Vishwavani Editorial: ಐಷಾರಾಮಿ ಸೆಂಟ್ರಲ್ ಜೈಲ್
ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಆಂಡ್ರಾಯ್ಡ್ ಮೊಬೈಲ್, ಪೆನ್ ಡ್ರೈವ್ ಪತ್ತೆಯಾಗಿದೆ. ಸಿಸಿಬಿ ತಂಡ ಹಠಾತ್ ದಾಳಿ ನಡೆಸಿದಾಗ ಇದು ಸಿಕ್ಕಿದೆ. ಇದರೊಂದಿಗೆ ಇನ್ನೂ ಹಲವು ಕೈದಿಗಳ ಬಳಿ ಹತ್ತಕ್ಕೂ ಹೆಚ್ಚು ಮೊಬೈಲ್‌ಗಳು, ಚಾರ್ಜರ್‌ಗಳು, ಚಾಕು ಮತ್ತಿತರ ನಿಷೇಧಿತ ವಸ್ತುಗಳು ಸಿಕ್ಕಿವೆ.
-
ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಆಂಡ್ರಾಯ್ಡ್ ಮೊಬೈಲ್, ಪೆನ್ ಡ್ರೈವ್ ಪತ್ತೆಯಾಗಿದೆ. ಸಿಸಿಬಿ ತಂಡ ಹಠಾತ್ ದಾಳಿ ನಡೆಸಿದಾಗ ಇದು ಸಿಕ್ಕಿದೆ. ಇದರೊಂದಿಗೆ ಇನ್ನೂ ಹಲವು ಕೈದಿಗಳ ಬಳಿ ಹತ್ತಕ್ಕೂ ಹೆಚ್ಚು ಮೊಬೈಲ್‌ಗಳು, ಚಾರ್ಜರ್‌ಗಳು, ಚಾಕು ಮತ್ತಿತರ ನಿಷೇಧಿತ ವಸ್ತುಗಳು ಸಿಕ್ಕಿವೆ. ಪ್ರಜ್ವಲ್ ಬಳಿ ಪೆನ್ ಡ್ರೈವ್ ಹೇಗೆ ಬಂತು, ಇದರ ಉಪಯೋಗವೇನು ಎಂಬ ಸಹಜ ಕುತೂಹಲ ಮೂಡಿದೆ.
ಇದು ಹಳೇ ಚಾಳಿಯ ಮುಂದುವರಿಕೆಯಾಗಿದ್ದರೆ, ನಿಜಕ್ಕೂ ಆತನಿಗೆ ಮಾನಸಿಕ ಆರೋಗ್ಯ ಚಿಕಿತ್ಸೆ ಬೇಕಿದೆ. ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಬಳಿ ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಸಿಗುತ್ತಿರುವುದು ಇದೇ ಮೊದಲೇನಲ್ಲ. ಹಲವು ಪ್ರಭಾವಿ ಮತ್ತು ಶ್ರೀಮಂತ ಕೈದಿಗಳು ಸೆರೆಮನೆ ಯನ್ನೇ ಐಷಾರಾಮಿ ಅರಮನೆ ಯಾಗಿ ಮಾಡಿಕೊಂಡಂತಿದೆ. ಇವರಿಗೆ ಬೇಕಾದಂತೆ ಬೇಕಾದ ವಸ್ತುಗಳು ಜೈಲಿನ ಸಿಬ್ಬಂದಿಯ ಮೂಲಕವೇ ಸರಬರಾಜು ಆಗುತ್ತಿವೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣಗೆ ಪೆರೋಲ್ ನೀಡಲು ಸಾಧ್ಯವಿಲ್ಲ: ಕಾರಾಗೃಹ ಇಲಾಖೆ ಸ್ಪಷ್ಟನೆ
ಪ್ರತಿ ಸಲ ರೈಡ್ ನಡೆಸಿದಾಗಲೂ ಇವು ಸಾಕಷ್ಟು ಪ್ರಮಾಣದಲ್ಲಿ ಪತ್ತೆಯಾಗಿವೆ. ಜೈಲನ್ನು ಇನ್ನಷ್ಟು ಕಟ್ಟುನಿಟ್ಟು ಮತ್ತು ಸುಧಾರಣೆ ಮಾಡುವ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಕಳೆದ ಬಾರಿ ಇಂಥದು ನಡೆದಾಗ ಎಡಿಜಿಪಿ ಅಲೋಕ್ ಕುಮಾರ್ ಅವರಂಥ ಸ್ಟ್ರಿಕ್ಟ್ ಅಧಿಕಾರಿಯನ್ನು ಜೈಲಿನ ಮುಖ್ಯಸ್ಥರಾಗಿ ಸರಕಾರ ನೇಮಿಸಿತ್ತು. ಹೆಚ್ಚುವರಿ ಕ್ಯಾಮೆರಾಗಳನ್ನು ಹಾಕಲಾಗಿತ್ತು. ಆದರೂ ಇದೆಲ್ಲ ಮುಂದುವರಿದಿದೆ ಎಂದರೆ, ಸಿಬ್ಬಂದಿ ಮಟ್ಟದಲ್ಲಿ ರಾಜಿ, ದೊಡ್ಡವರ ಮಟ್ಟದಲ್ಲಿ ಲಾಬಿ ನಡೆಯದೆ ಸಾಧ್ಯವಿಲ್ಲ.
ಜೈಲು ಇರುವುದು ಮನರಂಜನೆಗಾಗಲೀ ತಮ್ಮ ಹಳೆಯ ಸೇಡು ವೈಷಮ್ಯ ತೀರಿಸಿಕೊಳ್ಳಲಾಗಲೀ ಅಲ್ಲ. ಅದು ಶಿಕ್ಷೆಯ ಆಲಯ ಆಗಿರುವಂತೆಯೇ ಶಿಕ್ಷಣ, ಸುಧಾರಣೆಯ ನಿಲಯ ಕೂಡ ಆಗಿರಬೇಕು ಎಂಬುದು ಆದರ್ಶ. ಕೈದಿಗಳಿಗೆ ಬೇಕುಬೇಕಾದಂಥ ಸೌಲಭ್ಯಗಳು ಸಿಕ್ಕಿದರೆ ಅವರ ಆತ್ಮಾವಲೋಕನ, ಸುಧಾರಣೆಯ ಸಾಧ್ಯತೆ ಕುಂಠಿತಗೊಳ್ಳುತ್ತದೆ. ವಿಚಿತ್ರವೆಂದರೆ, ಮೊಬೈಲ್ ನೆಟ್‌ವರ್ಕ್ ಸಿಗದಂತೆ ಜೈಲಿನ ಸುತ್ತಮುತ್ತ ಜಾಮರ್ ಅಳವಡಿಸಲಾಗಿದೆ.
ಇದರಿಂದ ಜೈಲಿನ ಆಸುಪಾಸಿನ ನಿವಾಸಿಗಳಿಗೇ ನೆಟ್‌ವರ್ಕ್ ಸಿಗುತ್ತಿಲ್ಲ. ಆದರೆ ಕೈದಿಗಳು ಬಹಳ ಆರಾಮಾಗಿ ಮೊಬೈಲ್ ನೆಟ್‌ವರ್ಕ್ ಬಳಸುತ್ತಾರೆ. ಇದೊಂದು ಚಿದಂಬರ ರಹಸ್ಯವೇ ಸರಿ. ಸರಕಾರ ಸಿಬ್ಬಂದಿ ಬದಲಿಸಿ, ಪಹರೆ ಹೆಚ್ಚಿಸಿ, ಸರಬರಾಜು ವ್ಯವಸ್ಥೆ ನಿಲ್ಲಿಸಿ, ಇನ್ನಷ್ಟು ಕಟ್ಟುನಿಟ್ಟು ಕ್ರಮ ಗಳನ್ನು ಕೈಗೊಳ್ಳುವುದು ಅಗತ್ಯವಿದೆ.