Vishwavani Editorial: ಆರ್ಥಿಕ ಶಿಸ್ತಿನ ಅರಿವು ಅಗತ್ಯ
ಇತ್ತೀಚಿನ ದಿನಗಳಲ್ಲಿ ಆಪ್ ಮೂಲಕ ಅರ್ಜಿ ಸಲ್ಲಿಸಿ, ಮನೆಯಲ್ಲಿ ಕುಳಿತೇ ಸಾಲ ಪಡೆಯಬಹುದು. ಆರ್ಥಿಕ ಮುಗ್ಗಟ್ಟಿನಲ್ಲಿರುವವರು, ಹಣಕಾಸು ಶಿಸ್ತು ಇಲ್ಲದವರು ಸುಲಭ ಸಾಲಕ್ಕೆ ಮನ ಸೋತು ಸಾಮರ್ಥ್ಯ ಮೀರಿ ಸಾಲ ಪಡೆಯುತ್ತಿದ್ದಾರೆ
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಸಂಬಂಧ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕವೂ ಕಿರುಸಾಲ ಕಂಪನಿಗಳ ಬಲ ವಂತದ ಸಾಲ ವಸೂಲಿ ತಂತ್ರಗಳು ಮುಂದುವರಿದಿರುವುದು ಆತಂಕದ ಬೆಳವಣಿಗೆ.
ಇಂಥ ಕಿರುಕುಳದಿಂದ ರಾಜ್ಯದಲ್ಲಿ ಈವರೆಗೆ 8 ಮಂದಿ ಸಾವಿಗೆ ಶರಣಾಗಿದ್ದಾರೆ. ಸೋಮವಾರ ಒಂದೇ ದಿನ ಶಿಕ್ಷಕಿ ಸೇರಿದಂತೆ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರ‍್ನಾಲ್ಕು ದಶಕಗಳ ಹಿಂದೆ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ತ್ರಾಸದ ಕೆಲಸವಾಗಿತ್ತು. ಉದಾರೀಕರಣ ಶಕೆಯ ಬಳಿಕ ದೇಶದಲ್ಲಿ ಸಾಕಷ್ಟು ಖಾಸಗಿ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕ್‌ಗಳು, ಕಿರು ಹಣಕಾಸು ಕಂಪನಿಗಳು ತಲೆ ಎತ್ತಿವೆ.
ಇತ್ತೀಚಿನ ದಿನಗಳಲ್ಲಿ ಆಪ್ ಮೂಲಕ ಅರ್ಜಿ ಸಲ್ಲಿಸಿ, ಮನೆಯಲ್ಲಿ ಕುಳಿತೇ ಸಾಲ ಪಡೆಯಬಹುದು. ಆರ್ಥಿಕ ಮುಗ್ಗಟ್ಟಿನಲ್ಲಿರುವವರು, ಹಣಕಾಸು ಶಿಸ್ತು ಇಲ್ಲದವರು ಸುಲಭ ಸಾಲಕ್ಕೆ ಮನ ಸೋತು ಸಾಮರ್ಥ್ಯ ಮೀರಿ ಸಾಲ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳು ಈ ತನಕ 59 ಸಾವಿರ ಕೋಟಿ ರೂ. ಸಾಲ ನೀಡಿರುವುದು ಇವುಗಳ ಅಗಾಧತೆಗೆ ಸಾಕ್ಷಿ. ಕಂಪನಿಗಳು ಕುಟುಂಬ ದ ಆರ್ಥಿಕ ಸಾಮರ್ಥ್ಯವನ್ನು ಮೀರಿ ಒಂದೊಂದು ಕುಟುಂಬಕ್ಕೆ 2-3 ಸಾಲಗಳನ್ನು ನೀಡಿರುವ ಉದಾಹರಣೆಗಳಿವೆ.
ಈ ಸಾಲಗಳ ಬಡ್ಡಿ ಬ್ಯಾಂಕ್‌ಗಳಿಗಿಂತ ಅಧಿಕವಾಗಿರುವುದರಿಂದ ಕಂತು ಕಟ್ಟದೆ ಹೋದರೆ ಅಸಲಿ ಗಿಂತ ಬಡ್ಡಿಯೇ ಅಧಿಕವಾಗುತ್ತದೆ. ಕೆಲ ಕಂಪನಿಗಳು ಸಕಾಲಕ್ಕೆ ಗ್ರಾಹಕರು ಸಾಲ ಕಟ್ಟದಿದ್ದಾಗ, ಬಲವಂತದ ಸಾಲ ವಸೂಲಿಗೆ ಮುಂದಾಗುತ್ತಿವೆ. ಕೋರ್ಟ್ ಆದೇಶವಿಲ್ಲದೆಯೇ ಸುಸ್ತಿದಾರರ ಮನೆಗೆ ಬೀಗ ಜಡಿದು, ಮನೆಯವರನ್ನು ಹೊರದಬ್ಬಿದ ಉದಾಹರಣೆಗಳೂ ಇವೆ.
ಈ ರೀತಿಯ ದಬ್ಬಾಳಿಕೆ, ದೌರ್ಜನ್ಯ ಕಾನೂನು ಬಾಹಿರ ಮಾತ್ರವಲ್ಲ ಕ್ರಿಮಿನಲ್ ನಡವಳಿಕೆ. ಇಂಥ ಕಂಪನಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಸರಕಾರ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ. ಇಂಥ ಕಂಪನಿಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ಅಗತ್ಯವಿದೆ. ಸಾರ್ವಜನಿಕರಲ್ಲಿ ಆರ್ಥಿಕ ಶಿಸ್ತಿನ ಬಗ್ಗೆಯೂ ಅರಿವು ಮೂಡಿಸಬೇಕಾಗಿದೆ.