Vishwavani Editorial: ಮೈಯೆಲ್ಲಾ ಕಣ್ಣಾಗಿರಬೇಕು
ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಂಥ ‘ಮಗ್ಗಲು ಮುಳ್ಳು’ ದೇಶಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ಮುಖ್ಯಸ್ಥರು ಆಡಿರುವ ಈ ಮಾತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಜತೆಗೆ, ಭಾರತದ ಮೇಲೆ ಮುರ ಕೊಂಡು ಬೀಳಲು ಹವಣಿಸುತ್ತಿರುವ ಶತ್ರುರಾಷ್ಟ್ರಗಳಿಗೆ ನೀಡಿದ ಪರೋಕ್ಷ ಎಚ್ಚರಿಕೆಯೂ ಆಗಿದೆ ಎಂದರೆ ಅತಿ #ಶಯೋಕ್ತಿಯಲ್ಲ
Source : Vishwavani Daily News Paper
ದೇಶದ ಉತ್ತರ ಭಾಗದ ಗಡಿಗಳಲ್ಲಿ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ, ಆದರೆ ಎಂಥದೇ ಪರಿಸ್ಥಿತಿ ಮತ್ತು ಸವಾಲು ಒದಗಿದರೂ ಅದನ್ನು ಎದುರಿಸಲು ಭಾರತೀಯ ಸೇನಾಪಡೆ ಸಮರ್ಥವಾಗಿದೆ ಮತ್ತು ಸನ್ನದ್ಧವಾಗಿದೆ ಎಂಬ ಮಾತುಗಳನ್ನಾಡಿದ್ದಾರೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ.
ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಂಥ ‘ಮಗ್ಗಲು ಮುಳ್ಳು’ ದೇಶಗಳು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ಮುಖ್ಯಸ್ಥರು ಆಡಿರುವ ಈ ಮಾತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಜತೆಗೆ, ಭಾರತದ ಮೇಲೆ ಮುರ ಕೊಂಡು ಬೀಳಲು ಹವಣಿಸುತ್ತಿರುವ ಶತ್ರುರಾಷ್ಟ್ರಗಳಿಗೆ ನೀಡಿದ ಪರೋಕ್ಷ ಎಚ್ಚರಿಕೆಯೂ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಈಶಾನ್ಯ ರಾಜ್ಯ ಮಣಿಪುರವು ಕೆಲ ತಿಂಗಳ ಹಿಂದೆ ಕಾರಣವಲ್ಲದ ಕಾರಣಕ್ಕೆ ಹೊತ್ತಿ ಕೊಂಡು ಉರಿದಿದ್ದು, ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಅಲ್ಲಿನವರು ಎರಗಿ, ಹಿಂಸಿಸಿ, ಆಸ್ತಿಪಾಸ್ತಿಗಳಿಗೆ ನಷ್ಟ ಉಂಟುಮಾಡಿದ್ದು ಈ ಎಲ್ಲ ಬೆಳವಣಿಗೆಗಳ ಹಿಂದೆ ಕೆಲವೊಂದು ವಿದೇಶಿ ಶಕ್ತಿಗಳ ಮತ್ತು ಶತ್ರುರಾಷ್ಟ್ರಗಳ ಕೈವಾಡವಿದೆ ಎನ್ನಲಾಗುತ್ತಿದೆ.
ಗಡಿಭಾಗದಲ್ಲಿ ಆಗಾಗ ತಲೆದೋರುವ ಉದ್ವಿಗ್ನ ಪರಿಸ್ಥಿತಿಗೂ ಇದು ಅನ್ವಯವಾಗುವ ಮಾತು. ತಾನಾಗಿಯೇ ಯಾವ ದೇಶದ ಮೇಲೂ ಆಕ್ರಮಣಕ್ಕೆ ಮುಂದಾಗದ ಶುಭ್ರ ಮತ್ತು ಸ್ಪಷ್ಟ ಚಾರಿತ್ರ್ಯ ಭಾರತ ದೇಶದ್ದು; ಆದರೆ ಭಾರತದ ಮತ್ತು ಭಾರತೀಯರ ಸೌಜನ್ಯವನ್ನು ‘ದೌರ್ಬಲ್ಯ’ ಎಂದು ಪರಿಗಣಿಸಿ ಕಿತಾಪತಿ ಮಾಡಿದವರಿಗೆಲ್ಲಾ ಭಾರತೀಯ ಸೇನೆ ಸರಿಯಾಗೇ ತಪರಾಕಿ ನೀಡಿದ್ದಿದೆ.
ಸಾಕಷ್ಟು ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧ, ಉಗ್ರರ ಶಿಬಿರಗಳ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಹೀಗೆ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಇಷ್ಟಾ ಗಿಯೂ ಪಾಠ ಕಲಿಯದ ಚಿತ್ತಸ್ಥಿತಿ ಕೆಲವೊಂದು ನೆರೆಹೊರೆ ದೇಶಗಳದ್ದು. ಹೀಗಾಗಿ, ಅನುಗಾಲವೂ ‘ಸಮರಸನ್ನದ್ಧ’ ಸ್ಥಿತಿಯಲ್ಲಿ ಇರಬೇಕಾದ ಹಾಗೂ ಗಡಿಭಾಗದಲ್ಲಿ ಮೈಯೆಲ್ಲಾ ಕಣ್ಣಾಗಿ ಕಾಯಬೇಕಾದ ಅನಿವಾರ್ಯತೆಯಿದೆ ಭಾರತೀಯ ಸೇನೆಗೆ. ದೇಶದ
ಸಮಗ್ರತೆ-ಸಾರ್ವಭೌಮತೆಗಳ ರಕ್ಷಣೆಗೆ ಅದು ಅಗತ್ಯವೂ ಹೌದೆನ್ನಿ.
ಇದನ್ನೂ ಓದಿ: Vishwavani Editorial: ಗುರುವಿನ ವೇಷದ ಗಿಡುಗನೇ?