ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಡಿಜಿಟಲ್ ಅರೆಸ್ಟ್ ವಿಶ್ವರೂಪ

ಬಲಿಪಶುಗಳನ್ನು ಗುರುತಿಸಿ ವಿಡಿಯೋ ಕಾಲ್ ಮೂಲಕ ‘ನಾವು ಪೊಲೀಸರು. ನೀವು ಅಕ್ರಮ ಹಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೀರಿ, ಬಂಧನಕ್ಕೆ ಒಳಗಾಗದಿರಲು ನಾವು ಹೇಳಿದಂತೆ ಕೇಳಿ’ ಎಂದು ಬೆದರಿಸುವುದು ಸಾಮಾನ್ಯ. ಇದಕ್ಕೆ ಬೆದರಿದ ಜನಸಾಮಾನ್ಯರು ತಮ್ಮ ಖಾತೆಯ ವಿವರಗಳನ್ನು ನೀಡಿ, ಹಣವನ್ನು ಖದೀಮರ ಖಾತೆಗೆ ವರ್ಗಾಯಿಸುತ್ತಾರೆ.

Vishwavani Editorial: ಡಿಜಿಟಲ್ ಅರೆಸ್ಟ್ ವಿಶ್ವರೂಪ

-

Profile
Ashok Nayak May 26, 2026 9:33 AM

ರಾಜ್ಯದಲ್ಲೇ ಅತಿ ದೊಡ್ಡ ಡಿಜಿಟಲ್ ಅರೆಸ್ಟ್ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರಿನ ಶಿವಾಜಿನಗರದ ವೃದ್ಧೆಯೊಬ್ಬರಿಂದ 24 ಕೋಟಿ ರುಪಾಯಿಗಳಷ್ಟು ಹಣವನ್ನು ಖದೀಮರು ಸುಲಿದಿದ್ದಾರೆ. ಆಸ್ತಿ ಮಾರಿ ಬಂದ ಹಣದ ಮೇಲೆ ವಂಚಕರು ಕಣ್ಣು ಹಾಕಿ, ಸುಮಾರು ಐದು ತಿಂಗಳಿಂದ ವೃದ್ಧೆಯನ್ನು ಡಿಜಿಟಲ್ ಬಂಧನದಲ್ಲಿ ಸಿಕ್ಕಿಸಿ, ಬೆದರಿಸಿ, ಹಂತಹಂತವಾಗಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು.

ಇಷ್ಟೂ ಸಾಲದೆಂಬಂತೆ, ವೃದ್ಧೆಯ ಬಳಿ ಇದ್ದ ಚಿನ್ನಾಭರಣವನ್ನೂ ಅಡವಿಟ್ಟು ಹಣ ತರುವಂತೆ ಪೀಡಿಸಿದ್ದರು. ಇಂಥ ಅನೇಕ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಲೇ ಇವೆ. ಅತಿ ಹೆಚ್ಚು ಡಿಜಿಟಲ್ ಆರೆಸ್ಟ್, ಸೈಬರ್ ವಂಚನೆ ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲೇ ದಾಖಲಾಗುತ್ತಿರುವುದು ದುರಂತ.

ಇದನ್ನೂ ಓದಿ: Bengaluru Digital arrest: ಎನ್‌ಐಎ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆ, ಪುತ್ರಿಯ ಡಿಜಿಟಲ್‌ ಅರೆಸ್ಟ್;‌ 2.1 ಕೋಟಿ ರೂ. ವಂಚಿಸಿದ ಸೈಬರ್‌ ಕಳ್ಳರು!

ಹೀಗೆ ಕದಿಯಲಾದ ಹಣ ಪಾಕಿಸ್ತಾನ, ಬಾಂಗ್ಲಾ, ಆಫ್ರಿಕಾ ಮೊದಲಾದ ವಿದೇಶಗಳಲ್ಲಿರುವ ಖಾತೆಗಳಿಗೆ ಟ್ರಾನ್ಸ್'ಫರ್ ಆಗಿಬಿಡುವುದರಿಂದ ಇವುಗಳನ್ನು ರಿಟ್ರೀವ್ ಮಾಡುವುದು ಸುಲಭವಿಲ್ಲ. ಈ ಎಲ್ಲ ವಂಚನೆಗಳ ಕಾರ್ಯವಿಧಾನ ಒಂದೇ ರೀತಿಯಲ್ಲಿರುತ್ತದೆ. ಬಲಿಪಶುಗಳನ್ನು ಗುರುತಿಸಿ ವಿಡಿಯೋ ಕಾಲ್ ಮೂಲಕ ‘ನಾವು ಪೊಲೀಸರು. ನೀವು ಅಕ್ರಮ ಹಣ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೀರಿ, ಬಂಧನಕ್ಕೆ ಒಳಗಾಗದಿರಲು ನಾವು ಹೇಳಿದಂತೆ ಕೇಳಿ’ ಎಂದು ಬೆದರಿಸುವುದು ಸಾಮಾನ್ಯ. ಇದಕ್ಕೆ ಬೆದರಿದ ಜನಸಾಮಾನ್ಯರು ತಮ್ಮ ಖಾತೆಯ ವಿವರಗಳನ್ನು ನೀಡಿ, ಹಣವನ್ನು ಖದೀಮರ ಖಾತೆಗೆ ವರ್ಗಾಯಿಸುತ್ತಾರೆ.

ಇದಲ್ಲದೇ ಇಮೇಲ್‌ಗಳಿಗೆ ಮಾಲ್‌ವೇರ್‌ಗಳನ್ನು, ವಂಚಕ ಲಿಂಕ್‌ಗಳನ್ನು ಕಳಿಸುವುದು ಸಹ ಇದೆ. ಇದಲ್ಲದೇ ಇಂದು ಸೈಬರ್ ಕ್ರೈಮ್ ಎಂಬುದು ನಾನಾ ಸ್ವರೂಪ ಪಡೆದಿದೆ. ಆದರೆ ಯಾವ ಬ್ಯಾಂಕ್, ಪೊಲೀಸ್‌ನವರೂ ಫೋನ್, ವಾಟ್ಸ್ಯಾಪ್, ಇಮೇಲ್ ಮೂಲಕ ಇಂಥ ಸಂವಹನ ನಡೆಸುವುದಿಲ್ಲ ಎಂದು ತಿಳಿದಿರಬೇಕು.

ವಂಚನೆಗೆ ಒಳಗಾದವರು ಸಾಕ್ಷರರೇ. ಆದರೆ ಡಿಜಿಟಲ್ ಶಿಕ್ಷಿತರಲ್ಲ. ಇದಕ್ಕೆ ಒಳಗಾಗದೆ ಇರಲು ಬೇಕಾದುದು ಡಿಜಿಟಲ್ ಜ್ಞಾನ. ಇದನ್ನು ಸರಕಾರ, ಕಾನೂನುಪಾಲಕ ಸಂಸ್ಥೆಗಳು, ಶಾಲೆ ಕಾಲೇಜುಗಳು, ಸಮುದಾಯ ಸಂಘಟನೆಗಳು ಎಲ್ಲರಿಗೆ ತಿಳಿಸಬೇಕು.

ಕುಟುಂಬದೊಳಗಿನ ಡಿಜಿಟಲ್ ಸಾಕ್ಷರರು ಕೂಡ ತಮ್ಮಲ್ಲಿನ ವೃದ್ಧರಿಗೆ, ಮಕ್ಕಳಿಗೆ ಈ ಕುರಿತು ಅರಿವು ಮೂಡಿಸಬೇಕು. ಇಲ್ಲದೆ ಹೋದರೆ ಇಂಥ ವಂಚನೆಗಳು ಮುಂದು ವರಿಯುತ್ತಲೇ ಇರುತ್ತವೆ. ಸರಕಾರ ಕೂಡ ಸೈಬರ್ ಕ್ರೈಮ್ ಸೆಲ್ ಅನ್ನು ಬಲಪಡಿಸಬೇಕು. ಬೆವರಿನ ಹಣ ಖದೀಮರ ಪಾಲಾಗಬಾರದು.