್ನು ಹುಲುಮಾನವರು ತಡೆಯುವುದಕ್ಕಂತೂ ಸಾಧ್ಯವಿಲ್ಲ; ಆದರೆ ಅವು ಘಟಿಸುವುದಕ್ಕೆ ಮನುಷ್ಯರ ಒಂದಿಷ್ಟು ತಪ್ಪುಹೆಜ್ಜೆಗಳೂ ಕಾರಣವಾಗಿದ್ದರೆ, ಅಂಥ ತಪ್ಪು ಗಳನ್ನು ತಿದ್ದಿಕೊಳ್ಳುವುದಕ್ಕೆ ಇನ್ನಾದರೂ ನಾವು ಕಟಿಬದ್ಧರಾಗಬೇಕಿದೆ.
-
ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಕಂಡುಬಂದಿರುವ ‘ದಿತ್ವಾ’ ಚಂಡಮಾರುತದ ರುದ್ರನರ್ತನವು ಜಗದ ಜನರನ್ನು ಕಂಗೆಡಿಸಿದೆ. ಈ ಚಂಡಮಾರುತದಿಂದಾಗಿ ಕಳೆದ ಕೆಲ ದಿನಗಳಿಂದ ಶ್ರೀಲಂಕಾದಲ್ಲಿ ತಲೆದೋರಿರುವ ಅಸ್ತವ್ಯಸ್ತತೆಯನ್ನು ಕಂಡಾಗ ನಿಜಕ್ಕೂ ತಲ್ಲಣವಾಗುತ್ತದೆ. 330ಕ್ಕೂ ಹೆಚ್ಚು ಜನರ ಸಾವಿಗೆ, ೩೭೦ ಜನರ ನಾಪತ್ತೆಗೆ ಕಾರಣವಾಗಿರುವ ಈ ಪ್ರಕೃತಿ ವಿಕೋಪವು ಒಂಬತ್ತೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಬಿಟ್ಟಿದೆ.
ಸಂತ್ರಸ್ತರ ನೆರವಿಗಾಗಿ ಸಾಕಷ್ಟು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆಯಾದರೂ, ಈ ವಿಕೋಪದ ನಂತರದ ಸಾಮಾಜಿಕ ಮತ್ತು ಆರ್ಥಿಕ ಅವ್ಯವಸ್ಥ ಸ್ಥಿತಿಯನ್ನು ಶ್ರೀಲಂಕಾ ಹೇಗೆ ಸಂಭಾಳಿಸಲಿದೆ? ಎಂಬುದೇ ಪ್ರಶ್ನೆಯಾಗಿದೆ.
ಇದನ್ನೂ ಓದಿ: Cyclone Ditwah: ಜಗತ್ತಿನೆದುರು ಮತ್ತೆ ಜೋಕರ್ ಆದ ಪಾಕ್; ಎಕ್ಸ್‌ಪೈರಿ ಆದ ಪರಿಹಾರ ಸಾಮಗ್ರಿ ಕಳುಹಿಸಿ ಶ್ರೀಲಂಕಾಗೆ ಅವಮಾನ
ಕೆಲ ವರ್ಷಗಳ ಹಿಂದೆ ‘ಸುನಾಮಿ’ ಅಪ್ಪಳಿಸಿದಾಗ ಬೃಹತ್ ಕಟ್ಟಡಗಳು ತರಗೆಲೆಗಳಂತೆ ಉದುರಿದ, ವಾಹನಗಳು ಆಟಿಕೆಗಳಂತೆ ತೇಲಿ ಹೋದ ದೃಶ್ಯ ಗಳನ್ನು ಬಹುತೇಕರು ಕಂಡಿದ್ದರು; ಶ್ರೀಲಂಕಾ ದಲ್ಲಿ ಸಂಭವಿಸಿರುವ ಈ ಪ್ರಕೃತಿ ವಿಕೋಪದಲ್ಲಿ ಅಂಥದೇ ದೃಶ್ಯಗಳ ಪುನರಾವರ್ತನೆಯಾಗಿರು ವುದು ನಾವೆಲ್ಲರೂ ಗಂಭೀರವಾಗಿ ಆಲೋಚನೆಗೆ ತೊಡಗಿಸಿಕೊಳ್ಳಬೇಕಿರುವುದರ ಅನಿವಾರ್ಯತೆ ಯನ್ನು ಒತ್ತಿ ಹೇಳುತ್ತದೆ.
ಕಾಡ್ಗಿಚ್ಚು, ಚಂಡಮಾರುತ/ಸುನಾಮಿ, ಕುಂಭದ್ರೋಣ ಮಳೆ, ಮಹಾಪ್ರವಾಹ, ಗುಡ್ಡಗಳ ಕುಸಿತ ಮುಂತಾದ ಪ್ರಕೃತಿ ವಿಕೋಪಗಳನ್ನು ಹುಲುಮಾನವರು ತಡೆಯುವುದಕ್ಕಂತೂ ಸಾಧ್ಯವಿಲ್ಲ; ಆದರೆ ಅವು ಘಟಿಸುವುದಕ್ಕೆ ಮನುಷ್ಯರ ಒಂದಿಷ್ಟು ತಪ್ಪುಹೆಜ್ಜೆಗಳೂ ಕಾರಣವಾಗಿದ್ದರೆ, ಅಂಥ ತಪ್ಪು ಗಳನ್ನು ತಿದ್ದಿಕೊಳ್ಳುವುದಕ್ಕೆ ಇನ್ನಾದರೂ ನಾವು ಕಟಿಬದ್ಧರಾಗಬೇಕಿದೆ.
ಬೆಟ್ಟ-ಗುಡ್ಡ, ನದಿ-ತೊರೆ- ಜಲಪಾತ, ಅರಣ್ಯಗಳನ್ನು ಅವುಗಳ ಪಾಡಿಗೆ ಅವು ಇರುವಂತೆ ಬಿಡುವ ಬದಲು, ಅಭಿವೃದ್ಧಿ ಚಟುವಟಿಕೆಗಳ ಹಣೆಪಟ್ಟಿಯಡಿ ಅವುಗಳ ಸಹಜ ಸ್ವರೂಪಕ್ಕೆ ಮನುಷ್ಯರು ಕೊಡಲಿಯೇಟು ಹಾಕಲು ಮುಂದಾಗುವುದು ಕೂಡ ಪ್ರಕೃತಿಯು ಮನುಕುಲದ ಮೇಲೆ ಮುನಿಯು ವುದಕ್ಕಿರುವ ಒಂದು ಕಾರಣವಾಗುತ್ತದೆ.
ಹೀಗಾಗಿ, ವಿವೇಚನೆಯ ನಡೆ ಯಾವತ್ತಿಗೂ ಕ್ಷೇಮ. ಸಂಬಂಧಪಟ್ಟವರು ಅದನ್ನು ಅರ್ಥಮಾಡಿ ಕೊಳ್ಳಬೇಕಷ್ಟೇ...