ಬೆದರಿಕೆ ಸಲ್ಲದು
ಬಿಡಿಎ ಸೈಟ್‌ಗಳ ವಿಚಾರ ಬಂದಾಗ, ಸೈಟ್‌ಗಳ ಹಂಚಿಕೆ ಮಾತ್ರ ತಮ್ಮ ಕೆಲಸ, ಅಲ್ಲಿಗೆ ಮೂಲ ಸೌಕರ್ಯ ಕಲ್ಪಿಸುವುದಲ್ಲ ಎಂದು ಸರಕಾರವೇ ಹೇಳಿತ್ತು. ಕೊನೆಗೆ ಇದಕ್ಕಾಗಿ ಕೋರ್ಟ್ ಅಸಮಾ ಧಾನಕ್ಕೆ ಒಳಗಾಗಿತ್ತು. ಸರಿಯಾದ ಮೂಲಸೌಕರ್ಯಗಳನ್ನು ಕಲ್ಪಿಸದೆ, ಪ್ರಜೆಗಳಿಗೆ ಬೆದರಿಕೆ ಹಾಕುವುದು ಪ್ರಜಾಸತ್ತಾತ್ಮಕ ಸರಕಾರದ ಗುಣ ಅಲ್ಲ
-
ಬೆಂಗಳೂರು ನಗರದಲ್ಲಿರುವ ಖಾಲಿ ಸೈಟ್‌ಗಳ ಮಾಲಿಕರು ಇದೀಗ ಭಯಭೀತರಾಗಿದ್ದಾರೆ. ಮೊದಲು ಈ ಖಾಲಿ ಸೈಟ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಇಲ್ಲದಿದ್ದರೆ ಅದನ್ನು ಪಾಲಿಕೆ ವಶಪಡಿಸಿಕೊಳ್ಳುತ್ತದೆ ಎಂದು ಬೆದರಿಸಲಾಯಿತು. ಅದಕ್ಕೆ ಸಮಯವನ್ನೂ ಕೊಡಲಾಯಿತು. ಬಹುಮಂದಿ ಕ್ಲೀನ್ ಮಾಡಿದರು. ಆದರೂ ಸೈಟ್‌ಗಳಿಗೆ ಕಸ ಬಂದು ಬೀಳುತ್ತಿದೆ. ರಾತ್ರೋರಾತ್ರಿ ಯಾರೋ ಬಂದು ಎಸೆದು ಹೋಗುತ್ತಾರೆ.
ಇದೀಗ, ಸೈಟ್ ಕ್ಲೀನಾಗಿ ಇಟ್ಟುಕೊಳ್ಳದಿದ್ದರೆ 25000 ರೂ. ದಂಡ ಹಾಕಲಾಗುವುದು ಎಂದು ಬೆದರಿಸ ಲಾಗುತ್ತಿದೆ. ಹಲವರು ತಮ್ಮ ಜೀವಮಾನದ ಗಳಿಕೆ ಹೂಡಿ ಸೈಟ್ ಖರೀದಿಸಿರುತ್ತಾರೆ. ಮನೆ ಕಟ್ಟಲು ಹಣವಿಲ್ಲದೆಯೋ, ಸಾಲ ಸಿಗಲಿ ಎಂದೋ, ಹೂಡಿಕೆ ಎಂದೂ ಕಾಯುತ್ತಿರುತ್ತಾರೆ. ಎಲ್ಲರೂ ದೊಡ್ಡ ಕಂಪೌಂಡ್ ಹಾಕಿಸುವಷ್ಟು ಶ್ರೀಮಂತರಾಗಿರುವುದಿಲ್ಲ. ಯಾರೋ ಕಸ ಎಸೆದು ಹೋದರೆ ಸೈಟ್ ಮಾಲಿಕರು ಹೇಗೆ ಹೊಣೆಯಾಗುತ್ತಾರೋ!
ಇದನ್ನೂ ಓದಿ: Vishwavani Editorial: ಪಾರ್ಕ್‌ಗಳಿಗೆ ಕೊಡಲಿ
ಇದೊಂದು ವಿಚಿತ್ರ ಬೆದರಿಕೆ. ಹಾಗೇ ಕಸ ಎಸೆಯುವವರನ್ನು ಕಂಡುಹಿಡಿದು ದಂಡ ಹಾಕುವ ಕ್ರಮಗಳೂ ವಿಚಿತ್ರವಾಗಿವೆ. ಇದಕ್ಕೊಂದು ಸರಿಯಾದ ವಿಧಾನವೇ ಇಲ್ಲ. ಅನುಮಾನದಿಂದ ಯಾರನ್ನೂ ತಪ್ಪಿತಸ್ಥರನ್ನಾಗಿಸಲು ಆಗುವುದಿಲ್ಲ. ಮೊದಲು ಕಸವನ್ನು ಸರಿಯಾಗಿ ವಿಂಗಡಿಸಲು, ಅದನ್ನು ಕೊಂಡೊಯ್ಯಲು ವ್ಯವಸ್ಥೆ ಆಗಬೇಕು. ಕೆಲವೆಡೆ ಪೌರ ಕಾರ್ಮಿಕರೇ ತಾವು ಸಂಗ್ರಹಿಸಿದ ಕಸವನ್ನೂ ರಾಜಕಾಲುವೆಗೆ ಎಸೆಯುವ ರೂಢಿಯೂ ಇದೆ.
ಬಿಡಿಎ ಸೈಟ್‌ಗಳ ವಿಚಾರ ಬಂದಾಗ, ಸೈಟ್‌ಗಳ ಹಂಚಿಕೆ ಮಾತ್ರ ತಮ್ಮ ಕೆಲಸ, ಅಲ್ಲಿಗೆ ಮೂಲ ಸೌಕರ್ಯ ಕಲ್ಪಿಸುವುದಲ್ಲ ಎಂದು ಸರಕಾರವೇ ಹೇಳಿತ್ತು. ಕೊನೆಗೆ ಇದಕ್ಕಾಗಿ ಕೋರ್ಟ್ ಅಸಮಾಧಾನಕ್ಕೆ ಒಳಗಾಗಿತ್ತು. ಸರಿಯಾದ ಮೂಲಸೌಕರ್ಯಗಳನ್ನು ಕಲ್ಪಿಸದೆ, ಪ್ರಜೆಗಳಿಗೆ ಬೆದರಿಕೆ ಹಾಕುವುದು ಪ್ರಜಾಸತ್ತಾತ್ಮಕ ಸರಕಾರದ ಗುಣ ಅಲ್ಲ. ರಸ್ತೆ ಬದಿಯ ಪಾರ್ಕಿಂಗ್ ವ್ಯವಸ್ಥೆಯನ್ನೇ ನೋಡಿ. ಬೆಂಗಳೂರಿನಲ್ಲಿ ನೆಲಮಹಡಿಯಲ್ಲಿ ಪಾರ್ಕಿಂಗ್‌ಗೆ ಜಾಗ ಬಿಟ್ಟುಕೊಂಡು ಕಟ್ಟಡ ಕಟ್ಟಿದವರ ಸಂಖ್ಯೆ ಶೇ.40ರಷ್ಟೂ ಇರಲಿಕ್ಕಿಲ್ಲ.
ಎಲ್ಲರೂ ತಮ್ಮ ಬೈಕ್, ಕಾರುಗಳನ್ನು ರಸ್ತೆಬದಿಯಲ್ಲೇ ನಿಲ್ಲಿಸುವುದು ರೂಢಿಯಾಗಿದೆ. ಇದು ಯೋಜನಾಬದ್ಧ ನಗರದ ಲಕ್ಷಣ ಅಲ್ಲ. ಅಸಹ್ಯವೂ ಹೌದು, ದಾರಿಹೋಕರಿಗೆ ತೊಂದರೆಯೂ ಹೌದು. ಇದು ಪಾದಚಾರಿಗಳಿಂದ ರಸ್ತೆಯನ್ನು ಕಟ್ಟಡ ಮಾಲಿಕರು ಕಸಿದಂತೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಸರಕಾರ ಮುಂದಾಗಿದ್ದು, ಪಾರ್ಕಿಂಗ್‌ಗೆ ವಾರ್ಷಿಕ 25000 ರೂ. ಕೀಳಲು ಮುಂದಾಗಿದೆ. ಇದೊಂದೇ ಪರಿಹಾರವೇ? ಖಾಲಿ ಸೈಟ್‌ಗಳನ್ನು ಪಾರ್ಕಿಂಗ್ ಸೈಟ್ ಮಾಡುವ ಅವಕಾಶವಿದೆ. ಎಲ್ಲದರಲ್ಲೂ ಹಣ ಮಾಡಲು, ಬೆದರಿಕೆ ಹಾಕಲು ಸರಕಾರ ಮುಂದಾಗುವುದು ಸಲ್ಲದು.