ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ

ಶಿಕ್ಷೆಯಾಗದೇ ಹೋದರೆ ಯಾವ ಇಲಾಖಾ ತನಿಖೆಯಿಂದಲೂ ಪ್ರಯೋಜನವಿಲ್ಲ. ಹೊಸದಾಗಿ ಗೃಹ ಇಲಾಖೆ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸೂಚನೆಗಳಿವೆ. ನಾಗರಿಕರಿಗೆ ಕಿರುಕುಳ ನೀಡುವುದು, ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಭ್ರಷ್ಟಾ ಚಾರದಲ್ಲಿ ತೊಡಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ‘ರಾಜ್ಯದ ಪೊಲೀಸ್ ವ್ಯವಸ್ಥೆ ತುಕ್ಕು ಹಿಡಿದಿದೆ. ಇದನ್ನು ಒಂದೇ ದಿನದಲ್ಲಿ ಸರಿಪಡಿಸಲು ಸಾಧ್ಯ ವಿಲ್ಲ’ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ.

Vishwavani Editorial: ಪೊಲೀಸ್ ಇಲಾಖೆಗೆ ಬೇಕು ಸುಧಾರಣೆ

-

Profile
Ashok Nayak Jun 20, 2026 11:08 AM

ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ಅಕ್ಕಿ ವ್ಯಾಪಾರಿಯಿಂದ 20 ಸಾವಿರ ರೂ. ಲಂಚ ಪಡೆಯುವಾಗ ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ವ್ಯಾಪಾರಕ್ಕಾಗಿ ಕೇರಳದಿಂದ ಬಂದಿದ್ದ ಟ್ರೇಡಿಂಗ್ ವ್ಯಾಪಾರಿಗಳನ್ನು ಮಡಿವಾಳ ವ್ಯಾಪ್ತಿಯಲ್ಲಿ ದೋಚಲಾಗಿದ್ದು, ಆ ಪ್ರಕರಣದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರ ಕೈವಾಡವಿರುವುದು ಬಯಲಾಗಿದೆ. ಈಗ ಆ ಇನ್ಸ್‌ಪೆಕ್ಟರ್ ನಾಪತ್ತೆಯಾಗಿದ್ದಾರೆ.

ಕಾಡುಗೋಡಿ ವ್ಯಾಪ್ತಿಯಲ್ಲಿ ನಡೆದ ವೆನ್ನೆಲಾ ಎಂಬ ಮಗುವಿನ ಹತ್ಯೆ ಪ್ರಕರಣದಲ್ಲಿ ಆರಂಭಿಕ ಹಂತದಲ್ಲಿ ತನಿಖಾಧಿಕಾರಿಗಳು ಲಂಚ ಪಡೆದು ನಿರ್ಲಕ್ಷ್ಯ ತೋರಿಸಿದ್ದರು. ರಾಜಸ್ಥಾನದಲ್ಲಿ ತನಿಖೆಗಾಗಿ ಹೋದ ಎಚ್‌ಎಎಲ್‌ನ ಪಿಎಸ್‌ಐ ಹಾಗೂ ಇಬ್ಬರು ಸಿಬ್ಬಂದಿ ಅಲ್ಲಿ ಲಂಚ ಪಡೆದು ಸಿಕ್ಕಿಬಿದ್ದು ರಾಜ್ಯದ ಪೊಲೀಸ್ ಇಲಾಖೆಗೆ ಮಸಿ ಬಳಿದಿದ್ದರು. ಇದರಿಂದೆಲ್ಲ ಕರ್ನಾಟಕದ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆ ಮುಕ್ಕಾಗಿದೆ ಎಂದು ಹೇಳದೆ ವಿಧಿಯಿಲ್ಲ. ಈ ಹಿಂದೆಯೂ ಇಂಥ ಸಾಕಷ್ಟು ಪ್ರಕರಣಗಳು ನಡೆದಿವೆ.

ಇದನ್ನೂ ಓದಿ: Karnataka State Police Housing Corporation: ಪೊಲೀಸ್ ವಸತಿ ಗೃಹ ಸಮುಚ್ಚಯ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ

ಇನ್ಸ್‌ಪೆಕ್ಟರ್‌ಗಳ ರಾಸಲೀಲೆ, ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರನ್ನೇ ಶೋಷಿಸಿದ ಹೀನ ಪ್ರಕರಣ ಗಳೂ ವರದಿಯಾಗಿವೆ. ಆರಕ್ಷಕರೇ ಭಕ್ಷಕರಾಗುವುದಾದರೆ ಇವರು ಇರಬೇಕಾದರೂ ಯಾಕೆ ಎಂದು ರಾಜ್ಯದ ಜನತೆ ಕೇಳುವಂತಾಗಿದೆ. ಕೆಲವು ಪ್ರಕರಣಗಳಲ್ಲಿ ಪೊಲೀಸರನ್ನು ಅಮಾನತು ಮಾಡಲಾ ಗಿದೆ. ಆದರೆ ಅಮಾನತಿನಿಂದ ಏನೂ ಆಗುವುದಿಲ್ಲ. ಅಮಾನತಾದವರು ಮನೆಯಲ್ಲಿದ್ದೇ ಸಂಬಳ ಪಡೆದು ಹಾಯಾಗಿರುತ್ತಾರೆ.

ಶಿಕ್ಷೆಯಾಗದೇ ಹೋದರೆ ಯಾವ ಇಲಾಖಾ ತನಿಖೆಯಿಂದಲೂ ಪ್ರಯೋಜನವಿಲ್ಲ. ಹೊಸದಾಗಿ ಗೃಹ ಇಲಾಖೆ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸೂಚನೆಗಳಿವೆ. ನಾಗರಿಕರಿಗೆ ಕಿರುಕುಳ ನೀಡುವುದು, ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಭ್ರಷ್ಟಾಚಾರದಲ್ಲಿ ತೊಡಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

‘ರಾಜ್ಯದ ಪೊಲೀಸ್ ವ್ಯವಸ್ಥೆ ತುಕ್ಕು ಹಿಡಿದಿದೆ. ಇದನ್ನು ಒಂದೇ ದಿನದಲ್ಲಿ ಸರಿಪಡಿಸಲು ಸಾಧ್ಯವಿಲ್ಲ’ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಇನ್ನೀಗ ಬೇಕಿರುವುದು ಅದರ ಸುಧಾರಣೆ. ತಪ್ಪಿತಸ್ಥ ಪೊಲೀಸರಿಗೆ ಶಿಕ್ಷೆಯಾದರೆ ಜನಸಾಮಾನ್ಯರಲ್ಲಿ ಇಲಾಖೆ ಮೇಲಿನ ನಂಬಿಕೆ ಪುನರ್ ಸ್ಥಾಪನೆ ಯಾಗುತ್ತದೆ. ಪೊಲೀಸರ ಬಗ್ಗೆ ಜನರಲ್ಲಿ ಭಯ ಇರುವುದು ಸಹಜ. ಆದರೆ ಅಸಹ್ಯ, ಜಿಗುಪ್ಸೆ ಮೂಡುವಂತಾಗಬಾರದು. ಕರ್ನಾಟಕ ಪೊಲೀಸರ ಪ್ರಾಮಾಣಿಕತೆ, ಕಾರ್ಯವೈಖರಿ ಪ್ರಶ್ನೆಗೆ ಒಳಗಾಗಿದೆ. ಅದನ್ನು ಸರಿಪಡಿಸುವ ಕೆಲಸ ಮೊದಲು ಆಗಲಿ.