Vishwavani Editorial: ನ್ಯಾ.ವರ್ಮಾ ಪ್ರಕರಣ ಇತ್ಯರ್ಥವಾಗಲಿ
ಭಾರತೀಯ ನ್ಯಾಯಾಲಯದ ಇತಿಹಾಸದಲ್ಲಿ ಮಾದರಿ ಅನ್ನುವಂತಹ ಘಟನೆಗಳೇ ಜಾಸ್ತಿ ನಡೆದಿವೆ. ನ್ಯಾಯಾಂಗದ ಬಗ್ಗೆ ಪ್ರಶ್ನೆ ಬರುವಂತಹ ಘಟನೆಗಳು ತೀರಾ ಅಪರೂಪ ಎಂದೇ ಹೇಳಬಹುದು. ಇಂತಹ ಹೊತ್ತಿನಲ್ಲೇ ಕಳೆದ ವರ್ಷ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮಾ ನಿವಾಸದಲ್ಲಿ ಲಭಿಸಿದ ಕಂತೆಕಂತೆ ಸುಟ್ಟ ನೋಟುಗಳು, ಅತಿದೊಡ್ಡ ಪ್ರಶ್ನೆಗಳಿಗೆ ಕಾರಣ ವಾಗಿದೆ.
-
ಭಾರತೀಯ ನ್ಯಾಯಾಲಯದ ಇತಿಹಾಸದಲ್ಲಿ ಮಾದರಿ ಅನ್ನುವಂತಹ ಘಟನೆಗಳೇ ಜಾಸ್ತಿ ನಡೆದಿವೆ. ನ್ಯಾಯಾಂಗದ ಬಗ್ಗೆ ಪ್ರಶ್ನೆ ಬರುವಂತಹ ಘಟನೆಗಳು ತೀರಾ ಅಪರೂಪ ಎಂದೇ ಹೇಳಬಹುದು. ಇಂತಹ ಹೊತ್ತಿನಲ್ಲೇ ಕಳೆದ ವರ್ಷ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮಾ ನಿವಾಸದಲ್ಲಿ ಲಭಿಸಿದ ಕಂತೆಕಂತೆ ಸುಟ್ಟ ನೋಟುಗಳು, ಅತಿದೊಡ್ಡ ಪ್ರಶ್ನೆಗಳಿಗೆ ಕಾರಣವಾಗಿದೆ.
ವರ್ಮಾ ಮನೆಗೆ ಬೆಂಕಿಬಿದ್ದ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಭಾರೀ ಪ್ರಮಾಣದ ನೋಟುಗಳು ಇದ್ದವು ಎಂದು ಗೊತ್ತಾಗಿತ್ತು. ಅದು ಹೇಗೆ ಬಂತು, ಯಾಕೆ ಬಂತು, ಒಬ್ಬ ನ್ಯಾಯಮೂರ್ತಿ ಆ ಪ್ರಮಾಣದಲ್ಲಿ ನಗದನ್ನು ಮನೆಯಲ್ಲಿ ಯಾಕೆ ಇಟ್ಟುಕೊಂಡಿದ್ದರು... ಈ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. ಅವರನ್ನು ವಿಚಾರಣೆ ನಡೆಸಲು ಲೋಕಸಭಾ ಸ್ಪೀಕರ್ ತನಿಖಾ ಸಮಿತಿ ರಚಿಸಿದ್ದರು.
ಇದನ್ನೂ ಓದಿ: Vishwavani Editorial: ವಿನಾಶಕಾರಿ ಯುದ್ಧ ನಿಲ್ಲಲಿ
ವಾಗ್ದಂಡನೆಗೂ ಸಿದ್ಧತೆ ನಡೆಸಲಾಗಿದೆ. ಇಂತಹ ಹೊತ್ತಿನಲ್ಲೇ ಪ್ರಸ್ತುತ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯಾಗಿರುವ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಲ್ಲಿಯವರೆಗೆ ಅವರ ಮೇಲೆ ರಾಜೀನಾಮೆಯ ಒತ್ತಡವಿದ್ದರೂ ಅವರದಕ್ಕೆ ತಲೆಕೆಡಿಸಿ ಕೊಂಡಿರಲಿಲ್ಲ.
ವಾಗ್ದಂಡನೆಗೆ ಸಿದ್ಧತೆ ಸಾಗಿರುವಾಗ ನೀಡಿರುವ ರಾಜೀನಾಮೆಗೇನು ಕಾರಣ ಎಂದು ಗೊತ್ತಾಗಿಲ್ಲ. ಇಲ್ಲಿಯವರೆಗೆ ವರ್ಮಾ ಅವರ ಪ್ರಕರಣದಲ್ಲಿ ಬಹಳ ಮಾಹಿತಿಗಳೇನು ಹೊರ ಬಂದಿಲ್ಲ. ಆದರೆ ಜನಸಾಮಾನ್ಯರ ನಡುವೆ ನ್ಯಾಯವ್ಯವಸ್ಥೆಯ ಬಗ್ಗೆ ಒಳ್ಳೆಯ ಮಾತುಗಳೇನಿಲ್ಲ. ಇಲ್ಲೂ ಇತರೆ ಕಡೆ ಇರುವಂತಹ ಭ್ರಷ್ಟಾಚಾರ ಇದೆ ಎಂದು ಜನರು ಮಾತನಾಡಿಕೊಳ್ಳುವುದು ಎಲ್ಲರ ಕಿವಿಗೂ ಬಿದ್ದಿರುತ್ತದೆ.
ವರ್ಮಾ ಪ್ರಕರಣದಲ್ಲಿರುವಂತಹ ನೂರಾರು ಪ್ರಶ್ನೆಗಳು ಜನರ ನಡುವಿರುವ ಅಭಿಪ್ರಾಯಗಳನ್ನು ಪುಷ್ಟೀಕರಿಸುವಂತೆ ಕಂಡರೆ, ಅದನ್ನು ನಿರಾಕರಿಸಲೂ ಸಾಧ್ಯವಿಲ್ಲ. ಕೆಲವು ವರ್ಷಗಳ ಹಿಂದೆ ಜನಾರ್ದನ ರೆಡ್ಡಿ ಪ್ರಕರಣದಲ್ಲಿ ನ್ಯಾಯಾಧೀಶರೊಬ್ಬರನ್ನು ಬಂಧಿಸಲಾಗಿತ್ತು. ಆಗಲೂ ಜನರ ನಡುವೆ ಬಹಳ ಚರ್ಚೆಗಳು ನಡೆದಿದ್ದವು. ಇಂತಹ ಚರ್ಚೆಗಳು ನಿಲ್ಲಬೇಕಿದ್ದರೆ, ಈ ವ್ಯವಸ್ಥೆಯಲ್ಲಿ ಎಲ್ಲೇ ಲೋಪಗಳು ಕಂಡುಬಂದರೂ ಅದನ್ನು ದಿಢೀರ್ ಪತ್ತೆ ಹಚ್ಚಬೇಕು. ಅದಕ್ಕೆ ಸಂಬಂಧಿಸಿ ದಂತೆ ಹುಟ್ಟಿಕೊಳ್ಳುವ ಎಲ್ಲ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯಶವಂತ ವರ್ಮಾ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು.