ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

IPL Final 2026: ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ ಮುಖಾಮುಖಿಯಾಗಿದ್ದವು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಆರ್‌ಸಿಬಿ ಬರೊಬ್ಬರಿ 92 ರನ್‌ ಅಂತರದ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ನಾಯಕನ ಆಟವಾಡಿದ್ದ ರಜತ್‌ ಪಾಟೀದಾರ್‌ ಅಜೇಯ 93 ರನ್‌ ಬಾರಿಸಿದ್ದರು.

ಇತಿಹಾಸದ ಹೊಸ್ತಿಲಲ್ಲಿ ಆರ್‌ಸಿಬಿ; ಫೈನಲ್‌ ತನಕ ನಡೆದು ಬಂದ ಹಾದಿ...

RCB -

Abhilash BC
Abhilash BC May 30, 2026 1:02 PM

ಅಹಮದಾಬಾದ್‌, ಮೇ 30: ಐಪಿಎಲ್‌(IPL) ಇತಿಹಾಸದಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಹಾಗೂ ಕ್ರೇಜ್ ಹುಟ್ಟಿಸಿರುವ ತಂಡ ಎಂದ ತಕ್ಷಣ ನಮಗೆ ನೆನಪಾಗುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ತಂಡವು 2008ರ ಉದ್ಘಾಟನಾ ಆವೃತ್ತಿಯಿಂದಲೂ ಐಪಿಎಲ್‌ನಲ್ಲಿ ಆಡುತ್ತಾ ಬಂದಿದೆ. ಆದರೆ, ತನ್ನ ಚೊಚ್ಚಲ ಪ್ರಶಸ್ತಿ ಗೆಲ್ಲಲು 18 ವರ್ಷ ತೆಗೆದುಕೊಂಡಿತು. ಈಗ ಎಲ್ಲವೂ ಬದಲಾಗಿದೆ. ಗೆಲುವಿಗಿಂತ ಹೆಚ್ಚು ಸೋಲುಗಳನ್ನೇ ಕಾಣುತ್ತಿದ್ದ ತಂಡ, ಈಗ ಯಾವುದೇ ತಂಡವನ್ನು ಸುಲಭವಾಗಿ ಮಣಿಸುವ ಸಾಮರ್ಥ್ಯ ಹೊಂದಿದೆ. ಹಾಲಿ ಚಾಂಪಿಯನ್‌ ಆಗಿ ಈ ಬಾರಿಯೂ ಫೈನಲ್‌ ಪ್ರವೇಶಿಸಿದ್ದು ಭಾನುವಾರ ನಡೆಯುವ ಪ್ರಶಸ್ತಿ ಕಾಳಗದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ. ತಂಡ ಫೈನಲ್‌(IPL Final 2026) ತನಕ ಸಾಗಿ ಬಂದ(RCB Road to IPL 2026 finals) ಹಾದಿಯ ಹಿನ್ನೋಟ ಹೀಗಿದೆ.

ಹೈದರಾಬಾದ್‌ ವಿರುದ್ಧ 6 ವಿಕೆಟ್‌ ಜಯ

ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ರಜತ್‌ ಪಾಟೀದಾರ್‌ ಬಳಗ 6 ವಿಕೆಟ್‌ ಅಂತರದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. 3 ವಿಕೆಟ್‌ ಕಿತ್ತ ಜಾಕೋಬ್ ಡಫ್ಫಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದರು. ವಿರಾಟ್‌ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್‌ ಅರ್ಧಶತಕ ಸಿಡಿಸಿದ್ದರು.

ಸಿಎಸ್‌ಕೆ ವಿರುದ್ಧ 43 ರನ್‌ ಗೆಲುವು

ಎರಡನೇ ಪಂದ್ಯವನ್ನು ಬದ್ಧ ಎದುರಾಳಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಆರ್‌ಸಿಬಿ 3 ವಿಕೆಟ್‌ಗೆ 250 ರನ್‌ ಪೇರಿಸಿತ್ತು. ಟಿಮ್‌ ಡೇವಿಡ್‌ ಅಜೇಯ 70 ರನ್‌ ಬಾರಿಸಿದ್ದರು. ಗುರಿ ಬೆನ್ನಟ್ಟಿದ ಸಿಎಸ್‌ಕೆ ತಂಡ 200ರನ್‌ ತನಕ ಸಾಗಿ ಬಂದರೂ 43 ರನ್‌ ಅಂತರದ ಸೋಲಿಗೆ ತುತ್ತಾಗಿತ್ತು.

ರಾಜಸ್ಥಾನ್‌ ವಿರುದ್ಧ ಸೋಲು

ಹ್ಯಾಟ್ರಿಕ್‌ ಗೆಲುವಿನ ಇರಾದೆಯಲ್ಲಿದ್ದ ಆರ್‌ಸಿಬಿಗೆ ರಾಜಸ್ಥಾನ್‌ ರಾಯಲ್ಸ್‌ ಸೋಲಿನ ಆಘಾತವಿಕ್ಕಿತು. 15ರ ಬಾಲಕ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್‌ ಮುಂದೆ ಆರ್‌ಸಿಬಿ ಸಂಪೂರ್ಣವಾಗಿ ಮಂಕಾಯಿತು. 6 ವಿಕೆಟ್‌ ಅಂತರದ ಸೋಲು ಕಂಡಿತು.

ಮುಂಬೈ ವಿರುದ್ಧ 18 ರನ್‌ ಗೆಲುವು

ರಾಜಸ್ಥಾನ್‌ ವಿರುದ್ಧ ಸೋಲು ಕಂಡಿದ್ದ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳಿತು. ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಸಂಘಟಿತ ಬ್ಯಾಟಿಂಗ್‌ ನೆರವಿನಿಂದ 18 ರನ್‌ ಅಂತರದ ಗೆಲುವು ಸಾಧಿಸಿತು. ಆರ್‌ಸಿಬಿ ಪರ ಕೊಹ್ಲಿ, ಸಾಲ್ಟ್‌ ಮತ್ತು ಪಡಿಕ್ಕಲ್‌ ಅರ್ಧಶತಕ ಸಿಡಿಸಿ ಮಿಂಚಿದರು.

ಲಖನೌ ವಿರುದ್ಧ 5 ವಿಕೆಟ್‌ ಜಯ

ಮುಂಬೈ ವಿರುದ್ಧ ಗೆದ್ದ ಜೋಶ್‌ನಲ್ಲಿದ್ದ ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧವೂ ಮೇಲುಗೈ ಸಾಧಿಸಿತು. ಸಣ್ಣ ಮೊತ್ತದ ಈ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ ಅಂತರದ ಗೆಲುವು ಸಾಧಿಸಿ ಮರೆದಾಡಿತು. ಯುವ ವೇಗಿ ರಸಿಕ್ ಸಲಾಂ ದಾರ್ 24 ರನ್‌ಗೆ 4 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು.

ಡೆಲ್ಲಿ ವಿರುದ್ಧ ಸೋಲು

ಮತ್ತೆ ಆರ್‌ಸಿಬಿ ಸತತ ಎರಡು ಗೆಲುವಿನ ಬಳಿಕ ಸೋಲು ಕಂಡಿತು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತವರಿನಲ್ಲಿ ನಡೆದಿದ್ದ ಅತ್ಯಂತ ರೋಚಕ ಪಂದ್ಯದಲ್ಲಿ 6 ವಿಕೆಟ್‌ ಅಂತರದ ಸೋಲು ಕಂಡಿತ್ತು. ಅಂತಿಮ ಓವರ್‌ನಲ್ಲಿ 15 ರನ್‌ ತೆಗೆಯುವ ಸವಾಲಿನ ವೇಳೆ ಅಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶಿಸಿದ ಡೇವಿಡ್‌ ಮಿಲ್ಲರ್‌ ಆರ್‌ಸಿಬಿಗೆ ಸೋಲುಣಿಸಿದ್ದರು.

ಗುಜರಾತ್‌ ವಿರುದ್ಧ 5 ವಿಕೆಟ್‌ ಜಯ

ಆರ್‌ಸಿಬಿ 7ನೇ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ತವರಿನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಗುಜರಾತ್‌ 203 ರನ್‌ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ ಕೊಹ್ಲಿ ಮತ್ತು ಪಡಿಕ್ಕಲ್‌ ಅರ್ಧಶತಕದ ನೆರವಿನಿಂದ 7 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು.

ಡೆಲ್ಲಿ ವಿರುದ್ಧ 9 ವಿಕೆಟ್‌ ಗೆಲುವು

ಮೊದಲ ಮುಖಾಮುಖಿಯಲ್ಲಿ ಸೋಲು ಕಂಡಿದ್ದ ಆರ್‌ಸಿಬಿ ಎರಡನೇ ಮುಖಾಮುಖಿಯಲ್ಲಿ ಸೇಡು ತೀರಿಸಿಕೊಂಡಿತು. ನವದೆಹಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ 9 ವಿಕೆಟ್‌ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಡೆಲ್ಲಿ ಕೇವಲ 75 ರನ್‌ಗೆ ಸರ್ವಪತನ ಕಂಡಿತ್ತು.

ಗುಜರಾತ್‌ ವಿರುದ್ಧ 4 ವಿಕೆಟ್‌ ಸೋಲು

ಸತತ ಎರಡು ಗೆಲವಿನ ಬಳಿಕ ಮತ್ತೆ ಆರ್‌ಸಿಬಿಗೆ ಸೋಲು ಎದುರಾಯಿತು. ಗುಜರಾತ್‌ ಟೈಟಾನ್ಸ್‌ ತಂಡ ತವರಿನಲ್ಲಿ ಮೊದಲ ಸೋಲಿಗೆ ಸೇಡು ತೀರಿಸಿಕೊಂಡಿತು. 4 ವಿಕೆಟ್‌ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿತು.

ಶತಕ ವಂಚಿತ ಸೂರ್ಯವಂಶಿಗೆ ರಿಯಾನ್‌ ಪರಾಗ್‌ ತರಾಟೆ; ವಿಡಿಯೊ ವೈರಲ್‌

ಲಖನೌ ವಿರುದ್ಧ ಸೋಲು

ಮಳೆ ಪೀಡಿತ ಪಂದ್ಯದಲ್ಲಿ ಆರ್‌ಸಿಬಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 9 ರನ್‌ ಅಂತರದ ಸೋಲು ಕಂಡಿತ್ತು. ಲಖನೌ ಪರ ಮಾರ್ಷ್‌ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಶತಕ ಸಿಡಿಸಿ ಮಿಂಚಿದ್ದರು. ವಿರಾಟ್‌ ಕೊಹ್ಲಿ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿದ್ದರು.

ಮುಂಬೈ ವಿರುದ್ಧ ಮತ್ತೊಂದು ಗೆಲುವು

ಮೊದಲ ಮುಖಾಮುಖಿಯಲ್ಲಿ ಮುಂಬೈ ವಿರುದ್ಧ ಗೆದ್ದು ಬೀಗಿದ್ದ ಆರ್‌ಸಿಬಿ ಎರಡನೇ ಬಾರಿಯೂ ಗೆಲುವು ಸಾಧಿಸಿತು. ತನ್ನ ಎರಡನೇ ತವರಾದ ರಾಯ್ಪುರಲ್ಲಿ ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ 2 ವಿಕೆಟ್‌ ಅಂತರದ ರೋಚಕ ಗೆಲುವು ಸಾಧಿಸಿತ್ತು. ಭುವನೇಶ್ವರ್‌ ಕುಮಾರ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಕೆಕೆಆರ್‌ ವಿರುದ್ಧ ಭರ್ಜರಿ ಜಯ

ರಾಯ್ಪುರದಲ್ಲೇ ನಡೆದ ಮತ್ತೊಂದು ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್‌ ತಂಡವನ್ನು ಮಣಿಸಿತು. ಸತತ ಎರಡು ಸೂನ್ಯ ಸುತ್ತಿ ಟೀಕೆಗೆ ಗುರಿಯಾಗಿದ್ದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಸೊಗಸಾದ ಶತಕ ಸಿಡಿಸಿ ಎಲ್ಲ ಟೀಕೆಗೆ ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದರು. ಅಜೇಯ 105 ರನ್‌ ಸಿಡಿಸಿದ್ದರು.

RCB ಕಪ್‌ ಗೆದ್ದರೂ ಸಂಭ್ರಮಾಚರಣೆ ಮಾಡುವಂತಿಲ್ಲ; ಅಭಿಮಾನಿಗಳಿಗೆ ಪೊಲೀಸರ ಖಡಕ್‌ ಎಚ್ಚರಿಕೆ

ಪಂಜಾಬ್‌ ವಿರುದ್ಧ 23 ರನ್‌ ಗೆಲುವು

ಆರ್‌ಸಿಬಿ ಮೊದಲ ಬಾರಿ ಹ್ಯಾಟ್ರಿಕ್‌ ಗೆಲುವು ಸಾಧಿಸಿತು. ಇದಕ್ಕೂ ಮುನ್ನ ಸತತ ಎರಡು ಪಂದ್ಯಗಳ ಬಳಿಕ ಮೂರನೇ ಪಂದ್ಯದಲ್ಲಿ ಸೋಲು ಕಾಣುತ್ತಿದ್ದ ಆರ್‌ಸಿಬಿ ಮೊದಲ ಸಲ ಸತತ ಮೂರನೇ ಪಂದ್ಯವನ್ನು ಗೆದ್ದ ಸಾಧನೆ ಮಾಡಿತು. ಪಂಜಾಬ್‌ ಕಿಂಗ್ಸ್‌ ವಿರುದ್ಧ 23 ರನ್‌ ಅಂತರದ ಗೆಲುವು ಸಾಧಿಸಿತು.



ಹೈದರಾಬಾದ್‌ ವಿರುದ್ಧ ಸೋಲು

ಉದ್ಘಾಟನ ಪಂದ್ಯದಲ್ಲಿ ಹೈದರಾಬಾದ್‌ಗೆ ಸೋಲಣಿಸಿದ್ದ ಆರ್‌ಸಿಬಿ ಎರಡನೇ ಮುಖಾಮುಖಿಯಲ್ಲಿ ಸೋಲು ಕಂಡಿತು. ಅದು ಕೂಡ 55 ರನ್‌ ಅಂತರದ ಸೋಲು. 256 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ 200 ರನ್‌ ಮಾತ್ರ ಗಳಿಸಲಷ್ಟೇ ಶಕ್ತವಾಯಿತು.

ಕ್ವಾಲಿಫೈಯರ್‌ ಗೆಲುವು

ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್‌ ಮುಖಾಮುಖಿಯಾಗಿದ್ದವು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರಿದ ಆರ್‌ಸಿಬಿ ಬರೊಬ್ಬರಿ 92 ರನ್‌ ಅಂತರದ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿತ್ತು. ನಾಯಕನ ಆಟವಾಡಿದ್ದ ರಜತ್‌ ಪಾಟೀದಾರ್‌ ಅಜೇಯ 93 ರನ್‌ ಬಾರಿಸಿದ್ದರು.