ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಪ್ರತಿಭಟನೆಯನ್ನು ಪರಿಗಣಿಸಲಿ

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿತ ಕಾಂಗ್ರೆಸ್ ನಾಯಕರು ಕೂಡ ಪ್ರತಿಭಟನೆಗೆ ಇಳಿದಿದ್ದಾರೆ. ದೇಶದ ಇತರ ನಗರಗಳಿಗೂ ಈ ಪ್ರತಿಭಟನೆ ಹರಡುವ ಸೂಚನೆ ಇದೆ. ಸಿಜೆಪಿಯನ್ನು ‘ವ್ಯಂಗ್ಯಪೂರ್ವಕವಾಗಿ ಹುಟ್ಟಿಕೊಂಡ ಒಂದು ಸಂಘಟನೆ’ ಎಂದು ಹಗುರವಾಗಿ ಪರಿಗಣಿಸಿದ್ದೇ ಸರಿಯಲ್ಲ. ಸಿಜೆಪಿಯ ಬೇಡಿಕೆಯೂ ನ್ಯಾಯಯುತವಾಗಿಯೇ ಇದೆ.

Vishwavani Editorial: ಪ್ರತಿಭಟನೆಯನ್ನು ಪರಿಗಣಿಸಲಿ

-

Profile
Ashok Nayak Jul 22, 2026 6:00 AM

ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆ ಹಾಗೂ ಅದು ಸೃಷ್ಟಿಸಿದ ಕೋಲಾಹಲ, ಮತ್ತದು ದೇಶದ ಸಾರ್ವಜನಿಕ ಚಿತ್ತಭಿತ್ತಿಯ ಮೇಲೆ ಮಾಡುತ್ತಿರುವ ಪರಿಣಾಮ ಅಧ್ಯಯನ ಯೋಗ್ಯವಾಗಿದೆ. ನೀಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರ, ಪ್ರಶ್ನೆ ಪತ್ರಿಕೆ ಸೋರಿಕೆ, ಅದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲಾದ ದುಷ್ಪರಿಣಾಮ, ಹತ್ತಾರು ವಿದ್ಯಾರ್ಥಿಗಳ ಆತ್ಮಹತ್ಯೆ- ಇದೆಲ್ಲದರ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಸತ್ಯಾಗ್ರಹ ನಡೆಸಿತ್ತು. ಅದಕ್ಕೆ ಲಡಾಕ್‌ನ ಹೋರಾಟಗಾರ ಸೋನಂ ವಾಂಗ್ಚುಕ್ ಸೇರಿಕೊಂಡು, 20 ದಿನಗಳ ಉಪವಾಸ ನಿರಶನದ ಬಳಿಕ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿದೆ.

ನಿನ್ನೆ ಸಿಜೆಪಿ ಕಾರ್ಯಕರ್ತರು ನಡೆಸಿದ ಸಂಸತ್ ಚಲೋ ವೇಳೆ ಪ್ರತಿಭಟನಕಾರರೂ ಕೊಂಚ ಮಿತಿ ಮೀರಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ 118ಕ್ಕೂ ಅಧಿಕ ಪೊಲೀಸರಿಗೆ, 60ಕ್ಕೂ ಹೆಚ್ಚು ಹೋರಾಟಗಾರರಿಗೂ ಗಾಯಗಳಾಗಿವೆ.

ಇದನ್ನೂ ಓದಿ: Vishwavani Editorial: ಫಿಫಾ ರೋಮಾಂಚನ ಮುಕ್ತಾಯ

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿತ ಕಾಂಗ್ರೆಸ್ ನಾಯಕರು ಕೂಡ ಪ್ರತಿಭಟನೆಗೆ ಇಳಿದಿದ್ದಾರೆ. ದೇಶದ ಇತರ ನಗರಗಳಿಗೂ ಈ ಪ್ರತಿಭಟನೆ ಹರಡುವ ಸೂಚನೆ ಇದೆ. ಸಿಜೆಪಿಯನ್ನು ‘ವ್ಯಂಗ್ಯಪೂರ್ವಕವಾಗಿ ಹುಟ್ಟಿಕೊಂಡ ಒಂದು ಸಂಘಟನೆ’ ಎಂದು ಹಗುರವಾಗಿ ಪರಿಗಣಿಸಿದ್ದೇ ಸರಿಯಲ್ಲ. ಸಿಜೆಪಿಯ ಬೇಡಿಕೆಯೂ ನ್ಯಾಯಯುತವಾಗಿಯೇ ಇದೆ. ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು ಎಂದು ನೊಂದವರು ಕೇಳುವುದರಲ್ಲಿ ತಪ್ಪಿಲ್ಲ. ಹೀಗೆ ಪ್ರತಿಭಟನೆಗೆ ಇಳಿದವ ರನ್ನು ಸರಕಾರ ಮಾತುಕತೆಗೆ ಕರೆದಿದ್ದರೆ ಸಮಾಧಾನವಾಗುತ್ತಿತ್ತು.

ವಾಂಗ್ಚುಕ್‌ರಂಥ ಪದ್ಮಶ್ರೀ- ಮ್ಯಾಗ್ಸೆಸೆ ಪುರಸ್ಕೃತ ವ್ಯಕ್ತಿ ನಿರಶನ ಕುಳಿತರೂ ಸರಕಾರ ಮೌನ ಮುರಿಯಲಿಲ್ಲ. ಆ ಮೌನ ಇದೀಗ ದುಬಾರಿಯಾಗಿದೆ. ಮೇಲ್ನೋಟಕ್ಕೆ ಶಾಂತವಾಗಿ ಕಾಣುವ ಪ್ರಜೆಗಳ ಮನದ ಆಳದಲ್ಲಿ ಇರುವ ನೋವು ಯಾವಾಗ ಕಿಡಿಗೆದರುತ್ತದೆ ಎಂದು ಹೇಳಲು ಸಾಧ್ಯ ವಿಲ್ಲ. ಲೋಕಪಾಲ್ ಕಾನೂನಿಗಾಗಿ ಆಗ್ರಹಿಸಿ ಅಣ್ಣಾ ಹಜಾರೆ ನಡೆಸಿದ ಸತ್ಯಾಗ್ರಹದ ಫಲಿತಾಂಶ ಏನಾಯಿತು ಎಂಬುದನ್ನು ನಾವೆಲ್ಲ ಬಲ್ಲೆವು.

ಹಿಂದಿನ ಕಾಂಗ್ರೆಸ್ ಸರಕಾರ ಉರುಳಲು ಅದೂ ಒಂದು ಕಾರಣ. ಇನ್ನಾದರೂ ಸರಕಾರ ಇವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೇ ಸತ್ಯಾಗ್ರಹ ಎಂಬುದು ಶಾಂತಿಯ, ಹಕ್ಕೊ ತ್ತಾಯದ ಸಾತ್ವಿಕ ಧ್ವನಿಯಾಗಿರಬೇಕು ಹೊರತು ಕಲ್ಲು ತೂರಾಟದ, ಅಶಾಂತಿ ಹಬ್ಬಿಸುವ ಅಸ್ತ್ರ ಆಗಬಾರದು ಎಂಬುದು ಪ್ರತಿಭಟನಾಕಾರರೂ ಅರ್ಥ ಮಾಡಿಕೊಳ್ಳಬೇಕು. ಇದೀಗ ಆರಂಭ ವಾಗಿರುವ ಸಂಸತ್ ಕಲಾಪ ಇದಕ್ಕೊಂದು ಚರ್ಚೆ, ಕೊನೆ ಕಾಣಿಸಲಿ.