Vishwavani Editorial: ಸಂತ್ರಸ್ತರ ಕಣ್ಣೀರಿಗೆ ಸಿಕ್ಕ ಮನ್ನಣೆ
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ನೀಡಿದ ಮನವಿ ಮತ್ತು ನಿರಂತರ ಪ್ರತಿಭಟನೆಗಳ ಫಲವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರ ವಿತರಿಸುತ್ತಿರುವುದು ಸ್ವಾಗತಾರ್ಹ. ಇದು ಕೇವಲ ಉದ್ಯೋಗವಲ್ಲ, ಬದಲಿಗೆ ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಂತ್ರಸ್ತರಿಗೆ ನೀಡುತ್ತಿರುವ ಸಾಂತ್ವನವಾಗಿದೆ.
-
ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಜೀವಗಳು ಬಲಿಯಾದ ಕಪ್ಪು ಚುಕ್ಕೆಯ ಘಟನೆ ನಡೆದು ಐದು ವರ್ಷಗಳೇ ಉರುಳಿವೆ. ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾದ ಆ ಕುಟುಂಬಗಳ ಆಕ್ರಂದನ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಇದೀಗ ಆ ಸಂತ್ರಸ್ತ ಕುಟುಂಬಗಳ ಸುದೀರ್ಘ ಹೋರಾಟ ತಾರ್ಕಿಕ ಅಂತ್ಯ ಕಾಣುವ ಸಂದರ್ಭ ಬಂದಿದೆ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಜನರ ಪೈಕಿ 21 ಸಂತ್ರಸ್ತರ ಕುಟುಂಬಕ್ಕೆ ಸರಕಾರಿ ಕೆಲಸ ನೀಡಲು ಕೊನೆಗೂ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿದೆ.
ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಈ ಘಟನೆಯ ಬಗ್ಗೆ ಅಧಿಕಾರಿಗಳಿಂದ ಹಿಡಿದು ನ್ಯಾಯಾ ಧೀಶರ ತನಕ ಹಲವು ಮಟ್ಟದಲ್ಲಿ ತನಿಖೆ ನಡೆದಿದೆ. ಆದರೆ ದುರಂತಕ್ಕೆ ಕಾರಣ ರಾದವರನ್ನು ಗುರುತಿಸಿ ಶಿಕ್ಷಿಸುವ ಕೆಲಸ ಇದುವರೆಗೂ ನಡೆದಿಲ್ಲ.
ಇದನ್ನೂ ಓದಿ: Vishwavani Editorial: ಸ್ವಾರ್ಥದಿಂದ ಮಸೂದೆಗೆ ಹಿನ್ನಡೆ
ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ನಾ ನೇತೃತ್ವದ ಸಮಿತಿಯ ವರದಿಯನ್ನು ರಾಜ್ಯ ಸರಕಾರ ಇನ್ನೂ ಸದನದ ಮುಂದಿಟ್ಟಿಲ್ಲ. ಈ ನಡುವೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸುವಲ್ಲೂ ಸಾಕಷ್ಟು ವಿಳಂಬವಾಗಿದೆ. ಅಂದು ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಕೇವಲ ಪರಿಹಾರಕ್ಕಾಗಿ ಕೈಚಾಚಲಿಲ್ಲ, ಬದಲಿಗೆ ಘನತೆಯ ಬದುಕಿಗಾಗಿ ಸರಕಾರಿ ಉದ್ಯೋಗದ ಹಕ್ಕೊ ತ್ತಾಯ ಮಂಡಿಸಿದ್ದವು.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ನೀಡಿದ ಮನವಿ ಮತ್ತು ನಿರಂತರ ಪ್ರತಿಭಟನೆಗಳ ಫಲವಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಪತ್ರ ವಿತರಿಸುತ್ತಿರುವುದು ಸ್ವಾಗತಾರ್ಹ. ಇದು ಕೇವಲ ಉದ್ಯೋಗವಲ್ಲ, ಬದಲಿಗೆ ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಸಂತ್ರಸ್ತರಿಗೆ ನೀಡುತ್ತಿರುವ ಸಾಂತ್ವನವಾಗಿದೆ.
ಯಾವುದೇ ಉದ್ಯೋಗ ಅಥವಾ ಹಣ ಹೋದ ಜೀವಗಳನ್ನು ಮರಳಿ ತರಲಾರದು. ಆದರೆ, ಸಂಕಷ್ಟ ದಲ್ಲಿರುವ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದು ಕಲ್ಯಾಣ ಸರಕಾರದ ಕರ್ತವ್ಯ. ಈ ವಿಳಂಬಿತ ನ್ಯಾಯವು ಆಡಳಿತ ಮಂಡಳಿಗಳಿಗೆ ಒಂದು ಪಾಠವಾಗಬೇಕು. ಅಧಿಕಾರಿಗಳ ನಡುವಣ ಸಮನ್ವಯದ ಕೊರತೆ, ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಇಂತಹ ದುರಂತಗಳು ಮಂದೆಂದೂ ಮರುಕಳಿಸದಂತೆ ಎಚ್ಚರವಹಿಸುವುದು ತುರ್ತು ಅಗತ್ಯವಾಗಿದೆ.
ತಡವಾಗಿಯಾದರೂ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವ ರಾಜ್ಯ ಸರಕಾರದ ಕ್ರಮವು ಮಾನವೀಯತೆಯ ದೃಷ್ಟಿಯಿಂದ ಮೆಚ್ಚುವಂತದ್ದು. ಈ ಕುಟುಂಬ ಗಳು ಹೊಸ ಬದುಕ ನ್ನು ಕಟ್ಟಿಕೊಳ್ಳಲು ಈ ಉದ್ಯೋಗ ಆಸರೆಯಾಗಲಿ. ಇಷ್ಟಕ್ಕೇ ಈ ಪ್ರಕರಣ ಮುಗಿಯಬಾರದು. ಈ ಕರ್ತವ್ಯಲೋಪ ಎಸಗಿ ಈ ದುರಂತಕ್ಕೆ ಕಾರಣರಾದವರನ್ನು ಶಿಕ್ಷಿಸುವ ಕೆಲಸವೂ ಆಗಬೇಕು. ಆಗ ಮಾತ್ರ ನ್ಯಾಯ ವ್ಯವಸ್ಥೆ ಮೇಲೆ ನಂಬಿಕೆ ಉಳಿಯಲು ಸಾಧ್ಯ.