ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಈ ವಿಷಯದಲ್ಲೂ ರಾಜಕೀಯವೇ?!

ಆಳುಗರು ಮಾಡಿದ್ದನ್ನೆಲ್ಲಾ ಅವರ ರಾಜಕೀಯ ಎದುರಾಳಿಗಳು ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕು ಎಂದೇನಿಲ್ಲ; ಆಳುಗರು ಹಾದಿತಪ್ಪದಂತೆ ಕಾಲಾನುಕಾಲಕ್ಕೆ ಅವರ ಕಿವಿ ಹಿಂಡಬೇಕಾದ್ದು ಇಂಥ ಎದುರಾಳಿಗಳ/ವಿಪಕ್ಷಗಳ ಕರ್ತವ್ಯವೂ ಹೌದು, ಅದು ಪ್ರಜಾಪ್ರಭುತ್ವದ ಸೊಬಗೂ ಹೌದು. ಆದರೆ ವಿರೋಧಿಸುವ ಅಥವಾ ಅಪಸ್ವರವೆತ್ತುವ ಭರದಲ್ಲಿ ವಿವೇಚನೆಯನ್ನು ಮರೆತರೆ ಹೇಗೆ?

ಈ ವಿಷಯದಲ್ಲೂ ರಾಜಕೀಯವೇ?!

Profile Ashok Nayak Apr 12, 2025 5:03 AM

ಇದು ಹುಚ್ಚೋ, ಬೆಪ್ಪೋ, ಶಿವಲೀಲೆಯೋ ಆ ದೇವರೇ ಹೇಳಬೇಕು. 2008ರ ಮುಂಬೈ ದಾಳಿಯ ಸಂಚುಗಾರರಲ್ಲಿ ಒಬ್ಬನಾದ ಪಾಕಿಸ್ತಾನ ಮೂಲದ ತಹಾವುರ್ ರಾಣಾನನ್ನು ಅಮೆರಿಕದ ತೆಕ್ಕೆ ಯಿಂದ ಭಾರತಕ್ಕೆ ಕರೆ ತಂದಿದ್ದಕ್ಕೆ ಕೇಂದ್ರ ಸರಕಾರವನ್ನು ಜನರೆಲ್ಲರೂ ಶ್ಲಾಸುತ್ತಿದ್ದಾರೆ. ಆದರೆ ‘ವಿರೋಧಕ್ಕಾಗಿ ವಿರೋಧ’ ಎಂಬ ಗ್ರಹಿಕೆಗೇ ಜೋತು ಬಿದ್ದಿರುವ ಕೆಲ ರಾಜಕೀಯ ಎದುರಾಳಿಗಳು ‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು’ ಎಂಬ ಜಾಣನುಡಿಗೆ ಪುಷ್ಟಿ ನೀಡುವ ರೀತಿಯಲ್ಲಿ ನಡೆದು ಕೊಳ್ಳುತ್ತಿರುವುದಕ್ಕೆ ಏನನ್ನುವುದು?! ಹಿರಿಯ ಕಾಂಗ್ರೆಸ್ಸಿಗ ಪಿ.ಚಿದಂಬರಂ ಅವರು, “ರಾಣಾನನ್ನು ಕರೆತಂದ ಶ್ರೇಯವನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ಸರಕಾರ ತರಾತುರಿ ಮಾಡುತ್ತಿದೆ; ವಾಸ್ತವವಾಗಿ, 2004-2014ರ ಅವಧಿಯಲ್ಲಿ ದೇಶವನ್ನಾಳುತ್ತಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಈ ಶ್ರೇಯ ಸಲ್ಲಬೇಕಿದೆ" ಎಂಬ ಆಣಿಮುತ್ತುಗಳನ್ನು ಉದುರಿಸಿರುವುದು ಇದಕ್ಕೆ ಸಾಕ್ಷಿ.

ಇದನ್ನೂ ಓದಿ: Vishwavani Editorial: ಭಾರತದ ರಾಜತಾಂತ್ರಿಕ ಗೆಲುವು

ಮತ್ತೊಂದೆಡೆ, ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ವಿಜಯ್ ವಡೆಟ್ಟಿವಾರ್ ಅವರು, “ರಾಣಾನನ್ನು ಎಳೆತಂದಿರುವುದು ದೊಡ್ಡ ವಿಷಯವಲ್ಲ, ದಾವೂದ್ ಇಬ್ರಾಹಿಂನನ್ನು ಕರೆತಂದಿದ್ದರೆ ಅದು ಬಿಜೆಪಿಯ ದೊಡ್ಡ ಸಾಧನೆಯಾಗುತ್ತಿತ್ತು" ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.

ಆಳುಗರು ಮಾಡಿದ್ದನ್ನೆಲ್ಲಾ ಅವರ ರಾಜಕೀಯ ಎದುರಾಳಿಗಳು ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕು ಎಂದೇನಿಲ್ಲ; ಆಳುಗರು ಹಾದಿತಪ್ಪದಂತೆ ಕಾಲಾನುಕಾಲಕ್ಕೆ ಅವರ ಕಿವಿ ಹಿಂಡಬೇಕಾದ್ದು ಇಂಥ ಎದುರಾಳಿಗಳ/ವಿಪಕ್ಷಗಳ ಕರ್ತವ್ಯವೂ ಹೌದು, ಅದು ಪ್ರಜಾಪ್ರಭುತ್ವದ ಸೊಬಗೂ ಹೌದು. ಆದರೆ ವಿರೋಧಿಸುವ ಅಥವಾ ಅಪಸ್ವರವೆತ್ತುವ ಭರದಲ್ಲಿ ವಿವೇಚನೆಯನ್ನು ಮರೆತರೆ ಹೇಗೆ? ಚಿದಂಬರಂರಂಥ ಅನುಭವಿ ರಾಜಕಾರಣಿಯೂ ಹೀಗೆ ಬಾಯಲ್ಲಿ ‘ಹುರಿಗಾಳು’ ಮೆಲುಕು ಹಾಕಿರುವುದನ್ನು ಪ್ರಜ್ಞಾವಂತರಾರೂ ಮೆಚ್ಚಲಿಕ್ಕಿಲ್ಲ.

ರಾಜಕಾರಣದ ಎದುರು ಪಾಳಯದಲ್ಲಿದ್ದರೂ ಇಂದಿರಾ ಗಾಂಧಿಯವರ ಧೈರ್ಯವನ್ನು ಕಂಡು ಅವರನ್ನು ‘ದುರ್ಗೆ’ ಎಂದು ಶ್ಲಾಸಿದ ಬಿಜೆಪಿಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಯವರನ್ನು ಇಂಥ ಸಂದರ್ಭಗಳಲ್ಲಿ ಮೇಲ್ಪಂಕ್ತಿಯಾಗಿ ಸ್ವೀಕರಿಸಬೇಕು. ಇಲ್ಲವಾದಲ್ಲಿ, ರಾಜಕಾರಣಿ ಗಳ ಯಾವ ಮಾತನ್ನೂ ಜನರು ಗಂಭೀರವಾಗಿ ಪರಿಗಣಿಸದಂಥ ಪರಿಸ್ಥಿತಿ ಎದುರಾಗ ಬಹುದು!

Live News

No live news added yet